ಈಡನ್ ಗಾರ್ಡನ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಸರಣಿ ಜಯಿಸಿದೆ.
ಇಂಡೋ-ವಿಂಡೀಸ್ ನಡುವಿನ 2ನೇ ಟಿ20 ಕದನದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ, ರಿಷಭ್ ಪಂತ್ ಸಿಡಿಸಿದ ಭರ್ಜರಿ ಅರ್ಧಶತಕಗಳ ನೆರವಿನಿಂದ ಮತ್ತು ಭುವನೇಶ್ವರ್ ಹಾಗೂ ಹರ್ಷಲ್ ಪಟೇಲ್ ಮಾರಕ ಬೌಲಿಂಗ್ ದಾಳಿಯಿಂದಾಗಿ ಭಾರತಕ್ಕೆ ಈ ಗೆಲುವು ದಕ್ಕಿದೆ. 8 ರನ್ಗಳಿಂದ ಭರ್ಜರಿ ಜಯ ಸಾಧಿಸಿದ ರೋಹಿತ್ ಪಡೆ, ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿಯನ್ನ ಗೆದ್ದುಕೊಂಡಿದೆ.
ಕೈ ಕೊಟ್ಟ ಇಶಾನ್, ವಿರಾಟ್ ಕೊಹ್ಲಿ ಕಂಬ್ಯಾಕ್ ಇನ್ನಿಂಗ್ಸ್..!
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಉತ್ತಮ ಆರಂಭ ಪಡೆಯಲಿಲ್ಲ. ಕಳೆದ ಪಂದ್ಯದಲ್ಲೂ ಸ್ಲೋ ಇನ್ನಿಂಗ್ಸ್ ಆಡಿದ್ದ ಇಶಾನ್ ಕಿಶನ್ 2ನೇ ಚುಟುಕು ಕದನದಲ್ಲಿ ಕೇವಲ 2 ರನ್ಗಳಿಸಿ ವಿಕೆಟ್ ಒಪ್ಪಿಸಿದ್ರು. ಇನ್ನ ರೋಹಿತ್ ಶರ್ಮಾಗೆ ಜೀವದಾನ ಸಿಕ್ಕಿದ್ರೂ, ಅದನ್ನು ಬಿಗ್ ಸ್ಕೋರ್ಗೆ ಕನ್ವರ್ಟ್ ಮಾಡುವಲ್ಲಿ ವಿಫಲರಾದ್ರು. ಅತ್ತ ಸೂರ್ಯ ಕುಮಾರ್ ಕೂಡ 8ರನ್ಗೆ ಸುಸ್ತಾದ್ರು. ಆದ್ರೆ ವಿರಾಟ್ ಕೊಹ್ಲಿ, ವಿಂಡೀಸ್ ಬೌಲರ್ಗಳಿಗೆ ಬೆಂಡೆತ್ತಿ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ ತಮ್ಮ 30ನೇ ಅರ್ಧಶತಕ ಸಿಡಿಸಿದ್ರು.
ಅಬ್ಬರಿಸಿದ ರಿಷಭ್ ಪಂತ್, ಸ್ಫೋಟಿಸಿದ ವೆಂಕಟೇಶ್ ಅಯ್ಯರ್..!
ಇನ್ನು ಕೊಹ್ಲಿ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಔಟಾಗಿ ಪೆವಿಲಿಯನ್ ಸೇರಿದ್ರು. ಆಗ ಟೀಮ್ ಇಂಡಿಯಾ 106 ರನ್ಗೆ 4 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಒಂದಾದ ರಿಷಭ್ ಪಂತ್ ಮತ್ತು ವೆಂಕಟೇಶ್ ಅಯ್ಯರ್, ಬಿರುಸಿನ ಬ್ಯಾಟಿಂಗ್ ನಡೆಸಿದ್ರು. ಮೈದಾನದ ಮೂಲೆ ಮೂಲೆಗೂ ಬೌಂಡರಿ-ಸಿಕ್ಸರ್ಗಳ ಸುರಿಮಳೆಗೈದ್ರು. ಈ ವೇಳೆ 33 ರನ್ ಗಳಿಸಿದ್ದ ವೆಂಕಿ ಔಟಾದ್ರೆ, ಪಂತ್ ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿದ್ರು. ಅಂತಿಮವಾಗಿ ಭಾರತ ತಂಡ 5 ವಿಕೆಟ್ ನಷ್ಟಕ್ಕೆ 186 ರನ್ಗಳ ಬೃಹತ್ ಮೊತ್ತ ಕಲೆ ಹಾಕ್ತು.
ಆರಂಭದಲ್ಲಿ ಮುಗ್ಗರಿಸಿ, ಮತ್ತೆ ಅಬ್ಬರಿದ ವಿಂಡೀಸ್..!
ಬೃಹತ್ ಸವಾಲನ್ನು ಬೆನ್ನತ್ತಿದ ವಿಂಡೀಸ್, ಆರಂಭದಲ್ಲೇ ಎರಡು 2 ವಿಕೆಟ್ ಕಳೆದುಕೊಂಡಿತು. ಬ್ರೆಂಡನ್ ಕಿಂಗ್ 22 ರನ್, ಕೈಲ್ ಮೇಯರ್ 9 ರನ್ಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ಬಳಿಕ ಒಂದಾದ ನಿಕೋಲಸ್ ಪೂರನ್ ಮತ್ತು ರಾವ್ಮನ್ ಪೊವೆಲ್, ಭಾರತೀಯ ಬೌಲರ್ಗಳ ಬೆವರಿಳಿಸಿದ್ರು. ಸಿಕ್ಕ ಜೀವದಾನಗಳನ್ನ ಲಾಭ ಮಾಡಿಕೊಂಡ ಈ ಜೋಡಿ, ಶತಕದ ಜೊತೆಯಾಟವಾಡಿತು. ಅಲ್ಲದೆ ಪೂರನ್ ಮತ್ತು ಪೊವೆಲ್ ತಲಾ ಅರ್ಧಶತಕ ಸಿಡಿಸಿದ್ರು. ಆದ್ರೆ 62 ರನ್ ಸಿಡಿಸಿದ್ದ ಪೂರನ್ ಕೊನೆಯಲ್ಲಿ ಭುವಿಗೆ ಔಟಾದ್ರು.
ಗೆಲ್ಲುವ ಅವಕಾಶ ಇದ್ದರೂ ಸೋತ ವಿಂಡೀಸ್
ಪೂರನ್ ಮತ್ತು ಪೊವೆಲ್ ಸ್ಫೋಟಕ ಆಟಕ್ಕೆ ಒಂದು ಹಂತದಲ್ಲಿ ಪಂದ್ಯ ಭಾರತದಿಂದ ಕೈ ಜಾರಿ ಹೋಗಿತ್ತು. ಪೂರನ್ ಔಟಾದ್ರೂ, ಪೊವೆಲ್ ಇನ್ನೂ ಕ್ರಿಸ್ನಲ್ಲೇ ಇದ್ರು. ಆದರೆ ಪಂದ್ಯದ ಕೊನೆಯವರೆಗೂ ಇದ್ದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಪೊವೆಲ್ ಅಜೇಯ 68 ರನ್ ಗಳಿಸಿದರೂ, ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದ್ರು. ಅಂತಿಮ ಎರಡು ಓವರ್ಗಳಲ್ಲಿ ಭುವನೇಶ್ವರ್ ಮತ್ತು ಹರ್ಷಲ್ ಪಟೇಲ್ ಸಂಘಟಿತ ಬೌಲಿಂಗ್ ದಾಳಿ ನಡೆಸಿ ಭಾರತಕ್ಕೆ 8 ರನ್ ಜಯದ ಕಾಣಿಕೆ ನೀಡಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post