ಬೆಂಗಳೂರು: ಉತ್ತರದ ಚುನಾವಣೆ ಗಾಳಿ ದಕ್ಷಿಣದತ್ತ ಬೀಸೋದಕ್ಕೆ ಶುರುವಾಗಿದೆ. ಬಿಡುವಿಲ್ಲದ ಚಟುವಟಿಕೆಯಲ್ಲಿ ನಿರತವಾಗಿರುವ ಕಾಂಗ್ರೆಸ್ಗೆ ಮತ್ತಷ್ಟು ಉತ್ಸಾಹ ತುಂಬಲು ಹೈಕಮಾಂಡ್ ಬಯಸಿದೆ. 27ಕ್ಕೆ ಮೇಕೆದಾಟು ಜಲಸಂಗ್ರಾಮಕ್ಕೂ ಮುನ್ನ ಅಂದ್ರೆ, 25ಕ್ಕೆ ರಾಜ್ಯ ಕೈಪಡೆ ದೆಹಲಿ ಯಾತ್ರೆ ಕೈಗೊಳ್ತಿದೆ.. ಭವಿಷ್ಯದ ಚುನಾವಣೆ, ನಾಯಕತ್ವ ಬಗ್ಗೆ ಗಹನ ಚರ್ಚೆ ನಡೆಸಲಿದೆ.
ಪಂಚನದಿಗಳ ಬೀಡು ಪಂಜಾಬ್, ದೇವಭೂಮಿ ಉತ್ತರಾಖಂಡ್ಗೆ ಭಿನ್ನ ಪ್ರಯೋಗ ನಡೆಸಿದ ಕಾಂಗ್ರೆಸ್ ಈಗ ಮಾರ್ಚ್ 10ರ ಜನತಾ ತೀರ್ಪಿನ ಆತಂಕದಲ್ಲಿದೆ. ಕಾಂಗ್ರೆಸ್ ತನ್ನ ಅವಕಾಶದ ಭಾಗ್ಯದ ಬಾಗಿಲಾಗಿ ದಕ್ಷಿಣದ ಕರ್ನಾಟಕದತ್ತ ಹೊಸ ಆಸೆಯನ್ನ ಹೊತ್ತು ಕೂತಿದೆ.
ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮುಖ್ಯವಾಗಿ ಎರಡು ದಾಳ ಉರುಳಿಸಿದೆ. 5 ತಿಂಗಳು ಮುನ್ನ ಸಾರಥಿ ಬದಲಿಸಿ ಪಂಜಾಬ್ನಲ್ಲಿ ದಲಿತಾಸ್ತ್ರ ಪ್ರಯೋಗಿಸಿದ ಕಾಂಗ್ರೆಸ್, ಉತ್ತರಾಖಂಡ್ನಲ್ಲಿ ಮಾತ್ರ ಸಾಮೂಹಿಕ ಮಂತ್ರ ಪಠಿಸಿತ್ತು. ಈ ಎರಡು ಅಸ್ತ್ರಗಳು ಹೇಗೆ ಲಾಭ ತರಲಿದೆ ಅನ್ನೋದು ಜನಮತ ಹೇಳಲಿದೆ.
ಚುನಾವಣಾ ದಾಹವನ್ನೇ ಮರೆತಿದ್ದ ಎಐಸಿಸಿ, ಫಿನಿಕ್ಸ್ನಂತೆ ಮೈಧೂಳು ಕೊಡವಿದೆ. ಉತ್ತರ ಭಾರತದ ಫಲಿತಾಂಶಕ್ಕೂ ಮುನ್ನವೇ ದಕ್ಷಿಣದತ್ತ ಆಸೆಗಣ್ಣು ನೆಟ್ಟಿದೆ. ಕರ್ನಾಟಕದಲ್ಲಿ 15 ತಿಂಗಳು ಮುನ್ನವೇ ತಾಲೀಮು ಆರಂಭಿಸ್ತಿದೆ. ರಾಜ್ಯ ಕಾಂಗ್ರೆಸ್ ಮುಂಚೂಣಿ ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದೆ.
ಪಂಜಾಬ್ನಲ್ಲಿ ವರಿಷ್ಠರಿಗೆ ಚನ್ನಿ ಚಿನ್ನದಂತೆ ಕಾಣುತ್ತಲೇ ಸಿಎಂ ಅಭ್ಯರ್ಥಿ ಆಗಿ ಘೋಷಣೆ ಆಗಿತ್ತು. ಆದರೂ ನವಜೋತ್ ಸಿಧು ಒಡಲ ಸಿಟ್ಟು ಸ್ಫೋಟ ಮಾಡದೇ ಸೈಲೆಂಟ್ ಆಗಿದ್ರು. ಕರ್ನಾಟಕದಲ್ಲೂ ಈ ಬೆಳವಣಿಗೆ ಆಗದಂತೆ ಹಸ್ತ ಸಾರಥಿಗಳು ಮುಂಜಾಗೃತೆ ವಹಿಸ್ತಿದ್ದಾರೆ. ಪಂಜಾಬ್ ಮಾದರಿಯಲ್ಲೇ ಸಿಎಂ ಅಭ್ಯರ್ಥಿ ಘೋಷಣೆ ಆಗಬಹುದು ಅನ್ನೋ ಚರ್ಚೆ ಗರಿಗೆದರಿವೆ.
ಬಣ ಗುದ್ದಾಟಕ್ಕೆ ‘ಹೈ’ ಮುಲಾಮು
ಸದ್ಯ ರಾಜ್ಯ ಕಾಂಗ್ರೆಸ್ನಲ್ಲಿ ಬಣ ರಾಜಕಾರಣ ಮೀತಿಮೀರಿದೆ.. ಈ ಹೊತ್ತಲ್ಲೇ ಇದಕ್ಕೆ ಮದ್ದರೆಯಲು, ರಾಜ್ಯದಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಪಂಜಾಬ್ ಮಾದರಿಯಂತೆ ಸಿಎಂ ಆಯ್ಕೆ ವಿಮರ್ಶೆ ನಡೆಯಲಿದ್ದು, ಚನ್ನಿ ಆಯ್ಕೆಯಂತೆ ಜನಾಭಿಪ್ರಾಯದ ಕಲ್ಪನೆ ರಾಜ್ಯದಲ್ಲೂ ಬಿತ್ತುವ ಸಾಹಸಕ್ಕೆ ರಾಹುಲ್ ಮುಂದಾಗ್ತಾರೆ ಎನ್ನಲಾಗ್ತಿದೆ. ಒಟ್ಟಾರೆ, ಕಾಂಗ್ರೆಸ್ನ ಬಣ ರಾಜಕಾರಣಕ್ಕೆ ಈ ಮೀಟಿಂಗ್ ಫುಲ್ಸ್ಟಾಪ್ ನೀಡುತ್ತಾ? ಸಿಎಂ ಅಭ್ಯರ್ಥಿ ಘೋಷಣೆ ಆಗುತ್ತಾ? ಅಥವಾ ಕರ್ನಾಟಕಕ್ಕೆ ಬೇರೆಯದ್ದೇ ಪ್ರಯೋಗಕ್ಕೆ ಹೈಕಮಾಂಡ್ ಚಾಲನೆ ನೀಡುತ್ತಾ ಅನ್ನೋ ಕೌತುಕ, ಕುತೂಹಲ ಮತ್ತಷ್ಟು ದ್ವಿಗುಣಗೊಳಿಸಿದೆ.
ವಿಶೇಷ ವರದಿ: ವೀರೇಂದ್ರ, ಪೊಲಿಟಿಕಲ್ ಬ್ಯೂರೋ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post