ಇಂದು ಸಂಜೆ 4 ಘಂಟೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಾಕಷ್ಟು ಗಣ್ಯರು ಭಾಗಿಯಾಗುತ್ತಿದ್ದು, ರಾಜ್ಯದ ಎರಡು ಪ್ರಮುಖ ಪೀಠದ ಪೀಠಾಧಿಪತಿಗಳು ಕೂಡ ಭಾಗಿಯಾಗುತ್ತಿದ್ದಾರೆ ಎಂಬ ಮಾಹಿತಿ ನ್ಯೂಸ್‌ಫಸ್ಟ್‌ಗೆ ಸಿಕ್ಕಿದೆ.
ಉಡುಪಿಯ ಪೇಜಾವರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ಪ್ರಮಾಣವಚನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಯೋಗಿ ಆದಿತ್ಯನಾಥ್‌ಗೆ ಆಶೀರ್ವಾದ ಮಾಡಲಿದ್ದಾರೆ. ಇನ್ನು ಗೋಖರ್‌ಪುರದ ಪ್ರಬಲ ನಾಥ ಪಂಥದ ಪರಂಪರೆಯನ್ನೇ ಇಲ್ಲೂ ಅನುಷ್ಠಾನಗೊಳಿಸಿಕೊಂಡಿರುವ, ಯೋಗಿ ಆದಿತ್ಯನಾಥ್‌ರನ್ನು ಹತ್ತಿರದಿಂದ ಬಲ್ಲವರಾದ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ನಿರ್ಮಲಾನಂದ ಶ್ರೀಗಳು ಕೂಡ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರಂತೆ.
ಎರಡು ಪೀಠಗಳಲ್ಲೂ ಯೋಗಿ ಹೆಸರಿನಲ್ಲಿ ವಿಶೇಷ ಪೂಜೆ
ಇತ್ತ ಎರಡು ಮಹಾಪೀಠಗಳ ಶ್ರೀಗಳು, ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಮಾತ್ರವಲ್ಲದೇ, ಯೋಗಿ ಆದಿತ್ಯನಾಥ್‌ರ ಹೆಸರಿನಲ್ಲಿ ಪೂಜೆಯನ್ನು ಮಾಡಿಸಿ, ಫಲಪುಷ್ಪ ಮಂತ್ರಾಕ್ಷತೆ, ವಸ್ತ್ರವನ್ನು ಕೂಡ ನೀಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಕೇಸರಿ ಬಲಪ್ರದರ್ಶನಕ್ಕೆ ಸಾಕ್ಷಿ ಆಗಲಿದೆ ಉ.ಪ್ರದೇಶ; ಯೋಗಿ ಜೊತೆ 60 ಶಾಸಕರು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕಾರ!
ನಾಥ ಪಂಥದ ಅನುಷ್ಠಾನ ಮಾಡಿಕೊಂಡಿರುವ ನಿರ್ಮಲಾನಂದ ಶ್ರೀಗಳು, ಮಠದಲ್ಲಿನ ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದದ ಸಮೇತ ವಸ್ತ್ರವನ್ನು ತೆಗೆದುಕೊಂಡು ಹೋಗುತ್ತಿದ್ರೆ, ಇತ್ತ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು, ಉಡುಪಿಯ ಶ್ರೀಕೃಷ್ಣನ ಮೃತ್ತಿಕೆ, ಫಲಪುಷ್ಪ, ಮಂತ್ರಾಕ್ಷತೆಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
ಇನ್ನು ವಿಶ್ವಪ್ರಸನ್ನ ತೀರ್ಥರು, ಅಯೋಧ್ಯೆಯ ಶ್ರೀ ರಾಮಮಂದಿರ ಟ್ರಸ್ಟ್‌ನ ಸದಸ್ಯರಾಗಿಯೂ ಇರುವ ಕಾರಣ, ಯೋಗಿ ಆದಿತ್ಯನಾಥ್ ಶ್ರೀಗಳಿಗೆ ವಿಶೇಷ ಆಮಂತ್ರಣ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ಇಂದು ನಡೆಯುವ ಯೋಗಿ ಆದಿತ್ಯನಾಥ್‌ರಿಗೆ ಎರಡನೇ ಬಾರಿ ದೇಶದ ಅತಿದೊಡ್ಡ ರಾಜ್ಯದ ಬಿಜೆಪಿ ನಾಯಕತ್ವ ಸಿಕ್ಕಿರುವುದು, ಹಲವು ಬಿಜೆಪಿ ಕಾರ್ಯಕರ್ತರಿಗೆ ಉತ್ಸುಕ ಇಮ್ಮಡಿಗೊಳಿಸಿದೆ.
ಇದನ್ನೂ ಓದಿ: ಇಂದು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕಾರ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post