ಬೌಲರ್ಗಳ ಅದ್ಭುತ ಪ್ರದರ್ಶನದಿಂದಾಗಿ ಐಪಿಎಲ್ 15ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಗೆಲುವು ದಾಖಲಿಸಿದೆ. ಕೋಲ್ಕತ್ತಾ ರೈಡರ್ಸ್ ವಿರುದ್ಧ 3 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿದೆ.
ಹಸರಂಗ ಸ್ಪಿನ್ ಮೋಡಿಗೆ ಚಿತ್ತಾದ ರೈಡರ್ಸ್ ಬ್ಯಾಟಿಂಗ್
ಮುಂಬೈನ ಡಿ.ವೈ.ಪಾಟೀಲ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿ ಫೀಲ್ಡಿಂಗ್ ಮಾಡೋ ನಿರ್ಧಾರ ಕೈಗೊಂಡ್ರು. ಇನ್ನಿಂಗ್ಸ್ ಆರಂಭಿಸಿದ ಕೆಕೆಆರ್ಗೆ ಉತ್ತಮ ಆರಂಭ ಸಿಗಲಿಲ್ಲ. ಮೂರನೇ ಓವರ್ನಲ್ಲೇ ವೆಂಕಟೇಶ್ ಅಯ್ಯರ್, ಆಕಾಶ್ ದೀಪ್ಗೆ ವಿಕೆಟ್ ಒಪ್ಪಿಸಿದ್ರು. ರಹಾನೆ ಡಬಲ್ ಡಿಜಿಟ್ ದಾಟದೇ ಪೆವಿಲಿಯನ್ ದಾರಿ ಹಿಡಿದ್ರು.
ನಿತೀಶ್ ರಾಣಾ, ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ಸುನಿಲ್ ನರೈನ್, ಶೆಲ್ಡಾನ್ ಜ್ಯಾಕ್ಸನ್, ಸ್ಯಾಮ್ ಬಿಲ್ಲಿಂಗ್ಸ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸ್ಪಿನ್ನರ್ ವನಿಂದು ಹಸರಂಗ ಹಾಗೂ ವೇಗಿ ಹರ್ಷಲ್ ಪಟೇಲ್ ಅದ್ಭುತ ಬೌಲಿಂಗ್ಗೆ ತತ್ತರಿಸಿದ ರೈಡರ್ಸ್, 67 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಆದ್ರೆ, ಸ್ಫೋಟಕ ಬ್ಯಾಟ್ಸ್ಮನ್ ಆಂಡ್ರು ರಸೆಲೆ ಕೊಂಚ ಮಟ್ಟಿಗೆ ಆಸರೆಯಾದ್ರು. ಬ್ಯಾಕ್ ಟು ಬ್ಯಾಕ್ಸ್ ಸಿಕ್ಸ್ ಮೂಲಕ ಡುಪ್ಲೆಸಿ ಪಡೆಯಲ್ಲಿ ನಡುಕ ಹುಟ್ಟಿಸಿದ ರಸೆಲ್, 25 ರನ್ ಗಳಿಸಿದ್ದಾಗ ಹರ್ಷಲ್ ಪಟೇಲ್ ಬೌಲಿಂಗ್ನಲ್ಲಿ ಔಟಾದ್ರು.
ರಸೆಲ್ ಔಟಾದ ನಂತರ ಕೆಕೆಆರ್ ನೂರು ರನ್ ಗಳಿಸೋದೇ ಅನುಮಾನವಾಗಿತ್ತು. ಆದ್ರೆ, ಕೊನೆಯಲ್ಲಿ ಉಮೇಶ್ ಯಾದವ್, ಆರ್ಸಿಬಿ ಬೌಲರ್ಗಳನ್ನ ಕಾಡಿದ್ರು. 12 ಬಾಲ್ ಎದುರಿಸಿದ ಉಮೇಶ್ ಯಾದವ್, 2 ಬೌಂಡರಿ ಸಿಕ್ಸರ್ ಮೂಲಕ 18 ರನ್ಗಳಿಸಿದ್ರು. ಅಂತಿಮವಾಗಿ ಕೆಕೆಆರ್ 18.5 ಓವರ್ಗಳಲ್ಲಿ 128ರನ್ಗೆ ಆಲೌಟ್ ಆಯ್ತು.
ಆರ್ಸಿಬಿ ಪರ ಸ್ಪಿನ್ನರ್ ವನಿಂದು ಹಸರಂಗ, ಸ್ಪಿನ್ ಮೋಡಿ ಮೂಲಕ ಕೆಕೆಆರ್ಗೆ ಕಂಟಕವಾದ್ರು. 4 ಓವರ್ ಬೌಲಿಂಗ್ ಮಾಡಿದ ಹಸರಂಗ, ಕೇವಲ 20 ರನ್ ನೀಡಿ ಕೆಕೆಆರ್ನ ಪ್ರಮುಖ ನಾಲ್ಕು ವಿಕೆಟ್ ಎಗರಿಸಿದ್ರು. ಇನ್ನು ಹರ್ಷಲ್ ಪಟೇಲ್ ಕೂಡ, ಬಿಗಿಯಾದ ಬೌಲಿಂಗ್ ಮೂಲಕ ರೈಡರ್ಸ್ ರನ್ದಾಹಕ್ಕೆ ಕಡಿವಾಣ ಹಾಕಿದ್ರು. ನಾಲ್ಕು ಓವರ್ ಬೌಲಿಂಗ್ ಮಾಡಿದ ಹರ್ಷಲ್, ಎರಡು ಮೇಡಿನ್ ಸಹಿತ ಕೇವಲ 11 ರನ್ ನೀಡಿ ಎರಡು ವಿಕೆಟ್ ಪಡೆದ್ರು.
ಮೊದಲ ಓವರ್ನಲ್ಲೇ ಆರ್ಸಿಬಿಗೆ ಶಾಕ್
129 ರನ್ಗಳ ಸುಲಭ ಟಾರ್ಗೆಟ್ ಚೇಸ್ ಮಾಡಲಿಳಿದ ಆರ್ಸಿಬಿಗೆ, ಮೊದಲ ಓವರ್ನ ಮೂರನೇ ಬಾಲ್ನಲ್ಲೇ ಶಾಕ್ ಎದುರಾಯ್ತು. ಉಮೇಶ್ ಯಾದವ್ ಬೌಲಿಂಗ್ನಲ್ಲಿ ಅನುಜ್ ರಾವತ್, ಕೀಪರ್ ಶೆಲ್ಡನ್ ಜಾಕ್ಸನ್ಗೆ ಕ್ಯಾಚ್ ನೀಡಿ ಪೆವಿಲಿಯನ್ ದಾರಿ ಹಿಡಿದ್ರು. ನಾಯಕ ಫಾಫ್ ಡುಪ್ಲೆಸಿ ಆಟ 5 ರನ್ಗೆ ಅಂತ್ಯವಾಯ್ತು.
ಬಿಗ್ ಇನ್ನಿಂಗ್ಸ್ ಆಡೋ ಭರವಸೆ ಮೂಡಿಸಿದ್ದ ವಿರಾಟ್ ಕೊಹ್ಲಿ ಕೂಡ, ಉಮೇಶ್ ಯಾದವ್ ವಿಕೆಟ್ ಬಲೆಗೆ ಬಿದ್ರು. ಮೂರನೇ ವಿಕೆಟ್ಗೆ ಡೇವಿಡ್ ವಿಲ್ಲಿ ಹಾಗೂ ಶೆರ್ಫಾನ್ ರುಥರ್ಫೋರ್ಡ್ ನೆರವಾದ್ರು. ರೈಡರ್ಸ್ ಕಟ್ಟುನಿಟ್ಟಿನ ಬೌಲಿಂಗ್ ದಾಳಿಯನ್ನ ಎಚ್ಚರಿಕೆಯಿಂದ ಎದುರಿಸಿದ ಈ ಜೋಡಿ, ವಿಕೆಟ್ ಬೀಳದಂತೆ ನೋಡಿಕೊಂಡ್ರು. ಲೂಸ್ ಬಾಲ್ಗಳಿಗೆ ಬೌಂಡರಿ ಲೈನ್ ದಾಟಿಸುತ್ತಾ ತಂಡದ ರನ್ರೇಟ್ ಹೆಚ್ಚಿಸಲು ಪ್ರಯತ್ನಿಸಿದ್ರು. ಆದರೆ ಇವರಿಬ್ಬರ ಜೊತೆಯಾಟಕ್ಕೆ ಸುನಿಲ್ ನರೈನ್ ಬ್ರೇಕ್ ಹಾಕಿದ್ರು.
ವಿಲ್ಲಿ ನಂತರ ಬಂದ ಶಹಬಾಜ್ ಅಹ್ಮದ್ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ರು. ರಸೆಲ್ ಎಸೆದ ಓವರ್ನಲ್ಲೇ ಎರಡು ಭರ್ಜರಿ ಸಿಕ್ಸ್ ಸಿಡಿಸಿದ್ರು. 20 ಬಾಲ್ಗಳಲ್ಲಿ ಮೂರು ಭರ್ಜರಿ ಸಿಕ್ಸರ್ನಿಂದ 27 ರನ್ ಬಾರಿಸಿದ ಅಹ್ಮದ್, ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದ್ರು. ಕೊನೆ ಓವರ್ ವರೆಗೂ ಸಾಗಿದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್, ರಸೆಲ್ ಎಸೆತದಲ್ಲಿ ಸೂಪರ್ ಸಿಕ್ಸ್ ಸಿಡಿಸಿ ತಂಡದ ಗೆಲುವು ಕನ್ಫರ್ಮ್ ಮಾಡಿದ್ರು. ಕೆಕೆಆರ್ ಪರ ಟಿಮ್ ಸೌಥಿ 3, ಉಮೇಶ್ ಯಾದವ್ 2 , ಹಾಗೂ ಸುನಿಲ್ ನರೈನ್, ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post