ಗದಗ: ಇಬ್ಬರ ಹೆಂಡ್ತಿರ ಮುದ್ದಿನ ಗಂಡನಿಗೆ ಪೊಲೀಸರು ಠಾಣೆಗೆ ಕರೆದು ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ. ದಾವಲ್ ಸಾಬ್ ಕುಮನೂರ್ ಪೊಲೀಸರಿಂದ ಒದೆ ತಿಂದ ವ್ಯಕ್ತಿ.
ಏನಿದು ಪ್ರಕರಣ..?
ಮೊದಲನೇ ಹೆಂಡತಿ ಬಸಿರಾ ಜೊತೆಗೆ ಆಗಾಗ ಜಗಳ ನಡೆಯುತ್ತಿತ್ತು. ಪತ್ನಿ ಬಸಿರಾ ಬಳಿಯಿದ್ದ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಕೆಲವು ದಾಖಲೆಗಳನ್ನ ಕಸಿದುಕೊಳ್ಳಲು ಹೋಗಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಇದರಿಂದ ಕೋಪಿಸಿಕೊಂಡ ಮೊದಲ ಪತ್ನಿ ಬಸಿರಾ ಗದಗ ನಗರದ ಮಹಿಳಾ ಠಾಣೆಗೆ ಪತಿಯ ವಿರುದ್ಧ ದೂರು ನೀಡಿದ್ದಾಳೆ.
ದೂರಿನಂತೆ ಮನೆಗೆ ಬಂದ ಪೊಲೀಸರು, ದಾವಲ್ ಸಾಬ್ ಕುಮನೂರ್ನನ್ನ ಠಾಣೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೇ ಆತನ ಬಳಿಯಿದ್ದ ಸುಮಾರು 40 ಸಾವಿರ ರೂಪಾಯಿ ಹಣವನ್ನ ಕಸಿದುಕೊಂಡು ಕಳುಹಿಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಪೊಲೀಸರ ವಿರುದ್ಧ ಗಂಭೀರ ಆರೋಪ
ಇನ್ನೊಂದು ವಿಚಾರ ಅಂದರೆ ದಾವಲ್ ಸಾಬ್ ಕುಮನೂರ್ ವಿರುದ್ಧ ಪೊಲೀಸರು ಯಾವುದೇ ಎಫ್ಐಆರ್ ಕೂಡ ದಾಖಲಿಸಿಲ್ಲ. ಪ್ರಕರಣ ದಾಖಲಿಸಿಕೊಳ್ಳದೆ ಹಿಗ್ಗಾಮುಗ್ಗಾ ಥಳಿಸಿರೋದು ಚರ್ಚೆಗೆ ಕಾರಣವಾಗಿದೆ. ಪೊಲೀಸರ ಲಾಠಿ ಏಟಿಗೆ ಗಂಭೀರವಾಗಿ ಗಾಯಗೊಂಡಿರುವ ದಾವಲ್ ಸಾಬ್ ಕುಮನೂರ್ ಅವರನ್ನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಪೊಲೀಸರ ವರ್ತನೆ ವಿರುದ್ಧ ಸಂಬಂಧಿಕರು ಕಿಡಿಕಾರುತ್ತಿದ್ದಾರೆ. ಎಫ್ಐಆರ್ ದಾಖಲಿಸದೇ ಅದೇ ಹೇಗೆ ವಿಚಾರಣೆಗೆ ಕರೆದು ಈ ರೀತಿ ಹಲ್ಲೆ ಮಾಡಿದ್ದೀರಿ ಎಂದು ಪ್ರಶ್ನೆ ಮಾಡ್ತಿದ್ದಾರೆ. ಮಗನ ನರಳಾಟ ನೋಡಿ ತಾಯಿ ಮತ್ತು ಸಂಬಂಧಿಕರು ಕಣ್ಣೀರು ಹಾಕ್ತಿದ್ದಾರೆ. ಇದೀಗ ಎರಡನೇ ಹೆಂಡತಿ ಗಂಡನ ಆರೈಕೆ ಮಾಡುತ್ತಿದ್ದಾಳೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post