ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ, ಲಾಠಿಚಾರ್ಜ್
ಶೋಭಾಯಾತ್ರೆ ವೇಳೆ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದ ಈದ್ಗಾ ಮೈದಾನದ ಜಹಂಗೀರ್ ಮೊಹಲ್ಲಾ ಬಳಿ ನಡೆದಿದೆ. ಮುಳಬಾಗಿಲು ಪಟ್ಟಣದಿಂದ ಆವನಿಗೆ ತೆರಳುತಿದ್ದ ಶೋಭಯಾತ್ರೆ, ಈದ್ಗಾ ಮೈದಾನದ ರಸ್ತೆ ಬಳಿ ಬರುತ್ತಿದ್ದ ವೇಳೆ ಪರಸ್ಪರ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಹಲವು ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಚಿವ ಈಶ್ವರಪ್ಪ ವಿರುದ್ಧ ದಾಖಲಾಯ್ತು ದೂರು
ಶಿವಮೊಗ್ಗ ನಗರದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಮಹಾನಗರಪಾಲಿಕೆ ಸದಸ್ಯ ಚನ್ನಬಸಪ್ಪ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹರ್ಷನ ಕೊಲೆ ನಂತರ ಶಿವಮೊಗ್ಗ ನಗರದಲ್ಲಿ ನಡೆದ ಗಲಾಟೆ ಕುರಿತು ಈಶ್ವರಪ್ಪರವರು ಹಾಗೂ ಪಾಲಿಕೆ ಸದಸ್ಯ ಚೆನ್ನಬಸಪ್ಪರವರು ನೀಡಿದ ಹೇಳಿಕೆಯೇ ಕಾರಣವಾಗಿದೆ. ಗಲಭೆ ಸೃಷ್ಟಿಸುವಂತಹ ಹೇಳಿಕೆಗಳನ್ನ ನೀಡಿದ್ದರಿಂದಲೇ ಕೋಮುಗಲಭೆ ಉಂಟಾಗಿದೆ ಎಂದು ಪೀಸ್ ಆರ್ಗನೈಸೇಷನ್ನ ಕಾರ್ಯದರ್ಶಿ ರಿಯಾಜ್ ಅಹಮದ್ ಆರೋಪಿಸಿದ್ರು.
ವೈಫಲ್ಯಗಳನ್ನು ಮುಚ್ಚಿ ಹಾಕಲು ವಿವಾದ ತರ್ತಿದ್ದಾರೆ
ಮುಸ್ಲಿಂ ಸಮುದಾಯಗಳಿಗೆ ಕೆಲ ನಿರ್ಬಂಧಗಳ ಒತ್ತಾಯ ಹಿನ್ನೆಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಯಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು ಕೇಂದ್ರ & ರಾಜ್ಯ ಸರ್ಕಾರ ಇಂತ ಸಾಧನೆ ಮಾಡಿದ್ದೀವಿ ಅಂತ ಹೇಳಲು ಏನೂ ಇಲ್ಲ. ಅದಕ್ಕಾಗಿ ಧಾರ್ಮಿಕ ವಿಚಾರಗಳನ್ನ ಚರ್ಚೆಗೆ ಬಿಡ್ತಿದ್ದಾರೆ. ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಲು ಧಾರ್ಮಿಕ ವಿಚಾರಗಳನ್ನು ಚರ್ಚೆಗೆ ತರ್ತಿದ್ದಾರೆಂದು ಅಂತಾ ಆಕ್ರೋಶ ಹೊರಹಾಕಿದ್ರು.
‘ಎಲ್ಲಾ ಧರ್ಮದವರು ಭಾರತದಲ್ಲಿ ಒಟ್ಟಾಗಿರಬೇಕು’
ಉಡುಪಿಯಿಂದ ಆರಂಭವಾದ ಹಿಜಾಬ್ ದೇಶಾದ್ಯಂತ ಚರ್ಚೆಯನ್ನು ಹುಟ್ಟು ಹಾಕಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಅವರು ನಮ್ಮ ದೇಶಕ್ಕಿಂತ ಮೊದಲು ಪಾಕಿಸ್ತಾನ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿ ಚರ್ಚೆ ಆರಂಭವಾಗಿತ್ತು. ಇದು ಬೇಕಿತ್ತಾ ಬೇಡ್ವಾ ಎಂಬುವುದನ್ನು ಮುಸ್ಲಿಂ ಸಮುದಾಯ ಯೋಚಿಸಬೇಕು. ಅಲ್ಲದೆ ಎಲ್ಲಾ ಧರ್ಮದವರು ಭಾರತದಲ್ಲಿ ಒಟ್ಟಾಗಿರಬೇಕು ಎಂಬುವುದು ನಮ್ಮ ಅಪೇಕ್ಷೆ ಅಂತಾ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ರು.
ಕುಡಿದು ವಾಹನ ಚಾಲನೆ ಮಾಡುವವರೇ ಎಚ್ಚರ..!
ಕುಡಿದು ವಾಹನ ಚಾಲನೆ ಮಾಡುವವರೇ ಎಚ್ಚರ. ಕುಡಿದು ವಾಹನ ಚಾಲನೆ ಮಾಡಿದ್ರೆ ಬೀಳಲಿದೆ ದಂಡ. ಕೊರೊನಾ ಕಾರಣದಿಂದ ಕಳೆದ ಡಿಸೆಂಬರ್ನಲ್ಲಿ ಡ್ರಂಕ್ ಡ್ರೈವ್ ಪರಿಶೀಲನೆ ನಿಲ್ಲಿಸಿದ್ದ ಸಂಚಾರಿ ಪೊಲೀಸರು, ಇಂದಿನಿಂದ ನಗರದ ಎಲ್ಲ ಕಡೆ ಡ್ರಂಕ್ ಡ್ರೈವ್ ಪರಿಶಿಲನೆ ಕಾರ್ಯ ಆರಂಭಿಸಲಿದ್ದಾರೆ. ಸತತ ಮೂರು ತಿಂಗಳ ಕಳೆದ ನಂತರ ಮತ್ತೆ ಡ್ರಂಕ್ ಡ್ರೈವ್ ಪರಿಶೀಲನೆ ಆರಂಭವಾಗತ್ತಿರೋದು, ಮದ್ಯಪ್ರಿಯರಿಗೆ ಸಂಕಟದ ಸ್ಥಿತಿ ಎದುರಾಗಲಿದೆ.
ಬೆಂಗಳೂರು ಕರಗ ಉತ್ಸವಕ್ಕೆ ಅದ್ಧೂರಿ ಚಾಲನೆ
300ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಬೆಂಗಳೂರು ಕರಗ ಉತ್ಸವಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಕೊರೊನಾ ಸಾಂಕ್ರಾಮಿಕದ ಹಿನ್ನಲೆ ಕಳೆದ ಎರಡು ವರ್ಷಗಳಿಂದ ಕರಗ ಉತ್ಸವ ನಡೆದಿರಲಿಲ್ಲ. ಆದ್ರೆ ಈ ಬಾರಿ ಕರಗ ಉತ್ಸವವನ್ನ ಕಣ್ತುಂಬಿಕೊಳ್ಳಲು ಬೆಂಗಳೂರು ಜನರು ಸಜ್ಜಾಗಿದ್ದಾರೆ. ನಿನ್ನೆಯಿಂದ ಏಪ್ರಿಲ್ 18ರವರೆಗೂ ಕರಗ ಉತ್ಸವ ನಡೆಯಲಿದೆ. ಈಗಾಗ್ಲೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿದ್ದು, ಧರ್ಮಸ್ವಾಮಿ ದೇವಸ್ಥಾನವನ್ನ ಪೂರ್ಣವಾಗಿ ಲೈಟ್ಸ್ ಹಾಗೂ ಹೂಗಳಿಂದ ಅಲಂಕಾರಗೊಳಿಸಲಾಗಿದೆ.
ಅಮಿತ್ ಶಾ ‘ಹಿಂದಿ ಬಳಸಿ’ ಹೇಳಿಕೆಗೆ ವಿರೋಧ
ದೇಶದ ಎಲ್ಲಾ ರಾಜ್ಯಗಳ ಜನರು ಪರಸ್ಪರ ಸಂಪರ್ಕಕ್ಕಾಗಿ ಹಿಂದಿ ಭಾಷೆಯನ್ನು ಬಳಸಬೇಕು ಎಂಬ ಅಮಿತ್ ಶಾ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯ ಭಾಷೆಯಾಗಿ ಒಪ್ಪಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಅಧಿಕೃತ ಭಾಷಾ ಸಂಸದೀಯ ಸಮಿತಿಯ 37ನೇ ಸಭೆಯಲ್ಲಿ ನಿನ್ನೆ ಭಾಗಿಯಾಗಿದ್ದ ಶಾ ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯ ಭಾಷೆಯಾಗಿ ಬಳಸಬೇಕೇ ಹೊರತು ಸ್ಥಳೀಯ ಭಾಷೆಗಳನ್ನಲ್ಲ. ದೇಶದೆಲ್ಲೆಡೆ ಸಂಪರ್ಕ ಭಾಷೆಯಾಗಿ ದೇಶೀಯ ಭಾಷೆಯಾದ ಹಿಂದಿಯನ್ನು ಬಳಸಬೇಕು. ವಿದೇಶಿ ಭಾಷೆಯಲ್ಲ ಅಂತಾ ಅವರು ಹೇಳಿದ್ದರು.
ಇಂದು ಇಮ್ರಾನ್ ಖಾನ್‌ಗೆ ಅಗ್ನಿಪರೀಕ್ಷೆ
ಅವಿಶ್ವಾಸ ಗೊತ್ತುವಳಿಗೆ ಅವಕಾಶ ನೀಡದೇ ಸಂಸತ್ತನ್ನೇ ವಿಸರ್ಜಿಸಿ ಚುನಾವಣೆಗೆ ಹೋಗುವ ತಂತ್ರ ಅನುಸರಿಸಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ಇಂದು ಅಗ್ನಿಪರೀಕ್ಷೆ ಎದುರಾಗಲಿದೆ. ರಾಷ್ಟ್ರೀಯ ಅಸೆಂಬ್ಲಿ ವಿಸರ್ಜನೆ ಅಸಂವಿಧಾನಿಕ ಅಂತ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಶನಿವಾರ ಅಧಿವೇಶನ ಸೇರಿ ಅಗ್ನಿಪರೀಕ್ಷೆ ಎದುರಿಸುವಂತೆ ತಾಕೀತು ಮಾಡಿತ್ತು. ಹೀಗಾಗಿ, ಇಂದು ಇಮ್ರಾನ್ ಅವಿಶ್ವಾಸ ಎದುರಿಸಬೇಕಿದ್ದು, ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಮಧ್ಯೆ, ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ಪಾಕ್ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.
ನನ್ನನ್ನು ಮಹಡಿಯಿಂದ ತಳ್ಳಲು ಯತ್ನಿಸಿದ್ದರು!
2013ರಲ್ಲಿ ತಮ್ಮ ಜೀವನದಲ್ಲಿ ನಡೆದ ಅಚ್ಚರಿ ಘಟನೆಯೊಂದನ್ನ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಬಹಿರಂಗಪಡಿಸಿದ್ದಾರೆ. IPLನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡ್ತಿದ್ದಾಗ ಪಂದ್ಯದ ನಂತರ ಆಟಗಾರರು ಒಂದೆಡೆ ಸೇರಿದ್ವಿ. ಆದ್ರೆ ಗೆಟ್ ಟುಗೆದರ್ ಪಾರ್ಟಿಯಲ್ಲಿ ಆಟಗಾರನೊಬ್ಬ ತುಂಬಾನೆ ಕುಡಿದಿದ್ದ. ಆತನ ಹೆಸರನ್ನ ಬಹಿರಂಗಪಡಿಸಲು ಇಚ್ಚಿಸಲ್ಲ. ಪಾರ್ಟಿಯಲ್ಲಿ ನನ್ನನ್ನೇ ಗುರಾಯಿಸ್ತಿದ್ದ ಆತ, ಕೊನೆಗೆ ನನ್ನ ಕರೆದ. ನಾನು ಅವರ ಬಳಿ ಹೋಗ್ತಿದ್ದಂತೆ, ಕೈಗಳನ್ನ ಲಾಕ್ ಮಾಡಿ ಕತ್ತನ್ನು ಹಿಡಿದು 15ನೇ ಮಹಡಿಯ ಬಾಲ್ಕನಿಯಲ್ಲಿ ನನ್ನನ್ನು ನೇತಾಡಿಸಿದ್ದ. ಆದ್ರೆ ಇದನ್ನ ನೋಡಿದ ಸಹ ಆಟಗಾರರು ನನ್ನನ್ನು ಪಾರು ಮಾಡಿದ್ರು ಎಂದು ಚಹಲ್ ಶಾಕಿಂಗ್ ಘಟನೆಯನ್ನ ಮೆಲುಕು ಹಾಕಿದ್ದಾರೆ.
ಐಪಿಎಲ್ನಲ್ಲಿ ಇಂದು ‘ಡಬಲ್ ಹೆಡ್ಡರ್’
ಐಪಿಎಲ್ ದಂಗಲ್ನಲ್ಲಿ ಇಂದು ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್-ಸನ್ರೈಸರ್ಸ್ ಹೈದ್ರಬಾದ್ ತಂಡಗಳು ಮುಖಾಮುಖಿ ಆಗಲಿದ್ರೆ, ಸಂಜೆ ನಡೆಯುವ ಎರಡನೇ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ಜಿದ್ದಾಜಿದ್ದಿನ ಕಾದಾಟ ನಡೆಸಲಿದೆ. ಮೊದಲ ಪಂದ್ಯ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ್ರೆ, ದ್ವಿತೀಯ ಪಂದ್ಯಕ್ಕೆ ಪುಣೆಯ ಎಂಸಿಎ ಮೈದಾನ ಆತಿಥ್ಯ ವಹಿಸಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post