ಮುಂಬೈ: ಮಹಾರಾಷ್ಟ್ರದ ಹನುಮಾನ್ ಚಾಲೀಸಾ ಅಭಿಯಾನ ರಾಜಕೀಯ ಸಂಘರ್ಷದ ತಿರುವು ಪಡೆದುಕೊಂಡಿದೆ. ರಾಣಾ ದಂಪತಿ ವಿರುದ್ಧ ದೇಶದ್ರೋಹದ ಕೇಸ್ ದಾಖಲಾಗಿದೆ. ಎಫ್ಐಆರ್ ರದ್ದು ಮಾಡಬೇಕು ಅಂತ ಸಂಸದೆ ನವನೀತ್ ರಾಣಾ ಸಲ್ಲಿಸಿರೋ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ಮುಂಬೈನಲ್ಲಿ ನಡೆದ ಹೈಡ್ರಾಮಾ ಸಂಸತ್ವರೆಗೂ ತಲುಪಿದೆ.
ಬಾಂಬೆ ಹೈಕೋರ್ಟ್ನಲ್ಲಿ ರಾಣಾ ದಂಪತಿಗೆ ಹಿನ್ನಡೆ
FIR ರದ್ದು ಕೋರಿದ್ದ ಅರ್ಜಿ ವಜಾ, ಸಂಸದೆಗೆ ತರಾಟೆ
ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲೀಸಾ ಅಭಿಯಾನ ವಿವಾದದ ಸ್ವರೂಪ ಪಡೆದುಕೊಂಡಿದೆ. ಶಿವಸೇನೆ ಹಾಗೂ ಪಕ್ಷೇತರ ಸಂಸದೆ ನಡುವಿನ ರಾಜಕೀಯ ಸಮರಕ್ಕೆ ವೇದಿಕೆ ಒದಗಿಸಿದೆ. ಕಳೆದ ವಾರ ಮುಂಬೈನಲ್ಲಿ ನಡೆದಿದ್ದ ಹನುಮಾನ್ ಚಾಲೀಸಾ ವಿವಾದದ ಬಳಿಕ ಸಂಸದೆ ನವನೀತ್ ರಾಣಾ ಹಾಗೂ ಪತಿ ಶಾಸಕ ರವಿ ರಾಣಾರನ್ನು ಪೊಲೀಸರು ಬಂಧಿಸಿದ್ದರು. ಇಬ್ಬರ ವಿರುದ್ಧವೂ ಎರಡೆರಡು ಎಫ್ಐಆರ್ ದಾಖಲಿಸಿರೋ ಪೊಲೀಸರು, ದೇಶದ್ರೋಹ ಅಡಿಯೂ ಕೇಸ್ ದಾಖಲಿಸಿದ್ದಾರೆ. ಈ ಎಫ್ಐಆರ್ ರದ್ದುಪಡಿಸಬೇಕು ಅಂತ ಬಾಂಬೆ ಹೈಕೋರ್ಟ್ಗೆ ಸಲ್ಲಿಸಲಾದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದ್ದು ಮಾತ್ರವಲ್ಲದೆ ಇಬ್ಬರನ್ನೂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಬಾಂಬೆ ಕೋರ್ಟ್ ಹೇಳಿದ್ದೇನು?
ರಾಣಾ ದಂಪತಿ ವಿರುದ್ಧದ ಎಫ್ಐಆರ್ ರದ್ದು ಮಾಡಲಾಗುವುದಿಲ್ಲ ಅಂತಾ ಬಾಂಬೆ ಹೈಕೋರ್ಟ್ ಹೇಳಿದೆ. ಎಷ್ಟೇ ದೊಡ್ಡ ಪವರ್ ಇದ್ದರೂ ಅಷ್ಟೇ ದೊಡ್ಡ ಜವಾಬ್ದಾರಿಯೂ ಇದೆ ಅಂತ ಕೋರ್ಟ್ ಹೇಳಿದೆ. ಸಾರ್ವಜನಿಕವಾಗಿ ಜನಪ್ರತಿನಿಧಿಗಳ ಜವಾಬ್ದಾರಿ ಬಹಳ ದೊಡ್ಡದು ಅಂತ ರಾಣಾ ದಂಪತಿಗೆ ಕ್ಲಾಸ್ ತೆಗೆದುಕೊಂಡಿದೆ.
ಲೋಕಸಭಾ ಸ್ಪೀಕರ್ಗೆ ಸಂಸದೆ ನವನೀತ್ ರಾಣಾ ದೂರು
24 ಗಂಟೆಗಳಲ್ಲಿ ವರದಿ ನೀಡುವಂತೆ ಮಹಾ ಸರ್ಕಾರಕ್ಕೆ ತಾಕೀತು
ಮಹಾರಾಷ್ಟ್ರದ ಹನುಮಾನ್ ಚಾಲೀಸಾ ಅಭಿಯಾನ ವಿವಾದ ಮತ್ತೊಂದು ಹಂತ ತಲುಪಿದೆ. ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿರೋ ಸಂಸದೆ ನವನೀತ್ ರಾಣಾ ಲೋಕಸಭಾ ಸ್ಪೀಕರ್ ಓಮ್ ಬಿರ್ಲಾಗೆ ಲಿಖಿತ ದೂರು ಕೊಟ್ಟಿದ್ದಾರೆ. ಠಾಣೆಯಲ್ಲಿ ಕೂಡಿ ಹಾಕಿ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಅಂತ ಉಲ್ಲೇಖಿಸಿದ್ದಾರೆ. ಈ ಪತ್ರವನ್ನು ಗಂಭೀರವಾಗಿ ತೆಗೆದುಕೊಂಡ ಸ್ಪೀಕರ್, 24 ಗಂಟೆಗಳ ಒಳಗೆ ವರದಿ ನೀಡುವಂತೆ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.
‘ಹನುಮಾನ್ ಚಾಲೀಸಾ ಪಠಣೆ ದೇಶದ್ರೋಹವಾದ್ರೆ ನಮ್ಮ ವಿರುದ್ಧವೂ ಕೇಸ್ ಹಾಕಿ’
ಇನ್ನು ರಾಣಾ ದಂಪತಿಗೆ ನ್ಯಾಯಾಂಗ ಬಂಧನ ವಿಧಿಸಿದ್ದನ್ನ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಖಂಡಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಪೊಲೀಸ್ ಇಲಾಖೆಯ ದುರ್ಬಳಕೆ ಮಾಡಿಕೊಳ್ತಿದೆ. ಪ್ರತಿಪಕ್ಷಗಳ ನಾಯಕರ ವಿರುದ್ಧ ಸುಳ್ಳು ಕೇಸ್ ಹಾಕಲಾಗ್ತಿದೆ. ನಿಮ್ಮ ಮನೆ ಮುಂದೆ ಹನುಮಾನ್ ಚಾಲೀಸಾ ಪಠಿಸಿದ್ರೆ ಏನಾಗುತ್ತದೆ. ಅದನ್ನ ಪಾಕಿಸ್ತಾನಕ್ಕೆ ಹೋಗಿ ಮಾಡ್ಬೇಕಾ? ಇದನ್ನ ದೇಶವಿರೋಧಿ ಅಂತ ಸರ್ಕಾರ ಭಾವಿಸೋದಾದ್ರೆ ನಾವೆಲ್ಲರೂ ಅದನ್ನ ಮಾಡ್ತೀವಿ ಅಂತ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
ಹನುಮಾನ್ ಚಾಲೀಸಾ ಪಠಿಸೋದು ದೇಶದ್ರೋಹ, ರಾಜದ್ರೋಹ ಆಗುತ್ತೆ ಅಂದ್ರೆ ನಮ್ಮಲ್ಲಿನ ಎಲ್ಲರೂ ಈ ರಾಜದ್ರೋಹ ಮಾಡ್ತೀವಿ. ನಾವೆಲ್ಲರೂ ಹನುಮಾನ್ ಚಾಲೀಸಾ ಪಠಣೆ ಮಾಡ್ತೀವಿ. ಸರ್ಕಾರಕ್ಕೆ ತಾಕತ್ ಇದ್ರೆ ನಮ್ಮ ಮೇಲೆ ರಾಜದ್ರೋಹ ಕೇಸ್ ದಾಖಲಿಸಲಿ ನೋಡೋಣ.
ಒಟ್ಟಿನಲ್ಲಿ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಕರೆ ನೀಡಿರೋ ಹನುಮಾನ್ ಚಾಲೀಸಾ ಅಭಿಯಾನ ರಾಜಕೀಯ ಸಂಘರ್ಷದ ಸ್ವರೂಪ ಪಡೆದುಕೊಳ್ತಿದೆ. ಸಿಎಂ ಉದ್ಧವ್ ಠಾಕ್ರೆ ನಿವಾಸದೆದುರು ಹನುಮಾನ್ ಚಾಲೀಸಾ ಪಠಿಸೋದಾಗಿ ಚಾಲೆಂಜ್ ಮಾಡಿದ್ದ ಸಂಸದೆ ನವನೀತ್ ಠಾಣಾ ಹಾಗೂ ಪತಿ ಶಾಸಕ ರವಿ ರಾಣಾ ಜೈಲುಪಾಲಾಗಿದ್ದಾರೆ. ಅದ್ರಲ್ಲೂ ಇಬ್ಬರ ವಿರುದ್ಧ ದೇಶ್ದರೋಹದ ಕಾಯ್ದೆಯಡಿ ಪ್ರಕರಣ ದಾಖಲಿಸಿರೋದು ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post