ನವದೆಹಲಿ: ಕೊರೊನಾ.. ಅಬ್ಬಾ ಹೋಯ್ತು ಅಂತ ನಿಟ್ಟುಸಿರು ಬಿಟ್ಟು ಹಾಯಾಗಿ ಓಡಾಡ್ಕೊಂಡಿದ್ದ ಜನರಿಗೆ ಮತ್ತೆ ಹೆಮ್ಮಾರಿ ಕಾಟ ಶುರುವಾಗಿದೆ. ದೇಶದಲ್ಲಿ ಸೈಲೆಂಟ್ ಆಗಿದ್ದ ವೈರಸ್ ವೈಲೆಂಟ್ ಆಗಿದ್ದು, ಸದ್ದಿಲ್ಲದೇ ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಎದ್ದಿದೆ. ಆರಂಭದಲ್ಲೇ ಕೊರೊನಾ ಕಟ್ಟಿಹಾಕಲು ಸರ್ಕಾರ ಮುಂದಾಗಿದ್ದು, ಇಂದು ಪ್ರಧಾನಿ, ಎಲ್ಲಾ ರಾಜ್ಯಗಳ ಸಿಎಂ ಜೊತೆ ಸಭೆ ನಡೆಸಲಿದ್ದಾರೆ.
ಕಣ್ಣಿಗೆ ಕಾಣದಿದ್ರು 2 ವರ್ಷಗಳಿಂದ ಇಡೀ ವಿಶ್ವವನ್ನೇ ನಲುಗಿಸಿ ತಣ್ಣಗಾಗಿದ್ದ ಕೊರೊನಾ ಮತ್ತೆ ತನ್ನ ಅಟ್ಟಹಾಸ ಮೆರೆಯೋಕೆ ಶುರುಮಾಡಿದೆ. ವಿದೇಶಗಳಲ್ಲಿ ಮತ್ತೆ ತನ್ನ ಆರ್ಭಟ ಮುಂದುವರೆಸಿರೋ ಹೆಮ್ಮಾರಿ ದೇಶದಲ್ಲಿ ಮತ್ತೆ ತನ್ನ ಕಬಂದ ಬಾಹು ಚಾಚುತ್ತಿದೆ.
24 ಗಂಟೆಯಲ್ಲಿ 2,483 ಹೊಸ ಕೋವಿಡ್ ಪ್ರಕರಣ ಪತ್ತೆ
ದೇಶದಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನಾಲ್ಕನೇ ಅಲೆಯ ಆತಂಕ ಎದುರುರಾಗಿದೆ. ನಿನ್ನೆ ಒಂದೇ ದಿನ ಅಂದ್ರೆ 24 ಗಂಟೆಯಲ್ಲಿ ದೇಶದಲ್ಲಿ ಒಟ್ಟು 2,483 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಒಂದು ಮತ್ತು ಎರಡನೇ ಅಲೆಯಲ್ಲಿ ನಿರ್ಮಾಣವಾದ ಪರಿಸ್ಥಿತಿ ಬಾರದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ
ದೇಶದಲ್ಲಿ ಕೊರೊನಾ 4ನೇ ಅಲೆಯ ಆತಂಕ ಹೆಚ್ಚಾಗಿರೋ ಹಿನ್ನೆಲೆ, ಇಂದು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ಕರೆದಿದ್ದಾರೆ. ದೇಶದ ಎಲ್ಲಾ ರಾಜ್ಯಗಳ ಸಿಎಂ ಜೊತೆ ಮೋದಿ ಸಭೆ ನಡೆಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂಗಳ ಜೊತೆ ಮಾತುಕತೆ ನಡೆಸಲಿರೋ ಪ್ರಧಾನಿ, ರಾಜ್ಯಗಳ ಕೋವಿಡ್ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅಲ್ಲದೆ ಹೆಮ್ಮಾರಿ ಕಟ್ಟಿ ಹಾಕಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಕರ್ನಾಟಕದಲ್ಲಿ ನಾಲ್ಕನೇ ಅಲೆಯ ಬಗ್ಗೆ ಗಾಬರಿ ಬೇಡ ಎಂದ ಸಿಎಂ
ಈಗಾಗಲೇ ಕೊರೊನಾ ಸೋಂಕು ಉಲ್ಬಣವಾಗ್ತಿದ್ದಂತೆ ಎಚ್ಚೆತ್ತಿರೋ ಸರ್ಕಾರ, ರಾಜ್ಯದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ನಿಯಮವನ್ನ ಮತ್ತೆ ಜಾರಿಗೆ ತಂದಿದೆ. ಜೊತೆಗೆ ಎಲ್ಲರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬ ಆದೇಶವನ್ನೂ ಹೊರಡಿಸಿದೆ. ಈ ಮಧ್ಯೆ ಕೊರೊನಾ ನಾಲ್ಕನೇ ಅಲೆಯ ಬಗ್ಗೆ ಆತಂಕಬೇಡ ಅಂತಾ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದ ಜನರಿಗೆ ಅಭಯ ನೀಡಿದ್ದಾರೆ.
ಒಟ್ಟಿನಲ್ಲಿ ದೇಶದಲ್ಲಿ ಹೆಮ್ಮಾರಿ ವೇಗಕ್ಕೆ ಆರಂಭದಲ್ಲೇ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ಪ್ರಧಾನಿ ಇಂದು ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಕೋವಿಡ್ ಸಭೆ ನಡೆಸಲಿದ್ದಾರೆ. ಈ ಸಭೆ ಬಳಿಕ ರಾಜ್ಯಗಳಲ್ಲಿ ಮತ್ತೆ ಕೋವಿಡ್ ರೂಲ್ಸ್‌ಗಳು ಜಾರಿಯಾಗುವ ಸಾಧ್ಯತೆ ಇದೆ. ಅದೇನೆ ಇರ್ಲಿ ಸರ್ಕಾರವೇ ರೂಲ್ಸ್ ಮಾಡ್ಬೇಕು ಅಂತ ಕಾಯಬೇಡಿ. ಇವತ್ತಿನಿಂದಲೇ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ನೀವೆ ಕಣ್ಣಿಗೆ ಕಾಣದ ಹೆಮ್ಮಾರಿಯಿಂದ ಸೇಫ್ ಆಗಿ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post