ನವದೆಹಲಿ: ಬಿಸಿಲ ಬೇಗೆ.. ನಿಗಿ ನಿಗಿ ಕೆಂಡದಂತ ಬಿಸಿಲಿನ ಮೂಲಕ ನೆತ್ತಿ ಸುಡುತ್ತಿರುವ ಭಾಸ್ಕರ.. ಇದ್ರ ಮಧ್ಯೆ ಎಷ್ಟು ನೀರು ಕುಡಿದ್ರೂ ನೀಗದ ದಾಹ.. ಉತ್ತರ ಭಾರತ ಅಕ್ಷರಶಃ ರಣಬಿಸಿಲಿಗೆ ತತ್ತರಿಸಿದೆ. ಸೂರ್ಯನ ಕೆಂಗಣ್ಣಿಗೆ ಹಲವು ರಾಜ್ಯಗಳು ಕಾದ ಬಾಣಲೆಯಂತಾಗಿದ್ದು ಭಾರತದಲ್ಲಿ ಹಿಂದೆಂದೂ ಕಾಣದ ತಾಪಮಾನ ದಾಖಲಾಗಿದೆ.
5 ರಾಜ್ಯಗಳಲ್ಲಿ ಉಷ್ಣ ಅಲೆಯ ಆರೆಂಜ್ ಅಲರ್ಟ್ ಘೋಷಣೆ
ಹೌದು.. ಉತ್ತರ ಭಾರತದಲ್ಲಿ ಉಷ್ಣಾಂಶ ಹೆಚ್ಚಾಗಿದ್ದು ಸುಮಾರು 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗ್ತಿದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆಯು ಉತ್ತರ ಭಾರತದ ರಾಜಸ್ಥಾನ, ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಒಡಿಶಾ ರಾಜ್ಯಗಳಿಗೆ ಉಷ್ಣ ಅಲೆಯ ಆರೆಂಜ್ ಅಲರ್ಟ್ ಘೋಷಿಸಿದೆ. ಅಲ್ಲದೇ ಮುಂದಿನ ಮೂರು ದಿನಗಳಲ್ಲಿ 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಬಹುದು ಅಂತ ಎಚ್ಚರಿಕೆ ನೀಡಿದೆ.
ಇನ್ನು ಎಲ್ಲೆಲ್ಲಿ ಎಷ್ಟು ಉಷ್ಣಾಂಶ ದಾಖಲಾಗಿದೆ ಅಂತ ನೋಡೋದಾದ್ರೆ, ಉತ್ತರ ಪ್ರದೇಶದ ಬಾಂಡಾ ನಗರದಲ್ಲಿ ಅತೀ ಹೆಚ್ಚು ಅಂದ್ರೆ 47.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೇಸಿಗೆಯ ಬೆಂಕಿಗೆ ಬೆಂಡಾಗಿರೋ ರಾಜಸ್ಥಾನದ ಗಂಗಾನಗರದಲ್ಲಿ 46.4 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದೆ. ಹರ್ಯಾಣದ ಗುರುಗ್ರಾಮದಲ್ಲಿ 45.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ರೆ ಓಡಿಶಾದ ಸುಬರ್ನಪುರದಲ್ಲಿ 44.5 ಸಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 43.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಇನ್ನು ಜನರು ಈ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಬೇಕಾದ್ರೆ ಹವಾಮಾನ ಇಲಾಖೆ ಕೆಲವು ಕ್ರಮಗಳನ್ನು ಪಾಲಿಸಲು ತಿಳಿಸಿದೆ.
ಬಿಸಿಲಿನಿಂದ ಬಚಾವಾಗಲು ಹೀಗೆ ಮಾಡಿ
- ಮಕ್ಕಳು, ಮಹಿಳೆಯರು, ಹಿರಿಯರು, ಕಾಯಿಲೆಯಿಂದ ಬಳಲುತ್ತಿರುವವರು
- ಬಿಸಿಲಿನ ಸಮಯದಲ್ಲಿ ಹೊರ ಹೋಗುವುದನ್ನು ಆದಷ್ಟು ಕಡಿಮೆ ಮಾಡಬೇಕು
- ಹಗುರವಾದ ಬಟ್ಟೆ, ಗಾಡ ಬಣ್ಣ ಇರದ ಬಟ್ಟೆಯನ್ನು ಧರಿಸಿ ಓಡಾಡಬೇಕು
- ಕಾಟನ್ ಬಟ್ಟೆ ಧರಿಸಬೇಕು, ನೆತ್ತಿ ಸುಡದಂತೆ ತಲೆ ಮೇಲೆ ಬಟ್ಟೆ ಹಾಕುವುದು
- ಹೊರ ಹೋಗುವಾಗ ಹ್ಯಾಟ್ ಅಥವಾ ಕೊಡೆ ಹಿಡಿದುಕೊಂಡು ಹೋಗಬೇಕು
- ಬಿಸಿಲಿನ ಸಮಯದಲ್ಲಿ ಕೈಯಲ್ಲಿ ನೀರಿನ ಬಾಟಲ್ ಇದ್ರೆ ಕುಡಿಯೋ ನೀರಿಗೆ ಅಲೆಯೋದು ತಪ್ಪುತ್ತದೆ.
ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ವಿದ್ಯುತ್ ಬೇಡಿಕೆಯಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ. ರಾಜಸ್ಥಾನವು ಕಾರ್ಖಾನೆಗಳಲ್ಲಿ ನಾಲ್ಕು ಗಂಟೆ ವಿದ್ಯುತ್ ಕಡಿತ ನಿಗದಿಪಡಿಸಲಾಗಿದೆ. ತೀವ್ರ ಉಷ್ಣಾಂಶದ ಕಾರಣ ಪಶ್ಚಿಮ ಬಂಗಾಳವು ಶಿಕ್ಷಣ ಸಂಸ್ಥೆಗಳಿಗೆ ಬೇಸಿಗೆಯ ಆರಂಭದಲ್ಲಿ ರಜೆಯನ್ನು ಘೋಷಿಸಿದೆ. ಒಡಿಶಾದಲ್ಲೂ ಸೂರ್ಯ ನೆತ್ತಿ ಸುಡುತ್ತಿದ್ದು, ಮಹಿಳೆಯರು ಕಾರ್ನ ಬಾನೆಟ್ ಮೇಲೇ ಚಪಾತಿ ಮಾಡುತ್ತಿದ್ದಾರೆ. ದೇಶದಲ್ಲಿ ಉಷ್ಣಾಂಶ ಅದೆಷ್ಟರ ಮಟ್ಟಿಗೆ ಹೆಚ್ಚಾಗಿದೆ ಅಂದ್ರೆ ಕೂಲೆಸ್ಟ್ ರಾಜ್ಯ ಜಮ್ಮು ಕಾಶ್ಮೀರದಲ್ಲೂ 40 ಡಿಗ್ರಿ ತಾಪಮಾನ ದಾಖಲಾಗಿದೆ. ಒಟ್ಟಾರೆಯಾಗಿ ಸೂರ್ಯನ ಶಾಖ ಮನುಷ್ಯನ ಬೆವರಿಳಿಸ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post