ದೇಶದೆಲ್ಲೆಡೆ ಇವತ್ತು ಈದ್ ಮತ್ತು ಬಸವ ಜಯಂತಿಯ ಸಂಭ್ರಮ. ಇದೇ ವೇಳೆ ರಾಜಸ್ಥಾನದಲ್ಲಿ ಧರ್ಮ ಸಂಘರ್ಷದ ಕಿಡಿ ಹೊತ್ತಿದೆ. ಶಾಂತಿ, ಸೌಹಾರ್ದತೆ ಮೂಡಬೇಕಾದ ಸಂದರ್ಭದಲ್ಲಿ ಕೋಮು ಗಲಭೆ ಭುಗಿಲೆದ್ದಿದೆ. ಇದು ಸಿಎಂ ಅಶೋಕ್ ಗೆಹ್ಲೋಟ್ ತವರೂರನ್ನ ಅಕ್ಷರಶಃ ರಣಾಂಗಣವಾಗಿ ಮಾರ್ಪಾಡು ಮಾಡಿಬಿಟ್ಟಿದೆ.
ಇದು ನಿನ್ನೆ ರಾತ್ರಿಯಿಂದ ರಾಜಸ್ಥಾನದ ಜೋಧ್‌ಪುರದಲ್ಲಿ ಕಂಡುಬಂಧ ಘನಘೋರ ದೃಶ್ಯಗಳು. ಶಾಂತವಾಗಿದ್ದು ಜೋಧ್‌ಪುರಕ್ಕೆ ಸಂಘರ್ಷದ ಕಿಡಿಹೊತ್ತಿದ ಸನ್ನಿವೇಶಗಳು. ಇದೇ ದೃಶ್ಯ ಇಡೀ ಜೋಧ್‌ಪುರಕ್ಕೆ ಅಶಾಂತಿಯ ಬೆಂಕಿಯನ್ನ ಹೊತ್ತಿಸಿರೋದು. ಸ್ನೇಹ ಸೌಹಾರ್ದತೆಯಿಂದ ನಡೆಯಬೇಕಿದ್ದ ಈದ್ ಸಂಭ್ರಮಕ್ಕೆ ಕೊಳ್ಳಿ ಇಟ್ಟಿದ್ದು. ಅಸಲಿಗೆ ಈ ಗಲಭೆಗೆ ಕಾರಣವಾಗಿದ್ದು, ಈದ್ ಧ್ವಜ ಕಟ್ಟುವ ವಿಚಾರ. ಅದೇನಂದ್ರೆ, ಜೋಧ್‌ಪುರದ ಜಾಲೋರಿ ಗೇಟ್ ಬಳಿಯ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆ ಬಳಿ ಯುವಕರ ಗುಂಪೊಂದು ಈದ್ ಧ್ವಜವನ್ನ ಕಟ್ಟಲು ಮುಂದಾಗಿದ್ದ. ಆದ್ರೆ, ಧ್ವಜವನ್ನ ಕಟ್ಟಲು ಮತ್ತೊಂದು ಗುಂಪು ತೀವ್ರ ವಿರೋಧ ವ್ಯಕ್ತಪಡಿಸಿದೆ. ಬಳಿಕ ಮಾತಿಗೆ ಮಾತು ಬೆಳೆದು ಅದು ದೊಡ್ಡ ಗಲಭೆಯಾಗಿ ಮಾರ್ಪಾಡಾಗಿದೆ. ಬಳಿಕ ನಡೆದಿದ್ದೇ ರಣಾಂಗಣ.
ಗಲಾಟೆ ತೀವ್ರಗೊಳ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ. ಕಲ್ಲು ತೂರಾಟವನ್ನ ತಡೆಯಲು ಹರಸಾಹಸ ಪಟ್ಟಿದ್ದಾರೆ. ಗಾಳಿಯಲ್ಲಿ ಗುಂಡುಹಾರಿಸಿದ್ದಾರೆ, ಟಿಯರ್ ಗ್ಯಾಸ್ ಕೂಡಾ ಪ್ರಯೋಗಿಸಿದ್ದಾರೆ. ಈ ವೇಳೆ ಪರಸ್ಪರ ಕಲ್ಲು ತೂರಾಟ ನಡೆಸ್ತಿದ್ದ ಉದ್ರಿಕ್ತರ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಈ ವೇಳೆ ಐವರು ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಇನ್ನು ಗಲಾಟೆ ನಡೆದ ಜೋಧ್‌ಪುರದ ಉದಯ್ ಮಂದಿರ್, ನಗೋರಿ ಗೇಟ್, ಪ್ರತಾಪ್ ನಗರ್, ದೇವ್ ನಗರ, ಸರ್ದಾರ್‌ಪುರ ಸೇರಿ ಹಲವು ಭಾಗಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಅಲ್ಲದೇ ಇಡೀ ಗಲಭೆಗೆ ಕಾರಣವಾದ ಮೂವರು ಕಿಡಿಗೇಡಿಗಳನ್ನ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ತವರೂರು ಜೋಧ್‌ಪುರದಲ್ಲಿ ಕೋಮುಗಲಭೆ ನಡೆದೋಗಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರೋ ಅವರು ಗುಂಪು ಘರ್ಷಣೆ ನಡೆದಿರೋದು ದುರದೃಷ್ಟಕರ ಸಂಗತಿ ಎಂದಿದ್ದಾರೆ.
ಜೋಧ್‌ಪುರದಲ್ಲಿ ನಡೆದ ಘಟನೆ ದುರದೃಷ್ಟಕರ, ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಘಟನೆಗಳನ್ನ ಸರ್ಕಾರ ಸಹಿಸಲ್ಲ. ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರು ಯಾವುದೇ ಧರ್ಮ, ಜಾತಿಯವರೇ ಆಗಲಿ ಅದನ್ನ ಲೆಕ್ಕಿಸದೇ ಅಪರಾಧದಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಅವರ ವಿರುದ್ಧ ಕಠಿಣ ಕ್ರಮ ನಿಶ್ಚಿತ.
ಅಶೋಕ್ ಗೆಹ್ಲೋಟ್, ರಾಜಸ್ಥಾನ ಸಿಎಂ
ಒಟ್ಟಾರೆ, ಕಳೆದ ಹಲವು ದಿನಗಳಿಂದ ದೇಶದ ಹಲವೆಡೆ ಕೋಮುಗಲಭೆಗಳು ನಡೆಯುತ್ತಲೇ ಇವೆ. ಇದೀಗ ರಾಜಸ್ಥಾನದಲ್ಲೂ ಈ ರೀತಿಯ ಗುಂಪುಘರ್ಷಣೆ ನಡೆದಿದ್ದು, ಗಲಭೆಕೋರರನ್ನ ಮಟ್ಟಹಾಕಲು ಗೆಹ್ಲೋಟ್ ಸರ್ಕಾರ ಯಾವ ಕ್ರಮಗಳ ಮೊರೆಹೋಗುತ್ತಾ ನೋಡ್ಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post