ನ್ಯಾಟೋ ಜೊತೆಗಿನ ನಂಟಿನಿಂದ ಸಿಟ್ಟಾಗಿ, ಉಕ್ರೇನ್ ಮೇಲೆ ಯುದ್ಧ ಸಾರಿ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳನ್ನ ಎದುರಾಕಿಕೊಂಡಿರೋ ಪಂಟರ ಪಂಟ ಪುಟಿನ್. ಇದೀಗ ರಷ್ಯಾ ಅಧ್ಯಕ್ಷರಿಗೆ ತಮ್ಮದೇ ಸ್ಥಾನದಲ್ಲಿ ಮುಂದುವರಿಯೋದು ಕಷ್ಟವಾಗ್ತಿದೆ. ಒಂದಷ್ಟು ಕಾಲ ಅಧಿಕಾರದಿಂದ ಅಂತರ ಅನಿವಾರ್ಯವಾಗಿದೆ. ಇದಕ್ಕೆ ಕಾರಣ ಕಾಡ್ತಿರೋ ಕ್ಯಾನ್ಸರ್. ಹಾಗಾದ್ರೆ, ಪುಟಿನ್ ಅನುಪಸ್ಥಿತಿಯಲ್ಲಿ ಅಧಿಕಾರ ಚಲಾಯಿಸೋಱರು? ಯುದ್ಧ ಮುನ್ನಡೆಸೋ ಕ್ಯಾಪ್ಟನ್ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ..
ಉಕ್ರೇನ್ನಲ್ಲಿ ನಡೀತಿರೋ ಈ ಭೀಕರ ಯುದ್ಧದ ಸೂತ್ರಧಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್. ಯುದ್ಧವೇನೋ ಮುಂದುವರಿದಿದೆ. ಆದ್ರೆ ಸೂತ್ರದಾರನ ಕೈ ನಡುಗ್ತಿದೆ. ಆರೋಗ್ಯ ಹದಗೆಟ್ಟಿದೆ. ಕಾರಣ ಕ್ಯಾನ್ಸರ್ ಹಾಗೂ ಪಾರ್ಕಿಸನ್ಸ್. ಕಳೆದ ಕೆಲವು ತಿಂಗಳಿನಿಂದ ಪುಟಿನ್ ಕ್ಯಾನ್ಸರ್ ಹಾಗೂ ಪಾರ್ಕಿಸನ್ಸ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಇದಕ್ಕಾಗಿ ರಹಸ್ಯ ತಾಣದಲ್ಲಿ ಸಿದ್ಧತೆಯೂ ನಡೆದಿದೆ. ಆಪರೇಷನ್ ಆದಾಗ ಅಧಿಕಾರ ಮುಂದುವರಿಸೋದು ಕಷ್ಟ.. ಹೀಗಾಗಿ ಅಧಿಕಾರಕ್ಕೂ ಆಪರೇಷನ್ ಮಾಡಬೇಕಾಗುತ್ತೆ. ಪುಟಿನ್ ಅಧ್ಯಕ್ಷ ಸ್ಥಾನದಿಂದ ಅಂತರ ಕಾಯ್ದುಕೊಂಡಾಗ ಜವಾಬ್ದಾರಿ ಟ್ರಾನ್ಸ್ಫರ್ ಆಗಲೇಬೇಕಿದೆ.
ಉಕ್ರೇನ್ ವಿರುದ್ಧ ಯುದ್ಧ ಗೆಲ್ಲಲು ರಷ್ಯಾ ಹರಸಾಹಸ ನಡೆಸುತ್ತಿರುವ ಹೊತ್ತಿನಲ್ಲೇ ಪುಟಿನ್‌ಗೆ ಸರ್ಜರಿಯಾಗುತ್ತಿದೆ. ಇಂಥ ಸಂದರ್ಭದಲ್ಲಿ ರಷ್ಯಾ ದೇಶದ ಚುಕ್ಕಾಣಿಯ ಹೊಣೆ ಸುಲಭದ ಮಾತೇನಲ್ಲ.. ಜವಾಬ್ದಾರಿ ತಾತ್ಕಾಲಿಕವಾದ್ರೂ, ಹೊಣೆಯ ಪ್ರಮಾಣ ಧೀರ್ಘ.. ಸುಧೀರ್ಘ.. ಹೀಗಾಗಿಯೇ ಈ ಹೊಣೆ ಪುಟಿನ್ ಅವರ ನಿಕಟವರ್ತಿಯೂ ಆಗಿರೋ, ರಷ್ಯಾದ ಭದ್ರತಾ ಮಂಡಳಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವ ನಿಕೋಲಾಯ್ ಪಟ್ರುಶೆವ್ ಹೆಗಲಿಗೆ ಬೀಳುವ ಸಾಧ್ಯತೆ ಇದೆ.
ಅಧ್ಯಕ್ಷರಿಲ್ಲದಾಗ ಪ್ರಧಾನಿಗಳಿಗೆ ತಾತ್ಕಾಲಿಕ ಹೊಣೆ ನೀಡೋದು ಸಹಜ. ಆದ್ರಿಲ್ಲಿ ಪ್ರಧಾನಮಂತ್ರಿ ಮಿಖಾಯಿಲ್ ಮಿಶುಸ್ಟಿನ್ ಬದಲಿಗೆ ನಿಕೋಲಾಯ್ ಪೆಟ್ರೋಶೆವ್ರತ್ತ ಪುಟಿನ್ ಚಿತ್ತ ನೆಟ್ಟಿದ್ದಾರೆ. ಇದರ ಹಿಂದೆ ಬಲವಾದ ಕಾರಣವೂ ಇದೆ.
ಪುಟಿನ್ ನಂಬಿಕಸ್ಥ ನಿಕೋಲಾಯ್!
ಉಕ್ರೇನ್ ಯುದ್ಧದಲ್ಲಿ ರಷ್ಯಾದ ಸಮರ ತಂತ್ರಗಾರಿಕೆ, ರಣತಂತ್ರ ಎಲ್ಲದರ ಮಾಸ್ಟರ್ ಮೈಂಡ್ ಇದೇ ನಿಕೋಲಾಯ್ ಪಟ್ರುಶೆವ್. ಅಲ್ಲದೇ ವ್ಲಾಡಿಮಿರ್ ಪುಟಿನ್ ಅವರು ಬಹಳ ನಂಬುವ ವ್ಯಕ್ತಿಯೂ ಹೌದು.. ಇನ್ನು, ಪುಟಿನ್ರಂತೆಯೇ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವೂ ಇವರಿಗಿದೆ. ಹೀಗಾಗಿ ಪುಟಿನ್‌ಗೆ ಇವರ ಮೇಲೆ ಹೆಚ್ಚಿನ ವಿಶ್ವಾಸ ಇರಬಹುದು. ಪಟ್ರುಶೆವ್ ಸೋವಿಯತ್ ಒಕ್ಕೂಟದ ಕೆಜಿಬಿ ಭದ್ರತಾ ಸಂಸ್ಥೆಯ ಕಳ್ಳಸಾಗಾಣಿಕೆ-ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ತೊಂಬತ್ತರ ದಶಕದಲ್ಲಿ ಸೋವಿಯತ್ ರಷ್ಯಾ ಒಕ್ಕೂಟ ಪತನನೊಂಡ ಬಳಿಕ ಅವರು ಭದ್ರತಾ ಸಂಸ್ಥೆಯಲ್ಲಿ ಕೆಲಸ ಮುಂದುವರಿಸಿದ್ದರು. 1992 ರಿಂದ 1994ರವರೆಗೂ ಕರೇಲಿಯಾ ಪ್ರಾಂತ್ಯಕ್ಕೆ ಭದ್ರತಾ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವವೂ ಇದೆ. ಇದಾದ ಬಳಿಕ ಮಾಸ್ಕೋದಲ್ಲಿ ಎಫ್‌ಎಸ್‌ಕೆ ಎನ್ನುವ ಗುಪ್ತಚರ ಸಂಸ್ಥೆಯ ಆಂತರಿಕ ಭದ್ರತಾ ನಿರ್ದೇಶನಾಲಯದ ಮುಖ್ಯಸ್ಥರಾಗಿ ನಿಕೋಲಾಯ್ ನೇಮಕವಾಗಿದ್ದಾರೆ. ಮಿಲಿಟರಿ ವ್ಯವಹಾರಗಳು, ಯುದ್ಧ ತಂತ್ರಗಾರಿಕೆಗಳ ವಿಚಾರದಲ್ಲಿ ಪ್ರಧಾನಿಗಳು ಪಳಗಿದವರಲ್ಲ. ಆದ್ದರಿಂದ ನಿಕೋಲಾಯ್ ಪಟ್ರುಶೆವ್ ಹೆಗಲಿಗೆ ರಷ್ಯಾದ ಆಡಳಿತ ಜವಾಬ್ದಾರಿ ವಹಿಸೋ ಸಾಧ್ಯತೆ ದಟ್ಟವಾಗಿದೆ.
ಅಧಿಕಾರ ಇವರಿಬ್ಬರಲ್ಲಿ ಯಾರದ್ದೇ ಕೈನಲ್ಲಿರಲಿ, ಯುದ್ಧದ ವಾತಾವರಣ ಬದಲಾಗೋ ಸಾಧ್ಯತೆ ಇಲ್ಲ. ಯಾಕಂದ್ರೆ ಪುಟಿನ್ ಹಾಗೂ ಪಟ್ರುಶೆವ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮುಖ ಬದಲಾದರೂ, ಆಡಳಿತದ ನಿರೀಕ್ಷೆ ಮಾತ್ರ ಒಂದೇ ರೀತಿ. ಇದರರ್ಥ ಇವರಿಬ್ಬರಿಗೂ ಯುದ್ಧವೇ ನೀತಿ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post