ಕೊಲಂಬೊ: ಇದು ಹಸಿದ ಹೊಟ್ಟೆಗಳ ಒಡಲಾಳದ ಕಿಚ್ಚು.. ಪ್ರಭುತ್ವದ ವಿರುದ್ಧ ಪ್ರಜೆಗಳು ತಿರುಗುಬಿದ್ರೆ ಏನಾಗುತ್ತೆ ಅನ್ನೋದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್. ಆಗ ರಾವಣನ ಕಾಲದ ಲಂಕಾ ದಹನ ನಾವು ಕಂಡಿಲ್ಲ. ಈಗ ನಮ್ಮ ಕಣ್ಮುಂದೆಯೇ ಶ್ರೀಲಂಕಾ ಧಗಧಗ ಹೊತ್ತಿ ಉರಿಯುತ್ತಿದೆ. ಇದು ಕೇವಲ ಕಿಚ್ಚಲ್ಲ. ಬಡವರ ಸಿಟ್ಟಿನ ಜ್ವಾಲಾಗ್ನಿ.
ಹೌದು, ಆರ್ಥಿಕ ದಿವಾಳಿತನ, ಆಡಳಿತ ಸರ್ಕಾರಗಳ ಹೊಣೆಗೇಡಿತನ, ಕುಟುಂಬ ರಾಜಕಾರಣ, ಕಂಡು ಕೇಳರಿಯದಂತಹ ಬೆಲೆ ಏರಿಕೆ, ಅಗತ್ಯವಸ್ತುಗಳಿಗೆ ಹಾಹಾಕಾರ, ಪೆಟ್ರೋಲ್, ಡೀಸೆಲ್ ಇಲ್ಲದೆ ನಿಂತಲ್ಲೇ ನಿಂತ ವಾಹನಗಳು. ಇದರೊಂದಿಗೆ ಲಂಕಾ ಜನರ ಜೀವನ ದರ್ಬಾದ್ ಆಗೋಗಿದೆ. ಜ್ವಾಲಾಗ್ನಿ ರೂಪದಲ್ಲಿ ಬಡವರ ಕೋಪ ಸ್ಫೋಟಿಸಿದೆ.
ಪ್ರಧಾನಿ ರಾಜೀನಾಮೆ, ಸರ್ಕಾರ ಪತನ, ಹಿಂಸಾಚಾರ!
ರಾಜಪಕ್ಸ ಬೆಂಬಲಿಗರು, ವಿರೋಧಿಗಳ ಮಾರಾಮಾರಿ!
ಆಡಳಿತ ಪಕ್ಷದ 12ಕ್ಕೂ ಹೆಚ್ಚು ನಾಯಕರ ಮನೆಗೆ ಬೆಂಕಿ
ತೀವ್ರ ಆರ್ಥಿಕ ದಿವಾಳಿತನದ ಹಿನ್ನೆಲೆ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ ಬೆನ್ನಲ್ಲೇ ಲಂಕಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪ್ರಧಾನಿ ಬೆಂಬಲಿಗರು ಹಾಗೂ ಸರ್ಕಾರದ ವಿರೋಧಿ ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಇದ್ರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು, ನಿರ್ಗಮಿತ ಪ್ರಧಾನಿ ರಾಜಪಕ್ಸ ಅವರ ಅಧಿಕೃತ ನಿವಾಸಕ್ಕೇ ಬೆಂಕಿ ಹಚ್ಚಿದ್ದಾರೆ. ಅಲ್ದೆ, ಆಡಳಿತ ಪಕ್ಷದ ಸಂಸದರು, ಸಚಿವರು ಹಾಗೂ ಹಲವಾರು ನಾಯಕರ ಮನೆಗಳೂ ಭಸ್ಮವಾಗಿವೆ. ಸುಮಾರು 12ಕ್ಕೂ ಹೆಚ್ಚು ನಾಯಕರ ಮನೆಗಳು ಸುಟ್ಟು ಕರಕಲಾಗಿವೆ.
ರಾಜಪಕ್ಸ ನಿವಾಸದಲ್ಲಿ ಗಾಳಿಯಲ್ಲಿ ಗುಂಡು
ಸಾವಿರಾರು ಉದ್ರಿಕ್ತರು, ಕುರುನೇಗಾಲ ನಗರದಲ್ಲಿರೋ ರಾಜಪಕ್ಸ ನಿವಾಸದ ಗೇಟ್ ಮುರಿದು ಒಳ ನುಗ್ಗಿ, ಗೇಟ್ ಬಳಿ ಇದ್ದ ಟ್ರಕ್‌ಗೆ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರ ಗುಂಪು ಚದುರಿಸಲು ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅಶ್ರುವಾಯು ಕೂಡ ಪ್ರಯೋಗಿಸಿದ್ದಾರೆ. ಇದ್ರಿಂದ ರಾಜಪಕ್ಸ ನಿವಾಸದ ಕಾರಿಡಾರ್ ರಣರಂಗವಾಗಿ ಮಾರ್ಪಟ್ಟಿತ್ತು.
ಆಡಳಿತ ಪಕ್ಷದ ಸಂಸದ ಬಲಿ, ಹಲವರಿಗೆ ಗಾಯ
ಆರ್ಥಿಕ ದಿವಾಳಿತನ ವಿರೋಧಿಸಿ ಕಳೆದ ಏಪ್ರಿಲ್ 9ರಿಂದ ಕೊಲಂಬೋದ ರಾಜಪಕ್ಸ ನಿವಾಸದ ಎದುರು ಜನ್ರು ಪ್ರತಿಭಟನೆ ನಡೆಸ್ತಿದ್ರು. ಆದ್ರೆ, ನಿನ್ನ ಬೆಳಗ್ಗೆ ಪ್ರಧಾನಿ ಬೆಂಬಲಿಗರು ಪ್ರತಿಭಟನಾಕಾರರ ಮೇಲೆ ಅಟ್ಯಾಕ್ ಮಾಡಿದ್ದಾರೆ. ಇದ್ರಿಂದ ಪ್ರತಿಭಟನಾಕಾರರು ರೊಚ್ಚುಗೆದ್ದು, ಬೆಂಕಿ ಹಚ್ಚಿದ್ದಾರೆ. ಈ ಪ್ರಕ್ಷುಬ್ಧ ಸನ್ನಿವೇಶದಲ್ಲಿ ಆಡಳಿತ ಪಕ್ಷದ ಸಂಸದನೊಬ್ಬ ಬಲಿ ಆಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಪ್ರತಿಭಟನಾಕಾರರ ಕಿಚ್ಚು
ಪ್ರತಿಭಟನಾಕಾರರ ಮೇಲೆ ಹಲ್ಲೆ ವಿರೋಧಿಸಿ ಹಿಂಸಾಚಾರ ಭುಗಿಲೆದ್ದಿದ್ದು, ರಾಜಪಕ್ಸ ಅವರ ತಂದೆ ಹಾಗೂ ತಾಯಿ ಸ್ಮಾರಕಗಳನ್ನ ಧ್ವಂಸಗೊಳಿಸಲಾಗಿದೆ. ಹಂಬಂಟೋಟದಲ್ಲಿರೋ ರಾಜಪಕ್ಸ ನಿವಾಸಕ್ಕೂ ಬೆಂಕಿ ಹಚ್ಚಲಾಗಿದೆ. 3 ಮಾಜಿ ಸಚಿವರು, ಇಬ್ಬರು ಸಂಸದರ ಮನೆಗಳೂ ಭಸ್ಮವಾಗಿವೆ. ಕಾರು ತಡೆದ ಪ್ರತಿಭಟನಾಕಾರರ ಮೇಲೆ ಸಂಸದ ಫೈರಿಂಗ್ ಮಾಡಿದ್ದು, ಪ್ರಾಣ ರಕ್ಷಣೆಗಾಗಿ ಸಮೀಪದ ಕಟ್ಟಡದಲ್ಲಿ ಆಶ್ರಯ ಪಡೆದಿದ್ರು. ನಂತ್ರ ಶವವಾಗಿ ಅಮರಕೀರ್ತಿ ಆತುಕೋರಲ ಪತ್ತೆ ಆಗಿದ್ದಾರೆ. ಉದ್ರಿಕ್ತರನ್ನ ಚದುರಿಸಲು ಪೊಲೀಸ್ರು ಅಶ್ರುವಾಯು, ಜಲಫಿರಂಗಿ ಬಳಕೆ ಮಾಡಿದ್ದು, ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸೇನೆಯನ್ನ ಬಳಸಿಕೊಂಡು ಪೆಟ್ರೋಲ್, ಡೀಸೆಲ್, ಅಗತ್ಯವಸ್ತುಗಳ ವಿತರಣೆ ಮಾಡ್ತಿದ್ರೂ, ಹಿಂಸಾಚಾರ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ ಆಗಿದೆ.
ಇಂಟರ್- ಯೂನಿವರ್ಸಿಟಿ ಸ್ಟೂಡೆಂಟ್ಸ್ ಫೆಡರೇಶನ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಬೀದಿಗಿಳಿದು ಹೋರಾಟ ಮಾಡ್ತಿದ್ದಾರೆ. ಆಡಳಿತ ಪಕ್ಷದ ಕೆಲ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ. ವೀರಕೇಟಿಯ ಪ್ರಾಂತೀಯ ಸಭೆಯ ಅಧ್ಯಕ್ಷರ ನಿವಾಸದಲ್ಲಿ ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಆರ್ಥಿಕ ಬಿಕ್ಕಟ್ಟು ನಿಭಾಯಿಸಲು ಸರ್ವಪಕ್ಷಗಳ ಮಧ್ಯಂತರ ಸರ್ಕಾರ ರಚಿಸಲು ಪ್ರಧಾನಿ ರಾಜಪಕ್ಷೆ ರಾಜೀನಾಮೆ ಸಲ್ಲಿಸಿದ ಬಳಿಕವೂ ಹಿಂಸಾಚಾರ ಭುಗಿಲೆದ್ದಿದೆ.
ಶ್ರೀಲಂಕಾದಾದ್ಯಂತ ಕರ್ಫ್ಯೂ ಇದ್ದು, ಶಾಂತಿ ಕಾಪಾಡಲು ಸೇನೆಯನ್ನು ರಸ್ತೆಗಳಲ್ಲಿ ನಿಯೋಜಿಸಲಾಗಿದೆ. ಗಾಲೆ ಫೋರ್ಸ್ ಪ್ರತಿಭಟನಾ ಸ್ಥಳದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆ ವೇಳೆ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಲಂಕಾ ಹೊತ್ತಿ ಉರಿದಿದೆ. ಒಟ್ಟಿನಲ್ಲಿ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಲಂಕಾ ದಹನ ಆಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post