ಬೆಂಗಳೂರು: 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಬಂಧನ ಮಾಡಿಲ್ಲ ಎಂದು ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಶಾಂತಕುಮಾರ್ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದ್ದವು, ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು ಅವರನ್ನು ಬಂಧನ ಮಾಡಿದ್ದಾರೆ ಎನ್ನಲಾಗಿತ್ತು. ಈ ಕುರಿತಂತೆ ಇಂದು ಬೆಳಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಡಿವೈಎಸ್ಪಿ ಶಾಂತಕುಮಾರ್ ಬಂಧನವಾಗಿಲ್ಲ. ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸೂಕ್ತ ಸಾಕ್ಷ್ಯ ಗಳು ಸಿಕ್ಕಿದ್ರೆ ಸಿಐಡಿ ಅಧಿಕಾರಿಗಳು ಅರೆಸ್ಟ್ ಮಾಡ್ತಾರೆ.
ಪ್ರಕರಣದಲ್ಲಿ ಹಿಂದೆ ಅರೆಸ್ಟ್ ಆಗಿದ್ದ ಸಿಬ್ಬಂದಿಗಳ ವಿಚಾರಣೆಯಲ್ಲಿ ಕೆಲವೊಂದು ಮಾಹಿತಿಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ಶಾಂತಕುಮಾರ್ ರನ್ನು ವಿಚಾರಣೆ ನಡೆಸಲಾಗುತ್ತಿದೆ. ಪರೀಕ್ಷೆಯ ಪ್ರತಿಯೊಂದು ಸೆಂಟರ್ ನಲ್ಲೂ ಪೊಲೀಸರು ಕೆಲಸ ಮಾಡಿದ್ರು. ಹಾಗಾಗಿ ಅಲ್ಲಿ ಯಾರೆಲ್ಲಾ ಕೆಲಸ ಮಾಡಿದ್ರು, ಅವರನ್ನೆಲ್ಲಾ ಕರೆದು ವಿಚಾರಣೆ ಮಾಡಲಾಗುತ್ತಿದೆ. ಸಿಐಡಿ ತುಂಬಾ ಒಳ್ಳೆ ಕೆಲಸ ಮಾಡಿದ್ದಾರೆ. ತಪ್ಪಿತಸ್ಥರು ಯಾರೆ ಇದ್ರೂ ಬಿಡಲ್ಲ ಎಂದು ಹೇಳಿದ್ದಾರೆ.
ಯಾರು ಈ ಶಾಂತಕುಮಾರ?
1996ನೇ ಬ್ಯಾಚ್‌ನ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್ ಆಗಿ ಪೊಲೀಸ್ ಸೇವೆ ಪಾದಾರ್ಪಣೆ ಮಾಡಿದ್ದಾರೆ. ನಂತರ 2006ರಲ್ಲಿ ಆರ್‌ಎಸ್ಐ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ರು. ಒಂದು ವರ್ಷ ಕಲಬುರಗಿಯಲ್ಲಿ ಕಾರ್ಯನಿರ್ವಹಿಸಿದ್ದರು. ಎರಡು ವರ್ಷಗಳ ಹಿಂದೆ ಡಿವೈಎಸ್ಪಿ ಆಗಿ ಬಡ್ತಿ ಪಡೆದಿದ್ದ ಶಾಂತಕುಮಾರ್ ಹಲವು ವರ್ಷಗಳ ಕಾಲ ನೇಮಕಾತಿ ವಿಭಾಗದಲ್ಲಿ ಠಿಕಾಣಿ ಹೂಡಿದ್ದರು.
ಶಾಂತಕುಮಾರ ಈ ಹಿಂದೆ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಡಿವೈಎಸ್ಪಿ ಆಗಿ ಇತ್ತೀಚೆಗೆ ವರ್ಗಾವಣೆ ಆಗಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ನೀಡಿತ್ತು. ಅದರಂತೆ ವಿಚಾರಣೆಗೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬರೋಬ್ಬರಿ 50 ಲಕ್ಷಕ್ಕೆ ಪಿಎಸ್‌ಐ ಪೋಸ್ಟ್ ಡೀಲ್..!
ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ 2017ರ ಬ್ಯಾಚ್ ಲೋಕೇಶಪ್ಪ ಹಾಗೂ ಶ್ರೀನಿವಾಸ್ ಬಂಧನ ಆಗಿತ್ತು. ಶಾಂತಕುಮಾರ್, ಶ್ರೀನಿವಾಸ್ ಹಾಗೂ ಲೋಕೇಶಪ್ಪನನ್ನ ಪಿಎಸ್‌ಐ ಹುದ್ದೆ ಪಡೆಯಲು ಹಪಹಪಿಸುತ್ತಿದ್ದ ಕ್ಯಾಂಡಿಡೇಟ್‌ಗಳನ್ನ ಹುಡುಕಲು ಬಿಡ್ತಿದ್ನಂತೆ. ಅದರಂತೆ ಇವರಿಬ್ಬರು ಲಕ್ಷ ಲಕ್ಷ ಹಣ ನೀಡೋ ಕ್ಯಾಂಡಿಡೇಟ್ ಗಳನ್ನ ಛೂಸ್ ಮಾಡ್ತಿದ್ರಂತೆ. ಪ್ರತಿ ಪಿಎಸ್‌ಐ ಹುದ್ದೆಗೆ 50 ಲಕ್ಷ ರೂಪಾಯಿಯನ್ನ ಇದೇ ಶಾಂತಕುಮಾರ ಪಡೀತಿದ್ನಂತೆ. ಅದರಲ್ಲಿ 10 ಲಕ್ಷವನ್ನ ಇಬ್ಬರು ಪಿಎಸ್‌ಐಗಳು ಹಂಚಿಕೊಂಡು ಉಳಿದ 40 ಲಕ್ಷ ಹಣವನ್ನ ಶಾಂತಕುಮಾರನಿಗೆ ನೀಡುವಂತಹ ಒಡಂಬಡಿಕೆ ಕೂಡ ಇತ್ತಂತೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post