ನವದೆಹಲಿ: ಮಾಜಿ ಸಂಸದೆ ರಮ್ಯಾ ಅವರ ಟ್ವೀಟ್ ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ತೆರೆದಿಟ್ಟಿದೆ. ಕೆಲ ಕಾಂಗ್ರೆಸ್ ನಾಯಕರು ರಮ್ಯಾ ಪರ ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬೆಂಬಲಿಗರು ರಮ್ಯಾ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ. ಈ ನಡುವೆ ರಮ್ಯಾ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಿರಾಕರಿಸಿದ್ದಾರೆ.
ಇಂದಿನಿಂದ ರಾಜಸ್ಥಾನದ ಉದಯಪುರದಲ್ಲಿ ಮೂರು ದಿನಗಳ ಕಾಲ ಕಾಂಗ್ರೆಸ್ ಪಕ್ಷದ ಚಿಂತನಾ ಶಿಬಿರ ಆಯೋಜಿಸಲಾಗಿದ್ದು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಕರ್ನಾಟಕ ಕಾಂಗ್ರೆಸ್ ನಾಯಕರು ಕೂಡ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ ಕರ್ನಾಟಕ ಕಾಂಗ್ರೆಸ್ನಲ್ಲಿ ಆಗಿರುವ ರಮ್ಯಾ ಅವರ ಟ್ವೀಟ್ ವಿವಾದದ ಕುರಿತಂತೆ ನ್ಯೂಸ್ಫಸ್ಟ್ ಪ್ರತಿನಿಧಿ, ರಾಜ್ಯ ಉಸ್ತುವಾರಿ ಸುರ್ಜೆವಾಲಾ ಅವರನ್ನು ಪ್ರಶ್ನಿಸಿ ಪ್ರತಿಕ್ರಿಯೆ ಕೇಳಿದ್ದರು. ಆದರೆ ಇದಕ್ಕೆ ಉತ್ತರಿಸಲು ನಿರಾಕರಿಸಿದ ಅವರು, ನಾನು ನಿಮಗೆ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.. ಇದನ್ನು ಬಿಟ್ಟು ಬಿಡಿ ಎಂದು ಪ್ರತಿನಿಧಿಯ ಕಾಲಿಗೆ ಬೀಳಲು ಮುಂದಾಗಿ ತಮ್ಮ ಅಸಹಾಯಕತೆಯನ್ನು ತೋರಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post