ಇಂಜುರಿಗೆ ತುತ್ತಾಗಿರೋ ಸಿಎಸ್ಕೆ ಮಾಜಿ ನಾಯಕ ರವೀಂದ್ರ ಜಡೇಜಾ, ಹೊರ ಬಿದ್ದಿದ್ದಾರೆ. ಈ ಸುದ್ದಿ ಜಡೇಜಾ ಅಲಭ್ಯತೆ ತಂಡವನ್ನ ಎಷ್ಟು ಕಾಡಲಿದೆ ಅನ್ನೋದಕ್ಕಿಂತ, ವಿವಾದದ ರೂಪ ಪಡೆದುಕೊಂಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ -15ರಲ್ಲಿ ಇಂಜುರಿ ಬಿಟ್ಟು ಬಿಡದೇ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಕಾಡ್ತಿದೆ. ಮೊದಲಿಗೆ ದೀಪಕ್ ಚಹರ್, ಆ ಬಳಿಕ ಕ್ರಿಸ್ ಜೋರ್ಡನ್, ಇದೀಗ ಮಾಜಿ ಕ್ಯಾಪ್ಟನ್ ರವೀಂದ್ರ ಜಡೇಜಾ ಇಂಜುರಿಗೆ ತುತ್ತಾಗಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಈ ಸುದ್ದಿ ಜಡೇಜಾ ಅಲಭ್ಯತೆ ತಂಡವನ್ನ ಎಷ್ಟು ಕಾಡಲಿದೆ ಅನ್ನೋದಕ್ಕಿಂತ, ವಿವಾದದ ರೂಪದಲ್ಲಿ ಈ ಸುದ್ದಿ ಸೌಂಡ್ ಮಾಡ್ತಿದೆ.
ಸೂಪರ್ ಕಿಂಗ್ಸ್ ಫ್ರಾಂಚೈಸಿಯಲ್ಲಿ ಎಲ್ಲಾನೂ ಸರಿ ಇಲ್ವಾ.?
ಯೆಸ್..! ಜಡೇಜಾ ಹೊರ ಬಿದ್ದ ಬೆನ್ನಲ್ಲೇ ಚೆನ್ನೈ ತಂಡದಲ್ಲಿ ಎಲ್ಲಾನೂ ಸರಿ ಇಲ್ವಾ ಅನ್ನೋದೆ ಹಾಟ್ ಟಾಪಿಕ್ ಆಗಿ ಚರ್ಚೆಯಾಗ್ತಿದೆ. ಇಂಜುರಿಯಿಂದ ಚೇತರಿಸಿಕೊಳ್ಳಲು ಜಡ್ಡುಗೆ ಟೈಮ್ ಬೇಕು. ಹಾಗಾಗಿ ಬಬಲ್ ತೊರೆಯಲಿದ್ದಾರೆ ಅನ್ನೋದು ಚೆನ್ನೈ ಫ್ರಾಂಚೈಸಿ ನೀಡಿರೋ ಅಧಿಕೃತ ಹೇಳಿಕೆಯಾಗಿದೆ. ಆದ್ರೆ, ಆರ್ಸಿಬಿ VS ಸಿಎಸ್ಕೆ ನಡುವಿನ ಹಣಾಹಣಿ ನೋಡಿದವರಿಗೆ ಅದೇನು ಅಷ್ಟು ಗಂಭೀರವಾದ ಇಂಜುರಿಯಲ್ಲ ಅನ್ನೋದು ಗೊತ್ತೆ ಇರುತ್ತೆ. ಅಂದು ಮಹಿಪಾಲ್ ಲೊಮ್ರರ್ ಕ್ಯಾಚ್ ಹಿಡಿಯಲು ಹೋಗಿ ಜಡೇಜಾ, ಇಂಜುರಿಗೆ ತುತ್ತಾಗಿದ್ದು ನಿಜ. ಆದ್ರೆ, ಆ ಬಳಿಕ ಜಡೇಜಾ ಆ್ಯಕ್ಟಿವ್ ಆಗೇ ಫೀಲ್ಡ್ ಮಾಡಿದ್ರು. ಹೀಗಿರೋವಾಗ ಅದು ಐಪಿಎಲ್ನಿಂದಲೇ ಹೊರ ಬೀಳುವಷ್ಟು ಗಂಭೀರ ಗಾಯ ಆಗಿದ್ಯಾವಾಗ ಅನ್ನೋದೆ ಈಗ ಹುಟ್ಟಿರೋ ಪ್ರಶ್ನೆಯಾಗಿದೆ.
ನಾಯಕತ್ವದಿಂದ ಕೆಳಗಿಳಿಸಿದ್ದಕ್ಕೆ ಫ್ರಾಂಚೈಸಿ ಮೇಲೆ ಜಡ್ಡುಗೆ ಮುನಿಸು.?
ಈ ಸೀಸನ್ ಆರಂಭಕ್ಕೂ ಮುನ್ನ ಚೆನ್ನೈ ಕ್ಯಾಂಪ್ನಿಂದ 2 ಶಾಕಿಂಗ್ ಹಾಗೂ ಅಚ್ಚರಿಯ ಸುದ್ದಿ ಹೊರ ಬಿದ್ವು. ಒಂದು ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದಾದ್ರೆ, ಅದಕ್ಕಿಂದ ಶಾಕಿಂಗ್ ಅನ್ನಿಸಿದ ಇನ್ನೊಂದು ಸುದ್ದಿ ಅಂದ್ರೆ ಅದು ಜಡೇಜಾಗೆ ನಾಯಕನ ಪಟ್ಟ ಕಟ್ಟಿದ್ದು..!! ದೇಶಿ ಕ್ರಿಕೆಟ್ನಲ್ಲೂ ತಂಡವನ್ನ ಮುನ್ನಡೆಸದ ಜಡೇಜಾ, ಹೈ ಪ್ರೊಫೈಲ್ ಟೀಮ್ ಹೇಗೆ ಲೀಡ್ ಮಾಡ್ತಾರೆ ಅನ್ನೋದು ಅಚ್ಚರಿಗೆ ಕಾರಣವಾಗಿತ್ತು. ಆ ಸಮಯದಲ್ಲಿ ಬಹುತೇಕರು ಪ್ರಿಡಿಕ್ಟ್ ಮಾಡಿದಂತೆ ಜಡ್ಡು, ನಾಯಕನಾಗಿ ವೈಫಲ್ಯ ಕಂಡಿದ್ದು, ಟೂರ್ನಿ ಮಧ್ಯೆ ನಾಯಕನ ಪಟ್ಟದಿಂದ ಕೆಳಗಿಳಿದಿದ್ದು ಈಗ ಇತಿಹಾಸ..! ಆದ್ರೆ, ಇದೇ ಪ್ರಕ್ರಿಯೆ ಜಡೇಜಾ VS ಮ್ಯಾನೇಜ್ಮೆಂಟ್ ವಾರ್ಗೆ ಕಾರಣವಾಗಿರೋದು.
ಧೋನಿ ಹೇಳಿಕೆ ಬಳಿಕವೇ ಶುರುವಾಗಿತ್ತು ಗೊಂದಲ.!
ಹೌದು.! ಜಡೇಜಾ ನಾಯಕತ್ವದಿಂದ ಕೆಳಗಿಳಿದ ಬಳಿಕ, ಮತ್ತೆ ಪಟ್ಟಕ್ಕೇರಿದ ಧೋನಿ, ಸುದೀರ್ಘವಾಗಿ ಕ್ಯಾಪ್ಟೆನ್ಸಿ ಬದಲಾವಣೆ ಬಗ್ಗೆ ಮಾತನಾಡಿದ್ರು. ನಾಯಕತ್ವ ಜಡೇಜಾಗೆ ಹೊರೆಯಾಗ್ತಿದೆ. AS A PLAYER ಪರ್ಫಾಮೆನ್ಸ್ ಕುಂದಿದೆ ಹೀಗಾಗಿ ಈ ಬದಲಾವಣೆ ಅಂತಾ ಮಾಹಿ ಹೇಳಿದ್ರು. ಆದರ ಜೊತೆಗೆ ಕಳೆದ ವರ್ಷವೇ ಜಡ್ಡುಗೆ, ನಾಯಕನಾಗ್ತೀನಿ ಅಂತಾ ತಿಳಿದಿದೆ ಅಂದಿದ್ರು. ಇದೇ ನೋಡಿ ಗೊಂದಲ ಹುಟ್ಟಿಸಿದ್ದು. ನಾಯಕನಾದಾಗ ಸರ್ಪ್ರೈಸ್ ಎಂಬ ರೀತಿಯಲ್ಲಿ ಸ್ವತಃ ಜಡೇಜಾ ಕಾಣಿಸಿಕೊಂಡಿದ್ರು. ಆದ್ರೆ, ಧೋನಿ ವರ್ಷಕ್ಕೂ ಮೊದಲೇ ತಿಳಿದಿತ್ತು ಅಂತಿದ್ದಾರೆ. ಇದು ಹೇಗೆ ಅನ್ನೋದು ಚರ್ಚೆ ಹುಟ್ಟು ಹಾಕಿತ್ತು.
ಫ್ರಾಂಚೈಸಿ ನಡೆಸಿಕೊಂಡ ರೀತಿಗೆ ಬೇಸರಗೊಂಡಿದ್ರಾ ಆಲ್ರೌಂಡರ್.?
ತಂಡ ಸೋಲುಂಡಿದ್ದಕ್ಕೆ ತನ್ನೊಬ್ಬನನ್ನೇ ಗುರಿ ಮಾಡಿದ್ದು, ಜಡೇಜಾ ಬೇಸರ ತರಿಸಿತ್ತಂತೆ. ಇದಲ್ಲದೇ ವೈಫಲ್ಯದ ಬಳಿಕ ತಲೆದಂಡವಾಗಿದ್ದು ಕೂಡ ಆಲ್ರೌಂಡರ್ ಅನ್ನ ಕಾಡಿತ್ತು ಅನ್ನೋದು ಸಿಎಸ್ಕೆ ಮೂಲಗಳೇ ಹೇಳ್ತಿರೋ ಮಾಹಿತಿಯಾಗಿದೆ.
‘ಎಲ್ಲವೂ ಸರಿಯಿಲ್ಲಾ ಅನ್ನೋದು ಸತ್ಯ’
‘ಹೌದು..! ಜಡೇಜಾ ಇಂಜುರಿಗೆ ತುತ್ತಾಗಿದ್ದಾರೆ. ಇದರಲ್ಲಿ ಅನುಮಾನವೇ ಇಲ್ಲ. ಆದ್ರೆ, ಮ್ಯಾನೇಜ್ಮೆಂಟ್ ಮತ್ತು ಜಡೇಜಾ ನಡುವೆ ಎಲ್ಲವೂ ಸರಿಯಲ್ಲಾ ಅನ್ನೋದು ಕೂಡ ಅಷ್ಟೆ ಸತ್ಯ. ನಾಯಕತ್ವದಿಂದ ಕೆಳಗಿಳಿಸಿದ ವಿಚಾರ ಜಡೇಜಾರಲ್ಲಿ ಬೇಸರ ಮೂಡಿಸಿದಂತಿದೆ. ಮೊದಲಿನ ತರ ಅವರು ಇರಲಿಲ್ಲ’
ಸಿಎಸ್ಕೆ ಅಧಿಕಾರಿ
ಒಂದೆಡೆ ಸಿಎಸ್ಕೆ ಮೂಲಗಳು ಎಲ್ಲ ಸರಿಯಿಲ್ಲಾ ಅಂತಿದ್ರೆ, ಇನ್ನೊಂದೆಡೆ ಸಿಇಒ ಕಾಸಿ ವಿಶ್ವನಾಥನ್ ಏನೂ ಸಮಸ್ಯೆನೆ ಇಲ್ಲಾ ಅಂತಿದ್ದಾರೆ. ಇಷ್ಟೇ ಅಲ್ಲ.. ಮ್ಯಾನೇಜ್ಮೆಂಟ್ನ ಯಾರೊಬ್ಬರಿಗೂ ಬೇಸರ ಇಲ್ಲ. ಮುಂದಿವ ಆವೃತ್ತಿಯಲ್ಲೂ ತಂಡದಲ್ಲಿರ್ತಾರೆ ಎಂದು ಹೇಳಿಕೊಂಡಿದ್ದಾರೆ.
ಅಂದು ಸುರೇಶ್ ರೈನಾ, ಇಂದು ರವೀಂದ್ರ ಜಡೇಜಾ.!
ಸಿಎಸ್ಕೆ ಮ್ಯಾನೇಜ್ಮೆಂಟ್ VS ಪ್ಲೇಯರ್., ಅನ್ನೋ ವಿವಾದ ಜಡೇಜಾ ವಿಚಾರದಲ್ಲಿ ಮಾತ್ರವಲ್ಲ. ಈ ಹಿಂದೆ ಚಿನ್ನ ತಲಾ ರೈನಾ ವಿಚಾರದಲ್ಲೂ ಇದೇ ಆಗಿತ್ತು. ಸುರೇಶ್ ರೈನಾ ಕೂಡ ಟೂರ್ನಿಯ ಮಧ್ಯವೇ ತಂಡವನ್ನ ತೊರೆದಿದ್ರು. ಆಗಲೂ ಇದು ಮ್ಯಾನೇಜ್ಮೆಂಟ್ ಜೊತೆಗಿನ ಮುನಿಸು ಎಂಬ ಹಲ್ಚಲ್ ಹಬ್ಬಿತ್ತು. ಆಕ್ಷನ್ನಲ್ಲಿ ಸಿಎಸ್ಕೆ ಕನಿಷ್ಠ ರೈನಾಗೆ ಬಿಡ್ ಮಾಡೋ ಗೋಜಿಗೆ ಕೂಡ ಹೋಗದೇ ಇರೋದು, ಇದಕ್ಕೆ ಪುಷ್ಠಿ ನೀಡಿತ್ತು. ಅಂತಿಮವಾಗಿ ರೈನಾ ಅನ್ಸೋಲ್ಡ್ ಆಗೋದ್ರೊಂದಿಗೆ ವಿವಾದ ಅಂತ್ಯ ಕಂಡಿತ್ತು. ಇದೀಗ ಜಡೇಜಾ VS ಮ್ಯಾನೇಜ್ಮೆಂಟ್ ಸುದ್ದಿ ಸದ್ದು ಮಾಡ್ತಿದೆ. ಇದರ ಅಂತ್ಯ ಹೇಗೆ ಅನ್ನೋದನ್ನ ಕಾದು ನೋಡಬೇಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post