ನಿನ್ನೆ ಸಂಜೆ ದೆಹಲಿಯ ಮುಂಡ್ಕಾದಲ್ಲಿರುವ 4 ಅಂತಸ್ತಿನ ಕಮರ್ಷಿಯಲ್ ಬಿಲ್ಡಿಂಗ್ನಲ್ಲಿ ಬೆಂಕಿ ದುರಂತ ಸಂಭವಿಸಿತ್ತು. ಘೋರ ದುರಂತದಲ್ಲಿ 27 ಜನರು ಸಾವನ್ನಪ್ಪಿ, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದುರ್ಘಟನೆ ಸಂದರ್ಭದಲ್ಲಿ ಕೆಲವರು ಬಿಲ್ಡಿಂಗ್ನ ಗ್ಲಾಸ್ಗಳನ್ನ ಒಡೆದು ಕಟ್ಟಡದಿಂದ ಜಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಫ್ಯಾಕ್ಟರಿಗಳಿಂದ ನಿಯಮ ಉಲ್ಲಂಘನೆ
ಬೆಂಕಿ ಅನಾಹುತ ಸಂಬಂಧ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎರಡು ಫ್ಯಾಕ್ಟರಿಯ ಇಬ್ಬರು ಮಾಲೀಕರನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮೂರನೇ ಮಾಲೀಕ ನಾಪತ್ತೆಯಾಗಿದ್ದಾನೆ. ಇನ್ನು ಈ ಕಟ್ಟಡದಲ್ಲಿ ಫ್ಯಾಕ್ಟರಿಗಳು ಮಾಡಿಕೊಂಡಿರುವ ವ್ಯವಸ್ಥೆಗಳು ನಿಯಮಗಳ ಪ್ರಕಾರ ಇರಲಿಲ್ಲ. ಫೈರ್ ಎನ್ಓಸಿ ಇಲ್ಲದೇ ಫ್ಯಾಕ್ಟರಿ ಕಾರ್ಯನಿರ್ವಹಿಸುತ್ತಿದ್ದವು ಎಂದು ಡೆಲ್ಲಿ ಫೈರ್ ಸರ್ವೀಸ್ ಮುಖ್ಯಸ್ಥ ಆರೋಪಿಸಿದ್ದಾರೆ.
19 ಮಂದಿ ಮಿಸ್ಸಿಂಗ್
ಇನ್ನೂ 19 ಮಂದಿ ನಾಪತ್ತೆ ಆಗಿದ್ದಾರೆ. ಸ್ಥಳದಲ್ಲೇ ಖುದ್ದು ಪರಿಶೀಲನೆ ನಡೆಸಲಾಗುತ್ತಿದೆ. ಕಟ್ಟಡದ ಅವಶೇಷಗಳಡಿಯಲ್ಲಿ ಸುಟ್ಟು ಹೋಗಿರುವ ಅವಶೇಷಗಳನ್ನ ಪರಿಶೀಲನೆ ಮಾಡಲಾಗುತ್ತಿದೆ. ಫಾರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ ತಜ್ಞರು ಆಗಮಿಸಿ ಡಿಎನ್ಎ ಪರೀಕ್ಷೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ನಿನ್ನೆ ಏನೆಲ್ಲಾ ಆಯ್ತು..?
- ಮಧ್ಯಾಹ್ನ 1 ಗಂಟೆ: ಎಂದಿನಂತೆ ಫ್ಯಾಕ್ಟರಿಯಲ್ಲಿ ಕೆಲಸಗಳು ಶುರುವಾಗಿದ್ವು. ಈ ಕಟ್ಟಡದಲ್ಲಿ ಹಲವು ಫ್ಯಾಕ್ಟರಿ ಮತ್ತು ಕಚೇರಿಗಳು ಇದ್ದವು. ಮೊದಲನೇ ಮಹಡಿಯಲ್ಲಿದ್ದ ಒಂದು ಕಂಪನಿ ಸಭೆ ನಡೆಸುತ್ತಿತ್ತು.
- ಸಂಜೆ 4.30: ಕಟ್ಟಡದ ಮೊದಲನೇ ಮಹಡಿಯಿಂದ ಹೊಗೆ ಕಾಣಿಸಲು ಶುರುವಾಗಿದೆ. ನಂತರ ಕಟ್ಟಡದ ಎಲ್ಲಾ ಕಡೆ ದಟ್ಟ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ರಕ್ಷಣೆಗಾಗಿ ಪೊಲೀಸರಿಗೆ ಮತ್ತು ಫೈರ್ ಬ್ರಿಗೆಡ್ಗೆ ಕರೆ ಮಾಡಲಾಗಿತ್ತು. ಜನರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಹರಸಾಹಸಪಟ್ಟರು
- ಸಂಜೆ 4.40 ರಿಂದ 45 ಸುಮಾರಿಗೆ: ಆಗಲೇ ಹಲವು ಮಂದಿ ಬೆಂಕಿಯ ಜ್ವಾಲೆಗೆ ಸಿಲುಕಿಕೊಂಡರು. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಾಚರಣೆ ಶುರುಮಾಡಿತ್ತು.
- ಸಂಜೆ 4.50: ಕೆಲವರು ಬೆಂಕಿಯ ಜ್ವಾಲೆಯಿಂದ ಪಾರಾದರು. ಇನ್ನು ಕೆಲವರು ಕಟ್ಟಡದ ಗ್ಲಾಸ್ ಒಡೆದು ಬಿಲ್ಡಿಂಗ್ನಿಂದ ಜಿಗಿಯಲು ಆರಂಭಿಸಿದರು. ಮೊದಲನೇ ಮತ್ತು ಎರಡನೇ ಫ್ಲೋರ್ನಲ್ಲಿರುವ ಜನರು ಸಹಾಯಕ್ಕಾಗಿ ರೂಪ್ ಮೇಲೆ ಓಡಿ ಬಂದು ಕೂಗುತ್ತಿದ್ದರು. ಇವರನ್ನ ಅಲ್ಲಿದ್ದ ಸ್ಥಳೀಯರು ಹಾಗೂ ಪೊಲೀಸರು ರಕ್ಷಣೆ ಮಾಡಿದರು.
- ಸಂಜೆ 5 ಗಂಟೆ: ಮತ್ತಷ್ಟು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಬಂದರು. ಜೊತೆಗೆ ಸಂಕಷ್ಟಕ್ಕೆ ಸಿಲುಕಿದ್ದವ ಸಂಬಂಧಿಕರು, ಸ್ನೇಹಿತರು ಘಟನಾ ಸ್ಥಳಕ್ಕೆ ಬಂದರು
- ಸಂಜೆ 6.20: 45 ವರ್ಷದ ಮಹಿಳೆಯ ಮೃತದೇಹಲ ಮೊದಲ ಬಾರಿಗೆ ಪತ್ತೆಯಾಗುತ್ತದೆ. ಅದಾದ ನಂತರ ಒಂದೊಂದೇ ಮೃತದೇಹಗಳು ಕಾಣುತ್ತವೆ. ಬಳಿಕ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ಕೆಲಸ ಕೂಡ ಜೋರಾಗಿ ನಡೆಯುತ್ತದೆ
- ರಾತ್ರಿ 10.50: ಬಿಲ್ಡಿಂಗ್ನಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ. ಈ ವೇಳೆಗೆ 16 ಮೃತದೇಹಗಳು ಪತ್ತೆಯಾಗುತ್ತವೆ. ಆದಾದ ನಂತರ ಒಟ್ಟು ಮೃತರ ಸಂಖ್ಯೆ 27ಕ್ಕೆ ಏರಿಕೆ ಆಗುತ್ತದೆ.
- ರಾತ್ರಿ 11.40: ಮೊದಲನೇ ಮಹಡಿಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಅದನ್ನ ನಂದಿಸಲಾಯಿತು
- ಮಧ್ಯರಾತ್ರಿ: ಮಧ್ಯರಾತ್ರಿಯವರೆಗೂ ರಕ್ಷಣಾಕಾರ್ಯ ನಡೆಯಿತು
- ರಾತ್ರಿ 2 ಗಂಟೆ: ರಕ್ಷಣಾ ಕಾರ್ಯ ಸ್ಥಗಿತ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post