ವೀರು ಮತ್ತು ಸಂಜು. ಈ ಹೆಸರು ಬೆಂಗಳೂರಿನ ಭೂಗತಲೋಕದಲ್ಲಿ ಪುಡಿರೌಡಿಗಳಿಂದ ದೊಡ್ಡ ದೊಡ್ಡ ಪಂಟರ್ಗಳಿಗೂ ಚಿರಪರಿಚಿತ ಹೆಸರುಗಳು. ಸಾಗರ್ ಅಲಿಯಾಸ್ ವೀರು, ಸಂಜಯ್ ಅಲಿಯಾಸ್ ಸಂಜು ಸ್ವಂತ ಅಣ್ಣ-ತಮ್ಮಂದಿರು. ಅಣ್ಣ ವೀರು ಆರ್.ಆರ್.ನಗರ ರೌಡಿಶೀಟರ್ ಆದ್ರೆ ತಮ್ಮ ಸಂಜು ಹನುಮಂತನಗರ ರೌಡಿಶೀಟರ್. ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲದವರಾದ ಈ ಬ್ರದರ್ಸ್, ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಆಟೋ ಓಡಿಸ್ತಿರ್ತಾರೆ. ಅಚಾನಕ್ ಆಗಿ ರೌಡಿಸಂಗೆ ಎಂಟ್ರಿಕೊಟ್ಟು 2016ರಲ್ಲಿ ಅಣ್ಣಾ ವೀರು ರಾಬರಿ ಕೇಸ್ನಲ್ಲಿ ಅಂದರ್ ಆಗಿದ್ರೆ 2017ರಲ್ಲಿ ತಮ್ಮ ಸಂಜು ಹಾಫ್ ಮರ್ಡರ್ ಕೇಸ್ನಲ್ಲಿ ಫಿಟ್ಟಾಗಿ ಸ್ಲೇಟ್ ಹಿಡಿದು ಬಂದಿದ್ದ. 2017 ರಿಂದ ಇದುವರೆಗೂ ಖಾಕಿ ಕೈಗೆ ಸಿಗದೇ ಮೈಸೂರು ರೋಡ್ ಕಿಂಗ್ ಗಳಾಗಿ ಮೆರೆದ ಡಾನ್ ಅಣ್ತಮ್ಮಾಸ್ ಸದ್ಯ ಸಿಸಿಬಿ ಕೈಗೆ ಲಾಕ್ ಆಗಿದ್ದಾರೆ.
ಆಟೋ ಡ್ರೈವಿಂಗ್ನಿಂದ ಗ್ಯಾಂಬ್ಲಿಂಗ್ ಫೈನಾನ್ಸ್
ಮಂಡ್ಯ ಮೂಲದ ಈ ರೌಡಿ ಅಣ್ತಮ್ಮಾಸ್ ಮೊದಲಿಗೆ ಕಾಮಾಕ್ಷಿಪಾಳ್ಯದಲ್ಲಿ ಆಟೋ ಓಡಿಸ್ತಿರೋ ವೇಳೆ ವೀರುಗೆ ರೌಡಿಶೀಟರ್ ಪಾಟಯ್ಯ ಅಲಿಯಾಸ್ ಪಾಟ್ ರಾಜನ ಪರಿಚಯವಾಗುತ್ತದೆ. ಈ ವೇಳೆಗಾಗಲೇ ಬೆಂಗಳೂರು ಅಂಡರ್ ವರ್ಲ್ಡ್ನಲ್ಲಿ ಪಾಟಯ್ಯ ಅಲಿಯಾಸ್ ಪಾಟ್ ರಾಜ ಹಾಗೂ ಅವನ ರೌಡಿ ಸಹೋದರ ಹೆಸರುಗಳಿಗೆ ಬೆಂಗಳೂರು ಅಂಡರ್ ವರ್ಲ್ಡ್ನಲ್ಲಿ ಒಳ್ಳೆ ಹವಾ ಇರುತ್ತೆ. ಗ್ಯಾಂಬ್ಲಿಂಗ್ಲೆ ಫೈನಾನ್ಸ್ ಮಾಡ್ತಿದ್ದ ಪಾಟಯ್ಯನಿಗೆ ಜೊತೆ ವೀರು ಸಂಜು ಸಾಥ್ ಕೊಡ್ತಾರೆ. ಜೂಜಾಟ ಆಡೋ ಜಾಗದಲ್ಲೇ ಗಂಟೆ ಲೆಕ್ಕದಲ್ಲಿ ಪಾಟಯ್ಯ ಫೈನಾನ್ಸ್ ಮಾಡ್ತಿರ್ತಾನೆ. ಪಾಟ್ ರಾಜನಿಗೆ ರೈಟ್ ಲೆಫ್ಟ್ ಆಗಿ ನಿಂತು ವೀರು-ಸಂಜು ಹವಾ ಮೆಂಟೇನ್ ಮಾಡ್ಲಿಕ್ಕೆ ಶುರು ಮಾಡ್ಕೊಳ್ತಾರೆ. ಅಷ್ಟೋತ್ತಿಗೆ ಪಾಟ್ ರಾಜ ಎಲ್ಲಿ ಫೈನಾನ್ಸ್ ಆಫೀಸ್ ತೆಗೆದ್ರು ಪೊಲೀಸರು ರೇಡ್ ಮಾಡ್ಲಿಕ್ಕೆ ಶುರು ಮಾಡಿರ್ತಾರೆ. ಕಾಮಾಕ್ಷಿಪಾಳ್ಯ, ಆರ್.ಆರ್ ನಗರ ಹೊಸಕೆರೆಹಳ್ಳಿ ಎಲ್ಲಾ ಕಡೆಯಲ್ಲೂ ಪಾಟ್ ರಾಜನ ಮೇಲೆ ಪೊಲೀಸರು ರೇಡ್ ಮುಂದಿವರೆಸಿರ್ತಾರೆ.
ಗ್ಯಾಂಬ್ಲಿಂಗ್ ಟು ಮೈಸೂರು ರೋಡ್ ಅಂಡರ್ ವರ್ಲ್ಡ್
ಪೊಲೀಸರು ಒಂದು ಕಡೆ ಪಾಟ್ ರಾಜ ಎಲ್ಲಿ ಫೈನಾನ್ಸ್ ಆಫೀಸ್ ಮಾಡಿದ್ದರೂ ರೇಡ್ ಮಾಡೋ ಕೆಲ್ಸ ಮಾಡ್ತಿರ್ತಾರೆ. ಈ ವೇಳೆ ಪಾಟ್ ರಾಜನ ತಮ್ಮ ಜಗ್ಗಪ್ಪ ಅಲಿಯಾಸ್ ಟಾಮಿ, ದಿಲೀಪ್ ಅನ್ನೋ ರೌಡಿಯನ್ನ 2014 ರಲ್ಲಿ ಆರ್.ಆರ್.ನಗರದಲ್ಲಿ ಬರ್ಬರವಾಗಿ ಹತ್ಯೆ ಮಾಡ್ತಾನೆ. ತಮ್ಮ ಗುರು ಪಾಟ್ ರಾಜನ ತಮ್ಮ ಟಾಮಿ ಹಾಕಿದ್ದ ಸ್ಕೆಚ್ಗೆ ಸಂಜು-ವೀರು ಕೂಡ ಸಾಥ್ ಕೊಟ್ಟಿರ್ತಾರೆ. ದಿಲೀಪನ ಮರ್ಡರ್ ಆದ ಕೆಲವೇ ತಿಂಗಳುಗಳಲ್ಲಿ ಪಾಟ್ ರಾಜ ಕೂಡ ಮರ್ಡರ್ ಆಗ್ತಾನೆ. ಪಾಟ್ ರಾಜ ಹತ್ಯೆ ನಂತರ ಪಾಟ್ ರಾಜನ ತಮ್ಮ ರೌಡಿಶೀಟರ್ ಜಗ್ಗಪ್ಪ ಅಲಿಯಾಸ್ ಟಾಮಿಯಿಂದ ಸಂಜು & ವೀರು ದೂರ ಆಗ್ತಾರೆ. ಹೊಸಕೆರೆಹಳ್ಳಿಯಲ್ಲಿ ತಮ್ಮದೇ ಹೊಸ ಫೈನಾನ್ಸ್ ಆಫೀಸ್ ಓಪನ್ ಮಾಡ್ತಾರೆ. ನನ್ನನ್ನ ಬಿಟ್ಟು ಹೋಗಿ ಹೊಸ ಆಫೀಸ್ ಮಾಡ್ತಾರೆ ಅನ್ನೊ ಕೋಪಕ್ಕೆ ಟಾಮಿ, ವೀರು & ಸಂಜು ಮೇಲೆ ಅಟ್ಯಾಕ್ ಮಾಡಿಸ್ತಾನೆ.

ಈ ವೇಳೆ ಅಟ್ಯಾಕ್ ಮಾಡ್ಲಿಕ್ಕೆ ಬಂದಿದ್ದ ಸುಮಾರು ಎಂಟತ್ತು ರೌಡಿಗಳ ವಿರುದ್ಧ ವೀರು & ಸಂಜು ಇಬ್ಬರೇ ಫೈಟ್ ಮಾಡಿ ಅಟ್ಯಾಕ್ ಮಾಡಲು ಬಂದವರಿಗೆ ಸರಿಯಾಗೇ ಬ್ಯಾಟ್ ಬೀಸಿ ಕಳಿಸಿರ್ತಾರೆ. ಆಮೇಲೆ ವೀರು-ಸಂಜು ಕೂಡ ತಮ್ಮ ಗುರು ಪಾಟ್ ರಾಜನಂತೆ ಗ್ಯಾಂಬ್ಲಿಂಗ್ ನಲ್ಲಿ ಫೈನಾನ್ಸ್ ಮಾಡಿ ಹಣ ಮಾಡೋ ಪ್ಲಾನ್ ಮಾಡ್ತಾರೆ. ಆದ್ರೆ ಪಾಟ್ ರಾಜನಿಗೆ ಆದಂತೆ ವೀರು-ಸಂಜು ಫೈನಾನ್ಸ್ ಆಫೀಸ್ ಮೇಲೂ ಕೂಡ ನಿರಂತರವಾಗಿ ಪೊಲೀಸ್ ರೇಡ್ ಆಗ್ತಿರುತ್ತೆ. ಪೊಲೀಸರ ದಾಳಿಯಿಂದ ತಪ್ಪಿಸಿಕೊಳ್ಳಲಿಕ್ಕೆ ವೀರು & ಸಂಜು ಕನ್ನಡಪರ ಸಂಘಟನೆಯೊಂದರಲ್ಲಿ ಗುರುತಿಸಿಕೊಳ್ತಾರೆ. ಆದರೆ ಗ್ಯಾಂಬ್ಲಿಂಗ್ ಅಡ್ಡೆಗಳ ಮೇಲೆ ಖಾಕಿ ದಾಳಿ ಮಾಡೋದನ್ನ ಮಾತ್ರ ನಿಲ್ಲಿಸಿರಲಿಲ್ಲ. ಅಷ್ಟೋತ್ತಿಗೆ ಅಂಡರ್ ವರ್ಲ್ಡ್ನ ಬಗ್ಗೆ ಕೊಂಚ ತಿಳ್ಕೊಂಡಿದ್ದ ವೀರು ಹುಡ್ಗರನ್ನ ಕಟ್ಟಿಕೊಂಡು ಹವಾ ಮೆಂಟೇನ್ ಮಾಡ್ಲಿಕ್ಕೆ ಮುಂದಾಗಿದ್ದ. 2016ರಲ್ಲಿ ಮೊದಲ ಬಾರಿಗೆ ವೀರು ಫೀಟ್ಟಾಗಿದ್ದು ಪೆಟ್ರೋಲ್ ಬಂಕ್ ರಾಬರಿ ಕೇಸಲ್ಲಿ. ಅಣ್ಣಾ ಫಿಟ್ಟಾಗ್ತಿದ್ದಂತೆ ಸಂಜು ಕೂಡ ಹಾಫ್ ಮರ್ಡರ್ ಕೇಸಲ್ಲಿ ಫಿಟ್ಟಾಗಿ ಅಂದರ್ ಆಗಿದ್ದ.
ಮೈಸೂರು ರೋಡ್ ಕಿಂಗ್ ಪಟ್ಟ
ವೀರು-ಸಂಜು ಅಣ್ಣತಮ್ಮರನ್ನ ಬೆಂಗಳೂರು ಅಂಡರ್ ವರ್ಲ್ಡ್ನಲ್ಲಿ ಮೈಸೂರು ರೋಡ್ ಕಿಂಗ್ ಅಂತೇಳಿ ಹೇಳ್ತಾರೆ ಅನ್ನುವ ಮಾತಿದೆ. 2017ರಲ್ಲಿ ಜೈಲಿನಿಂದ ಹೊರಬಂದವರು ಸುಮಾರು 20ಕ್ಕೂ ಹೆಚ್ಚು ಕೇಸ್ ಮಾಡಿದ್ದರೂ ಖಾಕಿ ಕೈಗೆ ಲಾಕ್ ಆಗಿರಲಿಲ್ಲ. ಮೈಸೂರು ರೋಡ್ ಸ್ಯಾಟ್ಲೈಟ್ನಿಂದ ಹಿಡಿದು ಗುಡ್ಡದಹಳ್ಳಿ ಆರ್.ಆರ್.ನಗರ ಕೆಂಗೇರಿ ಕುಂಬಳಗೋಡು ಬಿಡದಿ ರಾಮನಗರ ಚನ್ನಪಟ್ಟಣ ಮದ್ದೂರು ಮಂಡ್ಯ ಶ್ರೀರಂಗಪಟ್ಟಣ ಮೈಸೂರು ಸೇರಿದಂತೆ ಬೆಂಗಳೂರಿನಿಂದ ಮೈಸೂರಿನವರೆಗೂ ಪ್ರತಿ ಏರಿಯಾದಲ್ಲೂ ತಮ್ಮ ಟೀಂನ್ನ ರೆಡಿ ಮಾಡಿ ಫೀಲ್ಡ್ ಮಾಡ್ಲಿಕ್ಕೆ ಮುಂದಾಗಿದ್ದರು ವೀರು & ಸಂಜು. ಮೈಸೂರು ರೋಡ್ನಲ್ಲಿ ವೀರು ಸಂಜು ಹವಾ ನೋಡಿ ಬೆಂಗಳೂರು ಅಂಡರ್ ವರ್ಲ್ಡ್ ಈ ರೌಡಿಬ್ರದರ್ಸ್ ಅನ್ನ ಮೈಸೂರು ರೋಡ್ ಕಿಂಗ್ ಅಂತೇಳಿ ಹೇಳ್ತಾರೆ.
ಜೈಲಿನಲ್ಲಿ ಅಣ್ತಮ್ಮಗೆ ಸಿಕ್ಕಿತ್ತು ಡಾನ್ಗಳ ಸ್ನೇಹ..!
ವೀರು-ಸಂಜು ಬೇರೆ ಬೇರೆ ಕೇಸ್ಗಳಲ್ಲಿ ಫಿಟ್ಟಾಗಿದ್ದರೂ ಸೇರಿದ್ದು ಮಾತ್ರ ಅದೇ ಪರಪ್ಪನ ಅಗ್ರಹಾರ ಜೈಲಿಗೆ. ಜೈಲಿನಲ್ಲಿ ವೀರು-ಸಂಜುಗೆ ಸುಬ್ರಹ್ಮಣ್ಯಪುರದ ನಟೋರಿಯೆಸ್ ರೌಡಿಶೀಟರ್ ಕುಳ್ಳ ರಿಜ್ವಾನ್ ಪರಿಚಯವಾಗುತ್ತೆ. ಕುಳ್ಳು ಪಕ್ಕಾ ಸ್ಕೆಚ್ ಹಾಕಿ ಮರ್ಡರ್ಗೆ ಮುಹೂರ್ತ ಇಡೋದಕ್ಕೆ ಫುಲ್ ಫೇಮಸ್. ಕುಳ್ಳು ಸ್ಕೆಚ್ ಹಾಕಿದ್ರೆ ಮಿಸ್ ಆಗಿದ್ದೇ ಇಲ್ಲ ಅನ್ನೋ ಮಾತು ಬೆಂಗಳೂರು ಭೂಗತಲೋಕದಲ್ಲಿ ಚಾಲ್ತಿಯಲ್ಲಿದೆ. ವೀರು-ಸಂಜು ಅಂದರ್ ಆದಾಗ ಕುಳ್ಳು ಕೂಡ ಜೈಲಲ್ಲಿ ಮುದ್ದೆಮುರಿತಿದ್ದ. ಈ ವೇಳೆ ಹೊರಗೆ ಕುಳ್ಳು ದುಷ್ಮನ್ ಸೈಕಲ್ ರವಿ ಹಾಗೂ ಅವನ ಶಿಷ್ಯರಾದ ಬೇಕರಿ ರಘು, ಕರಿಯ ರಾಜೇಶ್ ಬಾಂಬೆರವಿ, ಕುಳ್ಳು ಹುಡ್ಗರ ಮೇಲೆ ಬ್ಯಾಟ್ ಬೀಸ್ತಿದ್ರು. ಏನಾದ್ರು ಮಾಡಿ ಸೈಕಲ್ನ ಎತ್ಲೇಬೇಕು ಅಂತ ಕುಳ್ಳು ಜೈಲಲ್ಲಿದ್ಕೊಂಡೇ ಸೈಕಲ್ & ಟೀಂಗೆ ಮುಹೂರ್ತ ಇಟ್ಟಿದ್ದ. ಕುಳ್ಳು ಮಾಡಿದ್ದ ಪ್ಲಾನ್ ಎಕ್ಸಿಕ್ಯೂಟ್ ಮಾಡ್ಲಿಕ್ಕೆ ಹೊರಗೆ ಬಂದು ಬ್ಯಾಟ್ ಹಿಡ್ದಿದು ಹಾವಳಿ ಇಡೋಕೆ ಶುರು ಮಾಡಿದ್ದು ಒನ್ಸ್ ಅಗೇನ್ ಇದೇ ವೀರು-ಸಂಜು ಬ್ರದರ್ಸ್.

ದುಷ್ಮನ್ ಕಾ ದುಷ್ಮನ್
ಸೈಕಲ್ ರವಿ & ಗ್ಯಾಂಗ್ ಕುಳ್ಳು ರಿಜ್ವಾನ್ಗೆ ಪಕ್ಕಾ ದುಷ್ಮನ್ಗಳಾದ್ರೆ ಸೈಕಲ್ ರವಿ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಹೇಮಿ ಮತ್ತು ಕ್ಯಾಟ್ ರಾಜ, ವೀರು ಮತ್ತು ಸಂಜು ಜೊತೆ ಕಿರಿಕ್ ಮಾಡ್ಕೊಂಡಿದ್ರು. ಅಟ್ಯಾಕ್ ಮಾಡಲು ಬಂದಿದ್ದ ಟಾಮಿ ಹುಡ್ಗರಿಗೆ ಬ್ಯಾಟ್ ಬೀಸಿ ಕಳಿಸಿದ್ರು. ಈ ವೇಳೆ ಟಾಮಿ ವೀರು ಸಂಜುಗೆ ಬ್ಯಾಟ್ ಬೀಸಲಿಕ್ಕೆ ಸಾಥ್ ಕೊಡುವಂತೆ ಕ್ಯಾಟ್ ರಾಜನ ಸಹಾಯ ಕೇಳಿದ್ನಂತೆ. ಹೊರಗೆ ಬರ್ತಿದ್ದಂತೆ ಟಚ್ ಮಾಡ್ಬೇಕಾಗುತ್ತೆ ಅಂತ ಟಾಮಿಯ ದೋಸ್ತಿಗಳಾದ ಹೇಮಿ ಮತ್ತು ಕ್ಯಾಟ್ ರಾಜ ತನ್ನ ಹುಡ್ಗರ ಮೂಲಕ ವೀರು ಸಂಜುಗೆ ಮೆಸೇಜ್ ಕೊಟ್ಟಿದ್ನಂತೆ. ಕ್ಯಾಟ್ ರಾಜ ಏನ್ ನಮ್ಮನ್ನ ಮುಟ್ಟೋದು ನಾವೇ ಅವ್ನನ್ನ ಟಚ್ ಮಾಡೋಣ ಅಂತ ಡಿಸೈಡ್ ಮಾಡಿದ್ ಅಣ್ತಮ್ಮಾಸ್ ಕ್ಯಾಟ್ ರಾಜನ ಶಿಷ್ಯ ರವಿ ಎಂಬಾತನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿ ಹಲ್ಲೆ ಮಾಡ್ತಾರೆ. ಇದ್ರಿಂದ ಕುಳ್ಳು ರಿಜ್ವಾನ್ ಹಾಗೂ ವೀರು ಸಂಜು ಇನ್ನಷ್ಟು ಹತ್ತಿರವಾದ್ರೆ. ಸೈಕಲ್ ರವಿ & ಗ್ಯಾಂಗ್ ಗೆ ವೀರು ಸಂಜು ಪಕ್ಕಾ ದುಷ್ಮನ್ಗಳಾಗುತ್ತಾರೆ.

ಅಣ್ತಮ್ಮಾಸ್ ಲಾಕ್ ಆಗಿದ್ದು ಹೇಗೆ..?
ನಟೋರಿಯೆಸ್ ರೌಡಿ ಅರಸಯ್ಯನ ಮರಣದ ನಂತರ ಸುಬ್ರಹ್ಮಣ್ಯಪುರ ರೌಡಿಶೀಟರ್ ಸೈಕಲ್ ರವಿಯನ್ನ ಸದ್ಯ ಬೆಂಗಳೂರು ಸೌತ್ ಡಾನ್ ಅಂತ ಹೇಳಲಾಗುತ್ತೆ. ಕುಳ್ಳು ರಿಜ್ವಾನ್ ಕೆಲ ವರ್ಷಗಳಿಂದ ಸೌತ್ ಡಾನ್ ಪಟ್ಟಕ್ಕಾಗಿ ಕಣ್ಣಿಟ್ಟಿದ್ದು ಕಳೆದ ವರ್ಷ ತನ್ನ ಶಿಷ್ಯಂದಿರಾದ ಸ್ಟಾರ್ ರಾಹುಲ್, ಸ್ಟಾರ್ ನವೀನ್ ಹಾಗೂ ಹರಿ ಆಂಟ್ರೋಗೆ ಸೈಕಲ್ ಹಾಗೂ ಅವನ ರೈಟ್ ಹ್ಯಾಂಡ್ ಬೇಕರಿಯನ್ನ ಎತ್ತಲಿಕ್ಕೆ ಸುಪಾರಿ ಕೊಟ್ಟಿದ್ನಂತೆ. ಆದ್ರೆ ಪ್ಲಾನ್ ಜಸ್ಟ್ ಮಿಸ್ಸಾಗಿತ್ತು. ತದನಂತರ ಅಟೆಂಪ್ಟ್ ಮಿಸ್ಸಾಗಿರೋ ವಿಷ್ಯಗೊತ್ತಾಗ್ತಿದ್ದಂತೆ ಬೇಕರಿ ರಘು ಸೈಕಲ್ ರವಿ ಸರೆಂಡರ್ ಆದ್ರೆ ಕರಿಯಾ ರಾಜೇಶ್ ಬೇರೆ ಕೇಸ್ನಲ್ಲಿ ಅಂದರ್ ಆಗಿದ್ದ. ಇತ್ತ ಸೈಕಲ್ ಬೇಕರಿ ಜೈಲಿಗೆ ಎಂಟ್ರಿ ಆಗ್ತಿದ್ದಂತೆ ಕುಳ್ಳು ಬೇಲ್ ಮೇಲೆ ಹೊರಗೆ ಬಂದು ಬಾಂಬೆಯಲ್ಲಿ ಬೀಡುಬಿಟ್ಟವ್ನೆ.

ಸದ್ಯ ಬಾಂಬೆಯಲ್ಲಿರೋ ಕುಳ್ಳು ಜೈಲಲ್ಲಿ ದೋಸ್ತಿಗಳಾದ ವೀರು-ಸಂಜು ಮೂಲಕ ಸೈಕಲ್ ಎತ್ತಲಿಕ್ಕೆ ಮುಹೂರ್ತ ಇಟ್ಟಿದ್ದನಂತೆ. ಇಷ್ಟರಲ್ಲೇ ಬೇಲ್ ಮೇಲೆ ಸೈಕಲ್ ಹೊರಗೆ ಬರ್ತಾನೆ. ಹೊರಗೆ ಬರ್ತಿದ್ದಂತೆ ಸೈಕಲ್ ಮೇಲೆ ಬ್ಯಾಟ್ ಬೀಸಲಿಕ್ಕೆ ಪ್ಲಾನ್ ಫಿಕ್ಸ್ ಆಗಿತ್ತಂತೆ. ಅಷ್ಟೋತ್ತಿಗೆ ಖಚಿತ ಮಾಹಿತಿ ಖಾಕಿಗೆ ಸಿಕ್ಕಿತ್ತು. ಮೈಸೂರಿನ ಬನ್ನೂರಿನ ಬಳಿ ಮದುವೆ ಕಾರ್ಯಕ್ರಮದಲ್ಲಿ ಸಂಜು ವೀರು ಬರ್ತಾರೆ ಅನ್ನೋ ಮಾಹಿತಿ ಖಾಕಿಗೆ ಸಿಕ್ಕಿತ್ತು. ಅಷ್ಟೋತ್ತಿಗೆ ಅಲ್ಲಿಂದ ಸಂಜು ವೀರು ಟೀಂ ಬೆಂಗಳೂರಿಗೆ ಎಂಟ್ರಿಕೊಟ್ಟಿತ್ತು. ಕಡೆಗೆ ಹನುಮಂತನಗರದ ಪಿ.ಇ.ಎಸ್ ಕಾಲೇಜ್ ಬಳಿ ಟೂಲ್ಸ್ ಟೀಂ ರೆಡಿ ಮಾಡ್ಕೊಳೋ ವೇಳೆ ಸಿಸಿಬಿ ಲಾಕ್ ಮಾಡಿ ಐಪಿಸಿ 399/402/ ಹಾಗೂ ಆರ್ಮ್ಸ್ ಆಕ್ಟ್ ಅಡಿ ಅರೆಸ್ಟ್ ಮಾಡಿದೆ. ಒಟ್ಟಿನಲ್ಲಿ ಆಟೋ ಒಡಿಸ್ಲಿಕ್ಕೆ ಮಂಡ್ಯದಿಂದ ಬೆಂಗಳೂರಿಗೆ ಬಂದ ಅಣ್ತಮ್ಮಂದಿರೂ ಗ್ಯಾಂಬ್ಲರ್ಗಳಾಗಿ ಬೆಂಗಳೂರು ಅಂಡರ್ ವರ್ಲ್ಡ್ಗೆ ಎಂಟ್ರಿಕೊಟ್ಟು ಇದುವರೆಗೂ 20ಕ್ಕೂ ಹೆಚ್ಚು ಕೇಸ್ ಮಾಡಿ ಭೂಗತಲೋಕದಲ್ಲಿ ಮೈಸೂರು ರೋಡ್ ಕಿಂಗ್ಸ್ ಅನ್ನೋ ಕರಾಳ ಅಧ್ಯಾಯ ಶುರು ಮಾಡಿದ್ದಾರೆ.
ವಿಶೇಷ ವರದಿ: ಶಿವಕುಮಾರ್, ಕ್ರೈಂ ಬ್ಯೂರೋ ನ್ಯೂಸ್ ಫಸ್ಟ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post