ವಿಶ್ವದ ಕುಬೇರರು ಬಿಲ್ಗೇಟ್ಸ್ ಹಾಗೂ ಎಲಾನ್ ಮಸ್ಕ್ ಮಧ್ಯೆ ನಡೀತಿರೋ ವೈಯಕ್ತಿಕ ಯುದ್ಧ ಇಂದು ನೆನ್ನೆಯದಲ್ಲ. ಉದ್ಯಮ ಜಗತ್ತಿನಲ್ಲಿ ಮಾತ್ರವಲ್ಲ, ಪರ್ಸನಲ್ ಆಗಿಯೂ ಇಬ್ಬರೂ ಒಂಥರಾ ಹಾವು, ಮುಂಗುಸಿ ಥರಾ ಅಂದ್ರೆ ತಪ್ಪಾಗೋದಿಲ್ಲ. ಇಬ್ಬರ ನಡುವೆ ಅನೇಕ ವರ್ಷಗಳಿಂದಲೂ ಹಗೆತನ ನಡೀತಾನೇ ಬರ್ತಿದೆ. ಅಂದಹಾಗೇ, ಇಬ್ಬರ ನಡುವೆ ದ್ವೇಷ, ಅಸೂಯೆ ಯಾವಾಗಿಂದ ಶುರುವಾಯ್ತು ..
ಎಲಾನ್ ಮಸ್ಕ್ ಹಾಗೂ ಬಿಲ್ ಗೇಟ್ಸ್.. ಒಂದೇ ಫೀಲ್ಡ್ನಲ್ಲಿರೋರು.. ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯನ್ನ ಮಾಡಿದವರು. ಜಗತ್ತಿನಲ್ಲಿ ಇವರಿಬ್ಬರ ಹೆಸರು ಕೇಳಿದ್ರೆ ಸಾಕು, ಆ ಸಿರಿವಂತಿಕೆಯೆ ನಾಚಿ ನೀರಾಗಿ ಕಾಲ್ ಹತ್ರ ಬಿದ್ದಿರುತ್ತೆ. ಅಷ್ಟೇ ಅಲ್ಲ.. ಸೊಸೈಟಿಯಲ್ಲಿ ಇಬ್ಬರಿಗೂ ಒಳ್ಳೆಯ ಇಮೇಜ್ ಇದೆ. ಇಬ್ಬರಲ್ಲೂ ಹಲವು ವಿಚಾರಗಳಲ್ಲಿ ಸಾಮ್ಯತೆ ಇದೆ.
ನೊಂದವರಿಗೆ ನೆರವಾಗೋದು, ಬಡಜನರ ಹಸಿವು ನೀಗಿಸಲು ಚಾರಿಟಿಗಳಂತಹ ಕಾಯಕಗಳಲ್ಲಿ ತೊಡಗುವುದು. ಅಲ್ಲದೇ, ತಂತ್ರಜ್ಞಾನ ಕೈಗುಟಕದ ನಕ್ಷತ್ರವಾಗಿರೋ ದೀನರಿಗೆ ಸಹಾಯ ಮಾಡೋದು. ಈ ರೀತಿಯ ಒಳ್ಳೆ ಮೌಲ್ಯಗಳನ್ನ ಮಸ್ಕ್ ಹಾಗೂ ಗೇಟ್ಸ್ ಇಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಆದ್ರೆ, ಇಬ್ಬರಲ್ಲಿ ಎಷ್ಟೇ ಒಳ್ಳೆಯ ಗುಣಗಳಿದ್ರೂ, ಒಬ್ಬರಿಗೆ ಒಬ್ರನ್ನ ಕಂಡ್ರೆ ಆಗೋದೇ ಇಲ್ಲ.. ಇನ್ನು, ಎಲ್ಲಾದ್ರೂ ಒಂದೇ ವೇದಿಕೆಯಲ್ಲಿ ಕಾಣಸಿಕೊಳ್ಳುವಂತೆ ಆದ್ರೆ ಮಾತ್ರ ಮೈಮೇಲೆ ಹಾವು ಬಿದ್ದವರ ರೀತಿ ಇರ್ತಾರೆ. ಅಷ್ಟೇ, ಅಲ್ಲ.. ಬಿಲ್ ಗೇಟ್ಸ್ ಹಾಗೂ ಎಲಾನ್ ಮಸ್ಕ್ ಇಬ್ಬರೂ ಎದುರು ಬದುರಾದ್ರೆ, ಕಣ್ಣಲ್ಲಿ ಕಣ್ಣಿಟ್ಟು ನೋಡೋಕೂ ಇಷ್ಟಪಡಿದಿರುವಷ್ಟು ದ್ವೇಷ ಇಬ್ಬರ ಮಧ್ಯೆ ಇದೆ.
ಬಿಲ್ ಗೇಟ್ಸ್ & ಮಸ್ಕ್ ನಡುವಿನ ದ್ವೇಷ ಇಂದು ನೆನ್ನೆಯದಲ್ಲ!
ಹಲವು ವರ್ಷಗಳಿಂದ ನಡೀತಾನೆ ಇದೆ ಇಬ್ಬರ ನಡುವೆ ವಾರ್!
ಕಳೆದ ಕೆಲ ವರ್ಷಗಳ ಹಿಂದೆ ಆಗಷ್ಟೇ ಎಲಾನ್ ಮಸ್ಕ್ರ ಟೆಸ್ಲಾ ಸಂಸ್ಥೆಯ ಎಲೆಕ್ಟ್ರಿಕ್ ಕಾರುಗಳು ಅಮೆರಿಕದ ಮಾರುಕಟ್ಟೆಯಲ್ಲಿ ಸಂಚಲನವನ್ನೇ ಸೃಷ್ಟಿಸಲು ರೆಡಿಯಾಗಿತ್ತು. ಆದ್ರೆ, ಅದೇನೋ ಬಿಲ್ ಗೇಟ್ಸ್ವರಿಗೆ ಎಲಾನ್ ಮಸ್ಕ್ರ ಟೆಸ್ಲಾ ಕಾರುಗಳ ಮೇಲೆ ನಂಬಿಕೆ ಇರಲಿಲ್ಲ ಅಂತಾ ಕಾಣುತ್ತೆ. ಇದನ್ನ ನೇರವಾಗಿ ಒಂದು ಸಂದರ್ಶನದಲ್ಲಿ ಬಿಲ್ ಗೇಟ್ಸ್ ಹೇಳಿಯೇ ಬಿಟ್ಟಿದ್ದರು. ಸದಾ, ಪರಿಸರ ಮಾಲಿನ್ಯದ ವಿರುದ್ಧ ಗುಡುಗುವ ಬಿಲ್ ಗೇಟ್ಸ್ ಟೆಸ್ಲಾದ ಪರಿಸರ ಸ್ನೇಹಿ ಕಾರುಗಳಿಗೆ ಸಾಥ್ ನೀಡುವ ನಂಬಿಕೆಯಿತ್ತು. ಆದ್ರೆ, ಬಿಲ್ಗೇಟ್ಸ್ ಸಖತ್ ಹವಾ ಸೃಷ್ಟಿಸಿದ್ದ ಟೆಸ್ಲಾ ಸಂಸ್ಥೆಯ ಕಾರನ್ನ ಖರೀದಸಲಿಲ್ಲ. ಅದರ ಬದಲು ಬೇರೆಯ ಕಾರು ಪರ್ಚೇಸ್ ಮಾಡಿದ್ರು. ಇಬ್ಬರ ನಡುವಿನ ಶೀತಲ ಸಮರ ಶುರುವಾಗಿದ್ದು ಇಲ್ಲಿಂದಲೇ ಅಂತಾ ಹೇಳಲಾಗಿದೆ. ಆದ್ರೆ, ಎಲಾನ್ ಮಸ್ಕ್ ಹಾಗೂ ಬಿಲ್ ಗೇಟ್ಸ್ ನಡುವಿನ ಕಾಳಗ ಜೋರಾಗೋದು 2020ರ ಕೊರೊನಾ ಸಮಯದಲ್ಲಿ.
ಅಲ್ಲಿಂದ ಇಬ್ಬರೂ ಉದ್ಯಮಿಗಳ ನಡುವಿನ ವೈಷಮ್ಯ ಹೆಚ್ಚು
ಯಾವಾಗ ಅಮೆರಿಕಾದಲ್ಲಿ ಕೊರೊನಾ ಹೊಡೆತ ಜೋರಾಯ್ತೋ.. ಆಗ ಲಾಕ್ಡೌನ್ನಂತಹ ಸ್ಟ್ರಿಕ್ಟ್ ನಿರ್ಧಾರವನ್ನ ಅಲ್ಲಿಯ ಸರ್ಕಾರ ಕೈಗೊಳ್ಳುತ್ತೆ. ಆದ್ರೆ, ಸರ್ಕಾರದ ನಿರ್ಧಾರವನ್ನ ಎಲಾನ್ ಮಸ್ಕ್ ಟೀಕಿಸಿರುತ್ತಾರೆ. ಅರ್ಥಾತ್ ಕೊರೊನಾ ವೈರಸ್ನ ಅವರು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡಿರೋದಿಲ್ಲ. ಅಲ್ಲದೇ, ಸರಿಯಾಗಿ ಪರೀಕ್ಷೆಯನ್ನೇ ಮಾಡದಂತಹ ಔಷಧಿಗಳನ್ನು ಕೊರೊನಾ ಟ್ರೀಟ್ಮೆಂಟ್ಗೆ ಪ್ರಮೋಟ್ ಮಾಡ್ತಾರೆ. ಜೊತೆಗೆ ಸರ್ಕಾರ ನೀಡುತ್ತಿದ್ದ ಕೊರೊನಾ ಸಾವಿನ ಅಂಕಿ ಅಂಶದ ಮೇಲೂ ಅನುಮಾನ ವ್ಯಕ್ತಪಡಿಸ್ತಾರೆ. ಇದೆಲ್ಲವನ್ನೂ ಸೂಕ್ಷ್ಮವಾಗಿಯೇ ಗಮನಿಸುತ್ತ ಬಿಲ್ ಗೇಟ್ಸ್ ಸಂದರ್ಶನವೊಂದರಲ್ಲಿ, ಎಲಾನ್ ಮಸ್ಕ್ರನ್ನ ಟೀಕಿಸ್ತಾರೆ. ಮಸ್ಕ್ಗೆ ರಾಕೆಟ್ಸ್ ಹಾಗೂ ಎಲೆಕ್ಟ್ರಿಕ್ ಕಾರುಗಳ ಬಗ್ಗೆಯಷ್ಟೇ ಗೊತ್ತು. ವ್ಯಾಕ್ಸಿನ್ ಬಗ್ಗೆ ಅವರಿಗೆ ಗೊತ್ತಿಲ್ಲ ಅಂತಾ ಗೇಲಿ ಮಾಡ್ತಾರೆ. ಆದ್ರೆ, ಬಿಲ್ಗೇಟ್ಸ್ ಟೀಕೆಗೆ ಉದ್ಯಮಿ ಎಲಾನ್ ಮಸ್ಕ್ ಪ್ರಬಲ ತಿರುಗೇಟನ್ನೇ ನೀಡ್ತಾರೆ. ಅಲ್ಲಿಂದ ಇಬ್ಬರ ನಡುವಿನ ವೈಷಮ್ಯ ಹೆಚ್ಚಾಗುತ್ತೆ.
ಇನ್ನು, 2021ರಲ್ಲೂ ಮಸ್ಕ್ ಹಾಗೂ ಗೇಟ್ಸ್ ನಡುವೆ ದೊಡ್ಡ ಕಲಹವೇ ನಡೆದಿತ್ತು. ಅಲ್ಲದೇ, 2022ರ ಏಪ್ರಿಲ್ನಲ್ಲಿ ಹೋಲ್ ಮಾರ್ಸ್ ಕ್ಯಾಟಲಾಗ್ ಎಂಬ ಬಳಕೆದಾರರೊಬ್ಬರು ಎಲಾನ್ ಮಸ್ಕ್ ಮತ್ತು ಬಿಲ್ ಗೇಟ್ಸ್ ನಿಡುವಿನ ಚಾಟ್‌ನಲ್ಲಿನ ಸಂಭಾಷಣೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ, ಇಬ್ಬರೂ ಬಿಲೆಯನೇರ್ಗಳು ಟೆಸ್ಲಾ ಷೇರಿನ ವಿಚಾರವಾಗಿ ಒಬ್ಬರ ಕಾಲು ಮತ್ತೊಬ್ಬರು ಎಳೆದಿದ್ದರು. ಇದು ನಿಜಾನಾ ಅಂತಾ ತಿಳಿಯಲು, ಹೋಲ್ ಮಾರ್ಸ್ ಕ್ಯಾಟಲಾಗ್ ಎಲಾನ್ ಮಸ್ಕ್ ಅವರಿಗೆ ಟ್ಯಾಗ್ ಮಾಡಿದ್ದರು. ಇದಕ್ಕೆ, ಪ್ರತ್ಯುತ್ತರವಾಗಿ ಹೌದು, ಆದರೆ ನಾನು ಅದನ್ನು NYTಗೆ ಸೋರಿಕೆ ಮಾಡಲಿಲ್ಲ ಅಂತಾ ಮಸ್ಕ್ ಹೇಳಿದ್ದರು.
ಇದಾದ್ಮೇಲೆ ಗೇಟ್ಸ್ ಇನ್ನೂ ಟೆಸ್ಲಾ ವಿರುದ್ಧ ಅರ್ಧ ಬಿಲಿಯನ್ ಡಾಲರ್ನಷ್ಟು ಹಿಂದೆ ಇದ್ದಾರೆ ಅಂತಾ ಅನೇಕ ಮಂದಿಯ ಬಾಯಲ್ಲಿ ಕೇಳಿದೆ ಅಂತಾ ಕಿಚಾಯಿಸಿದ್ದರು. ಇದಾದ ಬಳಿಕ ಸ್ಪೇಸ್‌ಎಕ್ಸ್ ಮುಖ್ಯಸ್ಥ ಟ್ವಿಟರ್‌ನಲ್ಲಿ ಮೀಮ್‌ವೊಂದನ್ನ ಹಂಚಿಕೊಂಡಿದ್ದರು. ಅದು ಬಿಲ್ಗೇಟ್ಸ್ರವರನ್ನೇ ಅಕ್ಷರಶಃ ಟೀಕಿಸುವಂತಿತ್ತು. ಗರ್ಭಿಣಿ ವ್ಯಕ್ತಿಯ ಎಮೋಜಿಯ ಚಿತ್ರ ಹಾಕಿ ಬಿಲ್ಗೇಟ್ಸ್ರನ್ನ ಬಹಿರಂಗವಾಗಿಯೇ ಕಾಲೆಳದಿದ್ದರು. ಇದೆಲ್ಲಾ ಆದ್ಮೇಲೆ ಇಬ್ಬರ ನಡುವಿನ ದ್ವೇಷ ಮತ್ತಷ್ಟು ಅತಿರೇಖದ ಹಂತ ತಲುಪಿತ್ತು.
ಮಸ್ಕ್ ಟ್ವಿಟರ್ ಖರೀದಿ ಮೇಲೆ ಗೇಟ್ಸ್ಗೇಕೆ ಕೆಂಗಣ್ಣು?
ಉದ್ಯಮಿಯ ನಡೆಯನ್ನು ಟೀಕಿಸಿದ್ದ ಬಿಲ್ ಗೇಟ್ಸ್!
ಯಾರೂ ಊಹಿಸಿಯೂ ಇರಲಿಲ್ಲ, ಅಂತಹವೊಂದು ಸಾಹಸಕ್ಕೆ ಎಲಾನ್ ಮಸ್ಕ್ ಕೈ ಹಾಕಿದ್ದಾರೆ. ಯಾಕಂದ್ರೆ, ಟ್ವಿಟರ್ನಂತಹ ದೈತ್ಯ ಸಂಸ್ಥೆಯನ್ನೇ ಖರೀದಿ ಮಾಡೋದು ಅಂದ್ರೆ ಸಾಮಾನ್ಯವಾದ ವಿಷಯವೇ ಅಲ್ಲ ಬಿಡಿ. ಅಂತದ್ರಲ್ಲಿ, ಬರೋಬ್ಬರಿ 3 ಲಕ್ಷ ಕೋಟಿಗೂ ಅಧಿಕ ಹಣ ಕೊಟ್ಟು ಸಂಸ್ಥೆಯನ್ನೇ ತಮ್ಮದಾಗಿಸಿಕೊಳ್ಳಲು ಎಲಾನ್ ಮಸ್ಕ್ ಹೊರಟಿದ್ದಾರೆ. ಅಷ್ಟೇ ಅಲ್ಲದೇ, ತಾವು ಖರೀದಿಸಿದ ಮೇಲೆ ವಾಕ್ಸ್ವಾತಂತ್ರ್ಯ ಸೇರಿದಂತೆ ಹಲವು ವಿಚಾರಗಳ ಮೇಲೆ ಹೆಚ್ಚೆಚ್ಚು ಒತ್ತು ನೀಡಲಿದ್ದು, ಹಲವು ಬದಲಾವಣೆಗಳನ್ನ ಮಾಡ್ತೀವಿ ಎಂದಿದ್ರು. ಎಲಾನ್ ಮಸ್ಕ್ ಹೇಳಿದ್ದು ನೋಡಿದ್ರೆ ಟ್ವಿಟರ್ ನೀತಿಗಳು ಸರಿಯಿಲ್ಲ, ಅದಕ್ಕಾಗಿ ಪಾಠ ಕಲಿಸೋ ಉದ್ದೇಶಕ್ಕೇನೆ ಸಂಸ್ಥೆಯನ್ನೇ ಖರೀದಿಸಿಬಿಟ್ರಾ ಎನ್ನುವ ಅನುಮಾನ ಮೂಡಿತ್ತು. ಬಟ್, ಮಸ್ಕ್ ಟ್ವಿಟರ್ ಖರೀದಿ ಮಾಡೋ ವಿಚಾರ ಅದ್ಯಾಕೋ ಬಿಲ್ಗೇಟ್ಸ್ಗೆ ತೃಪ್ತಿ ತಂದಿರಲಿಲ್ಲ. ಹಾಗಾಗಿ, ಎಲಾನ್ ಮಸ್ಕ್ ಟ್ವಿಟರ್ನ ಈಗಿರೋದಕ್ಕಿಂತ ಇನ್ನೂ ಹೆಚ್ಚು ಹಾಳು ಮಾಡಬಹುದು ಅಂತಾ ಮೈಕ್ರೋಸಾಫ್ಟ್ ಸಂಸ್ಥಾಪಕ ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದರು. ಕೊರೊನಾ ವ್ಯಾಕ್ಸಿನ್ ಜನರನ್ನು ಕೊಲ್ಲುತ್ತೆ ಅಂತಾ ಪ್ರತಿಪಾದಿಸುವ ಜನರಿಂದ ನಾವೇನು ನಿರೀಕ್ಷೆ ಮಾಡಲು ಸಾಧ್ಯ ಎಂಬ ಪ್ರಶ್ನೆ ಮಾಡಿದ್ದರು.
ಬಿಲ್ ಗೇಟ್ಸ್ ಹಾಗೂ ಎಲಾನ್ ಮಸ್ಕ್ ಮಧ್ಯೆ ವರ್ಷಗಳಿಂದ ಕದನ ನಡೀತಾನೆ ಬಂದಿದೆ. ಆದ್ರೆ, ಅದು ಬ್ಯುಸಿನೆಸ್ ವಿಚಾರಕ್ಕೋ, ಅಥವಾ ವೈಯಕ್ತಿಕ ಮತ್ಸರವೋ ಅನ್ನೋದು ಇನ್ನೂ ಕನ್ಫರ್ಮ್ ಇಲ್ಲ. ಬಟ್, ಇದೆಲ್ಲಾ ಆಗ್ತಿದ್ದ ಮಧ್ಯೆಯೇ ಈಗ ಮತ್ತೆ ಬಿಲ್ಗೇಟ್ಸ್ ವಿರುದ್ಧವೇ ಎಲಾನ್ ಮಸ್ಕ್ ವಿರುದ್ಧ ಷಡ್ಯಂತ್ರ ಹೂಡಿದ ಆರೋಪ ಕೇಳಿಬಂದಿರೋದು ಇಬ್ಬರ ನಡುವಿನ ಕಾಳಗಕ್ಕೆ ಹೊಸ ಆಯಾಮವನ್ನೇ ನೀಡಿದೆ. ಎಲಾನ್ ಮಸ್ಕ್ರನ್ನ ಹಣಿಯೋದಕ್ಕೆ ಬಿಲ್ ಗೇಟ್ಸ್ ಕಾಸು ಕೊಟ್ಟು ಸರ್ಕಸ್ ಮಾಡ್ತಿದ್ದಾರೆ ಅಂತಾ ಹೇಳಲಾಗ್ತಿದೆ. ಆದ್ರೆ, ಅದು ಅದೆಷ್ಟು ಸುಳ್ಳೋ, ಅದೆಷ್ಟು ನಿಜವೋ ಗೊತ್ತಿಲ್ಲ. ಈ ಬಗ್ಗೆ ಬಿಲ್ ಗೇಟ್ಸ್ ಕೂಡ ಯಾವುದೇ ರೀತಿಯ ಪ್ರತಿಕ್ರಿಯೆಯನ್ನ ಇನ್ನೂ ನೀಡಿಲ್ಲ. ಕೊಟ್ಟರೂ ಅವರ ರಿಯಾಕ್ಷನ್ ಹೇಗಿರುತ್ತೆ ಅನ್ನೋ ಕುತೂಹಲವಿದೆ.
ಆದ್ರೆ, ಒಂದಂತೂ ನಿಜ ಬಟ್, ಈ ರೀತಿಯ ವರದಿಯಿಂದ ವಿಶ್ವದ ಸಿರಿವಂತ ಎಲಾನ್ ಮಸ್ಕ್ ಸಖತ್ ಸಿಟ್ಟಾಗಗಿರೋದಂತೂ ಸತ್ಯ, ಮೊದಲೇ ಕಳೆದ ಎರಡ್ಮೂರು ವರ್ಷಗಳಿಂದ ಇಬ್ಬರ ನಡುವೆ ಜಂಗೀಕುಸ್ತಿ ನಡೀತಾನೆ ಬಂದಿದೆ. ಈ ಮಧ್ಯೆ ಇಷ್ಟೂ ದಿನ ಸಾಕಷ್ಟು ಹೆಸ್ರು, ಕೀರ್ತಿಯನ್ನು ಕಾಪಾಡಿಕೊಂಡು ಬಂದಿದ್ದ, ಗೇಟ್ಸ್ ವಿರುದ್ಧ ಕೇಳಿ ಬಂದಿರೋ ಈ ಆರೋಪ ಅವರಿಗೆ ಡ್ಯಾಮೇಜ್ ಮಾಡುವ ಸಾಧ್ಯತೆ ಇದ್ದು, ಉದ್ಯಮ ಲೋಕದಲ್ಲಿ ತಲ್ಲಣವನ್ನೇ ಮೂಡಿಸಿದೆ.
ಯಾವುದೇ ಉದ್ಯಮವಾದ್ರೂ ಅಲ್ಲಿ ಹೆಲ್ದಿ ಕಾಂಪಿಟಿಷನ್ ಇರ್ಬೇಕು. ಆದ್ರೆ, ಬಿಲ್ ಗೇಟ್ಸ್ ಹಾಗೂ ಎಲಾನ್ ಮಸ್ಕ್ ನಡುವಿನ ಕಾಳಗವನ್ನ ನೋಡ್ತಿದ್ರೆ, ಇವ್ರು ನಿಜಕ್ಕೂ ವಿಶ್ವದ ಸಿರಿವಂತರ ಅನ್ನೋ ಪ್ರಶ್ನೆ ಮೂಡುತ್ತೆ. ಯಾಕಂದ್ರೆ, ಈ ರೀತಿ ಬಹಿರಂಗ ಕಾದಾಟ ಇಬ್ಬರ ಘನತೆಗೂ ಒಳ್ಳೇದಲ್ಲ. ಈ ಬಿಲಿಯನೇರ್ಗಳ ವಾರ್ ಇಲ್ಲಿಗೇ ನಿಲ್ಲಲಿ.. ಸಮಾಜ ಸೇವೆ ಮತ್ತಷ್ಟು ಹೆಚ್ಚಾಗಲಿ ಅನ್ನೋದೇ ಎಲ್ಲರ ಹಾರೈಕೆ..
ಇದನ್ನೂ ಓದಿ: ವಿಶ್ವದ ಸಿರಿವಂತರ ನಡುವೆ ನಡೀತಿದೆ ಬಹುದೊಡ್ಡ ಸಮರ-ಮಸ್ಕ್ ಹಣಿಯಲು ಪಿತೂರಿ ನಡೆಸಿದ್ದಾರಾ ಬಿಲ್ ಗೇಟ್ಸ್?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post