IPL ಅಂದ್ರೇನೆ ಎಂಟರ್ಟೈನ್ಮೆಂಟ್ ಲೀಗ್. ವರ್ಷಕ್ಕೊಮ್ಮೆ ನಡೆಯೋ IPL ಹಬ್ಬಕ್ಕೆ, ಕ್ರಿಕೆಟ್ ಪ್ರೇಮಿಗಳು ಉಸಿರು ಬಿಗಿ ಹಿಡಿದು, ಕಾದು ಕುಳಿತಿರುತ್ತಾರೆ. ಆದ್ರೆ ಇದೇ IPL ವರ್ಷಕ್ಕೆ 2 ಸಲ ನಡೆದ್ರೆ ಹೇಗಿರುತ್ತೆ ಊಹಿಸಿ.? ಮಾಜಿ ಕೋಚ್ ಬಿಸಿಸಿಐಗೆ ಸಲಹೆ ನೀಡಿರೋದು, ಇದೀಗ ಸಖತ್ ಸುದ್ದಿಯಾಗಿದೆ.
ಐಪಿಎಲ್ ಫೀವರ್ ಮುಗೀತು. ಸದ್ಯ ಇಂಡೋ-ಆಫ್ರಿಕಾ ಟಿ20 ಬ್ಯಾಟಲ್ಗೆ, ಕೌಂಟ್ಡೌನ್ ಶುರು. ಬಳಿಕ ಐರ್ಲೆಂಡ್ ವಿರುದ್ಧದ ಚುಟುಕು ಕದನ. ಆ ನಂತರ ಇಂಗ್ಲೆಂಡ್ ಎದುರು ಟಿ20 ದಂಗಲ್.. ಹೀಗೆ ದ್ವಿಪಕ್ಷೀಯ ಟಿ20 ಸರಣಿಗಳು ವರ್ಷದುದ್ದಕ್ಕೂ ನಡೀತವೆ. ಆದ್ರೆ ಇಷ್ಟೆಲ್ಲಾ ದ್ವಿಪಕ್ಷೀಯ ಸರಣಿಗಳ ಆಯೋಜನೆ ಬದಲಿಗೆ, ಒಂದೇ ವರ್ಷದಲ್ಲಿ ಎರಡು IPL ನಡೆಸಿದ್ರೆ ಹೇಗಿರುತ್ತೆ..?
ಹೌದು..! ವರ್ಷಕ್ಕೆ 2 ಬಾರಿ IPL ಆಯೋಜಿಸುವಂತೆ ಸಲಹೆ ನೀಡಿರೋದು, ಬೇರೆ ಯಾರೂ ಅಲ್ಲ, ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ.! ಎರಡು ದೇಶಗಳ ನಡುವೆ ನಡೆಯೋ ದ್ವಿಪಕ್ಷೀಯ ಸರಣಿಗಳಿಗಿಂತ, ವರ್ಷಕ್ಕೆ 2 IPL ಆಯೋಜನೆಯೇ BEST ಎಂದು ರವಿ ಶಾಸ್ತ್ರಿ ಹೇಳಿದ್ದಾರೆ. ದ್ವಿಪಕ್ಷೀಯ ಸರಣಿಗಳನ್ನ ನಿರ್ಬಂಧಿಸಿ, ವಿಶ್ವಕಪ್ನಂತಹ ಟೂರ್ನಿಗಳಿಗೆ ಸೀಮಿತ ಮಾಡಬೇಕು ಅಂತಾನು ಶಾಸ್ತ್ರಿ ಹೇಳಿದ್ದಾರೆ. ಇನ್ನು ಈ ರೀತಿ ಅಚ್ಚರಿ ಹೇಳಿಕೆ ನೀಡಿರೋ ಮಾಜಿ ಕೋಚ್, ಅದಕ್ಕೆ ನಿಖರವಾದ ಕಾರಣವನ್ನೂ ಬಿಡಿಸಿ ಹೇಳಿದ್ದಾರೆ.
ವರ್ಷಕ್ಕೆ 2 ಆವೃತ್ತಿ ಯಾಕಾಗಬಾರದು..?
‘ಭವಿಷ್ಯದಲ್ಲಿ ವರ್ಷಕ್ಕೆ ಎರಡು ಬಾರಿ ಐಪಿಎಲ್ ಆಯೋಜನೆ ಉತ್ತಮ. ಒಂದು ಆವೃತ್ತಿಗೆ 70 ಪಂದ್ಯಗಳಂತೆ, ಎರಡೂ ಆವೃತ್ತಿ ಸೇರಿ 140 ಪಂದ್ಯಗಳು ಆಗಲಿವೆ. ಟಿ20 ಕ್ರಿಕೆಟ್‌ನಲ್ಲಿ ತುಂಬಾ ದ್ವಿಪಕ್ಷೀಯ ಸರಣಿಗಳು ನಡೀತಿವೆ. ಆದ್ರೆ ದ್ವಿಪಕ್ಷೀಯ T20 ಸರಣಿಗಳು, ಅನಗತ್ಯ ಅಂತ ಹೇಳಬಹುದೇ.? ಇನ್ನು IPL ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ. ಡೇನಿಯಲ್ ವೆಟ್ಟೋರಿ, ಇಯಾನ್ ಬಿಷಪ್ ಮತ್ತು ಆಕಾಶ್ ಚೋಪ್ರಾ IPL ವಿಸ್ತರಿಸೋ ಬಗ್ಗೆ ಮಾತನಾಡಿದ್ದಾರೆ. ಆದ್ರೆ ಅದು ಪ್ರತಿ ವರ್ಷ 2 ಆವೃತ್ತಿಗಳು ಯಾಕಾಗಬಾರದು..?
-ರವಿ ಶಾಸ್ತ್ರಿ, ಮಾಜಿ ಹೆಡ್ಕೋಚ್
ಹೀಗಂತ ಪ್ರಶ್ನೆ ಮಾಡಿರೋ ರವಿಶಾಸ್ತ್ರಿ ಅದಕ್ಕೆ ಉದಾಹರಣೆ ಸಹಿತ ಉತ್ತರವನ್ನೂ ಕೊಟ್ಟಿದ್ದಾರೆ. ಪುಟ್ಬಾಲ್ ಟೂರ್ನಿಗಳನ್ನೇ ಉದಾಹರಣೆ ನೀಡಿ, ಐಪಿಎಲ್ ಅನ್ನೂ ಹೀಗೆ ಮಾಡಿ ಎಂದು ಟಿಪ್ಸ್ ನೀಡಿದ್ದಾರೆ.
‘ಪುಟ್ಬಾಲ್ ರೀತಿ ನಡೆಸಬೇಕು’
‘ನಾನು ಭಾರತದ ಕೋಚ್ ಆಗಿದ್ದಾಗ ಟಿ20 ಸರಣಿಗಳು ನಡೆದಿವೆ. ಆದ್ರೆ ಇದು ಅನಗತ್ಯ ಅನಿಸುತ್ತೆ. ಟಿ20 ಸರಣಿಗಳ ಬದಲಿಗೆ ಫ್ರಾಂಚೈಸಿ ಲೀಗ್ಗಳ ಆಯೋಜನೆ ಹೆಚ್ಚಾಗಬೇಕು. ಉದಾಹರಣೆ ಫುಟ್ಬಾಲ್ ರೀತಿಯಲ್ಲಿ ಹೋಗಬೇಕು. ಪುಟ್ಬಾಲ್ ಕ್ರೀಡೆಯಲ್ಲಿ ಯಾವುದೇ ದ್ವಿಪಕ್ಷೀಯ ಸರಣಿಗಳ ಆಯೋಜನೆ ಇರೋದಿಲ್ಲ. ಕೇವಲ ಲೀಗ್ ಟೂರ್ನಿಗಳಷ್ಟೇ ಇರುತ್ತವೆ. ಈ ಬೆಳವಣಿಗೆ T20 ಕ್ರಿಕೆಟ್‌ಗೂ ಕಾಲಿಟ್ಟರೆ ಉತ್ತಮ ಎಂದೆನಿಸುತ್ತೆ. ಕ್ರಿಕೆಟ್‌ನಲ್ಲಿ ಕೇವಲ ಟಿ20 ವಿಶ್ವಕಪ್ ಮಾತ್ರ ಆಡಬೇಕು’
-ರವಿಶಾಸ್ತ್ರಿ, ಮಾಜಿ ಹೆಡ್ಕೋಚ್
ಕೇವಲ ಇದನ್ನಷ್ಟೆ ರವಿಶಾಸ್ತ್ರಿ ಅವರು ಮಾತನಾಡಿಲ್ಲ. ದ್ವಿಪಕ್ಷೀಯ ಸರಣಿಗಳನ್ನು ಜನರು ಬೇಗನೇ ಮರೆತುಬಿಡ್ತಾರೆ ಅಂತಾನೂ ಹೇಳಿದ್ದಾರೆ.
‘ಬೇರೆ ಪಂದ್ಯಗಳು ನೆನೆಪಿಗೆ ಬರಲ್ಲ’
‘ಭಾರತದ ಕೋಚ್ ಆಗಿ ವಿಶ್ವಕಪ್ ಹೊರತುಪಡಿಸಿ ಒಂದೇ ಒಂದು ಪಂದ್ಯ ನನಗೆ ನೆನಪಿಲ್ಲ. ವಿಶ್ವಕಪ್ ಗೆಲ್ಲೋ ತಂಡವನ್ನು ಮಾತ್ರ ಜನರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಆದ್ರೆ ಆ ಅದೃಷ್ಟ ನನ್ನ ಅವಧಿಯಲ್ಲಿ ನಮಗೆ ಒಲಿಯಲಿಲ್ಲ. ಹಾಗಾಗಿ ನನಗೆ ಅದು ನೆನಪಿಲ್ಲ. ಈಗ ಎಲ್ಲೆಲ್ಲೂ ಫ್ರಾಂಚೈಸಿ ಲೀಗ್ಗಳು ನಡೀತಿವೆ. ಅಲ್ಲಿ ಮಿಂಚಿದ ಆಟಗಾರರು ಯಾವ ಫ್ರಾಂಚೈಸಿಯಲ್ಲಾದ್ರೂ ಅವಕಾಶ ಪಡೆಯುತ್ತಾರೆ. ಪ್ರತಿಭೆಗಳಿಗೆ ಅದ್ಭುತ ವೇದಿಕೆ ಕೂಡ ಆಗಿದೆ. ಬಳಿಕ 2 ವರ್ಷಗಳಿಗೊಮ್ಮೆ ವಿಶ್ವಕಪ್ಗೆ ಸಜ್ಜಾಗಲು ಸಹ ಉತ್ತಮವಾಗಿರುತ್ತದೆ’
-ರವಿಶಾಸ್ತ್ರಿ, ಮಾಜಿ ಹೆಡ್ಕೋಚ್
ಸದ್ಯ ರವಿಶಾಸ್ತ್ರಿ ನೀಡಿರೋ ಹೇಳಿಕೆ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಪರ-ವಿರೋಧ ಡಿಬೇಟ್ಗಳು ಶುರುವಾಗಿವೆ. ಇನ್ನು 2 ಆವೃತ್ತಿಗಳನ್ನು ಆಯೋಜಿಸೋ ತಾಕತ್ತು ಬಿಸಿಸಿಐಗೆ ಇದೆ. ಹಾಗಂತ ಆ ರೀತಿ ಮಾಡಿದ್ರೆ ಕ್ರಿಕೆಟ್ ಮಂಡಳಿಗಳ ನಡುವಿನ ಬಾಂಧವ್ಯ ಹಳಸುತ್ತೆ. ಕ್ರಿಕೆಟ್ ಜೊತೆಗೆ ದುಡ್ಡಿಗೂ ಬೆಲೆ ಇಲ್ಲದಂತಾಗುತ್ತೆ. ಒಟ್ನಲ್ಲಿ ರವಿಶಾಸ್ತ್ರಿ ನೀಡಿರೋ ಸಲಹೆ ಸರಿಯಿಲ್ಲ ಅನ್ನೋದು ಕ್ರಿಕೆಟ್ ತಜ್ಞರ ವಾದವಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post