ಪಠ್ಯ ವಿವಾದಕ್ಕೆ ತೆರೆ ಎಳೆಯಲು ಸರ್ಕಾರ ಮುಂದಾಗಿದೆ. ಪ್ರಸ್ತುತ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಕಾರ್ಯ ಮುಗಿದಿದ್ದು, ಪರಿಷ್ಕರಣಾ ಸಮಿತಿ ವಿಸರ್ಜಿಸಲಾಗಿದೆ. ಪ್ರಸ್ತುತ ಸಮಿತಿ ಪರಿಷ್ಕರಿಸುವ ಪಠ್ಯದಲ್ಲಿ ಯಾವುದೇ ಆಕ್ಷೇಪಾರ್ಹ ಅಂಶಗಳಿದ್ದಲ್ಲಿ ಮತ್ತೊಮ್ಮೆ ಪರಿಷ್ಕರಿಸುವ ಮುಕ್ತ ಮನಸ್ಸು ಹೊಂದಿದ್ದಾಗಿ ಹೇಳಿದೆ.
ಸಾಕಷ್ಟು ವಾದ-ವಿವಾದಗಳ ಬಳಿಕ ಪಠ್ಯ ಪರಿಷ್ಕರಣೆಗೆ ಇತಿಶ್ರೀ ಹಾಡಿದೆ. ಪಠ್ಯದ ವಿಚಾರದಲ್ಲಿ ಕೇಳಿ ಬಂದ ಆಕ್ಷೇಪಣೆಗಳಿಗೆ ಸರ್ಕಾರ ತಲೆ ಬಾಗಿದೆ. ಪ್ರಸ್ತುತ ಪಠ್ಯ ಪರಿಷ್ಕರಣೆ ಸಮಿತಿಯನ್ನ ವಿಸರ್ಜಿಸಲಾಗಿದೆ. ಆಕ್ಷೇಪಣೆಗಳನ್ನ ಪರಿಷ್ಕರಿಸಲು ತಾನು ಮುಕ್ತ ಅಂತ ಹೇಳಕೊಂಡಿದೆ. ಈ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜಿಸಿದ ಸರ್ಕಾರ
ಹೌದು, ಸರ್ಕಾರ ಮತ್ತು ಬೌದ್ಧಿಕ ವಲಯದಲ್ಲಿ ಎದ್ದ ಪಠ್ಯದ ರಾದ್ಧಾಂತ, ಸೈದ್ಧಾಂತಿಕ ತಾಕಲಾಟಕ್ಕೆ ಕಾರಣವಾಗಿತ್ತು. ಇಡೀ ಬೆಳವಣಿಗೆ ಕಳೆದ ಒಂದು ತಿಂಗಳಿನಿಂದ ವಿವಾದದ ಸ್ವರೂಪ ಪಡೆದಿತ್ತು. ಈ ವಿವಾದ ಹಿಗ್ಗಿದಷ್ಟು ತನ್ನ ಇಮೇಜ್ಗೆ ಸಾಕಷ್ಟು ಧಕ್ಕೆ ಆಗ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ. ಇಲ್ಲಿಗೆ ಈ ವಿವಾದಕ್ಕೆ ಅಂತ್ಯ ಹಾಡಲು ಮುಂದಾಗಿದೆ.
ಇದನ್ನೂ ಓದಿ: ಪ್ರಸ್ತುತ ಪಠ್ಯ ಪರಿಷ್ಕರಣಾ ಸಮಿತಿ ವಿಸರ್ಜಿಸಿದ ರಾಜ್ಯ ಸರ್ಕಾರ -ಸಿಎಂ ಬೊಮ್ಮಾಯಿ ಸ್ಪಷ್ಟನೆ
ಪ್ರಸ್ತುತ ಪಠ್ಯ ಪರಿಷ್ಕರಣಾ ಸಮಿತಿಯ ಕಾರ್ಯ ಮುಗಿದಿದ್ದು, ರೋಹಿತ್ ಚಕ್ರತೀರ್ಥ ನೇತೃತ್ವದ ಪ್ರಸ್ತುತ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜಿಸಲಾಗಿದೆ ಅಂತ ಸಿಎಂ ಆದೇಶಿಸಿದ್ದಾರೆ. ಪ್ರಸ್ತುತ ಸಮಿತಿ ಪರಿಷ್ಕರಿಸುವ ಪಠ್ಯದಲ್ಲಿ ಯಾವುದೇ ಆಕ್ಷೇಪಾರ್ಹ ಅಂಶಗಳಿದ್ದಲ್ಲಿ ಮತ್ತೊಮ್ಮೆ ಪರಿಷ್ಕರಿಸುವ ಮುಕ್ತ ಮನಸ್ಸನ್ನು ಸರ್ಕಾರ ಹೊಂದಿದೆ ಅಂತ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ.
ಹಿಂದಿನ ಸರ್ಕಾರದ ಬರಗೂರು ರಾಮಚಂದ್ರ ಸಮಿತಿಯಲ್ಲಿ ಬಸವಣ್ಣ ಪಾಠ ಪರಿಷ್ಕರಣೆಯಾಗಿತ್ತು. ಇಂದಿನ ಸಮಿತಿ ಕೂಡ ಅದನ್ನ ಮುಂದುವರೆಸಿತ್ತು, ಆದರೆ ಪಂಡಿತಾರಾಧ್ಯ ಸ್ವಾಮೀಜಿ ಸೇರಿದಂತೆ ಕೆಲ ಸ್ವಾಮೀಜಿಗಳ ಬಸವಣ್ಣನ ಪಠ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಸವಣ್ಣನ ಪಠ್ಯವನ್ನ ಯಾರ ಭಾವನೆಗೂ ದಕ್ಕೆಯಾಗದಂತೆ ಪರಿಷ್ಕರಣೆ ಮಾಡಲಾಗುವುದು. ನಾರಾಯಣ ಗುರು, ಭಗತ್ ಸಿಂಗ್ ಪಾಠ ಬಿಟ್ಟಿಲ್ಲ. ನಾಡಪ್ರಭು ಕೆಂಪೆಗೌಡರ ಪಠ್ಯ ಸೇರಿಸಲಾಗಿದೆ. ಒಂದರಿಂದ ಹತ್ತನೇ ತರಗತಿ ಭಾಷಾ ಪಠ್ಯಪುಸ್ತಕದಲ್ಲಿ 45 ಪಠ್ಯ ಪರಿಷ್ಕರಿಸಲಾಗಿದೆ. ಪ್ರಥಮ ಭಾಷೆ 33 ಪಾಠ/ಪದ್ಯಗಳು. ದ್ವೀತಿಯ ಭಾಷೆ 8 ಪಾಠ/ ಪದ್ಯ. ತೃತೀಯ ಭಾಷೆ 4 ಪಾಠ/ ಪದ್ಯ ಬದಲಾವಣೆ ಮಾಡಲಾಗಿದೆ.
ಬಿ.ಸಿ ನಾಗೇಶ್, ಶಿಕ್ಷಣ ಸಚಿವ
ಪಂಡಿತಾರಾಧ್ಯ ಸ್ವಾಮೀಜಿಗಳು ಹಾಗೂ ನಾಡಿನ ಇತರೆ ಸ್ವಾಮೀಜಿಗಳು ಪ್ರಸ್ತುತ ಪಠ್ಯ ಪುಸ್ತಕದಲ್ಲಿರುವ ಬಸವಣ್ಣನವರ ವಿಷಯಾಂಶಕ್ಕೆ ಆಕ್ಷೇಪಕ್ಕೆ ಪರಿಷ್ಕರಿಸಲಾಗುವುದು. ಅದೇ ರೀತಿ ಆದಿಚುಂಚನಗಿರಿ ಶ್ರೀಗಳು, ಇತರರ ಆಶಯದಂತೆ ರಾಷ್ಟ್ರಕವಿ ಕುವೆಂಪುರವರು ವಿರಚಿತ ನಾಡಗೀತೆ ವಿಕೃತಗೊಳಿಸುವ ರೀತಿಯಲ್ಲಿ ನಾಡಗೀತೆಯ ದಾಟಿಯಲ್ಲಿ ಮೂಲ ಕವನವನ್ನು ಬರೆದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸೈಬರ್ ಕ್ರೈಮ್ಗೆ ತನಿಖೆಯನ್ನು ನಡೆಸಲು ಸೂಚಿಸಲಾಗಿದೆ.
ಪಠ್ಯ ಪರಿಷ್ಕರಣೆ ವಿಸರ್ಜನೆ!
- ಪಠ್ಯಪುಸ್ತಕ ಸಮಿತಿ ಕಾರ್ಯ ಮುಗಿದಿರುವುದರಿಂದ ಸಮಿತಿ ವಿಸರ್ಜನೆ
- ಪ್ರಸ್ತುತ ಪಠ್ಯದಲ್ಲಿ ಮತ್ತೆ ಪರಿಷ್ಕರಣೆ ಇದ್ದರೆ ಮುಕ್ತ ಮನಸ್ಸು ಹೊಂದಿದೆ
- ಬಸವಣ್ಣನವರ ಕುರಿತ ಪಠ್ಯ ಪರಿಷ್ಕರಿಸಲು ನಿರ್ಧಾರ ಕೈಗೊಳ್ಳಲಾಗಿದೆ
- ಕುವೆಂಪು ನಾಡಗೀತೆ ಆಕ್ಷೇಪಾರ್ಹ ವಿಕೃತಗೊಳಿಸಿದ ಪಠ್ಯ ಉಲ್ಲೇಖವಾಗಿಲ್ಲ
- ನಾಡಗೀತೆ ಮೂಲ ಕವನ ಬರೆದ ವ್ಯಕ್ತಿಗಳ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ
- ಕುವೆಂಪು ಅವರ ಸಾಹಿತ್ಯವನ್ನು ಏಳು ರಿಂದ ಈಗ 10ಕ್ಕೆ ಏರಿಕೆಯಾಗಿದೆ
- ನಾಡಪ್ರಭು ಕೆಂಪೇಗೌಡ ಅವರ ಪಠ್ಯದ ಸೇರ್ಪಡೆ ಮಾಡಲಾಗಿದೆ
- ಇಸ್ಲಾಂ, ಕ್ರೈಸ್ತ ಧರ್ಮ ಪರಿಚಯ ಜೊತೆ ಹಿಂದೂ ಧರ್ಮ ವಿಷಯ ಸೇರ್ಪಡೆ
ಒಟ್ಟಾರೆ, ಪಠ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತಷ್ಟು ವಿವಾದ ಮುಂದುವರಿಸದಿರಲು ತೀರ್ಮಾನಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post