ಭಾನುವಾರ ಐಪಿಎಲ್ ಮಾಧ್ಯಮ ಹಕ್ಕುಗಳಿಗೆ ಬಿಡ್ಡಿಂಗ್ ನಡೆಯಲಿದೆ. ಆದರೆ ಅದಕ್ಕೂ ಮೊದಲೇ ಬಿಸಿಸಿಐಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ದ್ಯೆತ್ಯ ಟೆಕ್ ಕಂಪನಿಗಳಾದ ಅಮೆಜಾನ್ ಮತ್ತು ಗೂಗಲ್ ಬಳಿಕ ಈಗ ಜೀ ಕಂಪನಿ ಬಿಡ್ಡಿಂಗ್ನಿಂದ ಹೊರ ಬಿದ್ದಿದೆ.
ಟಿವಿ ಹಕ್ಕುಗಳಿಗಾಗಿ ಪ್ರತ್ಯೇಕ ಹರಾಜು ಮತ್ತು ನೇರ ಪ್ರಸಾರದ ಹಕ್ಕಿಗಾಗಿ ಪ್ರತ್ಯೇಕ ಹರಾಜು ನಡೆಯಲಿದೆ. ಆದರೆ ನೇರ ಪ್ರಸಾರದ ಹಕ್ಕಿಗಾಗಿ ಅಮೆಜಾನ್ ಕಂಪನಿ ಅಖಾಡಕ್ಕೆ ಇಳಿದಿದ್ದು, ಭಾರೀ ಕುತೂಹಲ ಕೆರಳಿಸಿತ್ತು. ಆದರೆ ಈಗ ಹಿಂದೆ ಸರಿದಿದೆ.
ಡಿಸ್ನಿ ಸ್ಟಾರ್, ರಿಲಯನ್ಸ್, ಸೋನಿ ನೆಟ್ವರ್ಕ್ ಸೇರಿ ಒಟ್ಟು 10 ಕಂಪನಿಗಳು ಸ್ಪರ್ಧೆಯಲ್ಲಿದ್ದು, ಹಕ್ಕುಗಳು ಯಾರ ಪಾಲಾಗಲಿವೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಆದರೆ ಹರಾಜಿಗೆ ಒಂದು ದಿನ ಬಾಕಿ ಇರುವಾಗಲೇ ಜೀ ಕಂಪನಿ ಹಿಂದೆ ಸರಿದಿರೋದು ಅಚ್ಚರಿ ಮೂಡಿಸಿದೆ.
ಈ ಹಿಂದೆ ಅಂದರೆ 2018ರ ಸ್ಟಾರ್ ಇಂಡಿಯಾ 16,347.5 ಕೋಟಿಗೆ ಮಾಧ್ಯಮ ಹಕ್ಕನ್ನು ಪಡೆದುಕೊಂಡಿತ್ತು. ಈ ಸಂಸ್ಥೆಯೊಂದಿಗಿನ ಒಪ್ಪಂದ 2022 ಐಪಿಎಲ್‌ಗೆ ಮುಕ್ತಾಯಗೊಂಡಿದೆ. ಸದ್ಯ ಸ್ಟಾರ್ ಇಂಡಿಯಾ ಈ ಬಾರಿಯೂ ಮಾಧ್ಯಮ ಹಕ್ಕನ್ನು ತನ್ನದಾಗಿಸಿಕೊಳ್ಳುವ ಸಾಧ್ಯತೆಗಳಿದೆ.
ಸದ್ಯ 2023-27ರ ಅವಧಿಯ ಐಪಿಎಲ್ ಪ್ರಸಾರದ ಹಕ್ಕು ಪಡೆಯಲು 5 ವರ್ಷಗಳಿಗೆ ಬಿಸಿಸಿಐ 32,890 ಕೋಟಿ ಮೂಲಬೆಲೆ ನಿಗದಿಪಡಿಸಿದೆ. ಅಂದರೆ ಪ್ರತಿ ಪಂದ್ಯದ ಟಿವಿ ಹಕ್ಕು 49 ಕೋಟಿ ಆಗಲಿದೆ. ಮತ್ತು ಪ್ರತಿ ಪಂದ್ಯದ ಡಿಜಿಟಲ್ ಹಕ್ಕು 33 ಕೋಟಿ ಇರಲಿದೆ.
ಹರಾಜಿನಲ್ಲಿ ಟಿವಿ ಹಕ್ಕು ತನ್ನ ಮೂಲಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟು ಹೆಚ್ಚು ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಅದೇ ರೀತಿ ಡಿಜಿಟಲ್ ಹಕ್ಕಿನ ಮೇಲೂ ನಿರೀಕ್ಷೆ ಹೆಚ್ಚಾಗಿದೆ. ಹಾಗಾಗಿ ಎರಡೂ ಸೇರಿಸಿದರೆ ಕನಿಷ್ಠ ಒಂದು ಪಂದ್ಯಕ್ಕೆ 115ರಿಂದ 120 ಕೋಟಿ ವ್ಯವಹಾರ ಆಗುವ ಸಾಧ್ಯತೆ ಎಂದು ನಿರೀಕ್ಷಿಸಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post