ನವದೆಹಲಿ: ಕೆ ಚಂದ್ರಶೇಖರ್ ರಾವ್ ಇವ್ರು ಸದ್ಯ ತೆಲಂಗಾಣ ಸಿಎಂ.. ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ಅಧ್ಯಕ್ಷರು ಹೌದು.. ಇವ್ರಿಗೆ ರಾಜ್ಯ ರಾಜಕಾರಣಕ್ಕಿಂತ ಒಂದು ಪಟ್ಟು ಜಾಸ್ತಿ ರಾಷ್ಟ್ರ ರಾಜಕಾರಣದ ಮೇಲೆ ಮನಸ್ಸಿದೆ. ಅದನ್ನ ಆಗಾಗ ಅವರೇ ತೋರ್ಪಡಿಸ್ತಿರ್ತಾರೆ. ಇದೀಗ ಅಧಿಕೃತವಾಗಿ ರಾಷ್ಟ್ರ ರಾಜಕಾರಣಕ್ಕೆ ಕಾರ್ನಲ್ಲಿ ಡ್ರೈವ್ ಮಾಡೋ ಸುಳಿವು ನೀಡಿದ್ದಾರೆ.
ತೆಲಂಗಾಣದ ಸಿಎಂ ಆಗದ್ರೂ ಕೆ. ಚಂದ್ರಶೇಖರ್ ರಾವ್ ಸದಾ ರಾಷ್ಟ್ರ ರಾಜಕಾರಣದ ಮೇಲೆ ಕಣ್ಣಿಟ್ಟಿರ್ತಾರೆ. ಇದರ ಭಾಗವಾಗಿಯೇ ಆಗಾಗ ಪ್ರಧಾನಿಗಳ ವಿರುದ್ಧ ಟೀಕಾ ಪ್ರಯೋಗ ಮಾಡ್ತಿರ್ತಾರೆ. ಈ ಹಿಂದೆ ರಾಷ್ಟ್ರೀಯ ಪಕ್ಷಗಳ ವಿರುದ್ಧ ತೊಡೆ ತಟ್ಟಲು ಮೂರನೇ ರಂಗ ಸೃಷ್ಟಿಯಾಗಿತ್ತು. ಆಗ ಕೆ ಚಂದ್ರಶೇಖರ್ ರಾವ್ ಹೆಸರು ಮುನ್ನೆಲೆ ಬಂದಿತ್ತು. ಖುದ್ದು ಕೆಸಿಆರ್ ರಾಷ್ಟ್ರೀಯ ನಾಯಕರ ಸಾಲಿನಲ್ಲಿ ಕಾಣಿಸಿಕೊಂಡಿದ್ರು. ಆದ್ರೆ ಅದು ಬಿರುಗಾಳಿಯಷ್ಟೇ ವೇಗವಾಗಿ ಮಾಯವಾಗಿತ್ತು. ಇದೀಗ ಕೆಸಿಆರ್ ಐ ಌಮ್ ಬ್ಯಾಕ್ ಅಂತಿದ್ದಾರೆ. ಲೋಕಸಭಾ ಚುನಾವಣೆಗೆ ಎರಡು ವರ್ಷ ಬಾಕಿ ಇರುವಾಗಲೇ ಅಖಾಡದಲ್ಲಿ ಸದ್ದು ಮಾಡೋದಕ್ಕೆ ರೆಡಿಯಾಗಿದ್ದಾರೆ.
ಕೆ. ಚಂದ್ರಶೇಖರ್ ರಾವ್ ಅವರ ಟಿಆರ್‌ಎಸ್ ಪ್ರಾದೇಶಿಕ ಪಕ್ಷವಾಗಿದ್ದರೂ, ತೆಲಂಗಾಣದಲ್ಲಿ ತನ್ನದೇ ಆದ ಪ್ರಾಬಲ್ಯ ಹೊಂದಿದೆ. ಆದ್ರೆ ತೆಲಂಗಾಣದ ಹೊರಗೆ ಇದರ ಪ್ರಾಬಲ್ಯ ಅಷ್ಟೇನೂ ಇಲ್ಲ. ಕನಿಷ್ಟ ಪಕ್ಷ ದಕ್ಷಿಣ ಭಾರತದಲ್ಲೂ ಕೆಸಿಆರ್ ಪಕ್ಷಕ್ಕೆ ಬಲ ಇಲ್ಲ. ಹೀಗಾಗಿ ಇದನ್ನ ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯೋದು ಸುಲಭದ ಮಾತಲ್ಲ.. ಈ ನಿಟ್ಟಿನಲ್ಲಿ ಹೊಸ ಪಕ್ಷವನ್ನೇ ಘೋಷಿಸೋದಕ್ಕೆ ಮುಂದಾಗಿದ್ದಾರೆ.
ಕೆಸಿಆರ್ ‘ಲೋಕ’ ಕನಸು!
ರಾಷ್ಟ್ರ ಮಟ್ಟದಲ್ಲಿ ತೃತೀಯ ರಂಗ ರಚನೆ ನಿರೀಕ್ಷಿತ ಯಶಸ್ಸು ನೀಡಿದ ಕಾರಣ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್, ಹೊಸ ರಾಷ್ಟ್ರೀಯ ಪಕ್ಷ ಆರಂಭಿಸುವ ಚಿಂತನೆಯಲ್ಲಿದ್ದಾರೆ. ಜೂನ್ 19ರಂದು ಟಿಆರ್‌ಎಸ್ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ತೆಲಂಗಾಣದ ಸಚಿವರು ಮತ್ತು ಪಕ್ಷದ ಹಿರಿಯ ನಾಯಕರೊಂದಿಗೆ ಸರಣಿ ಸಭೆಯನ್ನ ಕೆಸಿಆರ್ ನಡೆಸಿದ್ದಾರೆ. ಹೊಸ ಪಕ್ಷದ ನೋಂದಣಿ ಪ್ರಕ್ರಿಯೆಯನ್ನ ಕೇಂದ್ರ ಚುನಾವಣಾ ಆಯೋಗ ಸದ್ಯದಲ್ಲೇ ಆರಂಭಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ತಿಂಗಳಾಂತ್ಯದಲ್ಲಿ ದೆಹಲಿಯಲ್ಲಿ ಕೆಸಿಆರ್ ಹೊಸ ರಾಷ್ಟ್ರೀಯ ಪಕ್ಷದ ಘೋಷಣೆ ಮಾಡಬಹುದು ಅನ್ನೋ ಮಾತು ರಾಜಕೀಯದ ಸಮುದ್ರದಲ್ಲಿ ಅಲೆಗಳಂತೆ ತೇಲಿ ಬರ್ತಿವೆ.
ಹೊಸ ಪಕ್ಷ ಘೋಷಣೆ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಿಂದ ಚಂದ್ರಶೇಖರ್ ರಾವ್ ಭಾರತದ ಮೂಲೆ ಮೂಲೆಗೂ ರೌಂಡ್ ಹೊಡೀತಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಅಷ್ಟೇ ಯಾಕೆ, ನಮ್ಮ ಕರ್ನಾಟಕಕ್ಕೂ ಭೇಟಿ ಕೊಟ್ಟು ಹೆಚ್.ಡಿ. ದೇವೇಗೌಡ ಅವರ ಜೊತೆ ಉಪಹಾರ ಚರ್ಚೆ ನಡೆಸಿದ್ದರು. ಹೀಗೆ ಚರ್ಚೆ ವೇಳೆ ತಮ್ಮ ರಾಷ್ಟ್ರೀಯ ಪಕ್ಷದ ಬಗ್ಗೆ ಚರ್ಚೆ ಮಾಡಿ ಒಂದಷ್ಟು ಸಲಹೆ ಪಡೆದಿದ್ದಾರೆ ಎನ್ನಲಾಗಿದೆ. ಯಾಕಂದ್ರೆ ಕೆಸಿಆರ್ ಪಕ್ಷಕ್ಕೆ ಮುಂದೆ ಪ್ರಾದೇಶಿಕ ಪಕ್ಷಗಳ ನೆರವು ಬೇಕೆ ಬೇಕು. ಈ ನಿಟ್ಟಿನಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಇನ್ನು, ಚಂದ್ರಶೇಖರ್ ರಾವ್ ಪಕ್ಷ ಸ್ಥಾಪಿಸಿದ್ರೆ ಅದಕ್ಕೊಂದು ಹೆಸರು ಬೇಕಲ್ವಾ? ಚಿಹ್ನೆ ಬೇಕಲ್ವಾ? ಆ ಬಗ್ಗೆಯೂ ಕೆಸಿಆರ್ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯ ಪಕ್ಷಕ್ಕೆ ಬಿಆರ್‌ಎಸ್ ಎಂದು ನಾಮಕರಣಕ್ಕೆ ಪ್ಲಾನ್.. ಕಾರು ಚಿಹ್ನೆ!
ಚಂದ್ರಶೇಖರ್ ರಾವ್ ತಮ್ಮ ಮುಂದಿನ ರಾಷ್ಟ್ರೀಯ ಪಕ್ಷಕ್ಕೆ ಬಿಆರ್‌ಎಸ್ ಎಂದು ನಾಮಕರಣ ಮಾಡೋ ಪ್ಲಾನ್ನಲ್ಲಿದ್ದಾರೆ. ಬಿಆರ್‌ಎಸ್ ಅಂದ್ರೆ ಭಾರತ್ ರಾಷ್ಟ್ರೀಯ ಸಮಿತಿ ಎಂದರ್ಥ.. ದೇಶದ ರಾಜಕಾರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಇಚ್ಛೆ ವ್ಯಕ್ತಪಡಿಸಿರುವ ಕೆಸಿಆರ್, ತಮ್ಮ ಆಪ್ತರ ಜೊತೆ ಪ್ರಸ್ತುತ ರಾಜಕೀಯ ಪರಿಸ್ಥಿತಿ ಬಗ್ಗೆ ಸತತ 6 ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಶಾಸಕರೊಬ್ಬರು ಸೂಚಿಸಿದ ಬಿಆರ್‌ಎಸ್ ಹೆಸರನ್ನೇ ಪಕ್ಷಕ್ಕೆ ಅಂತಿಮಗೊಳಿಸಲು ಮುಂದಾಗಿದ್ದಾರೆ. ಎನ್ನಲಾಗ್ತಿದೆ. ಇನ್ನು, ರಾಷ್ಟ್ರೀಯ ಪಕ್ಷದ ಕೇಂದ್ರ ಕಚೇರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇರಲಿದೆ. ಇನ್ನು, ಕೆಸಿಆರ್ ತಮ್ಮ ಪಕ್ಷದ ಚಿಹ್ನೆಯನ್ನಾಗಿ ಸೆಲೆಕ್ಟ್ ಮಾಡಿಕೊಳ್ಳೋದಕ್ಕೆ ಮುಂದಾಗಿರೋದು ಕಾರನ್ನ.
ಒಟ್ಟಿನಲ್ಲಿ ಚಂದ್ರಶೇಖರ್ ರಾವ್ ರಾಷ್ಟ್ರೀಯ ಪಕ್ಷ ಘೋಷಣೆ ವಿಚಾರ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಬೆಳೆದು ನಿಲ್ಲೋ ಕೆಸಿಆರ್ ಕನಸು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತೆ ಅನ್ನೋದನ್ನ ಕಾಲ ತೀರ್ಮಾನಿಸಬೇಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post