ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನ ಇ.ಡಿ 3 ದಿನಗಳಿಂದ ಡ್ರಿಲ್ ಮಾಡುತ್ತಿದೆ. ಆದ್ರೂ ರಾಹುಲ್ ರಾಹುಕಾಲ ಮುಕ್ತಾಯವಾದಂತಿಲ್ಲ. ಇಂದು ಒಂದಿನ ವಿಚಾರಣೆಗೆ ಬ್ರೇಕ್ ನೀಡಿ ನಾಳೆ ವಿಚಾರಣೆಗೆ ಕರೆದಿದೆ. ಈ ನಡುವೆ ರಾಹುಲ್ ಗಾಂಧಿ ಇ.ಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ನಾಯಕರು ಬೀದಿಗಿಳಿದಿದ್ದು ಇಂದು ರಾಷ್ಟ್ರವ್ಯಾಪಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಇಂದು ಕೈ ಪಾಳಯ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿದೆ. ರಾಜಭವನ ಮುತ್ತಿಗೆ ಹಾಕಲು ಸಿದ್ಧತೆ ನಡೆಸಿದೆ. ಸುಮಾರು 30 ಗಂಟೆ ಜಾರಿ ನಿರ್ದೇಶಲನಾಲಯದ ಅಧಿಕಾರಿಗಳ ವಿಚಾರಣೆ ಎದುರಿಸಿದ್ರೂ ರಾಹುಲ್ ಗಾಂಧಿ ಉತ್ತರಕ್ಕೆ ತೃಪ್ತಿಯಾಗಿಲ್ಲ ಎನ್ನಲಾಗಿದೆ.
ಇ.ಡಿ ವಿಚಾರಣೆ ಖಂಡಿಸಿ ಕೈ ನಾಯಕರಿಂದ ಬೃಹತ್ ಱಲಿ
ರಾಜಭವನಕ್ಕೆ ಮುತ್ತಿಗೆ ಹಾಕಲು ದೆಹಲಿಯ ಎಐಸಿಸಿ ಕಚೇರಿಯಿಂದ ಸಂದೇಶ ರವಾನಿಸಲಾಗಿದೆ. ಹೀಗಾಗಿ ಕರ್ನಾಟಕದಲ್ಲೂ ಇಂದು ಪ್ರತಿಭಟನೆ ಮಾಡಲು ನಿರ್ಧಾರ ಮಾಡ್ಲಾಗಿದ್ದು ದೊಡ್ಡ ಮಟ್ಟದಲ್ಲಿ ಧರಣಿಯನ್ನ ನಡೆಸುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗ್ತಿದೆ. ಇಂದು ಬೆಳಗ್ಗೆ 9 ಗಂಟೆಗೆ ಕಾಂಗ್ರೆಸ್ ನಾಯಕರು ಬೆಂಗಳೂರಿನ ಕೆಪಿಸಿಸಿ ಕಚೇರಿಯಿಂದ ರಾಜಭವನ ಚಲೋ ಹಮ್ಮಿಕೊಂಡಿದ್ದಾರೆ. ರಾಜಭವನಕ್ಕೆ ಮುತ್ತಿಗೆ ಹಾಕಲಿರುವ ಕಾಂಗ್ರೆಸ್ ರಾಜ್ಯಪಾಲರನ್ನ ಭೇಟಿ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ದೂರು ನೀಡಲಿದೆ. ಱಲಿಯಲ್ಲಿ ಎಲ್ಲಾ ಕಾಂಗ್ರೆಸ್ ಶಾಸಕರು, ಕಾರ್ಯಕರ್ತರು ಭಾಗವಹಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚಿಸಿರೋ ಹಿನ್ನೆಲೆ ಸಾವಿರಾರು ಮಂದಿ ಭಾಗಿಯಾಗುವುದರಿಂದ ಪೊಲೀಸರು ರಾಜಭವನದ ಸುತ್ತ ಮುತ್ತ ಯಾರು ನುಸುಳದಂತೆ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ದಟ್ಟವಾಗಿದೆ. ಈ ವಿಚಾರಣೆ-ಪ್ರತಿಭಟನೆಯ ಮಧ್ಯೆ ಸಿಕ್ಕಿ ವಾಹನ ಸವಾರರು ಪರದಾಡಲಿದ್ದಾರೆ.
‘ಬಿಜೆಪಿ ಸರ್ಕಾರದಿಂದ ಸಂವಿಧಾನ ಮತ್ತು ಪೊಲೀಸರ ದುರ್ಬಳಕೆ’
ರಾಹುಲ್ ಗಾಂಧಿ ವಿರುದ್ಧ ಸುಳ್ಳು ಮೊಕದ್ದಮೆ ಹಾಕಿದ್ದಾರೆ. ಬ್ರಿಟಿಷರ ಜೊತೆ ಶಾಮೀಲಾಗಿದ್ದವರು ಬಿಜೆಪಿಯವರು. ಯಾವುದೇ ಸಾಕ್ಷಿ ಇಲ್ಲದಿದ್ದರೂ ರಾಜಕೀಯ ದ್ವೇಷಕ್ಕಾಗಿ ಬಿಜೆಪಿ ಕಿರುಕುಳ ನೀಡುತ್ತಿದೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಸಂವಿಧಾನಿಕ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆಯನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ. ದೇಶದಲ್ಲಿ ಕಾಂಗ್ರೆಸ್ಸಿಗರ ಬಾಯಿ ಮುಚ್ಚಿಸಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗುಡುಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post