ಕೆಲ ತಿಂಗಳ ಹಿಂದೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಗಂಭೀರ ಆರೋಗ್ಯ ಸಮಸ್ಯೆ ಇದೆ ಅನ್ನೋ ವಿಡಿಯೋವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಪುಟಿನ್ ಆರೋಗ್ಯದ ಬಗ್ಗೆ ನಾನಾ ಉಹಾಪೋಹಗಳು ಹರಿದಾಡ್ತಿವೆ ಕೂಡ. ಈ ನಡುವೆಯೇ ಇದೀಗ ಪುಟಿನ್ ಬಗ್ಗೆ ಮತ್ತೊಂದು ವಿಡಿಯೋ ಸದ್ದು ಮಾಡ್ತಿದೆ.
ಪುಟಿನ್ ಆರೋಗ್ಯದ ಗುಟ್ಟು ರಟ್ಟಾಗದಿರಲು ಹೈ-ಲೆವೆಲ್ ಪ್ಲಾನ್?
ಪುಟಿನ್ ಆರೋಗ್ಯದ ಗುಟ್ಟು ರಟ್ಟಾಗದಿರಲಿ ಎಂಬ ಕಾರಣಕ್ಕೆ ಅವರ ಮಲ-ಮೂತ್ರವನ್ನು ಅಂಗರಕ್ಷಕರೇ ಸಂಗ್ರಹಿಸಿ ಅದಕ್ಕೂ ರಕ್ಷಣೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಪುಟಿನ್ ಅಂತಾರಾಷ್ಟ್ರೀಯ ಪ್ರವಾಸಕ್ಕೆ ಹೋದಾಗ ರಷ್ಯಾದ ಫೆಡರಲ್ ಗಾರ್ಡ್ಗಳೊಂದಿಗೆ ಈ ವಿಶೇಷ ಅಂಗರಕ್ಷಕ ತಂಡವೂ ತೆರಳುತ್ತೆ. ಅಧ್ಯಕ್ಷರ ಪ್ರಯಾಣದ ಸಮಯದಲ್ಲಿ ಅವರ ವಾಶ್‌ರೂಮ್‌ಗೆ ಹೋಗಿ ಅವರ ಮಲ-ಮೂತ್ರ ಸಂಗ್ರಹಿಸಿ ಸೀಕ್ರೆಟ್ ಬ್ರೀಫ್ ಕೇಸ್ನಲ್ಲಿ ವಾಪಸ್ ರಷ್ಯಾಗೆ ಕೊಂಡೊಯ್ಯುತ್ತದೆ ಎನ್ನಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತ ದೃಶ್ಯ ಕೂಡ ಬಿಡುಗಡೆಯಾಗಿದೆ.
ಸೂಟ್ಕೇಸ್ನಲ್ಲಿ ಪುಟಿನ್ ಮಲ, ಮೂತ್ರ ಸಾಗಿಸ್ತಾರಂತೆ ಅಂಗರಕ್ಷಕರು
ಮೂಲಗಳ ಪ್ರಕಾರ ಪುಟಿನ್ ಆರೋಗ್ಯ ಮತ್ತು ಕಾಯಿಲೆಗಳ ರಹಸ್ಯ ಮಾಹಿತಿಯನ್ನು ಜಗತ್ತಿನಿಂದ ಮರೆಮಾಚಲು ಈ ವಿಲಕ್ಷಣ ಅಭ್ಯಾಸವನ್ನು ನಡೆಸಲಾಗುತ್ತಿದೆಯಂತೆ. 2017ರಲ್ಲಿ ಫ್ರಾನ್ಸ್ ಪ್ರವಾಸದ ಸಮಯದಲ್ಲಿ ಈ ಚಟುವಟಿಕೆ ಗಮನಕ್ಕೆ ಬಂದಿತ್ತು. ಬಳಿಕ 2019 ರಲ್ಲಿ ಸೌದಿ ಅರೇಬಿಯಾ ಪ್ರವಾಸದ ಸಮಯದಲ್ಲೂ ಇದೇ ರೀತಿಯ ಸನ್ನಿವೇಶ ಕಂಡುಬಂದಿತ್ತು ಅಂತ ವರದಿಯಾಗಿದೆ. ಆದರೆ ಇದನ್ನ ರಷ್ಯಾ ಸರ್ಕಾರ ನಿರಾಕರಿಸಿತ್ತು. ಪುಟಿನ್ ಕುರಿತ ಕುರುಹುಗಳನ್ನು ಎಲ್ಲಿಯೂ ಬಿಡಬಾರದೆಂದು ಎಫ್‌ಎಸ್‌ಒ ಹೀಗೆ ಮಾಡ್ತಿದೆಯಂತೆ. ಸದ್ಯ ಇದರ ಸಾಕ್ಷಿ ಲಭ್ಯವಾಗಿರುವುದು ರಷ್ಯಾ ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ. ರಷ್ಯಾ ಕುರಿತು ಎರಡು ಪುಸ್ತಕ ಬರೆದಿರುವ ಲೇಖಕ ರೆಗಿಸ್ ಗೆಂಟೆ ಹಾಗೂ ಮಿಖಾಯಿಲ್ ರೂಬಿನ್ ಈ ಮಲ-ಮೂತ್ರ ರವಾನೆ ರಹಸ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಒಟ್ಟಾರೆ ಉಕ್ರೇನ್ ವಿರುದ್ಧ ಯುದ್ಧ ಸಾರಿದಾಗಿನಿಂದ ಪುಟಿನ್ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಅವರ ಆರೋಗ್ಯದ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಪುಟಿನ್ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಅಂತಾನೂ ಹೇಳಲಾಗ್ತಿದೆ. ಈ ನಡುವೆ ಈ ಮಲ-ಮೂತ್ರ ಸಂಗ್ರಹದ ವಿಲಕ್ಷಣ ಸುದ್ದಿ ಹೊರಬಿದ್ದಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post