ಕೇಂದ್ರ ಸರ್ಕಾರದ ಹೊಸ ಮಾದರಿಯ ಸೈನಿಕರ ದಾಖಲಾತಿ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಭುಗಿಲೆದ್ದಿವೆ. ನಾಲ್ಕು ವರ್ಷಗಳ ಗುತ್ತಿಗೆ ಆಧಾರದ ಮೇಲೆ ಸೈನಿಕರನ್ನು ಸಶಸ್ತ್ರ ಪಡೆಗಳಿಗೆ ನೇಮಕ ಮಾಡಿಕೊಳ್ಳುವ ಅಗ್ನಿಪಥ್ ಯೋಜನೆಯನ್ನ ರದ್ದುಗೊಳಿಸುವಂತೆ ಆಕ್ರೋಶದ ಜ್ವಾಲೆ ಧಗಧಗಿಸುತ್ತಿದೆ. ಈ ಬೆನ್ನಲ್ಲೇ ಸರ್ಕಾರ ಆಕ್ರೋಶವನ್ನು ತಣಿಸುವ ಕೆಲಸಕ್ಕೆ ಕೈ ಹಾಕಿದೆ.
ಗರಿಷ್ಠ ವಯೋಮಿತಿಯನ್ನು 21 ವರ್ಷದಿಂದ 23ಕ್ಕೆ ಹೆಚ್ಚಿಸಿದ ಕೇಂದ್ರ
ಸೇನಾ ನೇಮಕಾತಿ ಅಗ್ನಿಪಥ ಹೊಸ ಮಾದರಿ ಯೋಜನೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನೇಮಕಾತಿಯ ಗರಿಷ್ಠ ವಯೋಮಿತಿಯನ್ನ 21 ವರ್ಷದಿಂದ 23 ವರ್ಷಕ್ಕೆ ಕೇಂದ್ರ ಹೆಚ್ಚಿಸಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟೀಕರಣ ನೀಡಿದ್ದು, ಈ ಯೋಜನೆ ಸಶಸ್ತ್ರ ಪಡೆಗಳಲ್ಲಿ ಹೊಸ ಸಾಮರ್ಥ್ಯ ತುಂಬಲಿದೆ. ಮತ್ತು ಅಗ್ನಿಪಥ ಯೋಜನೆ ಮೂಲಕ ಸೇನೆಗೆ ಸೇರಿದ ಯುವಕರಿಗೆ ಖಾಸಗಿ ಕ್ಷೇತ್ರದಲ್ಲಿ ಅವಕಾಶಗಳನ್ನು ತಂದುಕೊಡಲಿದೆ. ಅದಲ್ಲದೆ, ನಾಲ್ಕು ವರ್ಷಗಳ ಬಳಿಕ ದೊರೆಯುವ ನಿಧಿಯಿಂದಾಗಿ ಅವರು ಉದ್ಯಮಿಗಳಾಗಿ ಬೆಳೆಯುವ ಸಾಧ್ಯತೆಯೂ ಇದೆ ಎಂದು ಸರ್ಕಾರ ಹೇಳಿದೆ.
ಅಗ್ನಿಪಥ್ಗೆ ವಿರೋಧ ಯಾಕೆ?
ಅಗ್ನಿಪಥ್ ಯೋಜನೆಯಡಿ ಕೇಂದ್ರ ಸರ್ಕಾರ, ಎಲ್ಲಾ ಹೊಸ ಸೇನಾ ನೇಮಕಾತಿಗಳ ಪ್ರವೇಶ ವಯಸ್ಸು 17ರಿಂದ 21 ವರ್ಷದೊಳಗಿರಬೇಕು ಎಂದು ಹೇಳಿತ್ತು. ಮಾತ್ರವಲ್ಲದೆ ಕಳೆದ ಎರಡು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಗಳು ನಡೆದಿರಲಿಲ್ಲ. ಹೀಗಾಗಿ ಸಿಬ್ಬಂದಿಯ ಸರಾಸರಿ ವಯಸ್ಸನಿನ ಮಿತಿಯನ್ನು ಕಡಿಮೆ ಮಾಡಲು ಮತ್ತು ಪಿಂಚಣಿ ವೆಚ್ಚವನ್ನು ಕಡಿಮೆ ಮಾಡಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದು ಉದ್ಯೋಗಾಂಕ್ಷಿಗಳು ಕೇಂದ್ರದ ವಿರುದ್ಧ ಸಿಡಿದೆದ್ದಿದ್ದರು.
ಬಿಹಾರದಲ್ಲಿ ರೈಲುಗಳಿಗೆ ಬೆಂಕಿ ಹಚ್ಚಿದ್ದ ಉದ್ರಿಕ್ತರು
ಬಿಹಾರದಿಂದ ಪ್ರಾರಂಭವಾದ ಪ್ರತಿಭಟನೆಯ ಕಿಚ್ಚು ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಜಾರ್ಖಂಡ್ ಮತ್ತು ದೆಹಲಿ ಸೇರಿದಂತೆ ಹಲವು ರಾಜ್ಯಗಳಿಗೂ ವ್ಯಾಪಿಸಿತ್ತು. ಬಿಹಾರದಲ್ಲಂತೂ ಉದ್ರಿಕ್ತ ಯುವಕರು ರೈಲುಗಳಿಗೆ ಬೆಂಕಿ ಹಚ್ಚಿದ್ದು ಸಾರ್ವಜನಿಕರು ಮತ್ತು ಪೊಲೀಸ್ ವಾಹನಗಳ ಮೇಲೆ ದಾಳಿ ನಡೆಸಿದ್ದರು. ಸಾರ್ವಜನಿಕ ಮತ್ತು ಖಾಸಗಿ ಆಸ್ತಿಯ ಮೇಲೆ ತಮ್ಮ ರೋಷಾವೇಶ ತೋರಿಸಿದ್ದರು. ನಾವಡದಲ್ಲಿ ನ್ಯಾಯಾಲಯಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕಿ ಅರುಣಾದೇವಿ ಮೇಲೆ ದಾಳಿ ನಡೆಸಿದ್ದರು. ಬಸ್‌ಗಳ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದು ಮಾತ್ರವಲ್ಲದೆ ದಾರಿಹೋಕರ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಇದನ್ನೂ ಓದಿ: ಯುವಕ-ಯುವತಿಯರಿಗೆ ಇಲ್ಲಿದೆ ಸುವರ್ಣ ಅವಕಾಶ – ರಾಜನಾಥ್ ಸಿಂಗ್ ಘೋಷಿಸಿದ ‘ಅಗ್ನಿಪಥ್’ ಯೋಜನೆ ಏನು..?
ಸದ್ಯ ದೇಶದೆಲ್ಲೆಡೆ ಯೋಜನೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದ್ದಂತೆ ಸರ್ಕಾರ ಎಚ್ಚೆತ್ತು ವಯೋಮಿತಿಯನ್ನ 21 ರಿಂದ 23 ವರ್ಷಕ್ಕೇರಿಸಿದೆ. ಈ ಮೂಲಕ ಯುವಕರ ಆಕ್ರೋಶವನ್ನ ಶಾಂತಗೊಳಿಸಲು ಮುಂದಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post