ಭಾರತ- ಸೌತ್ ಆಫ್ರಿಕಾ ನಡುವಿನ ಹೈವೋಲ್ಟೆಜ್ ಕದನಕ್ಕೆ ವೇದಿಕೆ ಸಜ್ಜಾಗಿದೆ. ಸಮಬಲಗೊಂಡಿರುವ ಸರಣಿಯ ವಿನ್ನರ್ ಯಾರು ಅನ್ನೋದು ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಿರ್ಧಾರವಾಗಲಿದೆ.
ಸತತ 2 ಹೀನಾಯ ಸೋಲು..! ಟೀಕೆಗಳು, ಟಿಪ್ಪಣಿಗಳು..! ಆಟಗಾರರ ಫಾರ್ಮ್ ಬಗ್ಗೆ ವಿಮರ್ಶೆ, ನಾಯಕನ ಸಾಮರ್ಥ್ಯದ ಬಗ್ಗೆ ಪ್ರಶ್ನೆ..! ಇವು ಮೊದಲ 2 ಪಂದ್ಯಗಳಲ್ಲಿ ಹೀನಾಯ ಸೋಲುಂಡ ಬಳಿಕ ಟೀಮ್ ಇಂಡಿಯಾ ಎದುರಿಸಿದ ಸವಾಲುಗಳು.
ದೆಹಲಿ ಹಾಗೂ ಕಟಕ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಎಲ್ಲರ ನಿರೀಕ್ಷೆ ಹುಸಿಗೊಳಿಸಿದ್ದು ಸುಳ್ಳಲ್ಲ.! ಆದ್ರೆ, ಅದೇ ತಂಡ ನಂತರದ 2 ಪಂದ್ಯಗಳಲ್ಲಿ ಫಿನಿಕ್ಸ್ನಂತೆ ಎದ್ದು ಬಂದು ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸಿದೆ. ಇದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದ್ದು, ಇಂದಿನ ಸರಣಿ ನಿರ್ಣಾಯಕ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ.
ಸರಣಿ ನಿರ್ಣಾಯಕ ಫೈಟ್ಗೆ ಚಿನ್ನಸ್ವಾಮಿ ಮೈದಾನ ಸಿದ್ಧ.!
ಇಂದಿನ ನಿರ್ಣಾಯಕ ಫೈಟ್ಗೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಸಕಲ ರೀತಿಯಲ್ಲೂ ಸಜ್ಜಾಗಿದೆ. ಪಂದ್ಯದ ಟಿಕೆಟ್ಸ್ ಸೋಲ್ಡ್ಡೌಟ್ ಆಗಿದ್ದು, ಸ್ಟೇಡಿಯಂ ಹೌಸ್ಫುಲ್ ಆಗೋದು ಪಕ್ಕಾ..! ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿದೆ.
ಗೆಲುವಿನ ಆತ್ಮ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ.!
ಕಳೆದ 2 ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಇಂದಿನ ಪಂದ್ಯವನ್ನೂ ಗೆದ್ದು ಬೀಗೋ ವಿಶ್ವಾಸದಲ್ಲಿದೆ. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ನೀಡ್ತಾ ಇರೋ ಡಾಮಿನೇಟಿಂಗ್ ಪರ್ಫಾಮೆನ್ಸ್ ಆಟಗಾರರಲ್ಲಿ ಕಾನ್ಪಿಡೆನ್ಸ್ ಲೆವೆಲ್ ಬೂಸ್ಟ್ ಮಾಡಿದೆ. ಹೀಗಾಗಿ ಇಂದಿನ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡೋದು ಅನುಮಾನವಾಗಿದೆ.
ಸತತ 2 ಪಂದ್ಯಗಳ ಗೆಲುವಿನ ಹೊರತಾಗಿಯೂ ಇನ್ಕನ್ಸಿಸ್ಟೆನ್ಸಿ ಟೀಮ್ ಇಂಡಿಯಾವನ್ನ ಕಾಡ್ತಿದೆ. 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಓಪನರ್ಸ್ ಸಖತ್ ಸ್ಟಾರ್ಟ್ ನೀಡಿದ್ರು. ಆದ್ರೆ, ಮಿಡಲ್ ಆರ್ಡರ್ನ ವೈಫಲ್ಯ ತಂಡವನ್ನ ಕಾಡಿತು. ಇನ್ನು, 4ನೇ ಟಿ20 ಪಂದ್ಯದಲ್ಲಿ ಓಪನರ್ಸ್ ನಿರೀಕ್ಷಿತ ಪರ್ಫಾಮೆನ್ಸ್ ನೀಡಲಿಲ್ಲ.
ಒಪನರ್ಸ್ ಜೊತೆಗೆ ಮಿಡಲ್ ಆರ್ಡರ್ ಕೂಡ ತಂಡದ ಮೈನಸ್ ಪಾಯಿಂಟ್ ಆಗಿದೆ. ತಂಡದಲ್ಲಿರೋ ಅನುಭವಿ ಶ್ರೇಯಸ್ ಅಯ್ಯರ್, ಬ್ಯಾಟ್ ಫುಲ್ ಸೈಲೆಂಟ್ ಆಗಿದೆ. ಇನ್ನು ನಾಯಕ ರಿಷಭ್ ಪಂತ್ ಇನ್ನೂ ಜವಾಬ್ದಾರಿಯನ್ನೇ ಅರಿತಿಲ್ಲ. ಸರಣಿಯುದ್ದಕ್ಕೂ ಅನಾವಶ್ಯಕ ಹೊಡತಕ್ಕೆ ಕೈ ಹಾಕಿ ಪೆವಿಲಿಯನ್ ಸೇರಿದ್ದಾರೆ. ಈ ಇಬ್ಬರು ಬಿಗ್ಸ್ಟಾರ್ಗಳು ಇಂದು ಪರ್ಫಾಮ್ ಮಾಡಬೇಕಿದೆ.
ತಿರುಗೇಟು ನೀಡೋ ಲೆಕ್ಕಾಚಾರದಲ್ಲಿ ಆಫ್ರಿಕನ್ ಪಡೆ.!
ಕಳೆದ 2 ಪಂದ್ಯಗಳಲ್ಲಿ ಸೋತ ಮಾತ್ರಕ್ಕೆ ಸೌತ್ ಆಫ್ರಿಕಾ ಪಡೆಯನ್ನ ಸುಲಭವಾಗಿ ಪರಿಗಣಿಸುವಂತಿಲ್ಲ. ಪ್ರವಾಸಿ ತಂಡದಲ್ಲೂ ಟಿ20 ಸ್ಪೆಷಲಿಸ್ಟ್ಗಳ ದಂಡೇ ಇದೆ. ಜೊತೆಗೆ ಆಟಗಾರರು ಕೂಡ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಕ್ವಿಂಟನ್ ಡಿ ಕಾಕ್, ವ್ಯಾನ್ ಡರ್ ಡುಸೆನ್, ಡೇವಿಡ್ ಮಿಲ್ಲರ್ ಬ್ಯಾಟಿಂಗ್ನಲ್ಲಿ ತಂಡದ ಮ್ಯಾಚ್ ವಿನ್ನರ್ಸ್.! ಇನ್ನು ಮಾರ್ಕೋ ಯಾನ್ಸೆನ್, ಎನ್ರಿಚ್ ನೋಕಿಯಾ, ಲುಂಗಿ ಎನ್ಗಿಡಿ ಒಳಗೊಂಡ ಬೌಲಿಂಗ್ ಅಟ್ಯಾಕ್ ಕೂಡ ಅಷ್ಟೇ ಡೇಂಜರಸ್.
ಒಟ್ಟಿನಲ್ಲಿ, ಪಂದ್ಯ ಹೈವೋಲ್ಟೆಜ್ ಸ್ವರೂಪ ಪಡೆದುಕೊಂಡಿರೋದ್ರಿಂದ ಅಭಿಮಾನಿಗಳಿಗಂತೂ ಇವತ್ತು ಸಖತ್ ಟ್ರೀಟ್ ಕಾದಿದೆ. ಆದ್ರೆ, ಮಳೆ ಬಂದು ನಿರೀಕ್ಷೆಯನ್ನ ಹುಸಿಗೊಳಿಸದೇ ಇರಲಿ ಅನ್ನೋದೆ ಎಲ್ಲರ ಪ್ರಾರ್ಥನೆಯಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post