ಮಹಾರಾಷ್ಟ್ರದ ಮಹಾ ಅಘಾಡಿ ಸರ್ಕಾರದ ಬುಡ ಅಲ್ಲಾಡ್ತಿದೆ. ರೆಬೆಲ್ಸ್ ಶಾಸಕರ ಸಮರದಿಂದ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪತನದ ಅಂಚಿಗೆ ತಲುಪಿದೆ. ತಮ್ಮ ಬೇಡಿಕೆ ಬಗ್ಗೆ ಅಚಲವಾಗಿರೋ ಬಂಡಾಯ ಶಾಸಕರು ಪಟ್ಟು ಬಿಡದೆ ಅಘಾಡಿ ಸರ್ಕಾರಕ್ಕೆ ಆಘಾತ ಕೊಟ್ಟಿದ್ದಾರೆ. ಈ ಮಧ್ಯೆ ಉದ್ಧವ್ ಠಾಕ್ರೆ ಸರ್ಕಾರಿ ನಿವಾಸ ತೊರೆದಿರೋದು ಮಹಾ ಸರ್ಕಾರ ಪತನದ ಬಗ್ಗೆ ಸುಳಿವು ಕೊಟ್ಟಂತಾಗಿದೆ.
ದೇಶದ ಅತಿದೊಡ್ಡ ರಾಜ್ಯಗಳ ಪೈಕಿ ಒಂದಾಗಿರೋ ಮಾಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಬಿಜೆಪಿಗೆ ಸೆಡ್ಡು ಹೊಡೆದು ಎನ್‌ಸಿಪಿ, ಕಾಂಗ್ರೆಸ್ ಜೊತೆಗೂಡಿ ಮೈತ್ರಿ ಸರ್ಕಾರ ರಚಿಸಿರೋ ಉದ್ಧವ್ ಠಾಕ್ರೆ ಕುರ್ಚಿ ಅಲುಗಾಡ್ತಿದೆ. ಉದ್ಧವ್ ಠಾಕ್ರೆ ನಾಯಕತ್ವದ ವಿರುದ್ಧ ಬಂಡೆದ್ದಿರೋ ಏಕನಾಥ್ ಶಿಂಧೆ ನೇತೃತ್ವದ ರೆಬೆಲ್ಸ್ ಶಾಸಕರಿಂದಲೇ ಸರ್ಕಾರ ಪತನದ ಅಂಚಿಗೆ ತಲುಪಿದೆ.
ಸರ್ಕಾರಿ ನಿವಾಸದಿಂದ ಖಾಸಗಿ ನಿವಾಸಕ್ಕೆ ಠಾಕ್ರೆ ಶಿಫ್ಟ್!
ಮಹಾ ಸರ್ಕಾರಕ್ಕೆ ಏಕನಾಥ್ ಶಿಂಧೆಯ ಬಂಡಾಯದ ಬಿಸಿ ಜೋರಾಗೆ ತಟ್ಟಿದೆ. ಸಿಎಂ ಉದ್ಧವ್ ಠಾಕ್ರೆ ಸರ್ಕಾರಕ್ಕೆ ರೆಬೆಲ್ ಶಾಸಕರು ಟೈ ಬಾಂಬ್ ಫಿಕ್ಸ್ ಮಾಡಿ ಗುವಾಹಟಿಯ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಮಧ್ಯೆ ಸರ್ಕಾರವನ್ನ ಉಳಿಸಿಕೊಳ್ಳಲು ಸಾಧ್ಯವಾಗದೇ ಸಿಎಂ ಉದ್ಧವ್ ಠಾಕ್ರೆ ಒದ್ದಾಡುತ್ತಿದ್ದಾರೆ. ಈ ಮಧ್ಯೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಅಂತಾಲೂ ಹೇಳಿಕೆಕೊಟ್ಟಿದ್ದಾರೆ. ಈ ಹೇಳಿಕೆಯ ಬೆನ್ನಲ್ಲೇ ತಮ್ಮ ಸರ್ಕಾರಿ ನಿವಾಸ ವರ್ಷಾದಿಂದ ಸಿಎಂ ಉದ್ಧವ್ ಠಾಕ್ರೆ ನಿರ್ಗಮಿಸಿದ್ದಾರೆ.
ರಾಜೀನಾಮೆ ನೀಡ್ತಾರಾ ಠಾಕ್ರೆ?
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಮ್ಮ ಸರ್ಕಾರಿ ನಿವಾಸ ‘ವರ್ಷಾ’ದಿಂದ ನಿರ್ಗಮಿಸಿದ್ದಾರೆ. ಮುಂಬೈನಲ್ಲಿರುವ ‘ವರ್ಷಾ’ ಬಂಗಲೆ ತೊರೆದು, ತಮ್ಮ ಖಾಸಗಿ ನಿವಾಸ ಮಾತೋಶ್ರೀಗೆ ಉದ್ಧವ್ ಠಾಕ್ರೆ ಶಿಫ್ಟ್ ಆಗಿದ್ದಾರೆ. ಪತ್ನಿ, ಮಕ್ಕಳೊಂದಿಗೆ ಖಾಸಗಿ ಮನೆಗೆ ಉದ್ಧವ್ ಸ್ಥಳಾಂತರಗೊಂಡಿದ್ದಾರೆ. ಇನ್ನೂ ಲಗೇಜ್ ಸಮೇತ ಸರ್ಕಾರಿ ನಿವಾಸದಿಂದ ಸಿಎಂ ಉದ್ಧವ್ ಠಾಕ್ರೆ ಶಿಫ್ಟ್ ಆಗಿದ್ದಾರೆ. ಈ ಮೂಲಕ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಉದ್ಧವ್ ಠಾಕ್ರೆ ಸುಳಿವು ಕೊಟ್ರಾ ಎಂಬ ಚರ್ಚೆಯೂ ಶುರುವಾಗಿದೆ.
ಉದ್ಧವ್ ಠಾಕ್ರೆ ಸರ್ಕಾರಿ ನಿವಾಸದಿಂದ ನಿರ್ಗಮಿಸುವಾಗ ಜನಸಾಗರವೇ ನೆರೆದಿತ್ತು. ಶಿವಸೇನೆಯ ನೂರಾರು ಕಾರ್ಯಕರ್ತರು, ಉದ್ಧವ್ ಠಾಕ್ರೆಯ ಬೆಂಬಲಿಗರು ಮಾತೋಶ್ರೀ ಮುಂದೆ ಜಮಾಯಿಸಿದ್ರು. ವರ್ಷಾ ತೊರೆದು ಬಂಜ ಠಾಕ್ರೆ ಕುಟುಂಬದ ಪರ ಜೈಕಾರವನ್ನ ಮೊಳಗಿಸಿದ್ರು. ಉದ್ಧವ್ ಠಾಕ್ರೆ ಪುತ್ರ, ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಕೂಡಾ ತಮ್ಮ ಖಾಸಗಿ ನಿವಾಸ ಮತೊಶ್ರೀಗೆ ತೆರಳಿದ್ದಾರೆ. ಈ ವೇಳೆ ಠಾಕ್ರೆ ಕುಟುಂಬಕ್ಕೆ ಕಾರ್ಯಕರ್ತರ ಅಪಾರ ಬೆಂಬಲ ಸಿಕ್ಕಿದೆ.
ಸಿಎಂ ಉದ್ಧವ್ ಠಾಕ್ರೆ ವಿರುದ್ಧ ದೂರು ದಾಖಲು
ರಾಜಕೀಯ ಕ್ಷಿಪ್ರ ಕ್ರಾಂತಿಯ ನಡುವೆಯೇ ಸಿಎಂ ಉದ್ಧವ್ ಠಾಕ್ರೆಗೆ ಕೋವಿಡ್ ಸೋಂಕು ತಗುಲಿದೆ. ಈ ಮಧ್ಯೆಯೇ ನೂರಾರು ಕಾರ್ಯಕರ್ತರ ಮಧ್ಯೆ ಕಾಣಿಸಿಕೊಂಡಿದ್ದ ಠಾಕ್ರೆ ವಿರುದ್ಧ ಕೇಸ್ ದಾಖಲಾಗಿದೆ. ಕೊರೊನಾ ನಿಯಮಗಳನ್ನ ಠಾಕ್ರೆ ಉಲ್ಲಂಘಿಸಿದ್ದಾರೆ ಅಂತಾ ಬಿಜೆಪಿ ಯೂತ್ ನ್ಯಾಶನಲ್ ಸೆಕ್ರೆಟರಿ ತಜಿಂದರ್ ಪಾಲ್ ಸಿಂಗ್ ಬಗ್ಗಾ ಮುಂಬೈನ ಮಲಬಾರ್ ಹಿಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಹಾ ಅಘಾಡಿಗೆ ಕೈಕೊಟ್ಟ ಮತ್ತೆ ಆರು ಶಾಸಕರು
ಈಗಾಗಲೇ ಬಂಡಾಯಗಾರ ಏಕನಾಥ್ ಶಿಂಧೆ ಜೊತೆ 40 ಶಾಸಕರು ಅಸ್ಸಾಂಗೆ ತೆರಳಿದ್ದಾರೆ. ಗುವಾಹಟಿಯ ಱಡಿಸನ್ ಬ್ಲ್ಯೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಮಧ್ಯೆ ಮತ್ತೆ 6 ಶಿವಸೇನಾ ಶಾಸಕರು ಗುವಾಹಟಿಯನ್ನ ತಲುಪಿದ್ದಾರೆ. ಮೈತ್ರಿ ಸರ್ಕಾರವನ್ನ ತೊರೆದು ಏಕನಾಥ್ ಶಿಂಧೆಗೆ ಬೆಂಬಲವನ್ನ ನೀಡಿದ್ದಾರೆ. ಈ ಮೂಲಕ ಉದ್ಧವ್ ಠಾಕ್ರೆ ಸರ್ಕಾರ ಸಂಪೂರ್ಣ ಅಧಃಪತನಕ್ಕೆ ತಲುಪಿದಂತಾಗಿದೆ.
ಒಟ್ಟಾರೆ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ಸಂಪೂರ್ಣ ನೆಲಕಚ್ಚಿದೆ. ಕಾಂಗ್ರೆಸ್, ಎನ್‌ಸಿಪಿ ಜೊತೆ ಸರ್ಕಾರ ರಚಿಸಿದ್ದ ಉದ್ಧವ್ ಠಾಕ್ರೆಗೆ ಭಾರೀ ಹಿನ್ನಡೆಯಾಗಿದೆ. ಸದ್ಯ ಕಾಂಗ್ರೆಸ್, ಎನ್‌ಸಿಪಿ ಜೊತೆಗಿನ ಅಸಹಜ ಮೈತ್ರಿ ತೊರೆದ್ರೆ ಮಾತ್ರ ಠಾಕ್ರೆಗೆ ನಮ್ಮ ಬೆಂಬಲ ಅಂತಾ ಏಕನಾಥ್ ಶಿಂಧೆ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಜೊತೆಗೆ ಶಿವಸೇನೆ ಕೈ ಜೋಡಿಸಲಿ ಅನ್ನೋ ಪರೋಕ್ಷ ಸಂದೇಶವನ್ನೂ ರವಾನಿಸಿದ್ದಾರೆ. ಇದು ಮಹಾರಾಷ್ಟ್ರದಲ್ಲೂ ಆಪರೇಷನ್ ಕಮಲ ಫುಲ್ ವರ್ಕೌಟ್ ಆಗ್ತಿದೆ ಎಂಬ ಕುರುಹುಗಳನ್ನ ತೋರಿಸಿಕೊಟ್ಟಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post