ಇಂಗ್ಲೆಂಡ್ ತಂಡಕ್ಕೆ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಇಯಾನ್ ಮಾರ್ಗನ್ ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಘೋಷಿಸಿದ್ದಾರೆ. ಆ ಮೂಲಕ ಹಲವು ದಿನಗಳಿಂದ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಏಕದಿನ ಮತ್ತು ಟಿ20 ನಾಯಕ ಮಾರ್ಗನ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಖಚಿತಪಡಿಸಿದೆ.
ಕಳಪೆ ಫಾರ್ಮ್ ಮತ್ತು ಪದೆಪದೇ ಇಂಜುರಿಗೆ ಒಳಗಾಗುತ್ತಿದ್ದ ಕಾರಣ ವಿಶ್ವಕಪ್ ಹೀರೋ, ನಿವೃತ್ತಿ ಪಡೆದಿದ್ದಾರೆ. ಏಕದಿನ ಮತ್ತು ಟಿ20 ತಂಡದ ಕ್ಯಾಪ್ಟನ್ ಆಗಿದ್ದ ಮಾರ್ಗನ್, ಇಂಗ್ಲೀಷ್ ಕ್ರಿಕೆಟ್ ಅನ್ನೇ ಬದಲಾಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಇಸಿಬಿ, THANK YOU MORGAN ಎಂದು ಹೇಳಿದೆ.
ಎಲ್ಲರಿಗೂ ಧನ್ಯವಾದ ಎಂದ ಮಾರ್ಗನ್
ನನ್ನ ವೃತ್ತಿಜೀವನ ಅತ್ಯಂತ ಆನಂದದಾಯಕವಾಗಿತ್ತು. ನಿವೃತ್ತಿ ನಿರ್ಧಾರ ಸುಲಭಕ್ಕೆ ತೆಗೆದುಕೊಳ್ಳುವಂಥದಲ್ಲ. ಆದರೆ ಇದೇ ಸರಿಯಾದ ಸಮಯ. ನನ್ನ ವೃತ್ತಿಜೀವನದ ಯಶಸ್ಸಿಗೆ ಕಾರಣರಾದ ತಂಡದ ಆಟಗಾರರು, ಕೋಚ್ಗಳಿಗೆ, ಕುಟುಂಬ ಸದಸ್ಯರು ಮತ್ತು ಪ್ರೇಕ್ಷಕರಿಗೆ ನಾನು ಧನ್ಯವಾದ ಹೇಳಲೇಬೇಕು. ಏಕಂದ್ರೆ ಅವರೇ ಇಲ್ಲದಿದ್ದರೆ, ಇಂದು ನಾನು ಏನೂ ಅಲ್ಲ. ಅವರನ್ನೂ ಎಂದಿಗೂ ಮರೆಯಲ್ಲ. ಸದಾ ನೆನಪಿಸಿಕೊಳ್ಳುತ್ತೇನೆ ಎಂದು ತಮ್ಮ ವಿದಾಯದ ನುಡಿಗಳನ್ನು ಹೇಳಿದ್ದಾರೆ ಮಾರ್ಗನ್.
ಬಟ್ಲರ್ಗೆ ನಾಯಕತ್ವ ಸಾಧ್ಯತೆ.?
ಮಾರ್ಗನ್ ನಿವೃತ್ತಿಯ ಬಳಿಕ ಸೀಮಿತ ಓವರ್ಗಳಿಗೆ ನಾಯಕನನ್ನಾಗಿ ಜೋಸ್ ಬಟ್ಲರ್ರನ್ನು ನೇಮಿಸುವ ಸಾಧ್ಯತೆ ಇದೆ. ಏಕೆಂದರೆ ಅವರೇ ಈಗ ಏಕದಿನ ಮತ್ತು ಟಿ20 ತಂಡದ ಉಪನಾಯಕ. ಈ ಹಿಂದೆ ಮಾರ್ಗನ್ ಅಲಭ್ಯತೆಯಲ್ಲಿ ಬಟ್ಲರ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಅವರಿಗೇ ಪಟ್ಟ ಕಟ್ಟೋದು ಖಚಿತ ಎನ್ನಲಾಗ್ತಿದೆ. ಮಾರ್ಗನ್, ಅಲೆಸ್ಟರ್ ಕುಕ್ ಅವರಿಂದ ನಾಯಕತ್ವ ಪಡೆದಿದ್ದರು.
ಮಾರ್ಗನ್ ವೃತ್ತಿ ಜೀವನ
ಇಯಾನ್ ಮಾರ್ಗನ್ ನಾಯಕತ್ವದಲ್ಲಿ ಅಲ್ಲದೆ, ಬ್ಯಾಟಿಂಗ್ನಲ್ಲೂ ಅಪಾರ ಸಾಧನೆ ಮಾಡಿದ್ದಾರೆ. ಮಾರ್ಗನ್ ಒಟ್ಟು 16 ಟೆಸ್ಟ್ ಪಂದ್ಯಗಳನ್ನಾಡಿದ್ದು, 2 ಶತಕ, 3 ಅರ್ಧಶತಕಗಳ ನೆರವಿನಿಂದ 700 ರನ್ ಕಲೆಹಾಕಿದ್ದಾರೆ. 2010ರಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದ ಅವರು, 2012ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.
ಏಕದಿನ ಕ್ರಿಕೆಟ್ನಲ್ಲಿ 248 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 39.29ರ ಸರಾಸರಿಯಲ್ಲಿ 7701 ರನ್ ಸಿಡಿಸಿದ್ದಾರೆ. 14 ಶತಕ, 47 ಅರ್ಧಶತಕ ಬಾರಿಸಿದ್ದಾರೆ. 2006ರಲ್ಲಿ ಏಕದಿನ ಕ್ರಿಕೆಟ್ಗೆ ಡೆಬ್ಯೂ ಮಾಡಿದ್ದ ಇಂಗ್ಲೀಷ್ ನಾಯಕ ಇದೇ ತಿಂಗಳು ನೆದರ್ಲೆಂಡ್ ವಿರುದ್ಧ (ಜೂನ್ 19, 2022) ಕೊನೆಯದಾಗಿ ಆಡಿದ್ದರು.
ಇನ್ನೂ ಚುಟುಕು ಕ್ರಿಕೆಟ್ನಲ್ಲೂ ಅಪಾರ ಸಾಧನೆ ಮಾಡಿರುವ ಮಾರ್ಗನ್ 115 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ ಸಾಧನೆ ಮಾಡಿದ್ದಾರೆ. ಒಟ್ಟು 14 ಅರ್ಧಶತಕಗಳನ್ನು ಸಿಡಿಸಿದ್ದು, 2458 ರನ್ಗಳನ್ನು ಟಿ20 ಕ್ರಿಕೆಟ್ನಲ್ಲಿ ದಾಖಲಿಸಿದ್ದಾರೆ. 2009ರಲ್ಲಿ ಟಿ20ಗೆ ಪದಾರ್ಪಣೆ ಮಾಡಿದ್ದ ಮಾರ್ಗನ್, 2022ರ ಜನವರಿಯಲ್ಲಿ ತಮ್ಮ ಕೊನೆಯ ಟಿ20 ಆಡಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post