ನಮ್ಮದು ರೈತ ಚಳವಳಿಗೆ ಹೆಸರಾದ ನಾಡು. ಕನ್ನಡ ನೆಲದ ರೈತ ಚಳುವಳಿ ಅಂದ್ರೆ ಬೆಂಕಿ. ಬೆಂಕಿ ಇದ್ದಂತೆ ಅನ್ನೋ ಕಾಲ ಒಂದಿತ್ತು. ಒಂದು ಬಾರಿ ಕಿಡಿ ಹೊತ್ತಿಕೊಳ್ತು ಅಂದ್ರೆ ಸತ್ತ ವ್ಯವಸ್ಥೆಯನ್ನ ಭಸ್ಮ ಮಾಡಬಲ್ಲ ತಾಕತ್ತು ಅಂದಿನ ಹೋರಾಟಗಾರರಿಗಿತ್ತು. ಅದೆಷ್ಟೋ ಬಾರಿ ಆಡಳಿತವನ್ನೇ ಅಲುಗಾಡಿಸಿದ ಇತಿಹಾಸ ನಮ್ಮ ರೈತ ಹೋರಾಟಗಾರರದ್ದು. ಆದ್ರೆ ಹಸಿರು ಶಾಲು ಹಾಕಿಕೊಂಡು ಫೋಸು ಕೊಡ್ತಿರೋ ಇವತ್ತಿನ ರೈತ ಚಳವಳಿಗಾರರು ಮಾಡ್ತಿರೋದೇನು? ಅದರದ್ದೊಂದು ತಾಜಾ ಉದಾಹರಣೆಯನ್ನ ನ್ಯೂಸ್‌ಫಸ್ಟ್ ಬಿಚ್ಚಿಟ್ಟಿದೆ. ನಕಲಿ ರೈತ ಹೋರಾಟಗಾತಿಯ ಅಸಲಿ ಮುಖವನ್ನ ಬಯಲು ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲೂ ಅಕ್ಕಾ ಬಾಂಡ್..!
ಉತ್ತರ ಕರ್ನಾಟಕ ರೈತ ಹೋರಾಟಗಾರ್ತಿ ಮಂಜುಳಾ ಪೂಜಾರ್ ಬಗ್ಗೆ ಎಲ್ಲರಿಗೂ ಪರಿಚಿತ. ಕೇಂದ್ರ ಸರಕಾರ ಜಾರಿಗೆ ತಂದಿದ್ದ ಕೃಷಿ ವಿಧೇಯಕಗಳ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿದ್ದ ಹೋರಾಟದಲ್ಲಿ ಮಂಜುಳಾ ಪೂಜಾರದ್ದು ದೊಡ್ಡಧ್ವನಿ. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ರಾಜ್ಯದ ಸಿಎಂವರೆಗೆ ಯಾರನ್ನೂ ಬಿಡದೇ ಉಗಿದು ಉಪ್ಪಿನಕಾಯಿ ಹಾಕಿದ್ದ ಸ್ಫೋಟಕ ಮಾತುಗಾರ್ತಿ. ಕೇವಲ ರೈತ ಹೋರಾಟದಲ್ಲಷ್ಟೇ ಆಕೆ ಹೆಸರಾಗಿರೋದಲ್ಲ. ಸೋಷಿಯಲ್ ಮೀಡಿಯಾ ರೀಲ್ಸ್‌ಗಳಲ್ಲೂ ಈಕೆಯೇ ಅಕ್ಕಾ ಬಾಂಡ್.
ಹಾವೇರಿ ಜಿಲ್ಲೆ, ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ಕೊಟ್ಟ ಜಿಲ್ಲೆ ಅಷ್ಟೇ ಅಲ್ಲಾ ಕೃಷಿ ಸಚಿವರೂ ಕೂಡಾ ಇದೇ ಹಾವೇರಿ ಜಿಲ್ಲೆಯವರು. ಹೀಗಾಗಿ ಈ ಭಾಗದ ರೈತರ ಕಣ್ಣೀರು ಕಪಾಳಕ್ಕಿಳಿಯುತ್ತಿದೆ. ಹಾವೇರಿ ಜಿಲ್ಲೆಯ ರೈತರ ಸಂಕಷ್ಟ ಕೇಳೋಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಟೈಮಿಲ್ಲ. ಕೃಷಿ ಸಚಿವ ಬಿ ಸಿ ಪಾಟೀಲರಿಗೂ ಪುರಸೊತ್ತಿಲ್ಲ. ಅಷ್ಟಕ್ಕೂ ಏನಾಗಿದೆ ಅಂದ್ರೆ ಹಾವೇರಿ ತಾಲೂಕಿನ ಸುತ್ತಮುತ್ತಲಿನ ಗುತ್ತಲ, ಹಾವನೂರು, ಕೆಂಚಾರಗಟ್ಟಿ, ಬಸಾಪುರ, ಹೊಸರಿತ್ತಿ, ಹಳೇ ರಿತ್ತಿ ಬೆಳವಿಗಿ ಸೇರಿದಂತೆ ಹಲವು ಗ್ರಾಮಗಳ ನೂರಾರು ಜನ ರೈತರು 500ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆದಿದ್ದರು. ಜೆಕೆ ಕಂಪನಿಯ ನಫಾ ಹಾಗೂ ಬೋಲ್ಗಾರ್ಡ್ ಕಂಪನಿಯ ಬಯೋಸೀಡ್ 6188 ಬೀಜಗಳನ್ನು ಬೇಸಿಗೆ ಸಂದರ್ಭದಲ್ಲಿ ಬಿತ್ತನೆ ಮಾಡಲಾಗಿದೆ. ಎದೆ ಎತ್ತರಕ್ಕೆ ಬೆಳೆ ಬೆಳೆದು ನಿಂತಿದ್ದರೂ ಹತ್ತಿ ಕಾಯಿ ಬಿಡುತ್ತಿಲ್ಲ. ಕಾಯಿ ಬಿಟ್ಟರೂ ಹತ್ತಿ ತೊಳೆಯಾಗಿ ಸಿಕ್ಕುತ್ತಿಲ್ಲ. ಇದರಿಂದಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ಎಕರೆಗೆ 20-30 ಸಾವಿರ ರೂಪಾಯಿ ಹತ್ತಿ ಬೆಳೆಯಲು ಖರ್ಚು ಮಾಡಿರುವ ರೈತರಿಗೆ ಹಾಕಿದ ಬಂಡವಾಳವೂ ಕೈಗೆ ಬರುತ್ತಿಲ್ಲ. ಇದೆಕ್ಕೆಲ್ಲ ನಕಲಿ ಬೀಜಗಳೇ ಕಾರಣ ಅನ್ನೋದು ರೈತರ ಆರೋಪ.
ರೈತರಿಗಾದ ಈ ಅನ್ಯಾಯ, ರೈತರ ಸಂಕಷ್ಟದ ಕುರಿತು ನ್ಯೂಸ್ ಫಸ್ಟ್ ವರದಿ ಬಿತ್ತರಿಸಿತ್ತು. ಇಂಥದೇ ಟೈಮ್‌ನಲ್ಲಿ ರೈತರ ದುಸ್ಥಿತಿಯನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಮಾಹಿತಿ ಕೂಡ ನ್ಯೂಸ್ ಫಸ್ಟ್‌ಗೆ ಸಿಕ್ಕಿತ್ತು. ರೈತರಿಗೆ ಮೋಸ ಮಾಡ್ತಿರೋದು ಯಾರು ಅನ್ನೋದನ್ನ ಕೆದಕಿದಾಗ ಗೊತ್ತಾಗಿದ್ದು ಆಘಾತಕಾರಿ ಸಂಗತಿ. ರೈತರಿಗೆ ಮಕ್ಮಲ್ ಟೋಪಿ ಹಾಕಿ, ರೈತರ ಹೆಸರಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳೋದಕ್ಕೆ ಸಂಚು ರೂಪಿಸ್ತಿರೋದು ಯಾರು ಅಂತಾ ವಿಚಾರಿಸಿದ್ರೆ ಕೇಳಿ ಬಂದದ್ದು. ಇದೇ ರೈತ ಹೋರಾಟಗಾರ್ತಿ, ರೀಲ್ಸ್ ರಾಣಿ ಮಂಜುಳಾ ಪೂಜಾರ್ ಹೆಸರು.
ಮಂಜುಳಾ ಪೂಜಾರ್ ಅನ್ನೋ ಹೋರಾಟಗಾರ್ತಿಯ ಬಗ್ಗೆ ಇಲ್ಲಿನ ಬೆಳಗಾರರಿಗೂ ಗೊತ್ತಿತ್ತು. ಆದ್ರೆ ಮಂಜುಳಾ ಪೂಜಾರ್ ಸುಮ್ಮನೆ ಹೋರಾಟ, ಧರಣಿ ರಸ್ತೆ ತಡೆ ಮಾಡೋದಿಲ್ಲ ಅನ್ನೋದು ಗೊತ್ತಿರಲಿಲ್ಲ ಅಷ್ಟೇ. ಅಸಲಿಗೆ ಮಂಜುಳಾ ಪೂಜಾರ್ ಮಾಡುವ ಪ್ರತಿ ಹೋರಾಟದಲ್ಲೂ ತಂತ್ರ ಇರುತ್ತೆ. ಕುತಂತ್ರವೂ ಇರುತ್ತೆ. ರೈತರ ಹೆಸರಲ್ಲಿ ದುಡ್ಡು ಮಾಡುವ ಪ್ಲ್ಯಾನ್ ಕೂಡ ಅಡಗಿರುತ್ತೆ. ನಕಲಿ ಬೀಜದ ವಿಷಯದಲ್ಲಿ ಏನೆಲ್ಲಾ ಖರ್ತನಾಕ್ ಪ್ಲ್ಯಾನ್ ಹೆಣೆದಿದ್ದಳು ಅನ್ನೋದನ್ನ ನ್ಯೂಸ್‌ಫಸ್ಟ್ ಬಯಲಿಗೆಳೆದಿದೆ.
ಜೂನ್ 11 ಸಂಜೆ 5 ಗಂಟೆ. ರಾಣೇಬೆನ್ನೂರಿನ ಹೊಟೆಲ್ಲೊಂದರಲ್ಲಿ ರೈತ ಹೋರಾಟಗಾರ್ತಿ ಮಂಜುಳಾ ಪೂಜಾರ್ ಭೇಟಿಯಾಗಿದ್ಲು. ಅಕ್ಕಾ ಹಾವನೂರಿನ ಭಾಗದ ರೈತರು ಹತ್ತಿ ಬೀಜ ಬಿತ್ತಿ ಹಾಳಾಗಿ ಹೋಗಿವೆ, ನೀವೇ ನಮಗೆ ದಾರಿ ತೋರಿಸಬೇಕು. ನಮಗೆಲ್ಲ ಪರಿಹಾರ ಸಿಕ್ಕೋಹಾಗೆ ಮಾಡಬೇಕು ಎಂದು ಕೇಳಿಕೊಂಡಿದ್ವಿ ಅಷ್ಟೇ. ಬಕ್ರಾ ಹುಡ್ಕೊಂಡು ಬಂದೈತೆ ಅಂತ ಟೇಬಲ್‌ಗೆ ಬಂದಿದ್ದ ಬೋಂಡಾ ಬಾಯಿಗೆ ಹಾಕ್ಕೊಂಡೇ ಮಾತು ಆರಂಭಿಸಿದ್ದರು.
ಆಸಂದರ್ಭದಲ್ಲಿ ನಡೆದ ಮಾತುಕತೆ ಹೀಗಿತ್ತು..?
ನ್ಯೂಸ್‌ಫಸ್ಟ್: ಈಗ 1 ಕೋಟಿ ರೂಪಾಯಿ ಆಗ್ತೈತ್ರಿ, 20 ಸಾವಿರ ರೂಪಾಯಿದಂಗ ಅಂತ ಅಂದ್ರ.
ಮಂಜುಳಾ: ಒಂದ್ ಕೊಟ್ಯಾ..! ಒಂದ್ ಕೊಟ್ಯಾ..!
ನ್ಯೂಸ್‌ಫಸ್ಟ್: ಹೌದ್ರಿ..
ಮಂಜುಳಾ: ಮತ್ತ ಹಣಮಂತಣ್ಣ ತಪ್ಪ ಬರದೇನ..?
ನ್ಯೂಸ್‌ಫಸ್ಟ್: ಹಂ ತಪ್ಪ, ನಾ ಅದನ್ನ ಸುಮ್ನ ಆದೇ. ನಾ ಫಸ್ಟ್ಗೆ ಹೇಳಿದೆ 75 ಲಕ್ಷ ಆಗ್ತೈತಿ.
ಮಂಜುಳಾ: ಎಷ್ಟರ ಚಾಲಾಕ್ ಅದಾನ್ ಅವನು.
ನ್ಯೂಸ್‌ಫಸ್ಟ್: 75 ಲಕ್ಷ ಆಗ್ತೈತಿ ಅಂತ ಹೇಳಿದೆ, ಅವರು 7.5 ಲಕ್ಷ ಅಂದ್ರು ಅದಕ್ಕ ನಾ ಸುಮ್ನ ಕುತ್ಕೊಂಬಿಟ್ಟೆ ಬ್ಯಾಡ ತಡಿರಿ ಅಂತ ಹೇಳಿ.
ಮಂಜುಳಾ: ನನಗ್ ಗೊತ್ತಾಯ್ತು, ಎದಕ್ಕ ಹಂಗ್ ಮಾತಾಡಿದೆ ಹೇಳ್ ನಿನಗ ಅಣ್ಣಾ.
ನ್ಯೂಸ್‌ಫಸ್ಟ್: ಅದಕ್ಕರಿ..
ಮಂಜುಳಾ: ಸುಮ್ನ ಅದಕ್ಕ ಬರ್ರಿ ಸರ್, ಫೋನ್ ನಂಬರ್ ಇಟ್ಕೋಂಡಿಯಲ್ಲ ಅಷ್ಟೇ.
ಹತ್ತಿ ಬೀಜದಿಂದ ಹತ್ತಿಯಂತೂ ಬಂದಿರಲಿಲ್ಲ. ಕಂಪನಿಯವರು ಅದೇನು ಹಾಳು ಬೀಜಕೊಟ್ಟಿದ್ದರೋ ಏನ್ ಕತೆನೋ.. ಅದಕ್ಕೆ ಪ್ರತಿಯಾಗಿ ಕಂಪನಿಯಿಂದ ಪರಿಹಾರ ಕೊಡಿಸಬೇಕು ಅನ್ನೋದು ರೈತರ ಬೇಡಿಕೆಯಾಗಿತ್ತು. ಅದನ್ನೇ ಲೆಕ್ಕ ತಗೊಂಡ ಮಂಜುಳಾಗೆ 1 ಕೋಟಿ ಪರಿಹಾರ ಕೇಳಬಹುದು ಅನ್ನೋ ಅಂದಾಜು ಸಿಕ್ಕಿದೆ.
ನ್ಯೂಸ್‌ಫಸ್ಟ್: ಅದಕ್ಕ ಬಂದೆ, ನೋಡ್ರಿ 1 ಕೋಟಿ ರೂಪಾಯಿ ಆಗ್ತದ ಹೌದಿಲ್ರಿ, ನಾನೇನ್ ನಿಮಗ ಇದು ಇಲ್ಲ ಏನಿಲ್ಲ ಹೌದ್ರಾ. 20 ಸಾವಿರ ರೂಪಾಯಿದಂಗ 1 ಕೋಟಿ ರೂಪಾಯಿ ಆಗತೈತ್ರಿ.
ಮಂಜುಳಾ: ಅಷ್ಟ ಆಗ್ತೈತಲ್ಲ..! ಅಷ್ಟ ಶ್ರಮವಹಿಸಿ ದುಡದಾಗ ಏನ್ ಮಾಡಬೇಕು ಮಾಡ್ರಿ. ಒಂದು ರೊಟ್ಟಿ ಇರ್ತೈತಿ ಅದ್ರಾಗ ಅರ್ದಾ ಕೊಡ್ತಿರೋ ಗಿರ್ದಾ ಕೊಡ್ತಿರೋ ಏನಂತ ವಿಚಾರ ಮಾಡ್ರಿ.
ನ್ಯೂಸ್‌ಫಸ್ಟ್: ಈಗ ನಮ್ದಿಗ ಇದಕ್ಕ 15 ಸಾವಿರ ರೂಪಾಯಿ ಅಂತ ಅಂದ್ರ ಅಕ್ಕಾ ಎಷ್ಟ ಆಗ್ತೈತ್ರಿ.? ನಮ್ದ ನಾವ್ ಅದನ್ನ ಹೇಳಾತಿನ್ರಿ ಈಗ ನಿಮಗ ಹೌದ್ರಾ ಈದು 20 ಸಾವಿರ ರೂಪಾಯಿದು. 15 ಸಾವಿರ ರೂಪಾಯಿ ಅಂದ್ರ 75 ಲಕ್ಷ ರೂಪಾಯಿ ಆಗ್ತೈತ್ರಿ 15 ಸಾವಿರ ರೂಪಾಯಿ ನಾವ್ ಲೆಕ್ಕ ಮಾಡಿದ್ರ, ನಾವ್ ಮಾಡಿದ್ ನಿಜವಾದ ಖರ್ಚು ಇದ್.
ಮಂಜುಳಾ: ಹಂ 75 ಲಕ್ಷ ಆಗ್ತೈತಿ.
ನ್ಯೂಸ್‌ಫಸ್ಟ್: 75 ಲಕ್ಷ ಆಗ್ತೈತ್ರಿ ಹೌದ್ರ್ಯಾ. ಈಗ 20 ಸಾವಿರ ಅಂತ ಅಂದ್ರ 1 ಕೋಟಿ ರೂಪಾಯಿ ಆಗ್ತೈತ್ರಿ, ನೀವ್ ಹೇಳ್ರಿ ಅಕ್ಕಾ ಈಗ ನಾನ್ ಏನ್ ಮಾತಾಡಲ್ಲ, ನಿಮ್ಮ ಮುಂದ ಲೆಕ್ಕಾನ ಇಟ್ಟಿನಿ ನಿಮ್ಮ ಮುಂದ ಇಟ್ಟಿನಿ.
ಮಂಜುಳಾ : ಒಂದ್ ಕೇಳ್ರಿ ನಾ ಕೈ ಇಟ್ರ್ ಪಕ್ಕಾ ಆಗ್ತೈತಿ.
ನ್ಯೂಸ್‌ಫಸ್ಟ್: ಅದಕ್ಕ ಹುಡಕ್ಯಾಡಿ ಅದಕ್ಕ ನಿಮ್ಮ ಕಡೇನ ಬಂದೇವ್ರಿ..
ಮಂಜುಳಾ: ಬರ್ರಿ ಇತ್ತಾಗ್ ಮಾತಾಡೂನ್ ಬರ್ರಿ.. ಏನೂ ತೆಲಿಕೆಡಸಗೋಬ್ಯಾಡಾ, ಹನಮಂತಣ್ಣಾಗ ಒಟ್ಟ ಹೇಳಾಕ ಹೋಗಬ್ಯಾಡ್ರಿ.
ನ್ಯೂಸ್‌ಫಸ್ಟ್ : ನಾ ಅದಕ್ಕ ಅಲ್ಲಿ ಎನೂ ಮಾತಾಡಲಿಲ್ರಿ. ನೀವ ಏಳುವರಿ ಲಕ್ಷ ಅಂದ ಕೂಡ್ಲೆ ಸುಮ್ಮ್ ಕೂತ್ಗೊಂಡ ಬಿಟ್ಟೆರಿ
ಮಂಜುಳಾ : ಹೂಂ ಅಂದ್ರೇಲ್ಲ ಅಣ್ಣಾರ ನೀವ.
ನ್ಯೂಸ್‌ಫಸ್ಟ್ : ಅನ್ನೆಲ್ಲ ರಿ ಅಲ್ಲಿ ಗುಡಿ ಮುಂದ ಕುತ್ಕೊಂಡಾಗ್
20 ಸಾವಿರದ ಲೆಕ್ಕದಲ್ಲಿ 1 ಕೋಟಿ ಪರಿಹಾರ ಬರಬಹುದು. ಹೆಚ್ಚು ಕಮ್ಮಿ ಮಾಡಿ 15 ಸಾವಿರದ ಲೆಕ್ಕ ಹಾಕಿದ್ರೆ 75 ಲಕ್ಷ ಬರಬಹುದು ಅನ್ನೋದು ಇಲ್ಲಿ ನಡೀತಿರೋ ಲೆಕ್ಕಾಚಾರ. ರೈತರಿಗೇನೋ ತಮಗೆ ಪರಿಹಾರ ಸಿಕ್ಕರೆ ಮಾಡಿರೋ ಸಾಲವಾದ್ರೂ ಕಟ್ಟಬಹುದು ಅನ್ನೋ ಆಸೆ. ಆದ್ರೆ ಮಂಜುಳಾ ಪೂಜಾರಿಯದ್ದು ಅಪ್ಪಟ ದುರಾಸೆ. ಯಾಕಂದ್ರೆ ಬರೋ 75 ಲಕ್ಷದಲ್ಲೇ 25 ಲಕ್ಷ ಈಕೆಗೆ ಕೊಡಬೇಕಂತೆ.
ರೈತರು ಸಂಕಷ್ಟದಲ್ಲಿದ್ದಾರೆ, ಹಾಕಿದ ಬಂಡವಾಳ ಕೂಡಾ ಕೈಗೆ ಬರ್ತಿಲ್ಲ ಆದ್ರೂ ಈ ಅಕ್ಕಾಬಾಂಡ್ ಗೆ ಬರೋ ಪರಿಹಾರದಲ್ಲಿ 25 ಲಕ್ಷ ಕೊಡಬೇಕಂತೆ. ಹೋರಾಟದ ಖರ್ಚು ವೆಚ್ಚ ತೂಗಿಸುವದರ ಜೊತೆ ಕಮೀಷನ್ ಬೇರೆ ಕೊಡಬೇಕು ಇನ್ನು ಇವಳೆಂಥ ಡಬ್ಬಲ್ ಗೇಮರ್ ಅಂದ್ರೆ ದುಡ್ಡು ಸಿಕ್ಕತ್ತೆ ಅಂದ್ರೆ ಯಾರನ್ನ ಬೇಕಾದ್ರೂ ನಿವಾಳಿಸಿ ಬಿಸಾಕ್ತಾಳೆ. ಹೋರಾಟಕ್ಕೆ ಕೈ ಜೋಡಿಸಿದ್ದವರನ್ನೂ ಕೈ ಬಿಟ್ಟು ನನ್ನ ಜೊತೆ ಅಷ್ಟೇ ವ್ಯವಹಾರ ಇಟ್ಕೊಳ್ಳಿ ಅಂತ ಬೇರೆ ಹೇಳಿದ್ಲು. ಆಯ್ತು ಅಕ್ಕಾಬಾಂಡ್ ನಾವು ಎಲ್ಲಾ ರೆಡಿ ಮಾಡ್ಕೊಂಡು ನಿಮಗೆ ಪೋನ್ ಮಾಡ್ತಿವಿ ಎಂದು ಹೇಳಿ ಅವಳನ್ನು ಬಸ್ ಗೆ ಹತ್ತಿಸಿದ್ರು ನಮ್ಮ ತಂಡದ ಸದಸ್ಯರು.
ಅಕ್ಕಾ ಬಾಂಡ್: :Part-2 ರೈತ ಹೋರಾಟಗಾರ್ತಿ ಬಣ್ಣ ಬಯಲು
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post