ಹತ್ತಿ ಬೆಳೆ ಹಾಳಾಯ್ತು ಅಂತಾ ರೈತರೇನೋ ಮಂಜುಳಾ ಪೂಜಾರ್‌ಗೆ ಮೊರೆ ಇಟ್ಟಿದ್ರು. ಆಕೆನೂ ತಾನು ಹೋರಾಟ ಮಾಡಿ ಪರಿಹಾರ ಕೊಡಿಸೋದಕ್ಕೆ ರೆಡಿಯಾಗಿದ್ಲು. ಇದಕ್ಕಾಗಿ ಹಾಳಾದ ಹತ್ತಿ ಹೊಲಕ್ಕೆ ಭೇಟಿ ನೀಡೋದಕ್ಕೂ ತಯಾರಾದಳು.
ಅಕ್ಕಾ ಬಾಂಡ್.. ಪಾರ್ಟ್-1: ಹೆಗಲ ಮೇಲೆ ಹಸಿರು ಟವೆಲ್..ತುಟಿಗೆ ಕೆಂಪು ಲಿಪ್ಸ್ಟಿಕ್; ನ್ಯೂಸ್ಫಸ್ಟ್ ತೆರೆದಿಟ್ಟಿದೆ ರೈತ ಹೋರಾಟಗಾರ್ತಿ ಕರ್ಮಕಾಂಡ..!
ಅವತ್ತು ಜೂನ್ 13 ಸಂಜೆ 6. ಅಕ್ಕಾಬಾಂಡ್ ಕಾರಿನಲ್ಲಿ ಕುಳಿತಕೊಂಡು ಹಾವನೂರಿಗೆ ಬಂದೇ ಬಿಟ್ಲು. ಹತ್ತಿ ಬಿತ್ತಿ ಹಾಳಾಗಿ ಹೋದ ರೈತರು ಈ ಮಂಜುಳಾ ಪೂಜಾರರಿಂದಾದ್ರೂ ನಮ್ಮ ಬದುಕು ಹಸನಾಗಬಹುದು ಅನ್ನೋ ಆಸೆಯಿಂದ ಆಕೆಯ ಹಿಂದೆ ಬಂದಿದ್ರು. ಕಾರ್ ಬಿಟ್ಟು ಕೆಳಗಿಳಿದ ಡೀಲ್ ರಾಣಿ ಹೊಲ ಹುಡುಕಿಕೊಂಡು ನಡೆದೇ ಬಿಟ್ಳು. ಆಕೆ ಅಲ್ಲೇನೋ ಹುಡುಕಾಡ್ತಾ ಇದ್ಳು. ಅದೇನು ಹುಡುಕಾಡ್ತಿದ್ದಾಳೋ ಅಂತಾ ರೈತರಿಗೂ ಕೌತುಕ. ಮೊಬೈಲ್ ತೆಗೆದು ಫೋಸು ಕೊಟ್ಟಾಗಲೇ ಗೊತ್ತಾಗಿದ್ದು, ಆಕೆ ಹುಡುಕಿದ್ದು ಌಂಗಲ್‌ಗಾಗಿ ಅಂತಾ. ಫೇಸ್‌ಬುಕ್‌ನಲ್ಲಿ ಲೈವ್ ಕೊಡೋದಕ್ಕೆ ಆಕೆಗೆ ಸರಿಯಾದ ಌಂಗಲ್ ಬೇಕಿತ್ತು.
ಹೊತ್ತು ಮುಳುಗಿ ಕತ್ತಲಾಗೋವರೆಗೂ ಮಂಜುಳಾ ಪೂಜಾರ್ ಪೇಸ್ ಬುಕ್ ಲೈವ್ ಮುಂದುವರೆದಿತ್ತು.
ಎಲ್ಲರೂ ಒಂದಾಗಿ ಹೋರಾಟ ಮಾಡೋಣ ಪರಿಹಾರ ಪಡೆಯೋಣ ಅಂತಾ ಕರೆಕೊಟ್ಟ ರೀಲ್ಸ್ ರಾಣಿ, ರೈತರಿಂದ ಬೀಳ್ಕೊಟ್ಟು ವಾಪಸ್ ಕಾರ್ ಹತ್ತಿದ್ಲು. ಮಾಡಿಕೊಂಡ ಕರಾರಿನಂತೆ ಇವತ್ತಿನ ಖರ್ಚುವೆಚ್ಚವನ್ನೆಲ್ಲಾ ರೈತರೇ ಕೊಡಬೇಕಿತ್ತು. ಗುತ್ತಲ ಗ್ರಾಮದಲ್ಲಿ ರೈತರ ಪರವಾಗಿ ನ್ಯೂಸ್ ಫಸ್ಟ್ ತಂಡವೇ ಆ ಖರ್ಚನ್ನ ಹೊಂದಿಸಿಕೊಟ್ಟಿತ್ತು. 10 ಸಾವಿರಕ್ಕೆ ಒಂದು ರೂಪಾಯಿನೂ ಕಮ್ಮಿ ಇಲ್ಲದಂತೆ ಹೋರಾಟಗಾರ್ತಿ ವಸೂಲಿ ಮಾಡಿಕೊಂಡಿದ್ಳು.
ರೊಕ್ಕಾ ಕೈಗೆ ಬಂದ ಮೇಲೆ ಅಕ್ಕನಿಗೆ ಇವರು ಪಕ್ಕಾ ಹೋರಾಟ ಮಾಡ್ತಾರೆ ಅಂತ ಕನ್ಫರ್ಮ್ ಆಗಿತ್ತು. ಹೀಗಾಗಿ ಅಕ್ಕಾಬಾಂಡ್ ಎಲ್ಲರೂ ಒಂದು ಮನವಿ ಪತ್ರ ರೆಡಿ ಮಾಡ್ಕೊಂಡು ಹಾವೇರಿಗೆ ಬಂದ್ ಬಿಡಿ. ಕೃಷಿ ಇಲಾಖೆಗೆ ಡಿಸಿಗೆ ಮನವಿ ಕೊಡೋಣ ಅಂತೇಳಿದ್ಲು. ಇದಕ್ಕಾಗಿ ಅಕ್ಕಾಬಾಂಡ್ ತನ್ನದೇ ಲೆಟರ್ ಪ್ಯಾಡ್ ಕೂಡ ಕೊಟ್ಟಿದ್ಳು.
ಅವತ್ತು ಜೂನ್ 17. ಹಾವೇರಿ ಡಿಸಿ ಕಛೇರಿ ಬಳಿ ಮಂಜುಳಾ ಪೂಜಾರ್ ಹಾರಾಟ ನೋಡಬೇಕಿತ್ತು. ಬಾಡಿಗೆ ಕಾರಿನಲ್ಲಿ ಬಂದ ಮಂಜುಳಾ, ತನ್ನ ಜೊತೆ ಕೆಲ ರೈತರನ್ನೂ ಕರ್ಕೊಂಡು ಬಂದಿದ್ಲು. ಬಂದಿಳಿದವಳೇ ದೊಡ್ಡ ಬಾಯಿಯಲ್ಲಿ ಅಧಿಕಾರಿಗಳಿಗೆ ಅವಾಜ್ ಹಾಕಿದ್ದಾಯ್ತು. ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟಿದ್ದೂ ಆಯ್ತು.
ಪರಿಹಾರ ಒದಗಿಸೋಕೆ ಹತ್ತು ದಿನಗಳ ಗಡುವು ಕೊಡಲಾಗಿತ್ತು. ಹತ್ತು ದಿನಗಳ ಒಳಗಾಗಿ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಕೊಡದೇ ಇದ್ದಲ್ಲಿ ಮುಖ್ಯಮಂತ್ರಿಗಳ ಶಿಗ್ಗಾಂವಿ ನಿವಾಸದ ಮುಂದೆ ಧರಣಿ ಕೂರ್ತೀನಿ ಅಂತಾ ಎಚ್ಚರಿಕೆ ಕೊಟ್ಟಿದ್ಳು. ಅವತ್ತೂ ಕೂಡಾ ಅಕ್ಕಾ ಬಾಂಡ್ ತಮ್ಮ ಪರಾಕ್ರಮವನ್ನು ಫೇಸ್ ಬುಕ್ ಲೈವ್ ಮೂಲಕ ತಮ್ಮ ಅಭಿಮಾನಿಗಳಿಗೆ ತಲುಪಿಸಿದರು. ತುಟಿ ಪಿಟಕ್ ಎನ್ನದೇ ದುಡ್ಡು ಇಸ್ಕೊಂಡ ಮಂಜುಳಾ, ಹತ್ತ ದಿನಾ ಆದ ಮೇಲೆ ನೋಡೋಣ ಎಂದ್ಹೇಳಿ ಹೊರಟು ಬಿಟ್ಳು. ಹೋರಾಟದ ಖರ್ಚಿಗೆ ದುಡ್ಡು ಕೇಳೋದು ಸಾಮಾನ್ಯ, ಆದರೆ ಬರೋ ಪರಿಹಾರದಲ್ಲೂ ಕಮೀಷನ್ ಕೇಳೋ ಇಂಥ ಭಂಡರೂ ಇದ್ದಾರೆ. ಇದನ್ನೆಲ್ಲವನ್ನೂ ಮೀರಿ ಮಂಜುಳಾ ಪೂಜಾರ್ ನಮಕ್ ಹರಾಮ್ ಕೆಲಸ ಮಾಡಿದ್ದಾಳೆ.
ಸ್ಟಾರ್ ಹೊಟೆಲ್ ಒಂದರಲ್ಲಿ ನಮ್ಮ ತಂಡದ ಸದಸ್ಯರನ್ನು ಕಾಯೋಕೆ ಹೇಳಿದ್ದ ಖ್ಯಾತ ರೈತ ಹೋರಾಟಗಾರ್ತಿ, ಕೃಷಿ ಕರ್ನಾಟಕ ರಾಜ್ಯ ರೈತ ಸಂಘದ ಸ್ವಯಂಘೋಷಿತ ರಾಜ್ಯಾಧ್ಯಕ್ಷೆ ಮಂಜುಳಾ ಪೂಜಾರ್, ಈ ಬಾರಿ ಬಂದಿಳಿದದ್ದು ಯಾರದ್ದೋ ಜೊತೆ ಬೈಕ್‌ನಲ್ಲಿ. ಮೊದಲು ಕಪ್ ಟೀಯೊಂದಿಗೆ ಆರಂಭವಾದ ಮಾತುಕತೆ ಕೊನೆಗೆ ಊಟದವರೆಗೂ ಬಂದು ನಿಂತಿತ್ತು. ಸ್ಟಾರ್ ಹೋಟೆಲ್‌ನಲ್ಲಿ ಮೀನು, ಮಟನ್ ತಿಂದ ಮೇಲೆ ಡೀಲ್ ಮಾತುಕತೆ ಶುರುವಾಯ್ತು. ಹೋರಾಟ ಕೈ ಬಿಡಿ ಮ್ಯಾಮ್ ಇದರಿಂದ ನಮ್ಮ ಬೀಜದ ಕಂಪನಿ ಇಮೇಜ್‌ಗೆ ಧಕ್ಕೆ ಆಗತ್ತೆ ನೀವ್ ಏನ್ ಹೇಳ್ತಿರೋ ಅದನ್ನ ಮಾಡ್ತಿವಿ ಅನ್ನೋವಲ್ಲಿಂದ ಶುರುವಾಗಿತ್ತು ಮೇನ್ ಟಾಪಿಕ್.
ಮಂಜುಳಾ : ನಾ ಭಾಗಿಯಾಗಬಾರದ್ ಅಂದ್ರ ಏನ್ ಮಾಡ್ತೀರಿ..
ನ್ಯೂಸ್ಫಸ್ಟ್: ನೀವ್ ಏನ್ ಹೇಳ್ತೀರಿ ನಾ ಅದನ್ನ ಮಾಡ್ತೀರಿ.
ಮಂಜುಳಾ : ಮಾಡ್ತಿಱ..?
ನ್ಯೂಸ್ಫಸ್ಟ್: ಡೆಪ್ನೆಟ್ಲಿ, ಡೆಪ್ನೆಟ್ಲಿ ಮೇಡಮ್..
ಮಂಜುಳಾ : ಆದ್ರ ಹಿಂಗಂತಂದ ನನ್ನ ಮುಂದ ಸೊಕ್ಕಿಲೆ ಹೋದವರು ಯಾರು ಉದ್ಧಾರನೂ ಆಗಿಲ್ಲ.
ನ್ಯೂಸ್ಫಸ್ಟ್: ಹಾ ಹೌದು, ಮೇಡಮ್
ಮಂಜುಳಾ: ನನಗ ನಮ್ಮ ರೈತರಿಗೆ ಯಾವತ್ತೂ ಮೋಸ ಮಾಡಕ್ಕೆ ನಾ ಇಷ್ಟಪಡಲ್ಲ, ಸೋ ಬೇಜಾರ್ ಆಗತ್ತ. ಅವರು ಅಲಾಅಲಾ ಅಂತಿರ್ತಾರ, ನಾ ಅವರಿಗೆ ಮಾತ್ ಕೊಟ್ಟಿನಿ ನಾನ್ ಇವಾಗ ಇಲ್ಲಿ ಬಂದ್ರ ನೀವು ಬಿಡ್ರಿ ಮೇಡಮ್ ಹೋರಾಟ ಅಂತ್ತಿರಿ ಹೆಂಗ್ರಿ ಇದೆಲ್ಲಾ.
ನ್ಯೂಸ್ಫಸ್ಟ್: ಮೇಡಮ್ ಅವರ್ದು ಸರಿ ಮಾಡ್ತೀನಿ ಅಂತ ಹೇಳಿದ್ದಿನಿ, ಯಾವುದು ಸಮಸ್ಯೆ ಆಗ್ಲಾರದಂಗೆ ನೋಡ್ಕೋತಿನಿ.
ಮಂಜುಳಾ: ಹೇಗೆ ನಂಗೆ ಬಿಡಬೇಕ
ನ್ಯೂಸ್ಫಸ್ಟ್: ಅವರದ ಯಾರದಾದ್ರು ಬಿಲ್ ಇದ್ರೆ ಅವರೇನಾದ್ರು ಅದ್ನ ಸಬ್ಮಿಟ್ ಗಿಬ್ಮಿಟ್ ಮಾಡಿದ್ರೆ
ಮಂಜುಳಾ : ನಾ ಹೋರಾಟ ಬಿಟ್ಟರೆ, ಬಿಟ್ಟ ಬಿಟ್ಟರ ಯಾರು ಬರಲ್ಲ. ನಾನ ಕರದ್ರ ಬರತಾರ ಈಗ ಇಷ್ಟರು ಬರತಾರ, ಧಾರವಾಡದಾಗೂ ಬರತಾರ ಹಾವೇರಿ ಜಿಲ್ಲೆದಾಗೂ ಬರತಾರ.
ನ್ಯೂಸ್ಫಸ್ಟ್: ಒಕೆ ಒಕೆ ಅರ್ಥಾ ಆಯಿತು, ಅರ್ಥಾ ಆಯಿತು. ಈಗ ನೀವಿದ್ದಾಗ ನಮಗೇನು ಹೆದರಿಕೆ ಇಲ್ಲ ಮೇಡಮ್. ಅದಕ್ಕೆ ನಾನ ಹೇಳ್ತಾಯಿರೋದು. ನೀವ ಹ್ಯಾಂಡಲ್ ಮಾಡ್ತಿರಿ ಎಲ್ಲ. ಅದಕ್ಕ ನಾನೇನ ಮಾಡ್ಬೇಕು ನಾ ಮಾಡ್ತೆನಿ. ನನಗ ನೀವ ಹೇಳಿ. ನೀವಿದಿರಲ್ಲ ಮೇಡಮ್ ಇಲ್ಲಿ,
ಮಂಜುಳಾ: ನೀವಿಲ್ಲಿ ಬಂದ್ರಿ ಚಂದಂಗ ಮಾತಾಡಿದ್ರಿ, ಊಟಾ ಮಾಡಿದ್ವಿ ಎಲ್ರೂ ಕುಂತಗೊಂಡು, ಇಲ್ಲೊಂದ ಮಾತಾಡುದು ಅಲ್ಲೊಂದ ಮಾತಾಡುದು, ಎನರ ನಾಟಕ ಹೊಡದ ಹೋದ್ರ, ತಡಿರಿ ಹೇಳ್ತೇನಿ ಕೇಳ್ರಿ, ನಾ ಹೇಳ್ತೆನಿ, ನಾಟಕ ಹೊಡದ ಹೋದಾರ ಎಷ್ಟೋ ಮಂದಿ ಅದಾರ, ಹೋಗಿ ಆಮ್ಯಾಲ ಅನುಭವಿಸ್ತಾರ, ಅವರ ಗುಂಡಿ ಅವರ ತೋಡಕೊಂತಾರ. ಇದಂತೂ ಸತ್ಯ. ನಂಗೇನ ಆಗಲ್ಲರಿ. ನಂಗೇನ ಅಷ್ಟಿಲ್ಲ, ನೀವಾಗ್ಲೆ ಬಂದಿರಿ, ನೀವಾಗ್ಲೆ ಮಾತಾಡಾತೀರಿ. ನಾನ ಸುಮ್ನೆ ಹಾಗೆ ಅಂತ ಹೇಳ್ತೀನಿ. ನೀವ ನಮಗೆನೋ ಒಂದ ಸಹಾಯ ಮಾಡಿದ್ರು ಕೂಡಾ ಎದಕ್ಕ ಹೋಗಿರತದ, ನಾವೇನ್ ಓಡ್ಯಾಡತೇವಿ ಅಲ್ಲ ರೈತ್ರ ಸೇವೆಕ ರೈತರ ರೊಕ್ಕ ರೈತ್ರ ಸೇವೆಕ ಹೊಗಿರತೇತಿ. ಇದಂತೂ ಪಕ್ಕಾ.
ಮಂಜುಳಾ ಮಾತು ಕೇಳಿದ ನಮ್ಮ ತಂಡಕ್ಕೆ ನಿಜಕ್ಕೂ ಕನ್‌ಫ್ಯೂಸ್ ಆಗದೇ ಇರಲಿಲ್ಲ. ಈಕೆ ಖರೇ ಹೋರಾಟಗಾತಿನೇ ಇರಬೇಕು ಅಂತಾನೂ ಅನಿಸಿದ್ದುಂಟು. ಯಾಕಂದ್ರೆ ಯಾವ ಡೀಲ್‌ಗೂ ತಾನು ತಯಾರಿಲ್ಲ ಅನ್ನೋ ರೀತಿ ಇತ್ತು ಆಕೆಯ ಆರಂಭದ ಮಾತುಕತೆ. ಆದ್ರೆ ಇಷ್ಟೆಲ್ಲಾ ಮಾತಾಡಿದ್ದು ತನ್ನ ರೇಟು ಹೆಚ್ಚು ಮಾಡಿಕೊಳ್ಳೋದಕ್ಕೆ ಅಂತಾ ಅರ್ಥ ಆಗಿದ್ದೇ ಆಮೇಲೆ. ಅದರ ಜೊತೆಗೆ ಸಣ್ಣಗೆ ಬ್ಲ್ಯಾಕ್‌ಮೇಲ್ ಬೇರೆ. ನನ್ನನ್ನ ಎದ್ರ ಹಾಕಿಕೊಂಡ್ರೆ ಯಾರೂ ಬದಕುಳಿಯಲ್ಲ ಕಂಪನಿಗಳು ಬಾಗಲ ಮುಚ್ಕೊಂಡು ಓಡಿ ಹೋಗಿವೆ ಎಂದೆಲ್ಲಾ ಧಮ್ಕಿ ಹಾಕಿದ ಮಂಜುಳಾ ಮ್ಯಾಡಮ್ಮು ಹಾವನೂರು ಭಾಗದಲ್ಲಿ ಎಷ್ಟು ಹಾನಿಯಾಗಿದೆ ರೈತರಿಗೆ ಎಷ್ಟು ಪರಿಹಾರ ಕೊಡಬೇಕಾಗತ್ತೆ ಅನ್ನೋದನ್ನ ನಮ್ಮ ತಂಡದ ಸದಸ್ಯನ ಬಳಿ ಲೆಕ್ಕ ಹಾಕಿಸಿದ್ಲು. ಇವಳು ಲೆಕ್ಕದಲ್ಲಿ ಸಿಕ್ಕಾಪಟ್ಟೆ ವೀಕು ಅನ್ನೋದು ನಮಗೆ ಅವಾಗಲೇ ಗೊತ್ತಾಗಿತ್ತು. ಅವಳು ಹೇಳಿದ ಲೆಕ್ಕದ ಉತ್ತರ ಬೇಕೂಂತನಾ ತಪ್ಪಾಗಿ ಕೊಟ್ರೂ ಅದನ್ನೇ ನಿಜ ಅಂತ ನಂಬಿ ತನಗೆ ಎಷ್ಟ ಲಂಚ ಕೇಳೋಕೆ ನಾಚಿಕೆ ಬಂದು ಪೇಪರ್ ನಲ್ಲಿ ಬರೆದುಕೊಟ್ಲು . ಹಾಗೆ ಬರೆದು ಕೇಳಿದ್ದು ಬರೊಬ್ಬರಿ 1 ಕೋಟಿ.
ಅಕ್ಕಾ ಬರೆದಿರೋದು ಒಂದು ಕೋಟಿ ಅಂತ ನಮಗೆ ಗೊತ್ತಿತ್ತು ಆದ್ರೂ ನೀವು ಬರೆದಿರೋದು ಅರ್ಥ ಆಗಲಿಲ್ಲರೀ ಅಂತ ಪಕ್ಕದಲ್ಲಿದ್ದ ಆಕೆಯ ಚೇಲಾ ಕೈಗೆ ಕೊಟ್ಟಿದ್ವಿ ಅವನು ಕರೆಕ್ಟಾಗಿ ಇಂಗ್ಲೀಷನಲ್ಲಿ ಒಂದು ಕೋಟಿ ಅಂತ ಬರೆದು ಕೊಟ್ಟಳು. ಮ್ಯಾಮ್ ಒಂದು ಕೋಟಿ ತುಂಬಾ ಜಾಸ್ತಿ ಆಯ್ತು ಸ್ವಲ್ಪ ಕರುಣೆ ತೋರಸ್ರೀ ಮ್ಯಾಮ್ ಅಂದ್ರೆ ಅಕ್ಕಾ ಬಿಲ್ ಖುಲ್ ಒಪ್ಪಲಿಲ್ಲ. ಹಾಗೂ ಹೀಗೂ ಒದ್ದಾಡಿದಾಗ 50 ಲಕ್ಷ ಕೊಟ್ರೆ ಹೋರಾಟದಿಂದ ಹಿಂದೆ ಸರಿಯೋದಾಗಿ ಹೇಳಿದ್ಲು.
ನ್ಯೂಸ್ಫಸ್ಟ್: 25 ಲಕ್ಷಕ್ಕೆ ಇದನ್ನ ಮಾಡಿ ಮೇಡಮ್. 25 ಲಕ್ಷಕ್ಕೆ ಆಗುತ್ತೆ ಮೇಡಮ್, ಎಷ್ಟ ಹೇಳಿ ಮೇಡಮ್ ಲಾಸ್ಟ್ ಒಂದ ಅಮೌಂಟ್ ಹೇಳಿ ಮೇಡಮ್. ಎಟ್ಲಿಸ್ಟ್ ಬರದ ಆದ್ರು ಹೇಳಿ
ನ್ಯೂಸ್ಫಸ್ಟ್: ಅದೇ ಹೇಳಿದ್ನಲ್ಲಾ 25 ಲಕ್ಷ,
ಮಂಜುಳಾ : ಬ್ಯಾಡಾ ಬೀಡ್ರಲ್ಲ, ನೀವ ಇಟ್ಕೊಂಡ ಬೀಡ್ರಲ್ಲಾ ನಮ್ಮ ರೈತರಿಗ್ಯಾಕೆ ಅದು
ನ್ಯೂಸ್ಫಸ್ಟ್: ಲಾಸ್ಟ್ ಒಂದ ಹೇಳಿ ಬಿಡ್ತೀನಿ, ಅದರ ಜೊತೆಗೆ ಬೇರೆ ನಿಮಗೊಂದು ಆಫರ್ ಕೊಡ್ತೀನಿ.
ಮಜುಳಾ : ಎನೂ…
ನ್ಯೂಸ್ಫಸ್ಟ್: ಆಫರ್ರೂ ಕೊಡ್ತೀನಿ ಮೇಡಮ್ ನಾನು, ಕಡಿಮೆ ಮಾಡಿ ಸ್ವಲ್ಪ, 35 ಡನ್ ಮಾಡಿ ಮೇಡಮ್,
ಮಂಜುಳಾ : ಓಕೆ ನಾ.
ನ್ಯೂಸ್ಫಸ್ಟ್: ಬಾಳ ಆಯಿತು
ಮಂಜುಳಾ : ಬಿಡ್ರಿ ಹಂಗಾದ್ರ, ನನಗ ಅವಶ್ಯಕತೆ ಇಲ್ಲ, ತಡ್ರಿ ತಡ್ರಿ, ತುಗೊಂಡ ನಾವು ಉದ್ದಾರ ಆಗಬೇಕಿಲ್ಲ, ನಾವ ಕಷ್ಟಾ ಪಟ್ಟರು ಪರವಾಗಿಲ್ಲ, ನಾ ರೈತರಿಗೋಸ್ಕರ ನಾನೇನ ಮಾಡ್ಬೇಕು ಮಾಡ್ತೇನಿ. ಸರ್ ಬ್ಯಾರೆ ಬ್ಯಾರೆ ಕಂಪನಿಯಲ್ಲಿ ಹೋರಾಟಗಳ ಮಾಡಿದ್ದೀವಿ ಅವರನ್ನ ಕೇಳಿ ತಿಳ್ಕೋಳಿ, ಅದರ ಬಗ್ಗೆ ಹೇಳಾಕ ಬರುಲ್ಲ,
ನ್ಯೂಸ್ಫಸ್ಟ್: ಮೇಡಮ್ ಲಾಸ್ಟ್ ಹೇಳಿ ಮೆಡಮ್ 50 ಲಕ್ಷ ಬಾಳ ಆಗುತ್ತೆ, 40 ಲಕ್ಷ ತಗೊಳ್ಳಿ.
ಮಂಜುಳಾ: ಬ್ಯಾಡ್ರಿ ಸರ್, ಇದರ ಬಗ್ಗೆ ಮಾತಾಡಬ್ಯಾಡ್ರಿ ನಾನ ನನ್ನ ಕೆಲಸಾ ಮಾಡ್ತೇನಿ. ಕಷ್ಟಾನೋ ಖುಷಿನೋ ಮಾಡ್ತೆನಿ, ನೋಡ್ರಿ ಸರ್.. ರೈತರಿಗೋಸ್ಕರ ಹೋರಾಟ ಮಾಡೇ ಸಾಯ್ತೀನಿ,
ನ್ಯೂಸ್ಫಸ್ಟ್: 45 ಮಾಡಿ ಮೇಡಂ 45 ಲಕ್ಷ ಎರಡ ದಿನದಲ್ಲಿ ಇದನ್ನ ಮಾಡ್ತೇನಿ. ನಾನು ಇನ್ನೊಂದ ಆಫರ್ ಅಂತ ಹೇಳಿದಿನಿ ಅದ ಕೊಡ್ತೀನಿ.
ಮಂಜುಳಾ : ಏನೂ
ನ್ಯೂಸ್ಫಸ್ಟ್: ನಾನ ಹೇಳ್ತಿನಿ ಮೇಡಮ್ 45 ಗೆ ಡನ್ ಅನ್ನಿ ನಾನ ಇನ್ನೊಂದ ಆಫರ್ ಕೊಡ್ತೀನಿ ಅದು ಇನ್ನು ಜಾಸ್ತಿನೆ ಆಗುತ್ತೆ, ಅದು ನಮ್ಮ ಕಂಪನಿ ಕಡೆಯಿಂದ ಒಂದ ಆಫರ್ ಅನ್ಕೊಳ್ಳಿ
ಮಂಜುಳಾ : ಹೇಳಿ
ನ್ಯೂಸ್ಫಸ್ಟ್: ನಾನ ಹೇಳ್ತೀನಿ, 45 ಗೆ ಓಕೆ ಅಲ್ವಾ?
ಮಂಜುಳಾ : ಏನ್ ಆಫರ್ ನಾ ಹಂಗ ಕೇಳುತ್ತೇನಿ.
ನ್ಯೂಸ್ಫಸ್ಟ್: ನಾ ಹೇಳ್ತೇನಿ.
ಮಂಜುಳಾ : ಹಂಗಾದ್ರ ನಮ್ಮ ಟಾರ್ಗೆಟ್ ಎಲ್ಲ ಹೋರಾಟದ ಮುಖಾಂತರ ಕಟ್ಕೊಳ್ಳಿ, ಒಂದ ಹೋಬಳಿದ ರಿ ಇದ ಎಲ್ಲಿ ವಿಚಾರ ಮಾಡ್ತಿರಿ ನೀವ್, ನಮಗ ನಿಮಗ ಯಾವುದೆ ರೀತಿ ಸಂಬಂಧ ಇರಲ್ಲರಿ ಆಮ್ಯಾಲ, ಅರ್ಥ ಆತಾ, ಇದನ್ನ ನಾ ನಾವ ಮಾಡಿ ಕೊಡ್ತೇವಿ.
ಅವಳ ಹೇಳಿದ 50 ಲಕ್ಷಕ್ಕೆ ಒಪ್ಕೋಬೇಕಾಯ್ತು. ಇಲ್ದೇ ಇದ್ರೆ ಹೋರಾಟ ಅನಿವಾರ್ಯ ಅಂತ ಹೆದರಸಿದ್ಲು. ಅಂದಹಾಗೆ ಇನ್ನೊಂದು ಆಫರ್ ಕೊಡ್ತೀವಿ ಅಂತ ನಮ್ಮ ತಂಡದ ಸದಸ್ಯರು ಹೇಳಿದ್ರಲ್ಲಾ ಅದೇನು ಆಫರ್ ಎಂದು ಪದೇ ಪದೇ ಕೇಳಿದ್ಲು. ಅವಾಗ ನಾವ್ ಎಸೆದ ದಾಳವೇ ಬ್ರ್ಯಾಂಡ್ ಅಂಬಾಸಿಡರ್. ರೈತರ ಪರವಾಗಿ ಹೋರಾಡಿದ್ರೆ ಬರೋದು 25 ಲಕ್ಷ.. ಅದೂ ಬರುತ್ತೋ ಇಲ್ವೋ ಗೊತ್ತಿಲ್ಲ.. ಇತ್ತ ಕಂಪನಿಯವರ ಬಳಿ 50 ಲಕ್ಷ. ತಾಳೆ ಹಾಕಿ ನೋಡಿದ ಮಂಜುಳಾ ರೈತರನ್ನ ಮರೆತೇಬಿಟ್ಳು. ಹತ್ತಿ ಬೀಜದಿಂದ ಮೋಸ ಹೋದ ರೈತ ಸತ್ತರೆಷ್ಟು, ಬಿಟ್ಟರೆಷ್ಟು. ಆತನ ಮನೆ ಹಾಳಾದ್ರೆ ತನಗೇನಾಗಬೇಕು ಅಂದ್ಕೊಂಡ್ಳೋ ಏನೋ. ತನ್ನ ಮನೆ ಉದ್ದಾರ ಮಾಡಿಕೊಳ್ಳೋದೇ ಮೇಲು ಅಂದ್ಕೊಂಡು ಕಂಪನಿಯವರ ಬೆನ್ನುಬಿದ್ದಿದ್ಳು. 50 ಲಕ್ಷಕ್ಕೆ ಡೀಲ್ ಕುದುರಿಸಿಕೊಂಡ ಮಂಜುಳಾ, ಕಂಪನಿಗಾಗಿ ಅದ್ಯಾವ ರೀತಿ ಬೇಕಾದ್ರೂ ನಾಟಕ ಮಾಡೋಕ್ಕೂ ರೆಡಿಯಾಗಿಬಿಟ್ಟಿದ್ಳು.
ಯಾವ ಕಂಪನಿ ವಿರುದ್ಧ ಹೋರಾಟಕ್ಕೆ ರೆಡಿಯಾಗಿದ್ಲೋ ಅದೇ ಕಂಪನಿಗೆ ಅದೇ ಹತ್ತಿ ಬೀಜಕ್ಕೆ ಈಕೆ ಈಗ ಬ್ರ್ಯಾಂಡ್ ಅಂಬಾಸಿಡರ್. ನಮ್ಮ ತಂಡವೂ ಕೂಡಾ ಪ್ರೊಪೆಷನಲ್ ಆ್ಯಡ್ ಕಂಪನಿ ಹಾಗೆ ಎರಡೆರಡು ವಿಡಿಯೋ ಕ್ಯಾಮೆರಾ ಸ್ಟಿಲ್ ಕ್ಯಾಮೆರಾ ತೆಗೆದುಕೊಂಡು ಅಕ್ಕಾಬಾಂಡ್‌ನ ಕಾರಲ್ಲಿ ಕೂಡಿಸಿಕೊಂಡು ಮೆಣಸಿನಕಾಯಿ ಬೆಳೆಯಲಾಗಿದ್ದ ಹೊಲದಲ್ಲಿ ಹತ್ತಿ ಬೀಜದ ಜಾಹಿರಾತು ಶೂಟಿಂಗ್ ಮಾಡೋದಕ್ಕೆ ಮುಂದಾಗಿತ್ತು. ಒಟ್ನಲ್ಲಿ 22 ಲಕ್ಷದ ಕಿಯಾ ಕಾರು ಆಕೆಯ ಕನಸಾಗಿತ್ತು. ಅದಾಗಲೇ ಅದನ್ನ ನೋಡಿಕೊಂಡು ಬಂದಿದ್ಳಂತೆ. ಸ್ಪಾಟಲ್ಲೇ ಡೀಲರ್ ಜೊತೆಗೂ ಮಾತಾಡಿಸಿದ್ಳು. ಕಿಯಾ ಕಾರು ಆಕೆಯ ಕಣ್ಮುಂದೆ ಕುಣಿದಾಡತೊಡಗಿತ್ತು. ಹತ್ತಿ ಬೀಜದ ಕಂಪನಿ ಹೆಸರು ಹಾಕ್ಕೊಂಡು ಆ ಕಾರಲ್ಲಿ ಆಕೆ ತಿರುಗಾಡ್ತಾಳಂತೆ. ಅತ್ತ ಹತ್ತಿ ಬೀಜದಿಂದ ಹಾಳಾದ ರೈತ ಕಣ್ಣೀರಲ್ಲಿ ಕೈ ತೊಳೀತಿದ್ದ. ಇತ್ತ ಆ ರೈತರ ಹೆಸರಲ್ಲಿ 50 ಲಕ್ಷ ಹಣ ಜೊತೆಗೆ ತಿಂಗಳಿಗೆ 5 ಲಕ್ಷ ರೆಮ್ಯೂನರೇಷನ್. ಇಷ್ಟೇ ಅಲ್ಲದೆ ಕಾರು ಗಿಟ್ಟಿಸಿಕೊಂಡು ರೈತ ಹೋರಾಟಗಾತಿಯದ್ದು ಮಜಾನೋ. ಮಜಾ!
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post