ಉಕ್ರೇನ್ ಮೇಲಿನ ರಷ್ಯಾ ಯುದ್ಧ ಮುಂದುವರಿದಿದೆ. ರಷ್ಯಾಗೇ ಹೇಗಾದರೂ ಮಾಡಿ ಬುದ್ಧಿ ಕಲಿಸಲೇ ಬೇಕೆಂದು ಪಾಶ್ಚಿಮಾತ್ಯ ರಾಷ್ಟ್ರಗಳು ಪ್ರಯತ್ನ ಮಾಡುತ್ತಲೇ ಇವೆ. ಇತ್ತೀಚಗಷ್ಟೇ ಜರ್ಮನಿಯಲ್ಲಿ ಜಿ-7 ರಾಷ್ಟ್ರಗಳ ಶೃಂಗ ಸಭೆ ನಡೆಸಿ, ರಷ್ಯಾದ ಮೇಲೆ ಗೋಲ್ಡನ್ ಅಟ್ಯಾಕ್ ಮಾಡಿದ್ವು. ಅಂದ್ರೆ, ರಷ್ಯಾದ ಚಿನ್ನವನ್ನು ಖರೀದಿಸದಿರಲು ನಿರ್ಧರಿಸಿದ್ವು. ಆದ್ರೆ ವಿಷ್ಯ ಅದಲ್ಲ. ಈ ಶೃಂಗ ಸಭೆಯಲ್ಲಿ ಭಾರತವೂ ವಿಶೇಷ ಅಹ್ವಾನದ ಮೇರೆಗೆ ಪಾಲ್ಗೊಂಡಿತ್ತು. ಇದು ರಷ್ಯಾಕ್ಕೆ ಗೊಂದಲವನ್ನು ಸೃಷ್ಟಿಸಿತ್ತು. ಆದ್ರೆ ಪುಟಿನ್ಗೆ ಕರೆ ಮಾಡಿರುವ ಪ್ರಧಾನಿ ಮೋದಿ, ಎಲ್ಲವನ್ನೂ ಕ್ಲಿಯರ್ ಮಾಡಿದ್ದಾರೆ.
ಉಕ್ರೇನ್ ವಿಚಾರದಲ್ಲಿ ಭಾರತದ ನಿಲುವು ಪುನರುಚ್ಛಾರ
ಉಕ್ರೇನ್ ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮತ್ತೊಂದು ಸುತ್ತಿನ ಮಹತ್ವದ ಮಾತುಕತೆ ನಡೆಸಿದ್ದಾರೆ. ಪುಟಿನ್ ಜತೆಗಿನ ದೂರವಾಣಿ ಸಂಭಾಷಣೆಯ ವೇಳೆ ಮೋದಿ ಅವರು, ಉಕ್ರೇನ್ ವಿಚಾರದಲ್ಲಿ ಭಾರತ ಅನುಸರಿಸಿಕೊಂಡು ಬಂದಿರುವ ದೀರ್ಘಕಾಲದ ನಿಲುವನ್ನು ಪುನರುಚ್ಚರಿಸಿದ್ದಾರಂತೆ. ಬಿಕ್ಕಟ್ಟು ಶಮನಕ್ಕೆ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಒಲವು ತೋರಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಇದಷ್ಟೇ ಅಲ್ಲ, 2021ರ ಡಿಸೆಂಬರ್‌ನಲ್ಲಿ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಿದಾಗ ತೆಗೆದುಕೊಳ್ಳಲಾಗಿದ್ದ ನಿರ್ಧಾರಗಳ ಅನುಷ್ಠಾನದ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಜಾಗತಿಕ ಮತ್ತು ದ್ವಿಪಕ್ಷೀಯ ಸಮಸ್ಯೆಗಳ ಬಗ್ಗೆ ಸಮಾಲೋಚನೆ
ಇನ್ನು, ನಿರ್ದಿಷ್ಟವಾಗಿ ಕೃಷಿ ಸರಕುಗಳು, ರಸಗೊಬ್ಬರ ಮತ್ತು ಔಷಧ ಉತ್ಪನ್ನಗಳಿಗೆ ಸಂಬಂಧಿಸಿ ದ್ವಿಪಕ್ಷೀಯ ವ್ಯಾಪಾರ ಉತ್ತೇಜಿಸಲು ಇಬ್ಬರೂ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಡಿದ್ದಾರೆ. ಅಂತರರಾಷ್ಟ್ರೀಯ ಇಂಧನ ಮತ್ತು ಆಹಾರ ಮಾರುಕಟ್ಟೆ ಸೇರಿದಂತೆ ಜಾಗತಿಕ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.. ಜಾಗತಿಕ ಮತ್ತು ದ್ವಿಪಕ್ಷೀಯ ಸಮಸ್ಯೆಗಳ ಬಗ್ಗೆ ಸಮಾಲೋಚಿಸುವ ನಿಟ್ಟಿನಲ್ಲಿ ನಿರಂತರ ಸಂಪರ್ಕದಲ್ಲಿರಲು ಉಭಯ ನಾಯಕರು ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಡೆಸಾ ಮೇಲೆ ಕ್ಷಿಪಣಿ ದಾಳಿ, 21 ನಾಗರಿಕರ ಸಾವು..
ರಷ್ಯಾ-ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ಅನೇಕ ರಾಷ್ಟ್ರಗಳು ಯತ್ನಿಸುತ್ತಿದ್ದರೆ ಅತ್ತ ರಷ್ಯಾ ಉಕ್ರೇನ್ ಮೇಲೆ ದಾಳಿ ಮುಂದುವರೆಸಿದೆ. ಉಕ್ರೇನಿನ ಒಡೆಸಾ ಬಂದರು ನಗರ ಸಮೀಪದ ಸ್ನೇಕ್ ಐಲೆಂಡ್‌ನ ವಸತಿ ಪ್ರದೇಶದ ಮೇಲೆ ರಷ್ಯಾ ಪಡೆಗಳು ಕ್ಷಿಪಣಿಗಳ ಸುರಿಮಳೆ ಗರೆದಿದ್ದು, ಇಬ್ಬರು ಮಕ್ಕಳು ಸೇರಿ 21 ನಾಗರಿಕರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. . ಕ್ಷಿಪಣಿಗಳ ಸ್ಫೋಟದ ರಭಸಕ್ಕೆ ಹತ್ತಿರದ 14 ಮಹಡಿಗಳ ಅಪಾರ್ಟ್‌ಮೆಂಟ್ ಸಮುಚ್ಛಯಕ್ಕೂ ಹಾನಿಯಾಗಿದೆ.
ಅದೇನೆ ಇರಲಿ.. ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಒತ್ತಡ ಹೆಚ್ಚಿದ್ದರೂ, ರಷ್ಯಾ ಜತೆಗಿನ ವ್ಯಾಪಾರ ಸಂಬಂಧಕ್ಕೆ ಧಕ್ಕೆಯಾಗುವುದಿಲ್ಲ ಎಂದು ಭಾರತ ಮತ್ತೊಮ್ಮೆ ಸಾಬೀತು ಪಡಿಸಿದೆ. ಜಿ-7 ಶೃಂಗಸಭೆ ಬಳಿಕ ಪುಟಿನ್ ಪ್ರದಾನಿ ಮೋದಿ ಜೊತೆ ಮಾತುಕತೆ ನಡೆಸಿರೋದು ಕುತೂಹಲ ಮೂಡಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post