ಮಹಾರಾಷ್ಟ್ರ ಸರ್ಕಾರದಲ್ಲಿ ಮಹಾ ಬಿಕ್ಕಟ್ಟು ಶಮನಗೊಂಡಿದೆ. ಭಾರೀ ರಾಜಕೀಯ ಮೇಲಾಟದ ಬಳಿಕ ಯಾರೂ ಉಹಿಸದ ರೀತಿಯಲ್ಲಿ ಶಿಂಧೆ ಮಹಾರಾಷ್ಟ್ರದ ಸಿಎಂ ಗದ್ದುಗೆ ಏರಿದ್ದಾರೆ. ಆದ್ರೆ ಹೊಸ ಸರ್ಕಾರಕ್ಕೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ.
ಮರಾಠಾ ನಾಡಿನ ಮಹಾ ಬಿಕ್ಕಟ್ಟು, ಬಂಡಾಯ ಕೊನೆಗೊಂಡಿದೆ. ಭಾರೀ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯ ಘೋಷಣೆ ಆಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದಾರೆ. ರೆಬೆಲ್ಸ್ ನಾಯಕರಿಗೆ ಹಾಗೂ ಕೇಸರಿ ಕಲಿಗಳು ಯುದ್ಧ ಮುಗೀತು ಅಂತ ಕೈಕಟ್ಟಿ ಕೂರೋವಂಗಿಲ್ಲ. ಯಾಕಂದ್ರೆ ಮತ್ತೊಂದು ಸುತ್ತಿನ ಸರ್ಕಸ್ ಮಹಾ ಅಖಾಡದಲ್ಲಿ ನಡೆಯಲಿದೆ.
‘ಮಹಾ’ ಬಂಡಾಯ ವಿದಾಯ.. ಸಂಪುಟ ಸರ್ಕಸ್ ಶುರು..
ಹೊಸದಾಗಿ ಗದ್ದುಗೆ ಏರಿದ ಶಿಂಧೆ ಸೇನೆ ಹಾಗೂ ಬಿಜೆಪಿ ಮೈತ್ರಿ ಸರ್ಕಾರ ನಿಟ್ಟುಸಿರು ಬಿಡುವಂತಿಲ್ಲ. ಯಾಕಂದ್ರೆ ಸರ್ಕಾರದ ಅತೀ ಮುಖ್ಯ ಘಟ್ಟ ಸಂಪುಟ ರಚನೆ ಸರ್ಕಸ್ ಇನ್ನೂ ಬಾಕಿಯಿದೆ. ಸದ್ಯ ಸಿಎಂ ಏಕನಾಥ್ ಶಿಂಧೆ ಗೋವಾದಲ್ಲಿದ್ದು ತಮ್ಮ ಬಣದ ಶಾಸಕರನ್ನ ಕರೆತರಲಿದ್ದಾರೆ. ಅಲ್ಲಿಂದ ಶಾಸಕರು ಬಂದ ಮೇಲೆ ಮಹಾರಾಷ್ಟ್ರ ಸಂಪುಟ ರಚನೆಯಾಗಲಿದೆ. ಸದ್ಯ ಸಿಎಂ ಶಿಂಧೆ, ಡಿಸಿಎಂ ಫಡ್ನವಿಸ್ ಮಾತ್ರ ಪದಗ್ರಹಣವಾಗಿದ್ದು ಮಿಕ್ಕ ಖಾತೆಗಳಿಗೆ ಸಚಿವರನ್ನ ನೇಮಿಸಬೇಕಿದೆ.
ಸೋಮವಾರ ಏಕನಾಥ್ ಶಿಂಧೆಗೆ ‘ಮಹಾ’ ಅಗ್ನಿಪರೀಕ್ಷೆ..
ನೂತನ ಸ್ಪೀಕರ್ ಹುದ್ದೆಗೆ ಶಿಂಧೆ ಹಾಗೂ ಬಿಜೆಪಿ ಪರವಾಗಿ ಶಾಸಕ ರಾಹುಲ್ ನರ್ವೇಕರ್ ನಾಮಪತ್ರ ಸಲ್ಲಿಸಿದ್ರೆ ಶಿವಸೇನೆಯಿಂದ ರಾಜನ್ ಸಾಲ್ವಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮಧ್ಯೆ, ಮುಖ್ಯಮಂತ್ರಿ ಏಕನಾಥ ಶಿಂಧೆ ಜತೆಗಿರುವ ಶಿವಸೇನಾದ 39 ಶಾಸಕರು ಮತ್ತು ಬಿಜೆಪಿ ಮೈತ್ರಿ ಸರ್ಕಾರ ಇದೇ ಸೋಮವಾರ ವಿಶ್ವಾಸಮತ ಕೋರಲಿದೆ. ಅಗತ್ಯ ಬಿದ್ದರೆ ನಾಳೆಯೇ ಚುನಾವಣೆ ನಡೆಯಲಿದ್ದು ಎರಡು ದಿನಗಳ ವಿಶೇಷ ಅಧಿವೇಶನ ಕೂಡ ಆರಂಭವಾಗಲಿದೆ. ಶಿಂಧೆ ತಮ್ಮ ಕಡೆ 39 ಶಾಸಕರ ಬೆಂಬಲವಿದ್ದು, ನಮ್ಮದೇ ನಿಜವಾದ ಶಿವಸೇನೆ ಅಂತ ಹೇಳಿಕೊಂಡಿದ್ದರು.
ಸೋಮವಾರದ ಮತದಾನದಲ್ಲಿ ಅದು ದೃಢಪಟ್ಟರೆ, ಶಿವಸೇನೆ, ಬಿಜೆಪಿ ಮೈತ್ರಿ ಸರ್ಕಾರ ಸುರಕ್ಷಿತವಾಗಿರಲಿದೆ. ಒಟ್ಟಾರೆ ಮಹಾರಾಷ್ಟ್ರದಲ್ಲಿ ಹಲವಾರು ಸರ್ಕಸ್ಗಳ ಬಳಿಕ ಶಿಂಧೆ ಬಣ ಹಾಗೂ ಬಿಜೆಪಿ ಸೇರಿಕೊಂಡು ಹೊಸ ಸರ್ಕಾರ ರಚಿಸಿದೆ. ಇನ್ನೇನಿದ್ರೂ ಅಂತಿಮವಾಗಿ ಸಂಪುಟ ರಚನೆ ಮಾಡಬೇಕಾಗಿದ್ದು ಯಾರಿಗೆ ಯಾವ ಸಚಿವಗಿರಿ ಸಿಗುತ್ತೆ ಅನ್ನೋದನ್ನ ಕಾದು ನೋಡ್ಬೇಕು. ಇದಕ್ಕೂ ಮೊದಲು ಸೋಮವಾರದ ವಿಶ್ವಾಸಮತದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post