ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಬರೀ ಮಳೆಯೋ ಮಳೆ. ವರುಣಾಘಾತದ್ದೆ ಮಾತು, ಕರಾವಳಿಯ – ಮಲೆನಾಡು ಭಾಗ ಮಳೆಯಿಂದ ತೊಯ್ದು ತೊಪ್ಪೆ ಆಗಿವೆ. ಹಲವೆಡೆ ಭೂಕುಸಿತ, ಮನೆ ಕುಸಿತಗಳಾದ್ರೆ, ಇನ್ನು ಕೆಲವೆಡೆ ಗ್ರಾಮಗಳು ಜಲಾವೃತವಾಗಿವೆ. ಮುಂಗಾರು ಮಳೆ ಈ ಬಾರಿ ಕಣ್ಣೀರಿನ ಹೊಳೆ ಆಗಿಸಿದೆ.
ರಾಜ್ಯಾದ್ಯಂತ ವರುಣನ ಆರ್ಭಟ ಹೆಚ್ಚಿದ್ದು, ಏಳು ಜಿಲ್ಲೆಗಳಲ್ಲಿ ಮಳೆ ಆಟಕ್ಕೆ ಜನರಿಗೆ ಪೀಕಲಾಟ ಶುರುವಾಗಿದೆ. ಕರಾವಳಿ-ಮಲೆನಾಡಿನಲ್ಲಂತೂ ಜನ ಮನೆಯಿಂದ ಹೊರಕ್ಕೆ ಕಾಲಿಡದ ಸ್ಥಿತಿ ನಿರ್ಮಾಣವಾಗಿದೆ.. ಇತ್ತ, ಉತ್ತರ ಕರ್ನಾಟಕದಲ್ಲೂ ಮಳೆ ಆತಂಕ ಹೆಚ್ಚಿಸಿದೆ.
ಉಡುಪಿಯಲ್ಲಿ ನಿರಂತರ ಮಳೆಗೆ ಮೈದುಂಬಿದ ನದಿಗಳು..
ಉಡುಪಿಯಾದ್ಯಂತ ನಿರಂತರ ಮಳೆ ಹಿನ್ನೆಲೆ ಪಾಪನಾಸಿನಿ ನದಿ ನೀರಿನ ಮಟ್ಟ ಏರಿಕೆ ಆಗಿದೆ. ನದಿ ತೀರದ ನಿವಾಸಿಗಳಲ್ಲಿ ಆತಂಕ ಹೆಚ್ಚಿದ್ದು, ಅಂಕುದುರು ಪರಿಸರ ಕೆಲ ಮನೆಗಳ ತಳ ಮಟ್ಟದವರೆಗೂ ನೀರು ನುಗ್ಗಿದೆ. ಇತ್ತ, ಕುಂದಾಪುರ ತಾಲೂಕು ವ್ಯಾಪ್ತಿಯ ಹೈಕಾಡಿ, ಹಾಲಾಡಿ ಗೋಳಿಯಂಗಡಿ ಸಂಪರ್ಕ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ಭೂ ಕುಸಿತವಾಗಿದೆ.
ಕೊಡಗು ಜಿಲ್ಲೆಯಲ್ಲಿ ಮಣ್ಣು ಕುಸಿತ, ಭೂಕುಸಿತದ ಭಯ!
ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಬರೆಯ ಮಣ್ಣು ಕುಸಿತವಾಗಿದೆ.. ಗಾಳಿಬೀಡು ವ್ಯಾಪ್ತಿ ಒಂದನೇ ಮೊಣ್ಣಂಗೇರಿಯಲ್ಲಿ ಈ ಘಟನೆ ನಡೆದಿದೆ.. ಸಂಪಾಜೆ, ಚೆಂಬು ಭಾಗದಲ್ಲಿ ಭೂಮಿ ಕಂಪಿಸಿದ ಸ್ಥಳದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಮಂಗಳೂರು ರಸ್ತೆ ಕರ್ತೋಜಿ ಬಳಿ ಬೆಟ್ಟದ ಮೇಲಿಂದ ಮಣ್ಣು ಕುಸಿಯುತ್ತಿದೆ.. ಇದರಿಂದ ಬೆಟ್ಟದ ಕೆಳಗೆ ವಾಸ ಮಾಡುವ ಜನರು ಮನೆ ಖಾಲಿಮಾಡಿದ್ದಾರೆ.. ಇತ್ತ, ತಲಕಾವೇರಿಯಲ್ಲಿ ಹೆಚ್ಚು ಮಳೆಯಾಗುತ್ತಿದ್ದು ಕಾವೇರಿ ತುಂಬಿ ಹರಿಯುತ್ತಿದೆ.. ಸಿದ್ದಪುರ ಕರಡಿಗೋಡು ಭಾಗದ ಜನರಿಗೆ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.
ಶಿವಮೊಗ್ಗದ ಅಪಾಯದ ಮಟ್ಟ ಮೀರಿದ ನದಿಗಳು..
ಮಲೆನಾಡು ಶಿವಮೊಗ್ಗದಲ್ಲಿ ಕಳೆದೊಂದು ವಾರದಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ.. ಚಿಕ್ಕಮಗಳೂರಿನಲ್ಲಿ ಉತ್ತಮ ಮಳೆ ಕಾರಣ ತುಂಗಾ ಹಾಗೂ ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದೆ. ಶಿವಮೊಗ್ಗದ ಕೋರ್ಪಲಯ್ಯನ ಛತ್ರದ ಬಳಿ ಇರುವ ತುಂಗಾ ಮಂಟಪ ಮುಳುಗಿದೆ.. ಜಿಲ್ಲೆಯಲ್ಲಿ 120 ವಿದ್ಯುತ್ ಕಂಬಕ್ಕೆ ಧಕ್ಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಮಳೆ, ಚಿಕ್ಕೋಡಿಯಲ್ಲಿ ಭಯ ಭೀತಿ..
ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಮಳೆಯ ಪರಿಣಾಮ ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದೆ. ಚಿಕ್ಕೋಡಿ ಉಪ ವಿಭಾಗದ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳ ಹರಿವಿನಲ್ಲಿ ಏರಿಕೆ ಕಂಡಿದೆ. ನದಿ ಪಾತ್ರದ ಜನರಿಗೆ ಮತ್ತೆ ಪ್ರವಾಹ ಆತಂಕ ಶುರುವಾಗಿದೆ. ನದಿಗೆ ಅಡ್ಡಲಾಗಿರುವ ಸೇತುವೆಗಳ ಸಂಚಾರ ಸ್ಥಗಿತವಾಗಿದೆ.
ಯಾದಗಿರಿಗೂ ಕೃಷ್ಣೆಯ ಕಣ್ಣೀರಿನ ಕಂಟಕ!
ಇತ್ತ ಯಾದಗಿರಿ ಜಿಲ್ಲೆಯ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಭೀತಿ ಹಬ್ಬಿದೆ.. ನದಿಗೆ ನೀರು ಬಿಡುವ ಹಿನ್ನೆಲೆ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಲಾಗ್ತಿದೆ.. ನದಿ ತೀರಕ್ಕೆ ತೆರಳದಂತೆ, ಕೃಷಿ ಚಟುವಟಿಕೆಗೆ ತೊಡಗದಂತೆ ಸೂಚನೆ ನೀಡಲಾಗಿದೆ.
ಕರ್ನಾಟಕದ ಹಲವೆಡೆ ಮಳೆ ಆತಂಕ ಸೃಷ್ಟಿಸಿದೆ.. ನೈಋತ್ಯ ಮುಂಗಾರು ರಾಜ್ಯಾದ್ಯಂತ ಚುರುಕಾಗಿದ್ದು, ನಾಳೆ ವರೆಗೂ ಮುಂದುವರಿಯಲಿದೆ.. ಆದ್ರೂ ಜುಲೈ 13ರವರೆಗೂ ಮಳೆ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post