ಮೈಸೂರು: ದಾವಣಗೆರೆಯಲ್ಲಿ ನಿನ್ನೆ ನಡೆದಿದ್ದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಿಂದಿರುಗುತ್ತಿದ್ದ ಸಿದ್ದರಾಮಯ್ಯ ಅಪ್ಪಟ ಅಭಿಮಾನಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಬಳಿ ನಡೆದಿದೆ.
ಫಸಿ ಎಂಬ ಸಿದ್ದರಾಮಯ್ಯ ಅವರ ಅಭಿಮಾನಿ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದು, ಡಿವೈಡರ್ಗೆ ವ್ಯಾನ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸಿದ್ದರಾಮಯ್ಯನವರ ಅಪ್ಪಟ ಬೆಂಬಲಿಗರಾಗಿದ್ದ ಫಸಿ, ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬದಲ್ಲಿ ಭಾಗಿಯಾಗಲು ತೆರಳಿದ್ದರು. ಇನ್ನು, ಘಟನೆಯಲ್ಲಿ ಮತ್ತಿಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು, ಆಗಸ್ಟ್ 02 ರಂದು ಸಿದ್ದರಾಮೋತ್ಸವಕ್ಕೆ ಹೊರಟಿದ್ದ ಕ್ರೂಸರ್ ಪಲ್ಟಿಯಾಗಿ ಪ್ರಕಾಶ್ ಕಂಬಾರ (35) ಎಂಬಾತ ಬಾದಾಮಿ ತಾಲೂಕಿನ ಹೂಲಗೇರಿ ಸಮೀಪ ಮೃತಪಟ್ಟಿದ್ದರು. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು. ಈ ವೇಳೆ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ ಅವರು, ನನ್ನ ಹುಟ್ಟುಹಬ್ಬದ ಸಮಾರಂಭಕ್ಕಾಗಿ ದಾವಣಗೆರೆಗೆ ವಾಹನಗಳಲ್ಲಿ ಆಗಮಿಸುವವರು ಅನಗತ್ಯ ಧಾವಂತ ತೋರದೆ ಎಚ್ಚರಿಕೆಯಿಂದ ವಾಹನ ಚಲಾಯಿಸಿಕೊಂಡು ಬರಬೇಕೆಂದು ಕೈಮುಗಿದು ಮನವಿ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಜೀವ ನಮಗೆ ಮಾತ್ರವಲ್ಲ ನಿಮ್ಮನ್ನು ನಂಬಿರುವ ಕುಟುಂಬಕ್ಕೂ ಅಷ್ಟೇ ಅಮೂಲ್ಯ ಎಂಬ ಅರಿವಿರಲಿ ಎಂದು ಟ್ವೀಟ್ ಮಾಡಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post