ಹೊಸಬರ ಸಿನಿಮಾಗಳಿಗೆ ನಟ ಶಿವರಾಜ್ ಕುಮಾರ್ ಅವರು ಸದಾ ಪ್ರೋತ್ಸಾಹ ನೀಡುತ್ತಾರೆ. ಈಗ ಅವರು ಕನ್ನಡದ ‘ಲವ್ 360’ ಸಿನಿಮಾಗೆ ಬೆಂಬಲ ನೀಡಿದ್ದಾರೆ. ಟ್ರೇಲರ್ ರಿಲೀಸ್ ಮಾಡಿಕೊಡುವ ಮೂಲಕ ಹೊಸ ಕಲಾವಿದರ ಬೆನ್ನು ತಟ್ಟಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಶಶಾಂಕ್ ನಿರ್ದೇಶನ ಮಾಡಿದ್ದು, ಹೊಸ ನಟ ಪ್ರವೀಣ್ ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ರಚನಾ ಇಂದರ್ ಜೋಡಿ ಆಗಿದ್ದಾರೆ. ಆನಂದ್ ಆಡಿಯೋ ಮೂಲಕ ‘ಲವ್ 360’ ಸಿನಿಮಾದ ಟ್ರೇಲರ್ ವೀಕ್ಷಣೆಗೆ ಲಭ್ಯವಾಗಲಿದೆ. ಅದಕ್ಕೂ ಮುನ್ನ ಟ್ರೇಲರ್ ನೋಡಿ ಮೆಚ್ಚಿಕೊಂಡಿರುವ ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಅವರು ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಶಿವರಾಜ್ಕುಮಾರ್ ಅವರಿಗೆ ‘ಲವ್ 360’ ಸಿನಿಮಾದ ಟ್ರೇಲರ್ ಇಷ್ಟ ಆಗಿದೆ. ಕಲಾವಿದರ ಬಗ್ಗೆ ಮತ್ತು ನಿರ್ದೇಶಕರ ಬಗ್ಗೆ ಅವರು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ‘ನನ್ನ ನೆಚ್ಚಿನ ನಿರ್ದೇಶಕರಲ್ಲಿ ಶಶಾಂಕ್ ಕೂಡ ಒಬ್ಬರು. ಅವರಲ್ಲಿ ಏನೋ ಒಂದು ವಿಶೇಷವಾದ ಗುಣ ಇದೆ. ನಾವಿಬ್ಬರು ತುಂಬ ದಿನದಿಂದ ಒಂದು ಸಿನಿಮಾ ಮಾಡಬೇಕು ಎಂದುಕೊಂಡಿದ್ದೇವೆ. ಒಮ್ಮೆ ಅವರು ಸ್ಟೋರಿ ಕೂಡ ಹೇಳಿದ್ದರು. ಅದು ಯಾಕೋ ಟೇಕಾಫ್ ಆಗಿಲ್ಲ. ಆದಷ್ಟು ಬೇಗ ಅದನ್ನು ಮಾಡುತ್ತೇವೆ. ಈಗ ಅವರ ನಿರ್ದೇಶನದ ‘ಲವ್ 360’ ಚಿತ್ರದ ಟ್ರೇಲರ್ ನೋಡಿ ಖುಷಿ ಆಯಿತು’ ಎಂದು ಶಿವಣ್ಣ ಹೇಳಿದ್ದಾರೆ.
‘ಟ್ರೇಲರ್ ತುಂಬ ಚೆನ್ನಾಗಿದೆ. ಶಶಾಂಕ್ ಅವರ ವಿಶೇಷತೆ ಏನೆಂದರೆ, ಎಲ್ಲ ನಿರ್ದೇಶಕರು ಸ್ಟಾರ್ ನಟರನ್ನು ಹುಡುಕಿಕೊಂಡು ಹೋಗುತ್ತಾರೆ. ಆದರೆ ಶಶಾಂಕ್ ಅವರು ತಮ್ಮ ಸ್ಟೋರಿಗೆ ಬೇಕಾದ ಸ್ಟಾರ್ಳನ್ನು ಹುಟ್ಟುಹಾಕುತ್ತಾರೆ. ಪ್ರವೀಣ್ ಹೊಸ ಹುಡುಗ ಅಂತ ಅನಿಸಲ್ಲ. ಅರ್ಜುನ್ ಜನ್ಯ-ಶಶಾಂಕ್ ಕಾಂಬಿನೇಷನ್ ಚೆನ್ನಾಗಿದೆ. ಇದರಲ್ಲಿ ಸಿದ್ ಶ್ರೀರಾಮ್ ‘ಜಗವೇ ನೀನು ಗೆಳತಿಯೇ..’ ಹಾಡು ಹೇಳಿದ್ದಾರೆ. ಅವರಿಗೋಸ್ಕರ ನೀವು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ. ನಾನು ಅವರ ದೊಡ್ಡ ಅಭಿಮಾನಿ. ಅವರ ಧ್ವನಿ ಎಂದರೆ ನನಗೆ ತುಂಬ ಇಷ್ಟ. ಅದರಲ್ಲಿ ಸೆಳೆಯುವ ಗುಣ ಇದೆ. ಈ ಚಿತ್ರದಲ್ಲಿ ಒಂದು ಟ್ರಿಕ್ಕಿ ಚಿತ್ರಕಥೆ ಇದೆ ಅಂತ ನನಗೆ ಅನಿಸುತ್ತಿದೆ’ ಎಂದಿದ್ದಾರೆ ಶಿವಣ್ಣ.
‘ಪ್ರೀತಿ, ಆ್ಯಕ್ಷನ್, ಸಸ್ಪನ್ಸ್ ಎಲ್ಲವೂ ಟ್ರೇಲರ್ನಲ್ಲಿ ಕಾಣಿಸಿದೆ. ಕನ್ನಡ ಚಿತ್ರರಂಗಕ್ಕೆ ಹೊಸಬರು ಬರಬೇಕು. ಅವರಿಗೆ ನಾವು ಹೆಚ್ಚು ಪ್ರೋತ್ಸಾಹ ನೀಡಿದಾಗ ಇನ್ನಷ್ಟು ಪ್ರತಿಭಾವಂತರು ಬರುತ್ತಾರೆ. ಲವ್ 360 ಚಿತ್ರ ಯಶಸ್ವಿ ಆಗಲಿ. ನಾನು ಕೂಡ ಆಗಸ್ಟ್ 19ರಂದು ಸಿನಿಮಾ ನೋಡುತ್ತೇನೆ’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ. ಅವರ ಈ ಮಾತುಗಳಿಂದ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post