ಬಿಬಿಎಂಪಿ ಚುನಾವಣೆಗೆ ರಾಜ್ಯ ಸರ್ಕಾರ ಪ್ರಕಟಿಸಿರುವ ಮೀಸಲಾತಿಯಲ್ಲಿ ತಾರತಮ್ಯದ ಆರೋಪ ಕೇಳಿಬಂದಿದೆ. ಮೀಸಲಾತಿ ಪಟ್ಟಿಯಲ್ಲಿ ಮಹಿಳೆಯರನ್ನು ಕಡೆಗಣಿಸಿದ್ದಾರೆ ಎನ್ನಲಾಗಿದೆ. ಬಿಜೆಪಿಗೆ ಅನುಕೂಲವಾಗುವಂತೆ ಮೀಸಲಾತಿ ತಯಾರಿಸಲಾಗಿದೆ. ಕಾಂಗ್ರೆಸ್ ನಾಯಕರು ಸಿಡಿದೆದ್ದಿದ್ದಾರೆ. ಹೀಗಾಗಿ ಬೆಂಗಳೂರಿನ ವಿಕಾಸ ಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆ ಕಚೇರಿ ಇವತ್ತು ರಣಾಂಗಣ ದೃಶ್ಯಕ್ಕೆ ಸಾಕ್ಷಿಯಾಯಿತು.
ವಿಕಾಸ ಸೌಧದ ಕಚೇರಿ ಇವತ್ತು ಕಾಂಗ್ರೆಸ್ ನಾಯಕರ ರೋಷಾವೇಶಕ್ಕೆ ವೇದಿಕೆಯಾಗಿತ್ತು. ನಗರಾಭಿವೃದ್ಧಿ ಇಲಾಖೆ ಕಚೇರಿ ಮುಂದೆ ಜಮಾಯಿಸಿದ್ದ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಬೋರ್ಡ ಅನ್ನೇ ಬದಲಾಯಿಸೋದಕ್ಕೆ ಮುಂದಾಗಿದ್ರು. ಆರ್‌ಎಸ್‌ಎಸ್ ಕಚೇರಿ ಅಂತಾ ಫಲಕ ಅಳವಡಿಸೋಕ್ಕೆ ಯತ್ನಿಸಿದ್ರು ಅಂದಾಗೇ ಈ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾದದ್ದು ಬಿಬಿಎಂಪಿಯ 243 ವಾರ್ಡ್ಗಳಿಗೆ ಪ್ರಕಟಿಸಲಾಗಿರುವ ಮೀಸಲಾತಿ ಪಟ್ಟಿ.
ಬಿಜೆಪಿ ಸರ್ಕಾರಕ್ಕೆ ಅನುಕೂಲವಾಗುವಂತೆ ಮೀಸಲಾತಿ ಪ್ರಕಟಿಸಲಾಗಿದೆ ಅನ್ನೋದು ಕಾಂಗ್ರೆಸ್ ಆರೋಪ. ಹೀಗಾಗಿಯೇ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ರು. ಒಂದ್ಕಡೆ ಕಾಂಗ್ರೆಸ್ ಶಾಸಕರು ಇರೋ ಕಡೆ ಯರಾಬಿರಿ ಮಹಿಳಾ ಮೀಸಲಾತಿ ಘೋಷಿಸಿರೋ ಸರ್ಕಾರ, ಬಿಜೆಪಿ ಶಾಸಕರ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ ನೀಡಿಲ್ಲ. ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಡ್ಡಾಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ವಿಧಾನಸಭಾ ಕ್ಷೇತ್ರಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ತುಂಬಿದೆ.
ಬಿಜೆಪಿ ಶಾಸಕರು, ಸಚಿವರಿಗೆ ಬೇಡವಾದ್ರಾ ಮಹಿಳಾ ಅಭ್ಯರ್ಥಿಗಳು..?
ಬಿಬಿಎಂಪಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕ್ಷೇತ್ರಗಳಲ್ಲಿ ಬಹುತೇಕ ಮಹಿಳಾ ಅಭ್ಯರ್ಥಿಗಳನ್ನ ಪ್ರಕಟಿಸಿ ಆಕಾಂಕ್ಷಿತ ಕಾಂಗ್ರೆಸ್ ಕಾರ್ಪೊರೇಟರ್ಗಳನ್ನು ಸರ್ಕಾರ ಕಿತ್ತೊಗೆದಿದೆ. ಬಿಜೆಪಿಗೆ ಲಾಭವಾಗುವಂತೆ 243 ವಾರ್ಡ್ಗಳಿಗೂ ಮೀಸಲಾತಿ ಪ್ರಕಟಿಸಿದೆ.
ಬಿಬಿಎಂಪಿ ವ್ಯಾಪ್ತಿಯ 28 ಕ್ಷೇತ್ರಗಳಲ್ಲಿ ಬಿಜೆಪಿಯ 15 ಮಂದಿ ಶಾಸಕರಿದ್ದಾರೆ. 145 ವಾರ್ಡ್ಗಳಲ್ಲಿ 51 ಮಹಿಳಾ ಮೀಸಲಾತಿ ನೀಡಿದ್ದಾರೆ.
ಕಾಂಗ್ರೆಸ್‌ನ 12 ವಿಧಾನಸಭಾ ಕ್ಷೇತ್ರಗಳ ಪೈಕಿ 86 ವಾರ್ಡ್ಗಳಲ್ಲಿ 62 ವಾರ್ಡ್ಗಳಲ್ಲಿ ಮಹಿಳಾ ಮೀಸಲಾತಿ ನೀಡಿದ್ದಾರೆ. ಜೆಡಿಎಸ್ನ 1 ಕ್ಷೇತ್ರದಲ್ಲಿ 12 ವಾರ್ಡ್ಗಳಿದ್ದು 9 ಮಹಿಳಾ ಮೀಸಲಾತಿ ನೀಡಿದ್ದಾರೆ. ಸದ್ಯ ಪ್ರಕಟಿಸಲಾಗಿರೋ ಮೀಸಲಾತಿ ಪಟ್ಟಿಯಿಂದಾಗಿ, ಬಿಬಿಎಂಪಿಗೆ ಸ್ಪರ್ಧಿಸ ಬಯಸಿದ್ದ ಕಾಂಗ್ರೆಸ್‌ನ ಬಹುತೇಕ ಮಾಜಿ ಕಾರ್ಪೊರೇಟರ್‌ಗಳಿಗೆ ಅವಕಾಶ ತಪ್ಪಲಿದೆ.
ಬಿಜೆಪಿಗೆ ಅನುಕೂಲವಾಗುವಂತೆ ಮೀಸಲಾತಿಗೆ ಪ್ರಕಟಿಸಿದ್ದಾರೆ. ನಮ್ಮ ಪಕ್ಷದ ನಾಯಕರಿಗೆ ಅವಕಾಶ ತಪ್ಪಿಸಲು ಹೀಗೆ ಮಾಡಿದ್ದಾರೆ. ಮಹಿಳೆಯರಿಗೆ ಬಿಜೆಪಿ ಅನ್ಯಾಯ ಮಾಡಿದೆ ಅಂತಾ ಕಾಂಗ್ರೆಸ್ ಹೇಳ್ತಿದೆಯಾದ್ರೂ, ಸರ್ಕಾರ ಮಾತ್ರ ತನ್ನ ನಿಲುವನ್ನ ಸಮರ್ಥಿಸಿಕೊಂಡಿದೆ.
ಒಟ್ಟಿನಲ್ಲಿ ಬಿಬಿಎಂಪಿ ಚುನಾವಣೆಗೂ ಮುನ್ನ ಪ್ರಕಟಿಸಿದ ಮೀಸಲಾತಿ ಪಟ್ಟಿಗೆ ಕಾಂಗ್ರೆಸ್ ಅಸಮಾಧಾನಗೊಂಡಿದೆ. ಪಟ್ಟಿ ವಾಪಸ್ ಪಡೆಯುವಂತೆ ಕಾಂಗ್ರೆಸ್ ಆಗ್ರಹಿಸಿದೆ. ಆದ್ರೆ ಕಾಂಗ್ರೆಸ್ ಆಕ್ರೋಶಕ್ಕೆ ಸರ್ಕಾರ ಮಣಿಯುತ್ತಾ ಕಾದು ನೋಡಬೇಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post