ಪ್ರಳಯಾಂತಕ ಮಳೆ ರಾಜ್ಯದಲ್ಲಿ ಅನಾಹುತಗಳ ಸರಮಾಲೆಯನ್ನೇ ಸೃಷ್ಟಿಸಿದೆ. ಅವಾಂತರಗಳ ಜೊತೆ ಪ್ರಾಣ ಹಾನಿಯೂ ಸಂಭವಿಸುತ್ತಿದೆ. ರಕ್ಕಸ ಮಳೆಯಿಂದ ಮೃತರ ಸಂಖ್ಯೆ ಹೆಚ್ಚುತ್ತಲೇ ಇದೆ. ಮನೆ, ಗುಡ್ಡಗಳು ಕುಸಿಯುತ್ತಿದೆ. ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನೆಲಕ್ಕಚ್ಚಿವೆ.
ರಣರಣ ಮಳೆಯಿಂದ ಗಡಿ ಜಿಲ್ಲೆಯಲ್ಲಿ ಅನಾಹುತ..
ರಣ ಭೀಕರ ಮಳೆಯಿಂದಾಗಿ ರಾಜ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಚಾಮರಾನಗರದಲ್ಲಿ ಚಲಿಸುತ್ತಿದ್ದ ಓಮ್ನಿ ಕಾರಿನ ಮೇಲೆ ಮರ ಬಿದ್ದು ಅನಾಹುತವೊಂದು ಸಂಭವಿಸಿದೆ. ಕಾರಿನಲ್ಲಿದ್ದ ತಂದೆ ಮಗ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಂತೇಮರಹಳ್ಳಿ ಸಮೀಪ ಹೆಗ್ಗವಾಡಿ ಕ್ರಾಸ್ ಬಳಿ ಈ ದುರಂತ ನಡೆದಿದೆ. ರಾಜು ಮತ್ತು ಶರತ್ ಮೃತ ದುರ್ದೈವಿಗಳು.
ಮಳೆ, ಭೂಕುಸಿತಕ್ಕೆ ತತ್ತರಿಸಿ ಹೋದ ಕೊಡಗು!
ಕಾಫಿ ಬೆಳೆ ನಾಶ.. ಶಾಲೆಗಳಿಗೆ ರಜೆ ಘೋಷಣೆ..
ಕಾವೇರಿ ತವರು ಕೊಡಗಲ್ಲಿ ವರುಣ ಸೃಷ್ಟಿಸ್ತಿರೋ ಅವಾಂತರ ಅಷ್ಟಿಷ್ಟಲ್ಲ.. ಗುಡುಗು ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆ, ಭೂಕಂಪನ, ಸರಣಿ ಭೂಕುಸಿತವನ್ನುಂಟು ಮಾಡ್ತಿದೆ.. ಇಲ್ಲಿಯವರೆಗೂ ಕೊಡಗಿನಲ್ಲಿ ಮಳೆಗೆ ಒಂದು ಸಾವಾಗಿದ್ರೆ, 33 ಜಾನುವಾರುಗಳು ಮೃತಪಟ್ಟಿವೆ. 265 ಮನೆಗಳಿಗೆ ಹಾನಿಯಾಗಿದೆ. ಇದರ ಜೊತೆಗೆ ಪ್ರಮುಖ ವಾಣಿಜ್ಯ ಬೆಳೆ ಕಾಫಿ ಹಾಳಾಡ್ತಿದೆ. ಕಾಫಿ ಕಾಯಿ ಕೊಳೆತು ಉದುರುತ್ತಿದೆ.
ಇನ್ನು ಇವತ್ತು ಕೂಡ ಕೊಡಗಿನಲ್ಲಿ ಭಾರೀ ಮಳೆಯಾಗೋ ಸಾಧ್ಯತೆ ಇದ್ದು, ಎಲ್ಲೆಡೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುನ್ನಚ್ಚರಿಕಾ ಕ್ರಮವಾಗಿ ಇವತ್ತು ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ನೀಡಲಾಗಿದೆ.
ಭಟ್ಕಳದಲ್ಲಿ ಅಂಗಡಿಗಳಿಗೆ ನುಗ್ಗಿದ ನೀರು.. ಬೇಸತ್ತ ವ್ಯಾಪಾರಸ್ಥರು
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ರಣಭೀಕರ ಮಳೆಗೆ ಆಸ್ತಿಪಾಸ್ತಿ ಹಾನಿಯಾಗಿದೆ. ಮಿನಿ ದುಬೈನಂತಿರುವ ಭಟ್ಕಳದಲ್ಲಿ, ನೂರಾರು ಅಂಗಡಿಗಳಲ್ಲಿ ಲಕ್ಷಾಂತರ ಬೆಲೆಯ ವಸ್ತುಗಳು ನೆರೆಗೆ ತುತ್ತಾಗಿವೆ. ಎಲೆಕ್ಟ್ರಾನಿಕ್ಸ್, ಬಟ್ಟೆ, ಬ್ಯಾಗ್ ಸೇರಿ ಹಲವು ವಸ್ತುಗಳು ನೀರಿನಲ್ಲಿ ನೆಂದು ಹಾಳಾಗಿವೆ.. ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.. ಕಡಿಮೆ ಬೆಲೆಯಿಂದ ವಸ್ತುಗಳನ್ನ ಮಾರಾಟ ಮಾಡದಂಥಾ ಸ್ಥಿತಿ ನಿರ್ಮಿಸಿದೆ.
ಕಲ್ಪತರು ನಾಡಿನಲ್ಲಿ ‘ವರುಣಾ’ರ್ಭಟಕ್ಕೆ ಜನ ತತ್ತರ..
ತುಮಕೂರು ಜಿಲ್ಲೆಯಲ್ಲೂ ಕಳೆದ ನಾಲ್ಕೈದು ದಿನಗಳಿಂದ ಮಳೆರಾಯನ ಆರ್ಭಟ ಜೋರಾಗಿದೆ. ನದಿ, ಹಳ್ಳ-ಕೊಳ್ಳಗಲು ತುಂಬಿ ಹರಿಯುತ್ತಿದ್ದು, ಅಡಿಕೆ, ತೆಂಗು, ಬಾಳೆ ಬೆಳೆಗಳು ನೀರು ಪಾಲಾಗ್ತಿದೆ.. ಕೆರೆ ಕಟ್ಟೆಗಳು ಕೋಡಿ ಬಿದ್ದು, ರಸ್ತೆ ಸಂಪರ್ಕವೇ ಕಡಿತಗೊಂಡಿದೆ.
ಅತ್ತ ರಾಮನಗರದ ಕಣ್ವ ಜಲಾಶಯದಿಂದ ನೀರು ಬಿಟ್ಟಿರೋದ್ರಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ನೀರಿನ ರಭಸಕ್ಕೆ ಡಾಂಬರು ಕಿತ್ತು ಹೋಗಿ ರಸ್ತೆ ಸಂಪೂರ್ಣ ಹಾಳಾಗಿದೆ. ಅಬ್ಬೂರಿನಿಂದ ಮಾಕಳಿ, ಉಜ್ಜಿನಿ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ.
ಇತ್ತ ಬಾಗಲಕೋಟೆಯಲ್ಲೂ ಪರಿಸ್ಥಿತಿ ಏನೂ ಭಿನ್ನವಾಗಿಲ್ಲ. ಭಾರೀ ಮಳೆಗೆ ಕರಡಿ-ಹುನಗುಂದ ರಸ್ತೆ ಮೇಲೆ ನೀರು ನಿಂತು ಸಂಚಾರಕ್ಕೆ ಕುತ್ತು ಬಂದಿದೆ. ಮತ್ತೊಂದ್ಕಡೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಡೋಣಿ ನದಿ ಪ್ರವಾಹ ಸೃಷ್ಟಿಸ್ತಿದೆ. ಶಾಸಕ ಎಂ.ಬಿ. ಪಾಟೀಲ್ ಸೂಚನೆ ಮೇರೆಗೆ ನೆರೆ ಪ್ರದೇಶಕ್ಕೆ ಜಿಲ್ಲಾಧಿಕಾರಿ, ತಹಶೀಶಿಲ್ದಾರ ದೌಡಾಯಿಸಿ ಪರಿಶೀಲಿಸಿದ್ದಾರೆ.
ರಕ್ಕಸ ಮಳೆಗೆ ನಿಯಂತ್ರಣ ತಪ್ಪಿದ ಕಾರು ಮನೆಗೆ ಡಿಕ್ಕಿ!
ಮೂಡಿಗೆರೆ ಭಾಗದಲ್ಲಿ ಮಳೆಯಿಂದ ಅನಾಹುತವೊಂದು ಸಂಭವಿಸಿದೆ.. ಬಣಕಲ್ ಬಳಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಮನೆಗೆ ಕಾರು ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಕೇರಳ ಮೂಲದ ನಾಲ್ವರಿಗೆ ಗಾಯವಾಗಿದೆ.
ಕುದುರೆಮುಖ ಭಾಗದಲ್ಲೂ ಮಳೆ.. ಸೇತುವೆಗಳು ಮುಳುಗಡೆ!
ಚಿಕ್ಕಮಗಳೂರಿನಲ್ಲಿ ರಣ ಮಳೆಯಿಂದ ಭದ್ರಾ ನದಿ ಹರಿವಿನಲ್ಲಿ ಏರಿಕೆಯಾಗಿ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ಹೊರನಾಡು ಕಳಸ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದ್ದು, ಪರ್ಯಾಯವಾಗಿ ಹಳ್ಳುವಳ್ಳಿ ಮಾರ್ಗದಲ್ಲಿ ಸಂಚರಿಸಬೇಕಾಗ್ತಿದೆ.. ಒಟ್ಟಾರೆ, ರಣ ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಹಾನಿಯಾಗಿದೆ. ರಸ್ತೆ, ಮನೆಗಳಿಗೆ ನೀರು ನುಗ್ಗುತ್ತಿದ್ದು, ಜನ ಕಂಗಾಲಾಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post