ಮಡಿಕೇರಿ: ಕೊಡಗು ಪ್ರವಾಸದಲ್ಲಿದ್ದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಹೊಡೆದಿದ್ದ ವ್ಯಕ್ತಿಯ ಯಾವ ಪಕ್ಷಕ್ಕೆ ಸೇರಿದ್ದಾನೆ ಎಂಬ ಚರ್ಚೆ ಜೋರಾಗಿತ್ತು. ಶಾಸಕ ಅಪ್ಪಚ್ಚು ರಂಜನ್, ರೇಣುಕಾಚಾರ್ಯ ಆತ ಕಾಂಗ್ರೆಸ್ ಕಾರ್ಯಕರ್ತ ಅಂತ ಆರೋಪ ಮಾಡಿದ್ದರು. ಆದರೆ ಸದ್ಯ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದ ವ್ಯಕ್ತಿಯ ವಿಡಿಯೋ ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ. ವಿಡಿಯೋದಲ್ಲಿ ಮೊಟ್ಟೆ ಹೊಡೆದ ವ್ಯಕ್ತಿಯನ್ನು ಪೊಲೀಸರು ಸ್ಥಳದಲ್ಲೇ ವಶಕ್ಕೆ ಪಡೆದುಕೊಂಡಿರೋದು ಕಾಣಬಹುದಾಗಿದೆ.
ಮೊಟ್ಟೆ ಎಸೆದ ವ್ಯಕ್ತಿಯನ್ನು ಕುಶಾಲನಗರದ ಗುಡ್ಡೆಹೊಸೂರಿ ಸೋಮವಾರಪೇಟೆಯ ಲೋಡರ್ಸ್ ಕಾಲೋನಿಯ ನಿವಾಸಿ ಎಂದು ಸಂಪತ್ ಎಂದು ಗುರುತಿಸಲಾಗಿದೆ. ಈತ ನಿಜವಾಗಲೂ ಯಾವ ಪಕ್ಷದ ಕಾರ್ಯಕರ್ತ ಅಂತ ನೋಡುವುದಾದರೇ, ಎರಡು ವರ್ಷಗಳಿಂದ ಬಿಜೆಪಿಯಲ್ಲಿದ್ದಾನಂತೆ ಎಂಬ ಮಾತು ಲಭ್ಯವಾಗಿದೆ. ಸಣ್ಣಪುಟ್ಟ ಕಾಮಗಾರಿಗಳ ಗುತ್ತಿಗೆ ಕೆಲಸ ಮಾಡುತ್ತಿದ್ದ ಸಂಪತ್, ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದಲ್ಲಿದ್ದನಂತೆ.
ಮೊಟ್ಟೆ ಹೊಡೆಯುತ್ತಿದ್ದಂತೆ ಸ್ಥಳದಲ್ಲಿಯೇ ಕುಶಾಲನಗರ ಗ್ರಾಮಾಂತರ ಠಾಣೆ ಪಿಎಸ್ಐ ಚಂದ್ರಶೇಖರ್ ಅವರು, ಸಂಪತ್ನನ್ನು ಬಂಧನ ಮಾಡಿದ್ದರು. ಆದರೆ ಅಂದೇ ರಾತ್ರಿ ಠಾಣೆಯಲ್ಲಿ ಜಾಮೀನು ನೀಡಿ ಶಾಸಕ ಅಪ್ಪಚ್ಚು ರಂಜನ್ ಬಿಡುಗಡೆ ಮಾಡಿಸಿಕೊಂಡು ಹೋಗಿದ್ದರಂತೆ. ಆದರೆ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು ಮೊಟ್ಟೆ ಹೊಡೆದವರು ನಮ್ಮವರಲ್ಲ. ಪ್ರತಿಭಟನೆ ಮಾಡಿದ್ದು ನಮ್ಮವರೇ, ಆದರೆ ಮೊಟ್ಟೆ ಹೊಡೆದಿದ್ದು ಕಾಂಗ್ರೆಸ್ ಪಕ್ಷದವರೇ. ಆದರೆ ಆತ ನಾಪತ್ತೆಯಾಗಿದ್ದಾನೆ ಎಂದಿದ್ದರು.
ಸದ್ಯ ಸಂಪತ್ ಶಾಸಕ ಅಪ್ಪಚ್ಚು ರಂಜನ್ ಜೊತೆಗೆ ಇರುವ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎರಡು ವರ್ಷದಿಂದ ಬಿಜೆಪಿಯೊಂದಿಗೆ ಇದ್ದರಂತೆ. ಸೋಮವಾರಪೇಟೆ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಸಂಪತ್, ಗುತ್ತಿಗೆ ಕೆಲಸಗಳಿಗೆ ಅನುಕೂಲವಾಗಲಿ ಎಂದು ಕಾಂಗ್ರೆಸ್ ಬಿಟ್ಟು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದನಂತೆ. ಈ ಹಿಂದೆ ಕಾಂಗ್ರೆಸ್ ನಲ್ಲಿದ್ದಾಗಿನ ಫೋಟೋ ಕೂಡ ಸದ್ಯ ಸಖತ್ ಸದ್ದು ಮಾಡುತ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post