ಬೆಂಗಳೂರು: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ, ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿಬಿಟ್ಟಿದೆ. ರಾಮನಗರ, ಮಂಡ್ಯ, ಚಾಮರಾಜನಗರ ಭಾಗದಲ್ಲಿ ಮಳೆ ಕಾಟಕ್ಕೆ ಜನ ಹೈರಾಣಾಗಿದ್ದಾರೆ. ವರುಣ ಅಬ್ಬರಕ್ಕೆ ಕೆರೆಗಳು ತುಂಬಿ ಸಂಚಾರಕ್ಕೆ ಕುತ್ತು ಬಂದಿದೆ. ಅತ್ತ ಕಲ್ಯಾಣ ಕರ್ನಾಟಕ ಕೂಡ ಮೇಘರಾಜನ ಆರ್ಭಟಕ್ಕೆ ನಲುಗಿ ಹೋಗುತ್ತಿದೆ.
ಒಂದೇ ದಿನದ ಸುರಿದ ರಕ್ಕಸ ಮಳೆಗೆ ಜನ ಸುಸ್ತೋ ಸುಸ್ತು!
ಸರಿಸುಮಾರು ಒಂದು ತಿಂಗಳುಗಳ ಕಾಲ ರಾಜ್ಯದ ನೆಮ್ಮದಿ ಹಾಳುಗೇಡವಿದ್ದ ಮಳೆ ರಾಯ ಮತ್ತೆ ಕಮ್ ಬ್ಯಾಕ್ ಮಾಡಿದ್ದಾನೆ. ರಾಜ್ಯದ ಉತ್ತರದಿಂದ ಹಿಡಿದು ದಕ್ಷಿಣದವರೆಗೂ ಹಲವು ಜಿಲ್ಲೆಗಳಲ್ಲಿ ಸಿಕ್ಕಾಪಟ್ಟೆ ಮಳೆಯಾಗಿದೆ. ಒಂದೇ ದಿನ ಸುರಿದ ಧಾರಾಕಾರ ಮಳೆಗೆ ಅವಾಂತರಗಳ ಸರಮಾಲೆಯೇ ಸೃಷ್ಟಿಯಾಗ್ಬಿಟ್ಟಿದೆ. ಜನರ ಶಾಂತಿಯನ್ನೇ ಭಂಗಮಾಡಿದೆ.
ರಾಮನಗರ ಜಿಲ್ಲೆಯಲ್ಲೂ ರಕ್ಕಸ ಮಳೆ.. ಕಂಗೆಟ್ಟ ಮಂದಿ..!
ಬೆಂಗಳೂರು, ಮೈಸೂರು ಹೆದ್ದಾರಿ ಫುಲ್ ಟ್ರಾಫಿಕ್ ಜಾಮ್!
ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ರಾಮನಗರ ಜಿಲ್ಲೆಯನ್ನ ಕಂಗೆಡಿಸಿದೆ. ಸತತ ಮಳೆಯಿಂದಾಗಿ ಮೈಸೂರು ಹಾಗೂ ಬೆಂಗಳೂರು ಹೆದ್ದಾರಿಯಲ್ಲಿ ನೀರು ತುಂಬಿ, ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಹೈವೇಲಿ ನೀರು ನಿಂತಿದ್ರಿಂದ ವಾಹನ ಸವಾರರು ಪರದಾಡುವಂತಾಗಿದೆ. ಸುಮಾರು ಸುಮಾರು 30 ಕಿ.ಮೀ ನಷ್ಟು ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ರಿಂದ ಸವಾರರು ಹೈರಾಣಾಗಬೇಕಾಯ್ತು. ಇತ್ತ ಬೆಂಗಳೂರು-ಮೈಸೂರು ಹೆದ್ದಾರಿಯಷ್ಟೇ ಅಲ್ಲ, ಸರ್ವಿಸ್ ರೋಡ್ ಕೂಡ ಸಂಪೂರ್ಣ ಜಲಾವೃತವಾಗಿದೆ. ಬೆಂಗಳೂರು-ಮೈಸೂರು ದಶಪಥ ರಸ್ತೆಯ ಸರ್ವಿಸ್ ರಸ್ತೆಯಲ್ಲೂ ಮಳೆ ನೀರು ನಿಂತು ಸವಾರರು ಪರದಾಡುವಂತಾಯ್ತು.
ಹೊಂಗನೂರು ಕೆರೆ ಭರ್ತಿ.. ಕೋಡಿ ನೋಡಲು ಮುಗಿಬಿದ್ದ ಜನ!
ಧಾರಾಕಾರ ಮಳೆಯಿಂದ ಚನ್ನಪಟ್ಟಣ ತಾಲೂಕಿನ ಹೊಂಗನೂರು ಕೆರೆ ಸಂಪೂರ್ಣ ಭರ್ತಿಯಾಗಿದೆ. ಸತತ ಮಳೆಗೆ ಕೆರೆ ಕೋಡಿ ಬಿದ್ದಿದ್ದು, ಚನ್ನಪಟ್ಟಣ ಹಾಗೂ ಸಾತನೂರು ರಸ್ತೆ ಜಲಾವೃತವಾಗಿದೆ. ಕೆರೆ ಕೋಡಿ ನೋಡಲು ಸುತ್ತ ಮುತ್ತ ಗ್ರಾಮದ ಜನರು ಮುಗಿಬಿದ್ದಿದ್ದಾರೆ. ಮತ್ತೊಂದ್ಕಡೆ ರಾಮನಗರದ ವೃಷಭಾವತಿ ನದಿ ಉಕ್ಕಿ ಹರಿದಿದೆ. ಇದರ ಪರಿಣಾಮ ಐನೋರಪಾಳ್ಯದ ಬಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕೊಚ್ಚಿ ಹೋಗಿತ್ತು. ಮಳೆ ಹಾನಿ ಪ್ರದೇಶದಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ ಕೊಟ್ಟು ಪರಿಶೀಲಿಸಿದ್ರು. ನಮಗೆ ತಾತ್ಕಾಲಿಕ ಪರಿಹಾರ ಬೇಕಿಲ್ಲ, ಶಾಶ್ವತ ಪರಿಹಾರ ಆಗಬೇಕು ಅಂತ ಆಗ್ರಹಿಸಿದ್ರು.
ಮಂಡ್ಯ, ಚಾಮರಾಜನಗರದಲ್ಲೂ ಮಳೆ.. ಜಮೀನು ಜಲಾವೃತ..
ಅತ್ತ ಶ್ರೀರಂಗಪಟ್ಟಣದಲ್ಲೂ ಮಳೆಗೆ ಸಕ್ಕಾಪಟ್ಟೆ ಹಾನಿಯಾಗಿದೆ. ತಾಲೂಕಿನ ಮೇಳಾಪುರ ಗ್ರಾಮದ ನೂರಾರು ಎಕರೆ ಪ್ರದೇಶದ ಮುಳಗಡೆಯಾಗಿದೆ. ಇನ್ನೊಂದ್ಕಡೆ ಮದ್ದೂರು ತಾಲೂಕಿನ ತಿಪ್ಪೂರು ಹಳ್ಳ 80 ವರ್ಷಗಳ ಬಳಿಕ ತುಂಬಿ ಹರಿದಿದೆ. ಪಕ್ಕದ ಚಾಮರಾಜನಗರ ಜಿಲ್ಲೆಯಲ್ಲಿ ಮಳೆಗೆ ಕೆರೆಗಳೆಲ್ಲ ಭರ್ತಿಯಾಗಿವೆ. ಯಳಂದೂರು ತಾಲೂಕಿನ ಯರಗಂಬಳ್ಳಿ ಗ್ರಾಮದ ಹುಳಿಗೆರೆ ಕೆರೆ ತುಂಬಿ, ಜಮೀನುಗಳಿಗೆ ನೀರು ನುಗ್ಗಿದೆ.
ರಾಯಚೂರಿನಲ್ಲೂ ಮಳೆ ಕಾಟ.. ಜನವಸತಿ ಪ್ರದೇಶಕ್ಕೆ ನುಗ್ಗಿ ನೀರು!
ರಾಯಚೂರಿನಲ್ಲೂ ಮಳೆ ಜೋರಾಗಿ ಸುರಿದಿದೆ. ದೇವದುರ್ಗ ತಾಲೂಕಿನ ಜೋಳದಹೆಡಗಿ ಹಳ್ಳ ಉಕ್ಕಿ ಹರಿದಿದ್ದು, ಕಕ್ಕಲದೊಡ್ಡಿ ಗ್ರಾಮಕ್ಕೆ ಮಳೆ ನೀರು ನುಗ್ಗಿ ಹಳ್ಳಿಯೇ ಜಲಾವೃತಗೊಂಡಿದೆ. ಗ್ರಾಮದ ಶಾಲೆಗೂ ನೀರು ಹರಿದಿದೆ.
ಯಾದಗಿರಿಯಲ್ಲಿ ಕೊಚ್ಚಿ ಹೋಗ್ತಿದ್ದ ಲಾರಿ ಚಾಲಕ ಬಚಾವ್!
ಯಾದಗಿರಿಯಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ನದಿಯಲ್ಲಿ ಲಾರಿ ಉರುಳಿ ಬಿದ್ದಿತ್ತು.. ವಡಗೇರಿ ತಾಲೂಕಿನ ಮದರಕಲ್ ಗ್ರಾಮದ ಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದ್ರೂ ಚಾಲಕ ಹುಚ್ಚು ಸಾಹಸಕ್ಕೆ ಮುಂದಾಗಿದ್ದ. ಕಂಟ್ರೋಲ್ ಸಿಗದೇ ಹಳ್ಳಕ್ಕೆ ಲಾರಿ ಬಿದ್ದಿತ್ತು.. ಈ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗ್ತಿದ್ದ ಚಾಲಕನನ್ನ ರಕ್ಷಣೆ ಮಾಡಲಾಗಿದೆ.. ಒಟ್ಟಾರೆ, ಸ್ವಲ್ವ ಬಿಡುವು ನೀಡಿದ್ದ ಮಳೆ, ಮತ್ತೆ ಸೈತಾನ ರೂಪ ತಾಳಿದ್ದು, ಜನರನ್ನ ಕಂಗೆಡಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post