ಗದಗ; ಮಳೆ ನೀರಲ್ಲಿ ತೋಯ್ದು ಹೋಗಿರೋ ಪುಸ್ತಕಗಳು. ಕಷ್ಟಪಟ್ಟು ಹೋಮ್ವರ್ಕ್ ಮಾಡಿಟ್ಟಿದ್ದ ಪುಸ್ತಕಗಳ ಸ್ಥಿತಿ ಕಂಡು ಕಣ್ಣೀರು ಹಾಕ್ತಿರೋ ಬಾಲಕಿ. ಉಕ್ಕಿ ಬರ್ತಿರೋ ಕಣ್ಣೀರು ಒರೆಸುತ್ತಲೇ ಪುಸ್ತಗಳನ್ನು ಒಣಗಿಸ್ತಿರೋ ವಿದ್ಯಾರ್ಥಿನಿ. ಈ ಮನಕಲಕುವ ದೃಶ್ಯ ಕಂಡು ಬಂದಿದ್ದು ಗದಗ ಜಿಲ್ಲೆಯ ಬೆಟಗೇರಿಯಲ್ಲಿ.
ಅಂದಹಾಗೇ, ಈ ಬಾಲಕಿಯ ಹೆಸರು ಸುಮಯ್ಯಾ. ಕಡುಬಡ ಕುಟುಂಬದಲ್ಲಿದ್ದರೂ ಓದಿನಲ್ಲಿ ಮುಂದಿದ್ದಾಳೆ. ಆದರೆ ಮಳೆರಾಯ ಮಾತ್ರ ಈಕೆಯ ಕಣ್ಣಲ್ಲಿ ನೀರು ಬರುವಂತೆ ಮಾಡಿದ್ದಾನೆ. ಮೊನ್ನೆ ರಾತ್ರಿ ಧಾರಾಕಾರವಾಗಿ ಸುರಿದ ಮಳೆ ಸುಮ್ಮಯ್ಯಾಳ ಮನೆಯನ್ನೂ ಜಲಾವೃತ ಮಾಡಿತ್ತು. ಪರಿಣಾಮ ರಾತ್ರಿ 11 ಗಂಟೆವರೆಗೂ ಕೂತು ಬರೆದಿದ್ದ ಹೋಮ್ ವರ್ಕ್ ಸಹಿತ ಪುಸ್ತಕಗಳೆಲ್ಲಾ ಮಳೆ ನೀರಲ್ಲಿ ಒದ್ದೆಯಾಗಿಬಿಟ್ಟಿದೆ. ಬ್ಯಾಗ್ ಸಮೇತ ನೆನೆದ ಪುಸ್ತಕಗಳನ್ನು ಹೊರತೆಗೆಯುತ್ತಿದ್ದಂತೆ ಉಮ್ಮಳಿಸಿ ಬರ್ತಿದ್ದ ದುಃಖ ತಡೆಯಲಾಗದೆ ಬಾಲಕಿ ಕಣ್ಣೀರು ಹಾಕಿದ್ದಾಳೆ.
ತಾಯಿಯನ್ನು ಕಳೆದುಕೊಂಡಿರೋ ಈ ಬಾಲಕಿ ಸುಮಯ್ಯಾಗೆ ಅಜ್ಜಿಯೇ ಆಸರೆ. ಅಜ್ಜಿ ಕಷ್ಟಪಟ್ಟು ದುಡಿದ ಹಣದಿಂದಲೇ ಸುಮಯ್ಯಾಳನ್ನು ಸ್ಕೂಲ್ಗೆ ಕಳಿಸ್ತಿದ್ದಾರೆ. ಆದ್ರೆ ಮಳೆರಾಯ ಮಾತ್ರ ಅಜ್ಜಿ ಹಾಗೂ ಮೊಮ್ಮಗಳ ಪರಿಶ್ರಮಕ್ಕೆ ತಣ್ಣೀರೆರಚಿದ್ದಾನೆ. ಯಾರಾದ್ರೂ ಈ ಬಾಲಕಿ ಶಿಕ್ಷಣಕ್ಕೆ ನೆರವಾಗಿ ಅಂತಾ ಅಜ್ಜಿಯೂ ಕಣ್ಣೀರು ಹಾಕ್ತಿದ್ದಾಳೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post