ವಿಮ್ಸ್.. ಆಸ್ಪತ್ರೆ ಅಂದ್ರೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವವರ ಪ್ರಾಣ ಪಕ್ಷಿಯನ್ನ ಗಿಡುಗನಂತಿರುವ ಜವರಾಯನಿಂದ ರಕ್ಷಿಸುವ ರಕ್ಷಾಕವಚ. ಆದ್ರೆ ವಿಜಯನಗರದ ವಿಮ್ಸ್ ಮಾತ್ರ ಆ ಜವರಾಯನ ಜೊತೆ ಒಪ್ಪಂದ ಮಾಡಿಕೊಂಡಂತೆ ವರ್ತಿಸ್ತಿದ್ದು ರೋಗಿಗಳ ಪಾಲಿಗೆ ಯಮಕಿಂಕರನಂತಾಗಿದೆ. ವೆಂಟಿಲೇಟರ್ ಮಹಾದುರಂತದಿಂದ ಮೂವರು ಸಾವನ್ನಪ್ಪಿದ್ರು. ಆದ್ರೆ ಸಾವಿನ ಸಂಖ್ಯೆ ಹಿಂದೆಯೂ ಅನುಮಾನ ಜೋರಾಗಿದೆ.
ಮೃತರ ಸಂಖ್ಯೆ ಮುಚ್ಚಿ ಹಾಕಲು ಮುಂದಾದ್ರಾ ಅಧಿಕಾರಿಗಳು?
ವಿಜಯನಗರ ವಿಮ್ಸ್ ಆಸ್ಪತ್ರೆಯಲ್ಲಿ ನಡೆದ ವೆಂಟಿಲೇಟರ್ ದುರಂತಕ್ಕೆ ಮೂವರ ಪ್ರಾಣ ಪಕ್ಷಿಗಳು ಹಾರಿ ಹೋಗಿವೆ. ಆದ್ರೆ ದುರಂತದಲ್ಲಿ ಹೆಚ್ಚಿನವರು ಸಾವನ್ನಪ್ಪಿದ್ದು ಆಸ್ಪತ್ರೆ ಅಧಿಕಾರಿಗಳು ಸಾವನ್ನಪ್ಪಿದವರ ಸಂಖ್ಯೆಯನ್ನೇ ಮರೆಮಾಚಲು ಮುಂದಾಗಿದ್ದಾರಂತೆ. ಡೆಂಘೀ ಕಾಣಿಸಿಕೊಂಡ ಹಿನ್ನೆಲೆ ಸೆಪ್ಟೆಂಬರ್ 14ರ ಬೆಳಗ್ಗೆ 10.30ಕ್ಕೆ ಅಡ್ಮಿಟ್ ಆಗಿದ್ದ ಬಾಲಕ ನಿಖಿಲ್ ಸಾವನ್ನಪ್ಪಿದ್ದಾನೆ. ಮಗನ ಸಾವಿಗೆ ವಿದ್ಯುತ್ ಸಂಪರ್ಕ ಕಡಿತ ಹಾಗೂ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತ ಸಂಬಂಧಿಕರು ಆರೋಪಿಸಿದ್ದು ಹೆತ್ತಮ್ಮನ ಆಕ್ರಂದನ ಮುಗಿಲುಮುಟ್ಟಿದೆ.
ಕರೆಂಟ್ ಕಟ್.. ವಿಮ್ಸ್ ಕರ್ಮಕಾಂಡದ ವಿಡಿಯೋ ರಿಲೀಸ್
ವಿದ್ಯುತ್ ಸಂಪರ್ಕ ಕಡಿತದಿಂದ ರೋಗಿ ಸಾವನ್ನಪ್ಪಿದ್ರೂ ಕರೆಂಟ್ ಸಮಸ್ಯೆನೇ ಇಲ್ಲ ಅಂತ ವಿಮ್ಸ್ ಆಸ್ಪತ್ರೆ ವಿತಂಡವಾದ ಮಾಡ್ತಿದ್ದು ಇದೀಗ ವಿಮ್ಸ್ ಕರ್ಮಕಾಂಡ ವಿಡಿಯೋವೊಂದರಲ್ಲ ಬಯಲಾಗಿದೆ. ವಿದ್ಯುತ್ ಇಲ್ಲದೇ ಐಸಿಯುನಲ್ಲಿನ ರೋಗಿಗಳು ನರಳಾಡುತ್ತಿದ್ದು ಸಂಬಂಧಿಕರೇ ರೋಗಿಗೆ ಆಕ್ಸಿಜನ್ ನೀಡಲು ಬಲೂನ್ ಪಂಪ್ ಮಾಡುವ ದೃಶ್ಯ ಹೊರಬಿದ್ದಿದೆ. ಇದರ ಜೊತೆಗೆ ಲೈನ್ ಮನ್ ಜೊತೆ ನಡೆಸಿದ ಮಾತುಕತೆಯ ವಿಡಿಯೋ ಕೂಡ ವಿಮ್ಸ್ ಬಣ್ಣವನ್ನ ಹೊರಗೆಡವಿದೆ.
ಎರಡು ದಿನ ಆದ್ರೂ ಮುಗಿಯದ ಕೇಬಲ್ ರಿಪೇರಿ ಕಾರ್ಯ
ವಿಮ್ಸ್ ಆಸ್ಪತ್ರೆಯಲ್ಲಿ ಕರೆಂಟ್ ಕಟ್ ಆಗಿ ದುರಂತ ಸಂಭವಿಸಿ ಎರಡು ದಿನ ಆದ್ರೂ ಕೇಬಲ್ ರಿಪೇರಿ ಕಾರ್ಯ ಇನ್ನೂ ಮುಗಿದಿಲ್ಲ. ಎಲ್ಲೆಲ್ಲಿ ಕರೆಂಟ್ ವೈರ್ ಕಟ್ಟಾಗಿದೆ ಅನ್ನೋದೇ ಗೊಂದಲವಾಗಿದ್ದು 20ಕ್ಕೂ ಹೆಚ್ಚು ಸಿಬ್ಬಂದಿಯಿಂದ ಆಸ್ಪತ್ರೆ ಮುಂಭಾಗ ವಿದ್ಯುತ್ ದುರಸ್ತಿ ಕಾರ್ಯ ನಡೆಯುತ್ತಿದೆ.
4 ಸಾವು ಹಿನ್ನೆಲೆ ಸರ್ಕಾರದಿಂದ ತನಿಖಾ ತಂಡ ರಚನೆ
ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ನಡೆದ ದುರ್ಘಟನೆಯಿಂದ 4 ಸಾವು ಹಿನ್ನೆಲೆ ಸರ್ಕಾರದಿಂದ ತನಿಖಾ ತಂಡ ರಚನೆಯಾಗಿದೆ. ಡಾ.ಸ್ಮಿತಾ ನೇತೃತ್ವದ ಸಮಿತಿ ವಿಮ್ಸ್ ಆಸ್ಪತ್ರೆಗೆ ಆಗಮಿಸಿದ್ದು ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ಜೊತೆ ಚರ್ಚೆ ನಡೆಸಿದ್ದಾರೆ.
ವಿಮ್ಸ್‌ನಲ್ಲಿ ಬ್ಲಡ್ ರಿಪೋರ್ಟ್ ಪಡೆಯಲು ಹರಸಾಹಸ
ವಿಮ್ಸ್‌ನಲ್ಲಿ ಅವಾಂತರಗಳ ಸರಣಿ ಇನ್ನೂ ಮುಗಿದಿಲ್ಲ. ವಿಮ್ಸ್‌ನಲ್ಲಿ ಬ್ಲಡ್ ರಿಪೋರ್ಟ್ ಪಡೆಯಲು ರೋಗಿಗಳ ಸಂಬಂಧಿಕರು ಪರದಾಡ್ತಿದ್ದಾರೆ. ನೂರಾರು ಸಂಬಂಧಿಕರು ತಿಂಡಿ, ಊಟ ಇಲ್ಲದೆ ಗಂಟೆಗಟ್ಟಲೇ ಕ್ಯೂನಲ್ಲಿ ನಿಂತಿದ್ರೂ ಕರೆಂಟ್ ಇಲ್ಲ ಅಂತಿದ್ದಾರೆಂದು ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.
ಒಟ್ಟಾರೆ ರೋಗಿಗಳ ಪಾಲಿಗೆ ರಕ್ಷಾಕವಚವಾಗಬೇಕಿದ್ದ ವಿಜಯನಗರ ವಿಮ್ಸ್ ಯಮಕಿಂಕರನಂತೆ ವರ್ತಿಸ್ತಿದೆ. ಯಡವಟ್ಟುಗಳ ಮೇಲೆ ಯಡವಟ್ಟು ಮಾಡಿಕೊಳ್ತಾ ಬಡವರ ಪ್ರಾಣದ ಜೊತೆ ಚೆಲ್ಲಾಟ ಆಡ್ತಿದೆ. ಸದ್ಯ ಸಾವಿನ ಬಗ್ಗೆ ತನಿಖಾ ತಂಡ ರಚನೆಯಾಗಿದ್ದು ಸಮಿತಿ ಯಾವ ವರದಿ ಕೊಡುತ್ತೋ ಕಾದು ನೋಡ್ಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post