ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಕನಸಿನ ಮನೆಯನ್ನ ಖಾಲಿ ಮಾಡಿದ್ದಾರಂತೆ. ಇಷ್ಟು ವರ್ಷ ಬದುಕಿ ಬಾಳಿದ್ದ ಅರಮನೆಯನ್ನ ತೊರೆದಿದ್ದಾರಂತೆ. ಕ್ರೇಜಿಸ್ಟಾರ್ ಕನ್ನಡ ಇಂಡಸ್ಟ್ರಿಯ ಕನಸುಗಾರ. ಬರಿ ಸಿನಿಮಾ ವಿಷ್ಯಕ್ಕೆ ಮಾತ್ರವಲ್ಲ ಪರ್ಸನಲ್ ಲೈಫ್ನಲ್ಲೂ ರವಿಚಂದ್ರನ್ ಕನಸುಗಾರನೇ. ನಾನು ಹೀಗೆ ಬದುಕಬೇಕು, ನನ್ನ ಮಕ್ಕಳು ಹೀಗೆ ಬೆಳೆಯಬೇಕು, ನನ್ನ ಮನೆ ಹೀಗೆ ಇರಬೇಕು ಅಂತ ಕನಸುಗಳನ್ನೇ ಕಟ್ಟಿ ಜೀವಿಸಿದವರು. ಹೀಗೆ ಕನಸು ಕಂಡು, ಮನಸು ಮಾಡಿ, ಇಷ್ಟಪಟ್ಟು ಕಟ್ಟಿದ ಮನೆಯನ್ನ ಇಂದು ತೊರೆದಿದ್ದಾರಂತೆ.
ದಶಕಗಳ ಕಾಲ ನೆಲೆಸಿದ್ದ ಮನೆಯನ್ನ ಕ್ರೇಜಿಸ್ಟಾರ್ ಖಾಲಿ ಮಾಡಿದ್ದಾರೆ ಎಂಬ ಕುತೂಹಲಕಾರಿ ಸಂಗತಿ ಹೊರಬಿದ್ದಿದೆ. ಹೌದು, ಬೆಂಗಳೂರಿನ ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ರವಿಚಂದ್ರನ್ ಅವರ ಮನೆಯಿರೋದು ಬಹಳಷ್ಟು ಸಿನಿಮಾ ಮಂದಿಗೆ ಗೊತ್ತು. ವೀರಸ್ವಾಮಿ ಅವರ ಕಾಲದಿಂದಲೂ ವಾಸವಿದ್ದ ಮನೆ ಇದಾಗಿದ್ದು, ಹಲವು ಸಂತಸಗಳಿಗೆ ಕಾರಣವಾಗಿದ್ದ ಮನೆಯೂ ಹೌದು. ಇಂಥಾ ಮನೆಯನ್ನ ರಾಮಾಚಾರಿ ಖಾಲಿ ಮಾಡಿದ್ದಾರಂತೆ.
ಮನೆ ಖಾಲಿ ಮಾಡಿದ್ದೇಕೆ ಕನಸುಗಾರ ರವಿಚಂದ್ರನ್
ತಮ್ಮ ಸುದೀರ್ಘ ಜರ್ನಿಯನ್ನು ಇದೇ ಮನೆಯಲ್ಲಿ ಕಳೆದಿರುವ ರವಿಚಂದ್ರನ್ ಇದ್ದಕ್ಕಿದ್ದಂತೆ ಈ ಮನೆ ತೊರೆದಿದ್ದು ಯಾಕೆ ಎಂಬ ಪ್ರಶ್ನೆ ಕಾಡ್ತಿದೆ. ಆದ್ರೆ, ನಮ್ಮ ಬಳಿಯೂ ಸ್ಪಷ್ಟ ಉತ್ತರ ಇಲ್ಲ. ಕ್ರೇಜಿಸ್ಟಾರ್ ಆಪ್ತರು ಹೇಳಿರುವ ಪ್ರಕಾರ, ವಾಸ್ತು ಕಾರಣದಿಂದ ಈ ಮನೆ ತೊರೆದಿದ್ದಾರೆ ಅಂತ ಗೊತ್ತಾಗಿದೆ. ಆದರೆ, ಶಾಶ್ವತವಾಗಿ ಈ ಮನೆ ಖಾಲಿ ಮಾಡಿದ್ರಾ ಅಥವಾ ವಾಸ್ತು ಕಾರಣದಿಂದ ರಿಪೇರಿ ಏನಾದರೂ ಮಾಡೋದಕ್ಕಾಗಿ ತಾತ್ಕಾಲಿಕವಾಗಿ ಮನೆ ತೊರೆದಿದ್ದಾರೆ ಅನ್ನೋದು ಗೊತ್ತಾಗಬೇಕಿದೆ. ಕ್ರೇಜಿಸ್ಟಾರ್ಗೆ ಈ ಮನೆ ಎಲ್ಲವೂ ಕೊಟ್ಟಿದೆ. ಈ ಮನೆಯಲ್ಲಿದ್ದುಕೊಂಡು ಹಿಟ್ ಮೇಲೆ ಹಿಟ್ ಚಿತ್ರಗಳನ್ನ ಕೊಟ್ಟಿದ್ದಾರೆ. ಸತತ ಸೋಲುಗಳನ್ನ ಕಂಡಿದ್ದಾರೆ. ಲಾಭವೂ ಮಾಡಿದ್ದಾರೆ, ನಷ್ಟವೂ ಅನುಭವಿಸಿದ್ದಾರೆ. ನೋವು ಕಂಡಿದ್ದಾರೆ, ನಲಿವು ಕಂಡಿದ್ದಾರೆ.
ಮಗಳು ಮತ್ತು ಮಗನ ಮದುವೆ ಮಾಡಿದ್ರು. ತಾಯಿಯನ್ನು ಕೊನೆಯವರೆಗೂ ತುಂಬಾ ಚೆನ್ನಾಗಿ ನೋಡಿಕೊಂಡ್ರು. ಆದ್ರೆ ಇತ್ತೀಚೆಗೆ ರವಿಚಂದ್ರನ್ಗೆ ವೃತ್ತಿ ಜೀವನ ಮಾತ್ರ ಯಶಸ್ಸಿಗಿಂತ ಹಿನ್ನಡೆನೇ ಜಾಸ್ತಿ ಕೊಟ್ಟುಬಿಡ್ತು. ಹತ್ತು ಸಿನಿಮಾ ಮಾಡಿ ಗೆದ್ರು ಒಂದೇ ಸಿನಿಮಾದಲ್ಲಿ ಗಳಿಸಿದ್ದೆನ್ನಲ್ಲ ಕಳೆದುಕೊಂಡು ಬಿಟ್ಟರು ರವಿಮಾಮ. ಈ ಮನೆ ಖಾಲಿ ಮಾಡ್ಬೇಕು ಅಂತ ಬಹಳ ದಿನಗಳ ಹಿಂದೆಯೆ ಅಂದುಕೊಂಡಿದ್ರಂತೆ. ಆದರೆ, ತಾಯಿ ಕೊನೆಯವರೆಗೂ ಇದೇ ಮನೆಯಲ್ಲಿ ಇರಬೇಕು ಅನ್ನೋ ಕಾರಣಕ್ಕೆ ಆಗ ಆ ನಿರ್ಧಾರ ಮಾಡಿರಲಿಲ್ಲ. ಇದೀಗ, ತಮ್ಮ ಎಲ್ಲಾ ಕರ್ತವ್ಯ ಮುಗಿಸಿರುವ ರವಿಚಂದ್ರನ್, ನಂಬಿಕೆ ಎನ್ನುವ ಅದೃಷ್ಟ ಆಟದ ಮೊರೆ ಹೋಗಿದ್ದಾರೆ.
ಸದ್ಯಕ್ಕೆ ಈ ಮನೆ ನಿಮಗೆ ಆಗಿ ಬರ್ತಿಲ್ಲ, ಬೇರೆ ಮನೆಗೆ ಹೋಗಿ, ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಕಾಣುವಿರಿ ಅಂತ ಆಪ್ತರೊಬ್ಬರು ಸಲಹೆ ಕೊಟ್ಟಿದ್ದು, ಆ ಕಾರಣದಿಂದಲೇ ರವಿಚಂದ್ರನ್ ಈ ನಿರ್ಧಾರ ಮಾಡಿದ್ರು ಎಂದು ತಿಳಿದುಬಂದಿದೆ. ವಾಸ್ತು ಕಾರಣದಿಂದಲೇ ಹಳೆ ಮನೆ ಖಾಲಿ ಮಾಡಿದ್ದಾರೆ ಅಂತ ಗೊತ್ತಾಗಿದೆ. ಶಾಶ್ವತವಾಗಿ ಈ ಮನೆಯಿಂದ ದೂರ ಇರ್ತಾರಾ? ಅಥವಾ ಮತ್ತೆ ಪುನರ್ ನಿರ್ಮಾಣ ಮಾಡಿ ಏನಾದರೂ ಈ ಮನೆಗೆ ವಾಪಸ್ ಬರ್ತಾರಾ ಸದ್ಯಕ್ಕೆ ಉತ್ತರ ವಿಲ್ಲದ ಪ್ರಶ್ನೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post