2023ರ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಬೇಕು. ಇದು ಕಾಂಗ್ರೆಸ್ ಕನಸು. ಎರಡು ರೀತಿ ಎಲೆಕ್ಷನ್ನಲ್ಲಿ ಗೆದ್ದು ಬೀಗಬಹುದು. ಒಂದು ಜನರಿಗೆ ಹತ್ರ ಆಗೋ ಮೂಲಕ.. ಇನ್ನೊಂದು ಜನರಿಂದ ಎದುರಾಳಿಗಳನ್ನ ದೂರ ಮಾಡೋ ಮೂಲಕ. ಇದೀಗ ಈ ಕಾಂಗ್ರೆಸ್ ಎರಡನೇ ಆಯ್ಕೆಯಲ್ಲಿ ದೊಡ್ಡ ಅಸ್ತ್ರವನ್ನೇ ಪ್ರಯೋಗ ಮಾಡಿದೆ. ಅದೇ ಪೇ-ಸಿಎಂ
ಪೇಸಿಎಂ vs ಪೇ ಫಾರ್ ಕಾಂಗ್ರೆಸ್ ಮೇಡಂ. ಫಾರ್ಟಿ ಪರ್ಸೆಂಟ್, ಫಿಫ್ಟಿ ಪರ್ಸೆಂಟ್, ಹಂಡ್ರೆಡ್ ಪರ್ಸೆಂಟ್. ಒಂದಾ ಎರಡಾ ಕಳೆದೊಂದು ವಾರದಿಂದ ಪೋಸ್ಟರ್ ವಾರ್ನಲ್ಲಿ ತೂರಿ ಬರ್ತಿರೋ ಆರೋಪದ ಬಾಣಗಳು ಚುನಾವಣಾ ಅಖಾಡವನ್ನ ಕಾವೇರುವಂತೆ ಮಾಡಿದೆ. ಅದರಲ್ಲೂ ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಅಸ್ತ್ರವನ್ನೇ ಹುಡುಕ್ತಿದ್ದ ಹಸ್ತಪಾಳಯಕ್ಕೆ ಬ್ರಹ್ಮಾಸ್ತ್ರವೇ ಕೈಗೆ ಸಿಕ್ಕಿಬಿಟ್ಟಿದೆ.
‘ಪೇಸಿಎಂ’ ಮೂಲಕವೇ ಬಿಜೆಪಿ ಕಟ್ಟಿಹಾಕಲು ನಿರ್ಧಾರ
ಚುನಾವಣೆವರೆಗೂ ನಡೆಯಲಿದೆ ಪೇಸಿಎಂ ಅಭಿಯಾನ
‘ಪೇಸಿಎಂ’ ಅನ್ನೋ ಸರ್ಕಾರ ವಿರೋಧಿ ಅಭಿಯಾನ ಹಮ್ಮಿಕೊಂಡಿದ್ದ ಕಾಂಗ್ರೆಸ್ಗೆ ದೊಡ್ಡ ಮೈಲೇಜ್ ಸಿಕ್ಕಂತಾಗಿದೆ. ಹೀಗಾಗಿ ಇದನ್ನೇ 2023ರ ವಿಧಾನಸಭಾ ಚುನಾವಣೆಗೆ ದೊಡ್ಡ ಆಯುಧವಾಗಿ ಇಟ್ಟುಕೊಳ್ಳಲು ಕಾಂಗ್ರೆಸ್ ಕಲಿಗಳು ನಿರ್ಧರಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
6 ತಿಂಗಳು ‘ಪೇಸಿಎಂ’ ಅಭಿಯಾನ!
ಈಗಾಗಲೇ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಪ್ರತಿಧ್ವನಿಸ್ತಿರೋ ಪೇಸಿಎಂ ಅಭಿಯಾನ ರಾಜ್ಯ ಸರ್ಕಾರಕ್ಕೆ ತಲೆ ನೋವು ತಂದಿಟ್ಟಿರೋದು ಸುಳ್ಳಲ್ಲ. ಹೀಗಾಗಿ ಪೇಸಿಎಂ ಅಭಿಯಾನಕ್ಕೆ ಸಿಕ್ಕಿರುವ ಅಭೂತಪೂರ್ವ ಯಶಸ್ಸನ್ನ ಚುನಾವಣೆವರೆಗೂ ಮುಂದುವರೆಸಲು ಚಿಂತನೆ ನಡೆಸಲಾಗಿದೆ.
ಮುಂದಿನ ಚುನಾವಣಾ ದೃಷ್ಟಿಯಿಂದ ಪೇಸಿಎಂ ಅಭಿಯಾನ ಜೀವಂತವಾಗಿಟ್ಟುಕೊಳ್ಳಲು ನಿರ್ಧಾರ ಮಾಡಲಾಗಿದ್ದು, 6 ತಿಂಗಳು ಕಾಂಗ್ರೆಸ್ ಇದನ್ನ ಮುಂದುವರಿಸಲಿದೆ. ಹೀಗೆ ಪೋಸ್ಟರ್ ಕ್ಯಾಂಪೇನ್ನಿಂದ ಹೊಡೆತ ನೀಡಲು ಹಸ್ತಪಡೆ ತಂತ್ರ ರೂಪಿಸಿದೆ ಎನ್ನಲಾಗ್ತಿದೆ.
2018ರ ಚುನಾವಣೆಯಲ್ಲಿ ಇದೇ ಅಸ್ತ್ರ ಪ್ರಯೋಗಿಸಿದ್ದ ಬಿಜೆಪಿ
ಇನ್ನು, 2018ರ ಚುನಾವಣೆಯಲ್ಲಿ ಬಿಜೆಪಿ ಇದೇ ಅಸ್ತ್ರ ಪ್ರಯೋಗಿಸಿತ್ತು. ಸಿದ್ದರಾಮಯ್ಯ ಸರ್ಕಾರದ ವಿರುದ್ಧ 10% ಕಮಿಷನ್ ಆರೋಪ ಮಾಡಿತ್ತು. ಖುದ್ದು ಪ್ರಧಾನಿ ಮೋದಿಯೇ 10% ಕಮಿಷನ್ ಸರ್ಕಾರದ ರಣಕಹಳೆ ಮೊಳಗಿಸಿದ್ರು. ಇದಕ್ಕೆ ಈ ಬಾರಿ ಕೌಂಟರ್ ಕೊಡಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ.
ಒಟ್ಟಾರೆ ಬಿಜೆಪಿ ವಿರುದ್ಧ 40% ಕಮಿಷನ್ ಟ್ರೆಂಡ್ ಸೆಟ್ಗೆ ಕಾಂಗ್ರೆಸ್ ಕಲಿಗಳು ತೀರ್ಮಾನ ಮಾಡಿದ್ದಾರೆ. ಬಿಜೆಪಿಯ ಪ್ರತೀ ಕಾರ್ಯಕ್ರಮದ ಸಮೀಪವೇ ಅಭಿಯಾನವನ್ನ ನಡೆಸಿ, ಕಮಿಷನ್ ಬಗ್ಗೆ ಪ್ರಸ್ತಾಪಿಸಿ ಮುಜುಗರ ಮಾಡಲು ತೆರೆಮರೆ ತಯಾರಿ ನಡೆದಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಇದಿಷ್ಟು ಒಂದೆಡೆಯಾದ್ರೆ, ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಪೇ ಸಿಎಂ ವಾರ್ ರಾಜ್ಯಾದ್ಯಂತ ವಿಸ್ತರಿಸುವಂತೆ ಕಾಣ್ತಿದೆ. ಇದರ ಮೊದಲ ಭಾಗವಾಗಿ ಮಡಿಕೇರಿಯಲ್ಲಿ ಪೋಸ್ಟರ್ ವಾರ್ನ ಕಿಡಿ ಹೊತ್ತಿತ್ತು. ಪೇಸಿಎಂ ಬಿತ್ತಿ ಪತ್ರ ಹಿಡಿದು ಬಿಜೆಪಿ ವಿರುದ್ಧ ಘೋಷಣೆ ಕೂಗಿದ ಸುಮಾರು 15 ಮಂದಿ ಕೈ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದ್ರು.
ಒಟ್ಟಿನಲ್ಲಿ 2018ರಲ್ಲಿ ಬಿಜೆಪಿ ಹಾಕಿದ್ದ ಒಗ್ಗರಣೆಯಲ್ಲೇ ಇದೀಗ ಚಿತ್ರಾನ್ನ ಮಾಡಲು ಕಾಂಗ್ರೆಸ್ ಮುಂದಾಗಿದೆ. ಆಗ ಬಿಜೆಪಿ 10 ಪರ್ಸೆಂಟ್ ಎಣ್ಣೆ ಹಾಕಿದ್ರೆ, ಈಗ 40 ಪರ್ಸೆಂಟ್ ಕರಿಬೇವು ಹಾಕಲು ಕಾಂಗ್ರೆಸ್ ಮುಂದಾಗಿದೆ. ಹೀಗೆ ಚುನಾವಣಾ ಚಿತ್ರನ್ನಾ ಈ ಬಾರಿ ವಿಭಿನ್ನ ರುಚಿಗೆ ಸಾಕ್ಷಿಯಾಗಲಿದೆ. ಅದನ್ನ ಆಸ್ವಾದಿಸಿ ಮತದಾರ ಯಾರಿಗೆ ಪೂರ್ತಿ ಬಿಲ್ ಕಟ್ತಾನೋ ಕಾದು ನೋಡಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post