ಬೆಂಗಳೂರು: ಪಿಎಫ್‌ಐ ಸಂಘಟನೆ ಬ್ಯಾನ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿ, ಎಲ್ಲರಿಗೂ ಒಂದೇ ಕಾನೂನು ಬಳಕೆ ಮಾಡಿ ಅಂತ ಆಗ್ರಹಿಸಿದ್ದಾರೆ.
ನಗರದಲ್ಲಿ ನ್ಯೂಸ್ಫಸ್ಟ್ ಜೊತೆಗೆ ಮಾತನಾಡಿದ ಇಬ್ರಾಹಿಂ ಅವರು, ಮತೀಯ ಸಂಘಟನೆ ಕೇವಲ ಪಿಎಫ್‌ಐ ಅಷ್ಟೇನಾ? ಶ್ರೀರಾಮಸೇನೆ, ಆರ್‌ಎಸ್‌ಎಸ್ ಇಲ್ವಾ? ರೂಲ್ ಎಲ್ಲರಿಗೂ ಒಂದೇ ಅಲ್ವಾ? ಚಾಟಿ ಬೀಸಿದರೆ ಎರಡೂ ಎತ್ತುಗಳಿಗೂ ಬೀಸಬೇಕು. ಒಂದೆತ್ತಿಗೆ ಒಡೆದು ಇನ್ನೊಂದು ಎತ್ತಿಗೆ ಒಡೆಯದಿದ್ರೆ ಹೇಗೆ? ಪಿಎಫ್‌ಐ ಇಂತಹ ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದೆ ಅಂತ ಕಾರಣಗಳನ್ನ ಹೇಳಿ. ಆರ್‌ಎಸ್‌ಎಸ್ ಅವರು ಖಡ್ಗ, ತ್ರಿಶೂಲ ಇಟ್ಕೊಂಡು ಪಥ ಸಂಚಲನ ಮಾಡ್ತಾರೆ. ಮರ್ಕೆರಾದಲ್ಲಿ ಗನ್ ಟ್ರೈನಿಂಗ್ ಕೊಟ್ರಲ್ಲ ಕಣ್ಣಿಗೆ ಕಾಣಲಿಲ್ವಾ..? ಎಂದು ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದ್ರು.
ವಿನಾಶಕಾಲೆ ವಿಪರೀತ ಬುದ್ಧಿ, ಯಾವುದೇ ಸಂಘಟನೆ ಬ್ಯಾನ್ ಮಾಡುವಾಗ ದಾಖಲೆ ಇರಬೇಕು. ಐದು ವರ್ಷಗಳ ಕಾಲ ಬ್ಯಾನ್ ಯಾಕೆ..? ಇವರು ಮ್ಯಾಚುರಿಟಿ ಬಂದಿಲ್ಲವೇ. ಯಾವ ಆಧರದ ಮೇಲೆ ಬ್ಯಾನ್ ಮಾಡಿದ್ದೀರಿ..? ಎಲೆಕ್ಷನ್ ಗಾಗಿ ಈ ಬ್ಯಾನ್ ಮಾಡಿದ್ದಾರೆ. ಭಜರಂಗದಳದವರ ವಿರುದ್ಧ ಆರೋಪ ಸಾಬೀತಾದ್ರು ಬ್ಯಾನ್ ಇಲ್ಲ. ಜನರ ಗಮನ ಬೇರೆ ಕಡೆ ತಿರುಗಿಸಲು ಬ್ಯಾನ್ ನಾಟಕ ಮಾಡ್ತಿದ್ದಾರೆ. ರೈತರ ಸಮಸ್ಯೆ ಚರ್ಚೆ ಇಲ್ಲ, ನಿರುದ್ಯೋಗ ದ ಬಗ್ಗೆ ಚರ್ಚೆ ಇಲ್ಲ. ಮಳೆಯಿಂದ ರೈತರ ಬೆಳೆ ನಾಶವಾಗಿದೆ, ಅದಕ್ಕೆ ಪರಿಹಾರ ಕೊಡ್ತಿಲ್ಲ. ಜನರ ಗಮನ ಬೇರೆ ಕಡೆ ತಿರುಗಿಸಲು ಈ ಬ್ಯಾನ್ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಪಾರ್ಲಿಮೆಂಟ್ ತೆಗೆದು ಸಂಘ ಪರಿವಾರ ಸಿದ್ಧಾಂತ ಅಳವಡಿಕೆ ಸಾಧ್ಯವಿಲ್ಲ. ಇಡೀ ದೇಶ ನಿಮ್ಮ ವಿರುದ್ಧ ತಿರುಗಿ ಬೀಳುತ್ತೆ ಎಂದು ಎಚ್ಚೆರಿಕೆ ನೀಡಿದ್ರು.
ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಿಸಿದ್ದು ಮುತಾಲಿಕ್ ಜನ ಅಂತ ಸಿದ್ದರಾಮಯ್ಯ ಅವರಿಗೆ ಗೊತ್ತಿದ್ರು ನಿಷೇಧ ಮಾಡಲಿಲ್ಲ. ಆಗ ಸಿದ್ದರಾಮಯ್ಯನವರೇ ಸಿಎಂ ಆಗಿದ್ರೂ ಬ್ಯಾನ್ ಮಾಡಲಿಲ್ಲ. ಕಡ್ಲೆ ಕಾಯಿ, ಸೌತೆ ಕಾಯಿ ಮಾರಿಕೊಂಡು ಜೀವನ ಮಾಡೋ ಜನರ ಮೇಲೆ ಯಾಕೆ ದೌರ್ಜನ್ಯ ಮಾಡ್ತೀರಿ. ನೀವೆ ಹೇಳ್ತೀರ ಪಂಕ್ಚರ್ ಹಾಕೋರು ಅಂತ, ಪಂಕ್ಚರ್ ಹಾಕೋರು ದೇಶಕ್ಕೆ ಬಾಂಬ್ ಇಡ್ತಾರಾ..? ಅವಿದ್ಯಾವಂತರು, ತಿನ್ನಕ್ಕೆ ಅನ್ನ ಇಲ್ಲ ಅಂತ ಒಂದು ಕಡೆ ಹೇಳುತ್ತೀರಿ. ಇನ್ನೊಂದುಕಡೆ ದೇಶಕ್ಕೆ ಇವರಿಂದಲೇ ಗಂಡಾಂತರ ಅಂತ ನೀವೆ ಹೇಳ್ತೀರಿ.. ಯಾವುದು ಸತ್ಯ ಯಾವುದು ಸುಳ್ಳು.
ಮುಸ್ಲಿಂರಿಗೆ ಕಾಂಗ್ರೆಸ್ ಇದ್ದಾಗಲೂ ಇದೇ ಪರಿಸ್ಥಿತಿ. ಸಿದ್ದರಾಮಯ್ಯ ಅವರಿಗೆ ವೋಟು ಹಾಕಿಸಿಕೊಳ್ಳಬೇಕಾದ್ರೆ ಚೆನ್ನಾಗಿತ್ತಾ..? ನೀವೇ ಅಧಿಕಾರಲ್ಲಿ ಇದ್ರು ಕ್ರಮಕೈಗೊಂಡಿಲ್ಲ. ಪಿಎಫ್‌ಐ ದೇಶ ವಿರೋಧಿ ಕೃತ್ಯ ಎಸಗಿದೆ ಅನ್ನೋದಕ್ಕೆ ಯಾವುದಾದರೂ ಒಂದು ಉದಾಹರಣೆ ಇದೆಯಾ..? ಸುಳ್ಳನ್ನ ಯಾಕೆ ಹೇಳ್ತೀರ, ಇದು ನಿಮಗೆ ಶೋಭೆ ತರಲ್ಲ ಎಂದು ಕಿಡಿಕಾರಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post