ದೇಶದಲ್ಲಿ ಪಿಎಫ್‌ಐ ಸಂಸ್ಥೆಗೆ ಎಳ್ಳುನೀರು ಬಿಟ್ಟಿದ್ದಾಯ್ತು. ದೇಶದ್ರೋಹಿ ಹಣೆಪಟ್ಟಿ ಕಟ್ಟಿಕೊಂಡಿದ್ದ ಸಂಘಟನೆ ಬ್ಯಾನ್ ಕೂಡಾ ಆಯ್ತು. ಆದ್ರೀಗ ಭಯೋತ್ಪಾದನೆಗೆ ಕುಮ್ಮಕ್ಕು ನೀಡ್ತಿದ್ದ ಸಂಘಟನೆ ನಿಷೇಧವಾಗ್ತಿದ್ದಂತೆ ದೇಶದೆಲ್ಲೆಡೆ ‘ಹೈ’ ಅಲರ್ಟ್ ಘೋಷಿಸಲಾಗಿದೆ. ವಿಧ್ವಂಸಕ ಕೃತ್ಯಗಳು ನಡೆಯುವ ಸೂಚನೆ ಹಿನ್ನೆಲೆ ಎಲ್ಲಾ ರಾಜ್ಯಗಳಿಗೂ ಸೂಚನೆ ರವಾನೆಯಾಗಿದೆ. ಜೊತೆಗೆ ಬ್ಯಾನ್ ಆಗಿರೋ ಸಂಘಟನೆಗೆ ಮತ್ತೆ ರೇಡ್ ಶಾಕ್ ತಟ್ಟಿದೆ.
ವಿಧ್ವಂಸಕ ಕೃತ್ಯ ನಡೆಯುವ ಸೂಚನೆ ಕೊಟ್ಟ ‘ಗುಪ್ತಚರ’
ಪಾಪುಲರ್ ಫ್ರಂಟ್ ಆಫ್ ಇಂಡಿಯಾ, ದೇಶದಲ್ಲಿ 5 ವರ್ಷ ಬ್ಯಾನ್ ಆಗಿರೋ ಸಂಘಟನೆ. ಗಲಭೆ, ಭಯೋತ್ಪಾದನೆಯ ಭಯದ ವಾತಾವರಣ ನಿರ್ಮಿಸಿದ್ದ ಸಂಘಟನೆಗೆ ಕೊನೆ ಮೊಳೆ ಹೊಡೆಯಲಾಗಿದೆ. ಇದರ ಆಟಾಟೋಪಕ್ಕೆ ಬ್ರೇಕ್ ಕೂಡಾ ಬಿದ್ದಿದೆ. ಈ ದೇಶವಿರೋಧಿ ಹಣೆಪಟ್ಟಿ ಹೊತ್ತಿದ್ದ ಸಂಘಟನೆ ಬ್ಯಾನ್ ಆಗ್ತಿದ್ದಂತೆ ದೇಶದೆಲ್ಲೆಡೆ ಹೈ ಅಲರ್ಟ್ ಘೋಷಸಲಾಗಿದೆ. ಭಾರತದೆಲ್ಲೆಡೆ ವಿಧ್ವಂಸಕ ಕೃತ್ಯಗಳು ನಡೆಯೋ ಸಾಧ್ಯತೆ ಇದ್ದು ಎಲ್ಲಾ ರಾಜ್ಯಗಳ ಪೊಲೀಸ್ ಇಲಾಖೆ ಅಲರ್ಟ್ ಆಗಿರುವಂತೆ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ರವಾನಿಸಿದೆ.
‘ಹೈ’ ಅಲರ್ಟ್ ಸೂಚನೆ
- PFIನ ನಾಯಕರನ್ನ ಬಂಧಿಸಿರುವ NIA ಹಾಗೂ ಪೊಲೀಸರು
- ಕಾನೂನು ಹೋರಾಟ ಮಾಡಲು ನಾಯಕರು ಹೊರಗೆ ಇಲ್ಲ
- ಈ ಸಂಘಟನೆ ನಿಷೇಧದಿಂದ ಯಾರೂ ಧ್ವನಿ ಎತ್ತುವಂತೆ ಇಲ್ಲ
- PFI ಬಹಿರಂಗ, ಕಾನೂನಾತ್ಮಕವಾಗಿ ಏನು ಮಾಡದ ಪರಿಸ್ಥಿತಿ
- ವಿಧ್ವಂಸಕ ಕೃತ್ಯಕ್ಕೆ ಮುಂದಾಗುವ ಸೂಚನೆಯಿಂದ ಎಚ್ಚರಿಕೆ
- ವಿಧ್ವಂಸಕ ಕೃತ್ಯಕ್ಕೆ ಫಂಡಿಂಗ್ ಸಹ ಈಗ ಬರುವ ಸಾಧ್ಯತೆ
- ಕಟ್ಟುನಿಟ್ಟಿನ ಅಲರ್ಟ್ಗೆ ಸೂಚಿಸಿದ ಕೇಂದ್ರ ಗುಪ್ತಚರ ಇಲಾಖೆ
ಬ್ಯಾನ್ ಬೆನ್ನಲ್ಲೇ ಪಿಎಫ್‌ಐ ಕಚೇರಿಗಳು ಸೀಜ್
ಪಿಎಫ್‌ಐ ಬ್ಯಾನ್ ಆಗಿದ್ರೂ ಈ ಸಂಘಟನೆಯ ನಾಯಕರ ಮೇಲಿನ ದಾಳಿ ಮುಂದುವರಿದಿದೆ. ಇವತ್ತೂ ಕೂಡಾ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಿಎಫ್‌ಐ ಕಚೇರಿ ಮತ್ತು ನಾಯಕರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಹಜ್ರತ್ ಹಮೀದ್ ಶಾ ಕಾಂಪ್ಲೆಕ್ಸ್‌ನಲ್ಲಿರೋ ಪಿಎಫ್‌ಐ ಕಚೇರಿಯನ್ನ ಸೀಜ್ ಮಾಡಲಾಗಿದೆ. ಇತ್ತ ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆಯಲ್ಲಿರೋ ಪಿಎಫ್‌ಐ ಕಚೇರಿ ಮೇಲೆ ದಾಳಿ ನಡೆದಿದೆ. ಜೊತೆಗೆ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮುನೀರ್ ಮನೆಯಲ್ಲೂ ಪೊಲೀಸರು ತಲಾಶ್ ನಡೆಸಿದ್ದಾರೆ. PFI ಜಿಲ್ಲಾಧ್ಯಕ್ಷ ಚಾಂದ್ ಪಾಷಾ ಮನೆ ಮೇಲೂ ದಾಳಿ ನಡೆದಿದೆ. ಇತ್ತ ಶಿವಮೊಗ್ಗದಲ್ಲೂ ಪಿಎಫ್‌ಐ ಎಸ್‌ಡಿಪಿಐ ಕಚೇರಿ ಮೇಲೂ ರೇಡ್ ನಡೆದಿದೆ.
PFI ಬ್ಯಾನ್, ತಲೆ ಎತ್ತುತ್ತಾ ಮತ್ತೊಂದು ಸಂಘಟನೆ?
ಪಿಎಫ್‌ಐ ಸಂಘಟನೆ ಬ್ಯಾನ್ ಆಗಿದೆ. ಅಲ್ಲದೇ ಯುಎಪಿಎ ಕಾಯ್ದೆಯಡಿ ಇನ್ನೂ ಐದು ವರ್ಷ ಈ ಸಂಘಟನೆ ಹೆಸರನ್ನ ಎತ್ತುವಂತಿಲ್ಲ. ಸಭೆ ಸೇರುವಂತಿಲ್ಲ. ಪ್ರತಿಭಟನೆಯನ್ನೂ ಮಾಡುವಂತಿಲ್ಲ. ಆದ್ರೆ, ವಿದೇಶದಲ್ಲಿರೋ ಕೆಲ ಮುಖಂಡರು ಪಿಎಫ್‌ಐಗೆ ಪರ್ಯಾಯವಾಗಿ ಮತ್ತೊಂದು ಸಂಘಟನೆ ಓಪನ್ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆದ್ರೆ, ಪಿಎಫ್‌ಐ ಕಾರ್ಯಕರ್ತರ ಹೊಸ ಸಂಘಟನೆ ಪ್ಲಾನ್‌ನ ಚಿಗುರಿನಲ್ಲೇ ಚಿವುಟಿ ಹಾಕಲು ಕೇಂದ್ರ ಸರ್ಕಾರ ಕೆಲ ಸೂತ್ರಗಳನ್ನ ಅನುಸರಿಸಲು ಮುಂದಾಗಿದೆ.
ಸರ್ಕಾರದ ಪ್ಲಾನ್ ಏನು?
ಪಿಎಫ್‌ಐಗೆ ಪರ್ಯಾಯವಾಗಿ ಹುಟ್ಟಿಕೊಳ್ಳುವ ಹೊಸ ಸಂಘಟನೆಯಿಂದ ಹಳೇ ಚಾಳಿ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಈ ಸಂಘಟನೆಯಲ್ಲಿ ಗುರುತಿಸಿಕೊಂಡವರಿಗೆ ಹೊಸ ಸಂಘಟನೆಗೆ ಅವಕಾಶ ಕೊಡದಿರಲು ತಂತ್ರ ಹೆಣೆಯಲಾಗುತ್ತಿದೆ. ಜೊತೆಗೆ ಈ ರೀತಿಯ ಸಂಘಟನೆಗೆ ಬ್ರೇಕ್ ಹಾಕಲು ಪ್ಲಾನ್ ಕೇಂದ್ರ ಸರ್ಕಾರ ಕೌಂಟರ್ ಪ್ಲಾನ್ ರೆಡಿ ಮಾಡಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.
ಪಿಎಫ್‌ಐ ಬ್ಯಾನ್ ಆಯ್ತು.. ಆದ್ರೆ, ಇದೇ ರೀತಿಯ ಸಿದ್ಧಾಂತವನ್ನ ಮೈಗೂಡಿಸಿಕೊಂಡಿರೋ ಎಸ್‌ಡಿಪಿಐ ಬ್ಯಾನ್ ಆಗಿಲ್ವಲ್ಲ ಎಂಬ ಪ್ರಶ್ನೆ ಎದ್ದಿದೆ. ಪಿಎಫ್‌ಐನ ಪಾಪದ ಕೂಸಿನಂತೆ ಕಾಣ್ತಿರೋ ಎಸ್‌ಡಿಪಿಐಗೂ ಸಮಾಧಿ ತೋಡಲು ತಯಾರಿ ನಡೆದಿದೆಯಂತೆ. ಆದ್ರೆ, ಚುನಾವಣಾ ಆಯೋಗ ಅನುಮತಿ ನೀಡಿದ್ರೆ ಇದರ ಚಾಪ್ಟರ್ ಕೂಡಾ ಕ್ಲೋಸ್ ಆಗೋದು ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post