ಕಾಂಗ್ರೆಸ್ ಪಾಳಯದಲ್ಲಿ ಅಧ್ಯಕ್ಷೀಯ ಚುನಾವಣೆ ಗರಿಗೆದರಿದೆ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು ಪಕ್ಷ ನಿಷ್ಠೆಯೇ ಖರ್ಗೆ ಅವರಿಗೆ ಅದೃಷ್ಟ ತರುವಂತಿದೆ. ಕಮಲ್ನಾಥ್ ಒಲ್ಲೆ ಎಂದ ಬಳಿಕ ಸೋನಿಯಾ ಗಾಂಧಿ ಶ್ರೀರಕ್ಷೆಯೂ ಖರ್ಗೆಗೆ ಸಿಕ್ಕಿದೆ. ಇದೀಗ ಕಾಂಗ್ರೆಸ್ನ ಜಿ-23 ನಾಯಕರ ಬೆಂಬಲವೂ ಸಿಕ್ಕಿದ್ದು ಖರ್ಗೆ ಗೆಲುವಿನ ಹಾದಿ ಸಲೀಸಾಗಿದೆ.
ಕಳೆದ 5 ದಶಕಗಳಿಂದ ಕಾಂಗ್ರೆಸ್ನ ಕಟ್ಟಾಳು.. ಅಧಿಕಾರ ಸಿಗದ ವೇಳೆಯೂ ಬಂಡಾಯ ಏಳದ ಪಕ್ಷನಿಷ್ಠ ನಾಯಕ. ಗಾಂಧಿ ಕುಟುಂಬದ ನಂಬಿಕಸ್ಥ. ಸದಾ ಪಕ್ಷಕ್ಕಾಗಿ ಹೋರಾಡುವ ದಿಟ್ಟ ಹೋರಾಟಗಾರ. ಪಕ್ಷದಲ್ಲಿನ ಎಲ್ಲಾ ಬಣಗಳನ್ನು ಒಟ್ಟುಗೂಡಿಸುವ ನಾಯಕ. ತಮ್ಮ ಗಡಸು ಧ್ವನಿಯಿಂದಲೇ ಸಂಸತ್ನಲ್ಲಿ ಸೈ ಎನಿಸಿಕೊಂಡವರು. ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿರುವ ಹೊತ್ತಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಸಾರಥ್ಯ ವಹಿಸಲು ಹೈಕಮಾಂಡ್ ಮುಂದಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹಾದಿ ಸಲೀಸು!
ಹೈಕಮಾಂಡ್ ಶ್ರೀರಕ್ಷೆ ಜೊತೆಗೆ ಜಿ-23 ಬಣದ ನಾಯಕರ ಬೆಂಬಲ!
ಕಾಂಗ್ರೆಸ್ ಅಧ್ಯಕ್ಷೀಯ ಕದನ ನಡೆಯುತ್ತಿದ್ದು ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ, ಶಶಿ ತರೂರ್, ಜಾರ್ಖಂಡ್ ಸಚಿವ ಕೆ.ಎನ್.ತ್ರಿಪಾಠಿ ಕಣಕ್ಕೆ ಧುಮುಕಿದ್ದಾರೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸ್ಪರ್ಧಿಸಲು ಹಿಂದೇಟು ಹಾಕಿದ ಮೇಲೆ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆಗೆ ಮಣೆ ಹಾಕಿದೆ. ಖರ್ಗೆಯವರು ಸೋನಿಯಾ, ರಾಹುಲ್, ಪ್ರಿಯಾಂಕ ಗಾಂಧಿ ಸೂಚಿಸಿರುವ ಅಭ್ಯರ್ಥಿಯಾಗಿರುವುದರಿಂದ ಗೆಲುವು ಬಹುತೇಕ ಖಚಿತವಾಗಿದೆ. ಜೊತೆಗೆ ಜಿ-23 ಗುಂಪಿನ ನಾಯಕರಾದ ಮನೀಶ್ ತಿವಾರಿ, ಪೃಥ್ವಿರಾಜ್ ಚವಾಣ್ ಹಾಗೂ ಆನಂದ್ ಶರ್ಮಾ ಸೇರಿದಂತೆ ಬಹುತೇಕರು ಖರ್ಗೆ ಬೆಂಬಲಿಸಿದ್ದಾರೆ. ಹೀಗಾಗಿ ಖರ್ಗೆ ಗೆಲುವಿನ ಹಾದಿ ಸಲೀಸಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅಜಾತಶತ್ರು, ದಲಿತ ನಾಯಕರಾಗಿದ್ದಾರೆ. ಕಳೆದ 5 ದಶಕದಿಂದಲೂ ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಗಾಂಧಿ ಕುಟುಂಬದ ನಂಬಿಕಸ್ಥ ನಾಯಕ ಜೊತೆಗೆ ಒಮ್ಮೆಯೂ ಬಂಡಾಯದ ಬಾವುಟ ಬೀಸಿಲ್ಲ, ಬೆದರಿಕೆ ಹಾಕಿಲ್ಲ, ಪಕ್ಷ ನಿಷ್ಠ, ಒಮ್ಮೆಯೂ ಅಶಿಸ್ತು ಪ್ರದರ್ಶಿಸದ ನಾಯಕರಾಗಿದ್ದಾರೆ. ಹಿಂದಿ ಭಾಷೆ ಮೇಲೆ ಹಿಡಿತ ಹೊಂದಿದ್ದು ಉತ್ತರ ಭಾರತದಲ್ಲಿ ಅನುಕೂಲ ಆಗಲಿದೆ. ಸಂಸತ್ನಲ್ಲಿ ಕೇಂದ್ರ ಸರ್ಕಾರವನ್ನು ಎದುರಿಸಿದ ದಿಟ್ಟ ನಾಯಕರಾಗಿದ್ದಾರೆ. ಮಾತಿನ ಚಾಟಿ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಎದೆಗಾರಿಕೆ ಹೊಂದಿದ್ದಾರೆ.
ರಾಜ್ಯಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ!
ಕಾಂಗ್ರೆಸ್ನಲ್ಲಿ ಸದ್ಯ ‘ಒಬ್ಬ ವ್ಯಕ್ತಿ ಒಂದು ಹುದ್ದೆ’ ನಿಯಮವಿದೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಿನ್ನೆ ರಾತ್ರಿಯೇ ಸೋನಿಯಾ ಗಾಂಧಿಗೆ ಪತ್ರ ರವಾನಿಸಿದ್ದಾರೆ. ಸೋನಿಯಾ ಗಾಂಧಿ ಈ ನಿರ್ಧಾರವನ್ನು ರಾಜ್ಯಸಭೆ ಅಧ್ಯಕ್ಷರಿಗೆ ತಿಳಿಸಿದ್ದು ಶೀಘ್ರದಲ್ಲೇ ಹೊಸ ನಾಯಕನ ನೇಮಕ ಬಗ್ಗೆ ಮಾಹಿತಿ ನೀಡಿದ್ದಾರೆ.
ಖರ್ಗೆ-ಶಶಿ ತರೂರ್ ನಡುವೆ ಫೈಟ್.. ಖರ್ಗೆಗೆ ತರೂರ್ ಟಕ್ಕರ್!
ಪಕ್ಷದಲ್ಲಿ ದೊಡ್ಡ ಬದಲಾವಣೆಗಾಗಿ ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಅಂತ ಶಶಿ ತರೂರ್ ಹೇಳಿದ್ದಾರೆ. ಎಲ್ಲರೂ ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಅಂತ ಮನವಿ ಮಾಡಿದ್ದಾರೆ. ಪಕ್ಷದ ಎಲ್ಲಾ ಅವ್ಯವಸ್ಥೆಗೂ ಅಧಿಕಾರ ವಿಕೇಂದ್ರೀಕರಣವೇ ಮದ್ದು ಆಗಿದೆ. ಹೀಗಾಗಿ ನಾನು ಅಧ್ಯಕ್ಷನಾದರೆ ಹೈಕಮಾಂಡ್ ಸಂಸ್ಕೃತಿಗೆ ಬ್ರೇಕ್ ಹಾಕುತ್ತೇನೆ. ಖರ್ಗೆ ಹಾಗೂ ನನ್ನದು ಸ್ನೇಹಯುತ ಸ್ಪರ್ಧೆಯಾಗಿದೆ. ನಾವು ವೈರಿಗಳಲ್ಲ. ಖರ್ಗೆ ಪಕ್ಷದಲ್ಲಿ ‘ಭೀಷ್ಮ ಪಿತಾಮಹ’ನಿದ್ದಂತೆ. ಆದ್ರೆ ಅವರನ್ನು ಬೆಂಬಲಿಸಿದ್ರೆ ಯಥಾಸ್ಥಿತಿಯನ್ನು ಬೆಂಬಲಿಸಿದಂತೆ. ನನ್ನನ್ನು ಬೆಂಬಲಿಸಿದ್ರೆ ಬದಲಾವಣೆಯನ್ನು ಬೆಂಬಲಿಸಿದಂತೆ ಅಂತ ಖರ್ಗೆಗೆ ಶಶಿ ತರೂರ್ ಟಕ್ಕರ್ ಕೊಟ್ಟಿದ್ದಾರೆ.
ಇನ್ನು ಮಲ್ಲಿಕಾರ್ಜುನ ಖರ್ಗೆ ಗೆಲುವು ಕಂಡ್ರೆ ಕಾಂಗ್ರೆಸ್ ಅಧ್ಯಕ್ಷರಾದ 2ನೇ ಕನ್ನಡಿಗ ಎನಿಸಿಕೊಳ್ಳಲಿದ್ಧಾರೆ. 1967-68ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರು ಎಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅದಾದ ಬಳಿಕ ರಾಜ್ಯದ ಯಾವುದೇ ನಾಯಕರಿಗೆ ಅಧ್ಯಕ್ಷಪಟ್ಟ ಸಿಕ್ಕಿರಲಿಲ್ಲ. ಖರ್ಗೆ ಅಧ್ಯಕ್ಷರಾದರೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಲಾಭ ಆಗುವ ನಿರೀಕ್ಷೆ ಇದೆ.
ಒಟ್ಟಿನಲ್ಲಿ 2 ದಶಕಗಳ ಬಳಿಕ ನೆಹರು- ಗಾಂಧಿಯೇತರರು ಕಾಂಗ್ರೆಸ್ ಅಧ್ಯಕ್ಷ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಮತ್ತೊಂದೆಡೆ ಖರ್ಗೆ ಅಧ್ಯಕ್ಷರಾದ್ರೆ ಸೋನಿಯಾ ಗಾಂಧಿಯವರ ರಿಮೋಟ್ ಕಂಟ್ರೋಲ್ ಆಗುತ್ತಾರೆ ಎನ್ನಲಾಗುತ್ತಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರಧಾನಿಯಾದಾಗಲೂ ವಿಪಕ್ಷಗಳು ರಿಮೋಟ್ ಕಂಟ್ರೋಲ್ ಅಂತ ಟೀಕೆ ಮಾಡಿದ್ದವು. ಅದೇನೇ ಇರಲಿ ರಾಜಕೀಯ ರಣನೀತಿ ರೂಪಿಸುವುದರಲ್ಲಿ ಖರ್ಗೆಯವರು ಹಿಂದೆ ಬಿದ್ದಿಲ್ಲ. ಇದಕ್ಕೆ ಲೋಕಸಭೆ-ರಾಜ್ಯಸಭೆಗಳಲ್ಲಿ ಅವರು ನಿರ್ವಹಿಸಿರುವ ಪಾತ್ರಗಳೇ ಸಾಕ್ಷಿಯಾಗಿದೆ. ಪಕ್ಷದ ಒಳಗೆ ಹಾಗೂ ಹೊರಗೆ ಉತ್ತಮ ಬಾಂಧವ್ಯ ಹೊಂದಿರುವ ಖರ್ಗೆ 2024ರ ಲೋಕಸಭಾ ಚುನಾವಣೆಯಲ್ಲಿ ಮಿತ್ರ ಪಕ್ಷಗಳನ್ನು ಕಾಂಗ್ರೆಸ್ ಕಡೆ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post