ಕನ್ನಡ ಚಿತ್ರರಂಗಕ್ಕೆ “ತುಳಸಿದಳ” ದಂತಹ ಅದ್ಭುತ ಚಿತ್ರವನ್ನು ಕೊಟ್ಟ ವೇಮಗಲ್ ಜಗನ್ನಾಥ್ ರಾವ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ “ಆವರ್ತ”. ಇತ್ತೀಚಿಗೆ ಈ ಚಿತ್ರದ ಹಾಡುಗಳನ್ನು ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟ್ರೇಲರ್ ಅನಾವರಣಗೊಳಿಸಿದರು.
ನನ್ನ ಮೊದಲ ಚಿತ್ರ “ತುಳಸಿದಳ”. ಆ ಚಿತ್ರದಲ್ಲಿ ವೇಮಗಲ್ ಜಗನ್ನಾಥ್ ರಾವ್ ಅವರು ನನ್ನನ್ನು ಗುರುತಿಸಿ ಅವಕಾಶ ನೀಡಿದ್ದರು. ನನ್ನ ಗುರುಗಳು ನಿರ್ದೇಶಿಸಿರುವ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿರುವುದಕ್ಕೆ ಬಹಳ ಖುಷಿಯಾಗಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ತಾರಾ ಅನುರಾಧ ಹಾಗೂ ಭಾ.ಮ.ಹರೀಶ್ ಅವರು ಚಿತ್ರಕ್ಕೆ ಶುಭ ಕೋರಿದರು.
ಯುವಕನೊಬ್ಬನಿಗೆ ಕಥೆ ಬರೆಯುವ ಹವ್ಯಾಸ. ಕಾಲ್ಪನಿಕ ಕಥೆ ಬರೆಯುವ ಬಯಕೆಯಿಲ್ಲದ ಆತನಿಗೆ ನೈಜ ಘಟನೆ ಕುರಿತು ಕಥೆ ಬರೆಯುವ ಆಸಕ್ತಿ. ಆ ಸಮಯದಲ್ಲಿ ಆತನಿಗೊಂದು ಮೆಸೇಜ್ ಬರುತ್ತದೆ. ಆತ ಆ ಸ್ಥಳಕ್ಕೆ ಹೋದಾಗ ಏನೆಲ್ಲಾ ಆಗುತ್ತದೆ? ಎಂಬುದು ನಮ್ಮ ಚಿತ್ರದ ಕಥೆ ಎನ್ನುವ ನಿರ್ದೇಶಕ ವೇಮಗಲ್ ಜಗನ್ನಾಥರಾವ್, ನವೆಂಬರ್ 18 ರಂದು ಚಿತ್ರವನ್ನು ತೆರೆಗೆ ತರುವುದಾಗಿ ತಿಳಿಸಿದರು. ಕಥೆಗಾರನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕ ಜಯ್ ಚಂದ್ರ ಹೇಳಿದರು. ಸಿ.ಓ.ಡಿ ಅಧಿಕಾರಿ ಪಾತ್ರಧಾರಿ ಧನ್ವಿತ್ ಹಾಗೂ ನಾಯಕಿ ನಯನ “ಆವರ್ತ” ಚಿತ್ರದ ಬಗ್ಗೆ ಮಾತನಾಡಿದರು. ಮೂರು ಸಾಹಸ ಸನ್ನಿವೇಶಗಳು ಚೆನ್ನಾಗಿದೆ ಎಂದು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ತಿಳಿಸಿದರು. ಸಂಗೀತ ನಿರ್ದೇಶಕ ಅತಿಶಯ್ ಜೈನ್ ಹಾಗೂ ಛಾಯಾಗ್ರಾಹಕ ಮಲ್ಲಿಕಾರ್ಜುನ್ ತಮ್ಮ ಕಾರ್ಯದ ಕುರಿತು ಮಾಹಿತಿ ನೀಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post