ಶ್ರದ್ಧಾಳ ಹತ್ಯೆ ಬಗ್ಗೆ ಪಿನ್ ಟು ಪಿನ್ ಬಾಯ್ಬಿಟ್ಟಿರುವ ಕಿರಾತಕ ಅಫ್ತಾಬ್, ಆಕೆಯ ತಲೆಯ ಬಗ್ಗೆ ಮಾತ್ರ ತುಟಿ ಬಿಚ್ಚುತ್ತಿಲ್ಲ. ದೆಹಲಿ ಪೊಲೀಸರು ತಲೆ ಕೆಡಿಸಿಕೊಂಡು, ಶ್ರದ್ಧಾಳ ತಲೆಗಾಗಿ ತಲಾಶ್ ಮಾಡ್ತಿದ್ದಾರೆ. ಇದೇ ವೇಳೆ ಪೊಲೀಸರಿಗೆ 5 ತಿಂಗಳ ಹಿಂದೆ ಸಿಕ್ಕ ಕತ್ತರಿಸಿದ ತಲೆ ಬುರುಡೆ ಬಗ್ಗೆ ಅನುಮಾನ ಮೂಡಿದೆ.
ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಶ್ರದ್ಧಾಳನ್ನು ಕ್ರೂರವಾಗಿ ಹತ್ಯೆಗೈದ ಬಗ್ಗೆ ಬಾಯ್ಬಿಟ್ಟಿರುವ ಆರೋಪಿ ಅಫ್ತಾಬ್, ಆಕೆಯ ತಲೆ ಏನಾಯ್ತು ಅನ್ನೋ ರಹಸ್ಯವನ್ನು ಮಾತ್ರ ಕಕ್ಕುತ್ತಿಲ್ಲ. ಇದು ದೆಹಲಿ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಗಣಿಸಿದೆ. ಶ್ರದ್ಧಾಳ ತಲೆಗಾಗಿ ಹುಡುಕಾಡುತ್ತಿರುವ ದೆಹಲಿ ಪೊಲೀಸರ ಚಿತ್ತ, ಇದೀಗ ತ್ರಿಲೋಕಪುರಿ ಪ್ರದೇಶದತ್ತ ಹರಿದಿದೆ.
5 ತಿಂಗಳ ಹಿಂದೆ ಸಿಕ್ಕಿತ್ತು ಮನುಷ್ಯನ ಕತ್ತರಿಸಿದ ತಲೆ
ದೆಹಲಿಯ ತ್ರಿಲೋಕಪುರಿಯಲ್ಲಿ ಸಿಕ್ಕ ತಲೆ ಶ್ರದ್ಧಾಳದ್ದಾ..?
ಶ್ರದ್ಧಾ ವಾಲ್ಕರ್ ಕೇಸ್ನಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿದಿರೋದು ಆಕೆಯ ತಲೆ ಏನಾಯ್ತು ಅನ್ನೋದು. ಆರೋಪಿ ಅಫ್ತಾಬ್ ಶ್ರದ್ಧಾಳನ್ನು 35 ಪೀಸ್ ಮಾಡಿ, ಮೆಹ್ರೌಲಿಯ ಅರಣ್ಯ ಪ್ರದೇಶದಲ್ಲಿ ಬಿಸಾಕಿದ್ದ. ಅದೇ ರೀತಿ ಆಕೆಯ ತಲೆಯನ್ನೂ ಕೂಡ ಈತ, ದೆಹಲಿ ಯಾವುದಾದರೂ ಒಂದು ಮೂಲೆಯಲ್ಲಿ ಎಸೆದಿರುವ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ, 5 ತಿಂಗಳ ಹಿಂದೆ ದೆಹಲಿಯ ತ್ರಿಲೋಕಪುರಿ ಪ್ರದೇಶದಲ್ಲಿ ಸಿಕ್ಕಿದ್ದ ಕತ್ತರಿಸಿದ ಅಪರಿಚಿತ ಮನುಷ್ಯನ ತಲೆ ಬುರುಡೆ ಮತ್ತು ದೇಹದ ಇತರೆ ಭಾಗಗಳ ಬಗ್ಗೆ ಅನುಮಾನ ಮೂಡತೊಡಗಿದೆ. ಇದಕ್ಕೆ ಕಾರಣವೂ ಇದೆ.
ಶ್ರದ್ಧಾ ವಾಲ್ಕರ್ ಕೊಲೆ ಆಗಿರೋದು ಮೇ ತಿಂಗಳಲ್ಲಿ.. ಇನ್ನು ಕತ್ತರಿಸಿದ ಮಾನವನ ತಲೆ ಬುರಡೆ ಸಿಕ್ಕಿರೋದು ಜೂನ್ ತಿಂಗಳಲ್ಲಿ. ಅಂದ್ರೆ ಶ್ರದ್ಧಾ ಕೊಲೆಯಾದ ತಿಂಗಳ ಬಳಿಕ ಕತ್ತರಿಸಿದ ರೂಪದ ತಲೆ ಸಿಕ್ಕಿದೆ. ಇನ್ನು ಅಫ್ತಾಬ್ ಕೂಡ ಶ್ರದ್ಧಾಳನ್ನು 35 ತುಂಡುಗಳಾಗಿ ಕತ್ತರಿಸಿ, 18 ದಿನಗಳ ಕಾಲ ಬೇರೆ ಬೇರೆ ಜಾಗದಲ್ಲಿ ಬೀಸಾಕಿದ್ದಾನೆ. ಹೀಗಾಗಿ ತ್ರಿಲೋಕಪುರಿ ಪ್ರದೇಶದಲ್ಲಿ ಸಿಕ್ಕಿರುವ ತಲೆ ಹಾಗೂ ಇತರೆ ಭಾಗಗಳು ಶ್ರದ್ಧಾಳದ್ದೇ ಇರಬಹುದಾ ಎಂಬ ಅನುಮಾನ ಪೊಲೀಸರನ್ನು ಕಾಡತೊಡಗಿದೆ. ಆದ್ದರಿಂದ ತಲೆ ಬುರುಡೆಯ ಡಿಎನ್ಎ ಟೆಸ್ಟ್ಗೆ ದೆಹಲಿ ಪೊಲೀಸರು ಕಳಿಸಿದ್ದಾರೆ.
ಶ್ರದ್ಧಾ ಕೊಲೆಯ ಪುರಾವೆ ಅಳಿಸಲು ಅಫ್ತಾಬ್ ಕುತಂತ್ರ
ರಕ್ತ ತೊಳೆಯಲು 20 ಸಾವಿರ ಲೀಟರ್ ನೀರು ಬಳಸಿದ್ದ ಹಂತಕ
ಗೆಳತಿ ಶ್ರದ್ಧಾಳನ್ನು ಕೊಂದ ಬಳಿಕ ಕ್ರೂರಿ ಅಫ್ತಾಬ್, ಅದರ ಸಣ್ಣದೊಂದು ಸುಳಿವೂ ಕೂಡ ಸಿಗದಂತೆ ನಾಶ ಮಾಡಲು ಸಾಕಷ್ಟು ಪ್ಲಾನ್ ಮಾಡಿದ್ದ. ಅದಕ್ಕೆ ಸಾಕ್ಷ್ಯವೆಂಬಂತೆ ಮತ್ತೊಂದು ಪುರಾವೆ ಸಿಕ್ಕಿದೆ. ಅಫ್ತಾಬ್ ಬಾಡಿಗೆಗೆ ಪಡೆದಿದ್ದ ಫ್ಲ್ಯಾಟ್‌ನ ನೀರಿನ ಬಿಲ್, ಪೊಲೀಸರಿಗೆ ದೊರೆತಿರುವ ಹೊಸ ಸಾಕ್ಷ್ಯವಾಗಿದೆ. ಅಫ್ತಾಬ್ ಮತ್ತು ಶ್ರದ್ಧಾ ದೆಹಲಿಯ ಮೆಹ್ರೌಲಿ ಫ್ಲ್ಯಾಟ್‌ಗೆ ಸ್ಥಳಾಂತರಗೊಂಡಿದ್ದು ಮೇ 14ರಂದು. ಇಲ್ಲಿಗೆ ಬಂದ ಕೇವಲ 4 ದಿನಕ್ಕೆ ಅಂದ್ರೆ, ಮೇ 18ರಂದು ಶ್ರದ್ಧಾ ಹತ್ಯೆ ಮಾಡಿದ್ದಾನೆ. ಬಳಿಕ ಅಫ್ತಾಬ್ ಒಂಟಿಯಾಗಿ ವಾಸಿಸುತ್ತಿದ್ದ. ಇಲ್ಲಿ ಪ್ರತಿ ತಿಂಗಳೂ 20,000 ಲೀಟರ್ ನೀರು ಉಚಿತ ಪೂರೈಕೆ ಆಗುತ್ತೆ. ಆದ್ರೆ ಆತ ಉಚಿತ ಪೂರೈಕೆಯ ಮಿತಿ ಮೀರಿದ ನೀರನ್ನು ಬಳಸಿದ್ದಾನೆ. ಅಫ್ತಾಬ್ ಕೆಲವೇ ದಿನ ಇದ್ದ ಫ್ಲ್ಯಾಟ್‌ಗೆ 300 ರೂ. ವಾಟರ್ ಬಿಲ್ ಬಂದಿದೆ. ಶ್ರದ್ಧಾಳ ದೇಹ ಕತ್ತರಿಸುವ ಸದ್ದು ಕೇಳಿಸದಂತೆ ನಿರಂತರವಾಗಿ ನಲ್ಲಿಯಿಂದ ನೀರು ಬಿಟ್ಟಿದ್ದಾನೆ.
ದೇಹದ ರಕ್ತವನ್ನು ತೊಳೆಯಲು ಬಿಸಿ ನೀರು ಬಳಸಿದ್ದಾನೆ. ರಕ್ತದ ಕಲೆಗಳನ್ನು ಅಳಿಸಲು ರಾಸಾಯನಿಕ ಬೆರೆಸಿದ್ದ ನೀರು ಬಳಕೆ.. ಈ ಎಲ್ಲ ಕಾರಣಗಳಿಂದ ಅಫ್ತಾಬ್ ನೀರನ್ನು ಬಳಸಿರುವ ಅನುಮಾನ ಮೂಡಿದೆ. ಪೊಲೀಸರ ವಿಚಾರಣೆ ಆರೋಪಿ ಅಫ್ತಾಬ್ ಮತ್ತೊಂದು ಸ್ಫೋಟಕ ವಿಷ್ಯವನ್ನು ಬಾಯ್ಬಿಟ್ಟಿದ್ದಾನೆ. ಶ್ರದ್ಧಾಳನ್ನು ಕೊಲೆ ಮಾಡಿದ ಬಳಿಕ ಆಕೆಯ ದೇಹವನ್ನು ತುಂಡು ತುಂಡು ಮಾಡಲು ನಿರ್ಧರಿಸಿದ್ದ ಈತ, ದೇಹವನ್ನು ಕತ್ತರಿಸಲು 10 ಗಂಟೆಗಳ ಸಮಯ ತೆಗೆದುಕೊಂಡಿದ್ದ. ಮಧ್ಯ ಮಧ್ಯ ಸುಸ್ತಾದಾಗ ಈತ, ಮದ್ಯಪಾನ ಹಾಗೂ ಧೂಮಪಾನ ಮಾಡಿ ದಣಿವಾರಿಸಿಕೊಂಡಿದ್ದನಂತೆ. ಇನ್ನು ಶ್ರದ್ಧಾಳ ದೇಹವನ್ನೆಲ್ಲ ಕತ್ತರಿಸಿದ ಬಳಿಕ ಈತ, ಆನ್ಲೈನ್ನಲ್ಲಿ ಜೂಮ್ ಆ್ಯಪ್ನಲ್ಲಿ ಊಟ ತರಿಸಿಕೊಂಡು, ನೆಟ್ಫ್ಲೆಕ್ಸ್ನಲ್ಲಿ ಸಿನಿಮಾ ವೀಕ್ಷಣೆ ಮಾಡಿ, ರಿಲ್ಯಾಕ್ಸ್ ಮಾಡಿದ್ದ ಎಂಬ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.
ಅಫ್ತಾಬ್ನನ್ನು ಗಲ್ಲಿಗೇರಿಸುವಂತೆ ದೇಶಾದ್ಯಂತ ಆಕ್ರೋಶ
ದೆಹಲಿ ಕೋರ್ಟ್ ಒಳಗೂ ವಕೀಲರಿಂದ ಗಲ್ಲುಶಿಕ್ಷೆಗೆ ಆಗ್ರಹ
ನಂಬಿ ಬಂದ ಪ್ರಿಯತಮೆಯನ್ನೇ ಅಮಾನುಷವಾಗಿ, ಕ್ರೂರವಾಗಿ ಕೊಂದಿರುವ ನರಹಂತಕ ಅಫ್ತಾಬ್ ವಿರುದ್ಧ ದೇಶಾದ್ಯಂತ ಆಕ್ರೋಶ ಹೆಚ್ಚಾಗುತ್ತಿದೆ. ಅಫ್ತಾಬ್ನನ್ನು ಗಲ್ಲಿಗೇರಿಸುವಂತೆ ಕೂಗು ಜೋರಾಗಿದೆ. ವಿವಿಧ ಸಂಘಟನೆಗಳು ಅಫ್ತಾಬ್ಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿವೆ. ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದ ಒಳಗೂ ಈ ಕೂಗು ಪ್ರತಿಧ್ವನಿಸಿದೆ. ಆರೋಪಿ ಅಫ್ತಾಬ್ನ ಕಸ್ಟಡಿ ಅಂತ್ಯವಾದ ಹಿನ್ನೆಲೆ, ಇಂದು ವರ್ಚುವಲ್ ಮೂಲಕ ಆರೋಪಿಯನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ಕೋರ್ಟ್ ಹಾಲ್ನ ಹೊರಗೆ ವಕೀಲರೆಲ್ಲ ಅಫ್ತಾಬ್ಗೆ ಗಲ್ಲು ಶಿಕ್ಷೆ ವಿಧಿಸಿ, ಶ್ರದ್ಧಾಳ ಸಾವಿಗೆ ನ್ಯಾಯ ದೊರಕಿಸಬೇಕಿದೆ ಎಂದು ಘೋಷಣೆ ಕೂಗಿದ್ದಾರೆ. ಇದರ ಮಧ್ಯೆ ನಾರ್ಕೊ ಟೆಸ್ಟ್ಗೆ ಅಫ್ತಾಬ್ ಒಪ್ಪಿಗೆ ನೀಡಿದ್ದಾನೆ.
ದಿನದಿಂದ ದಿನಕ್ಕೆ ಶ್ರದ್ಧಾ ಹತ್ಯೆ ಕೇಸ್ನಲ್ಲಿ ಒಂದೊಂದೇ ಹೊಸ ಹೊಸ ರಹಸ್ಯಗಳು ಹೊರಬರುತ್ತಿವೆ. ಮುಂಬೈನಲ್ಲಿ ಗಂಡ-ಹೆಂಡತಿ ಎಂದು ಹೇಳಿಕೊಂಡು ಜೊತೆಗೆ ವಾಸವಿದ್ರಂತೆ. ಅಲ್ಲೂ ಕೂಡ ಇಬ್ಬರ ಮಧ್ಯೆ ಜಗಳ ಆಗುತ್ತಿತ್ತು ಎಂದು ವಾಸೈನಲ್ಲಿ ಅಫ್ತಾಬ್ಗೆ ಮನೆ ನೀಡಿದ್ದ ಮಾಲೀಕರು ಹೇಳಿದ್ದಾರೆ. ಇನ್ನು ಈತ ಹಲವು ಹಿಂದೂ ಯುವತಿಯರ ಜೊತೆಗೂ ಡೇಟಿಂಗ್ ಮಾಡಿದ್ದು, ಆ ಬಗ್ಗೆಯೂ ತನಿಖೆ ನಡೆಸುವಂತೆ ಒತ್ತಾಯ ಹೆಚ್ಚಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post