ಡಾಲರ್ ಬಿಟ್ಟು ಭಾರತದ ಕರೆನ್ಸಿ ರೂಪಾಯಿಯಲ್ಲಿ ವ್ಯಾಪಾರ ಮಾಡಿ. ಇದು ಈಗ ಜಗತ್ತಿಗೆ ಭಾರತ ಹೇಳುತ್ತಿರುವ ಮಾತು. ಏಕೆ ಹೀಗೆ ಭಾರತ ಹೇಳುತ್ತಿದೆ, ಇದರಿಂದ ಭಾರತಕ್ಕಾಗುವ ಲಾಭ ಏನು ಅನ್ನೋದ್ರ ವಿವರ ಇಲ್ಲಿದೆ.
ಜಗತ್ತಿನಲ್ಲಿ ಅಮೆರಿಕದ ಕರೆನ್ಸಿ ಡಾಲರ್ ಸ್ಟ್ರಾಂಗ್. ಡಾಲರ್ನಲ್ಲಿ ಎಲ್ಲ ರಾಷ್ಟ್ರಗಳು ವ್ಯಾಪಾರ ವಹಿವಾಟು ನಡೆಸುತ್ತಿವೆ. ಆದರೇ ಈಗ ಡಾಲರ್‌ಗೆ ಭಾರತದ ಕರೆನ್ಸಿ ಗುನ್ನಾ ಇಡುತ್ತಿದೆ. ಡಾಲರ್ ಬದಲು ಭಾರತದ ಕರೆನ್ಸಿ ರೂಪಾಯಿಯಲ್ಲಿ ಈಗ ವ್ಯಾಪಾರ ಆರಂಭವಾಗುತ್ತಿದೆ. ಭಾರತದ ರೂಪಾಯಿ ಈಗ ಅಂತಾರಾಷ್ಟ್ರೀಯ ಕರೆನ್ಸಿಯಾಗುವ ಕಾಲ ಹತ್ತಿರವಾಗುತ್ತಿದೆ. ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಭಾರತದ ಕರೆನ್ಸಿ ರೂಪಾಯಿಯಲ್ಲೇ ಪಾವತಿ ಮಾಡುವ ವ್ಯವಸ್ಥೆ ಸದ್ದಿಲ್ಲದೇ ಜಾರಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕರೆನ್ಸಿ ರೂಪಾಯಿ ಒಪ್ಪಿತ ಕರೆನ್ಸಿಯಾಗುತ್ತಿದೆ.
ರೂಪಾಯಿ ಈಗ ಜಾಗತಿಕ ಕರೆನ್ಸಿ
ಕೇಂದ್ರ ಸರ್ಕಾರ ಜುಲೈನಲ್ಲಿ ದೇಶೀಯ ವ್ಯಾಪಾರಿಗಳಿಗೆ ರೂಪಾಯಿಯಲ್ಲೇ ವ್ಯಾಪಾರ ನಡೆಸಲು ಅವಕಾಶ ಕೊಟ್ಟಿದೆ. ಭಾರತದ ವ್ಯಾಪಾರ ನೀತಿಯಲ್ಲಿ ಬದಲಾವಣೆ ಆಗಿದೆ. ಭಾರತದ ಕರೆನ್ಸಿ ರೂಪಾಯಿ ಈಗ ಜಾಗತಿಕ ಕರೆನ್ಸಿ ಆಗ್ತಿದೆ.
ಅಂತಾರಾಷ್ಟ್ರೀಯ ವ್ಯಾಪಾರವು ಅಮೆರಿಕಾದ ಕರೆನ್ಸಿ ಡಾಲರ್ನಲ್ಲಿ ನಡೆಯುತ್ತಿರೋದ್ರಿಂದ ಭಾರತದ ಕಂಪನಿಗಳು, ವ್ಯಾಪಾರಿಗಳು ವಿದೇಶಗಳಲ್ಲಿ ಡಾಲರ್ನಲ್ಲಿ ವ್ಯಾಪಾರ ನಡೆಸಲು ವಿದೇಶಿ ಬ್ಯಾಂಕ್ ಗಳಲ್ಲಿ ನಾಸ್ಟ್ರೋ ಬ್ಯಾಂಕ್ ಖಾತೆ ತೆರೆಯಬೇಕು. ಈ ನಾಸ್ಟೋ ಬ್ಯಾಂಕ್ ಖಾತೆಯ ಮೂಲಕ ಡಾಲರ್ ನಲ್ಲೇ ವ್ಯಾಪಾರ ನಡೆಸಬೇಕು. ನಾಸ್ಟ್ರೋ ಬ್ಯಾಂಕ್ ಖಾತೆಯಲ್ಲಿ ಡಾಲರ್ನಲ್ಲೇ ಪೇಮೆಂಟ್ ಪಡೆದುಕೊಳ್ಳುವುದು, ಕೊಡುವುದು ಮಾಡಲಾಗುತ್ತಿತ್ತು. ಆದರೆ ಈಗ ಇದರ ಉಲ್ಟಾ ಆಗುತ್ತಿದೆ.
ಭಾರತ ಜಾಗತಿಕ ಕರೆನ್ಸಿ ಆದರೆ ಏನಾಗುತ್ತದೆ..?
ಈಗ ರಷ್ಯಾ ಸೇರಿದಂತೆ ವಿದೇಶಗಳು, ವಿದೇಶಿ ವ್ಯಾಪಾರಿ, ಕಂಪನಿಗಳು ಭಾರತದ ಕರೆನ್ಸಿ ರೂಪಾಯಿಯಲ್ಲಿ ವ್ಯಾಪಾರ ನಡೆಸಲು ಭಾರತದಲ್ಲಿ ವಾಸ್ಟ್ರೋ ಬ್ಯಾಂಕ್ ಖಾತೆ ತೆರೆಯಲು ಅವಕಾಶ ನೀಡಲಾಗಿದೆ. ರಷ್ಯಾದ ಬ್ಯಾಂಕ್ಗಳು ಭಾರತದ ಬ್ಯಾಂಕ್ಗಳಲ್ಲಿ ಮೊನ್ನೆ ವಾಸ್ಟ್ರೋ ಬ್ಯಾಂಕ್ ಖಾತೆ ತೆರೆದಿವೆ. ಈ ವಾಸ್ಟ್ರೋ ಬ್ಯಾಂಕ್ ಖಾತೆಗೆ ಭಾರತದ ಕರೆನ್ಸಿ ರೂಪಾಯಿಯಲ್ಲೇ ಹಣ ಪಾವತಿಸಲಾಗುತ್ತೆ. ಭಾರತ ರಷ್ಯಾದಿಂದ ಕಚ್ಚಾತೈಲ, ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತೆ. ಇವುಗಳಿಗೆ ರೂಪಾಯಿಯಲ್ಲೇ ಪೇಮೆಂಟ್ ಮಾಡಲಾಗುತ್ತೆ. ರಷ್ಯಾ ಮಾತ್ರವಲ್ಲದೇ, ಅಮೆರಿಕವನ್ನ ವಿರೋಧಿಸುವ ಇರಾನ್, ವೆನಿಜುವೆಲಾ ದೇಶಗಳು ಕೂಡ ಭಾರತದ ರೂಪಾಯಿಯಲ್ಲೇ ವ್ಯಾಪಾರ ನಡೆಸಲು ಸಿದ್ದವಾಗಿವೆ. ಇದರಿಂದ ಭಾರತವು ಡಾಲರ್ ಮೇಲೆ ಅವಲಂಬಿತವಾಗುವುದು ತಪ್ಪಲಿದೆ.
ಈಗಾಗಲೇ ಭಾರತವು ರಷ್ಯಾದಿಂದ ಖರೀದಿಸಿದ ಕಚ್ಚಾತೈಲಕ್ಕೆ ಭಾರತದ ಕರೆನ್ಸಿ ರೂಪಾಯಿಯಲ್ಲೇ ಹಣ ಪಾವತಿ ಮಾಡುತ್ತಿದೆ. ಇದರಿಂದ ಭಾರತ ಮತ್ತು ರಷ್ಯಾದ ನಡುವೆ ವ್ಯಾಪಾರಕ್ಕೆ ಅಮೆರಿಕಾದ ಡಾಲರ್ ಬೇಕಾಗಿಯೇ ಇಲ್ಲ.
ಜೊತೆಗೆ ನೆರೆಹೊರೆಯ ರಾಷ್ಟ್ರಗಳಾದ ಶ್ರೀಲಂಕಾ, ಮಾಲ್ಡೀವ್ಸ್, ಡಿಜಿಬುಟಿ, ಜಿಂಬಾಬ್ವೆ, ಇಥಿಯೋಪಿಯಾ, ಸೂಡನ್, ನಮಿಬಿಯಾ, ಕ್ಯೂಬಾ, ಕೀನ್ಯಾ ಹಾಗೂ ಅಗ್ನೇಯ ಏಷ್ಯಾ ರಾಷ್ಟ್ರಗಳಿಗೂ ಭಾರತದ ಕರೆನ್ಸಿ ರೂಪಾಯಿಯಲ್ಲೇ ವ್ಯಾಪಾರ ವಹಿವಾಟು ನಡೆಸಲು ಮನವೊಲಿಸುತ್ತಿದೆ. ಇತ್ತೀಚೆಗೆ ಹೈದರಾಬಾದ್ನಲ್ಲಿ ಪೂರ್ವ ಆಫ್ರಿಕಾ ಹಾಗೂ ದಕ್ಷಿಣ ಆಫ್ರಿಕಾದ ರಾಷ್ಟ್ರಗಳ ರಾಯಭಾರಿಗಳೊಂದಿಗೆ ಇಂಡಿಯನ್ ಎಕನಾಮಿಕ್ ಟ್ರೇಡ್ ಆರ್ಗನೈಜೇಷನ್ ಸಭೆ ನಡೆಸಿ ಮನವೊಲಿಸುತ್ತಿದೆ. ಭಾರತದ ಯುಪಿಐ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಯತ್ನ ನಡೆಯುತ್ತಿದೆ.
ಏನೆಲ್ಲಾ ಲೆಕ್ಕಾಚಾರ ನಡೆಯುತ್ತೆ..?
ಡಿಜಿಬುಟಿ ದೇಶದ ಜೊತೆಗೆ ಭಾರತವು ಆಹಾರ ಧಾನ್ಯ, ಸಕ್ಕರೆ, ಪ್ಲಾಸ್ಟಿಕ್ ವ್ಯಾಪಾರ ನಡೆಸುತ್ತೆ. ಡಿಜಿಬುಟಿಯ ಭಾರತದ ಕರೆನ್ಸಿ ರೂಪಾಯಿಯಲ್ಲೇ ವ್ಯಾಪಾರ ನಡೆಸಲು ಒಪ್ಪಿದರೇ ರೂಪಾಯಿಯಲ್ಲೇ ಹಣ ಪಾವತಿಸಬಹುದು. ಡಿಜಿಬುಟಿ ಕರೆನ್ಸಿ ಫ್ರಾಂಕ್ ಮೌಲ್ಯ, ಭಾರತದ ಕರೆನ್ಸಿ ರೂಪಾಯಿಯ ಅರ್ಧದಷ್ಟಿದೆ. ಅಂದರೇ, ನಮ್ಮ 2 ರೂಪಾಯಿ ಕರೆನ್ಸಿ, ಫ್ರಾಂಕ್ ನಲ್ಲಿ 4 ಫ್ರಾಂಕ್ ಗಳಾಗುತ್ತವೆ. ಆರ್‌ಬಿಐ ಹಾಗೂ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ವಿವಿಧ ದೇಶಗಳ ಜೊತೆಗೆ ಕರೆನ್ಸಿ ವಿನಿಮಯ ದರ ಹಾಗೂ ಹಣ ಪಾವತಿಯ ತಾಂತ್ರಿಕ ಅಂಶಗಳ ಬಗ್ಗೆ ಚರ್ಚಿಸಿ ನಿರ್ಧರಿಸಲಿವೆ. ಎರಡೂ ದೇಶಗಳ ನಡುವೆ ರೂಪಾಯಿಯಲ್ಲೇ ವ್ಯಾಪಾರ ನಡೆಸುವ ಒಪ್ಪಂದವಾದರೆ ಕರೆನ್ಸಿ ವಿನಿಮಯ ದರವನ್ನು ಆರ್‌ಬಿಐ, ಎನ್‌ಸಿಪಿಐ ನಿರ್ಧರಿಸಲಿವೆ. ಸಣ್ಣ ದೇಶಗಳ ಜೊತೆಗೆ ಭಾರತದ ವ್ಯಾಪಾರ ಕಡಿಮೆ ಇದೆ. ಒಮ್ಮೆ ವ್ಯಾಪಾರ ರೂಪಾಯಿಯಲ್ಲೇ ನಡೆಯೋದು ಆರಂಭವಾದರೆ ಬಳಿಕ ದೊಡ್ಡ ರಾಷ್ಟ್ರಗಳ ಜೊತೆಗೂ ರೂಪಾಯಿಯಲ್ಲೇ ವ್ಯಾಪಾರ ನಡೆಸಲು ಒತ್ತಾಯಿಸಬಹುದು. ಇದೆಲ್ಲದರಿಂದ ಭಾರತದ ರೂಪಾಯಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಹೆಚ್ಚಿನ ಬೇಡಿಕೆ ಬಂದರೆ ರೂಪಾಯಿ ಮೌಲ್ಯ ಹೆಚ್ಚಾಗಲಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಕ್ಕೆ ಸ್ವಲ್ಪ ಮಟ್ಟಿಗೆ ಬ್ರೇಕ್ ಹಾಕಬಹುದು ಅನ್ನೋ ಲೆಕ್ಕಾಚಾರ ಇದೆ.
ಸದ್ಯ ಭಾರತವು ರಫ್ತು-ಆಮದುಗಳ ಪೇಮೆಂಟ್ ಗಳನ್ನು ಶೇ.60 ರಷ್ಟು ಆಮೆರಿಕಾದ ಡಾಲರ್ ಗಳಲ್ಲಿ ಮಾಡುತ್ತಿದೆ. ಡಾಲರ್ ಎದುರು ರೂಪಾಯಿ ದುರ್ಬಲವಾಗುತ್ತಿದೆ. ಡಾಲರ್ ಸ್ಟ್ರಾಂಗ್ ಆಗಿದ್ದು, ಅದರ ಮೌಲ್ಯ ಹೆಚ್ಚಾಗುತ್ತಿದೆ. ಭಾರತವು ರಷ್ಯಾದ ಜೊತೆೆಗೆ ವಾರ್ಷಿಕ 30 ಬಿಲಿಯನ್ ಡಾಲರ್ ವಹಿವಾಟು ನಡೆಸುತ್ತಿದೆ. ಇನ್ಮುಂದೆ 30 ಬಿಲಿಯನ್ ಡಾಲರ್ ಅನ್ನು ಭಾರತದ ರೂಪಾಯಿಯಲ್ಲೇ ಪಾವತಿಸಲಾಗುತ್ತೆ, ಡಾಲರ್ ಅನ್ನು ನೀಡಬೇಕಾದ ಅಗತ್ಯ ಇರಲ್ಲ.
ವಿಶೇಷ ವರದಿ: ಚಂದ್ರಮೋಹನ್, ನ್ಯಾಷನಲ್ ಬ್ಯೂರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post