ಚಿಕ್ಕಮಗಳೂರು: ಕಾಡಾನೆ ದಾಳಿಯ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ ಆಕ್ರೋಶದ ಕಟ್ಟೆ ಒಡೆದಿದೆ. ಜನರು ತಾಳ್ಮೆ ಕಳೆದುಕೊಂಡಿದ್ದಾರೆ. ಪೊಲೀಸರ ಲಾಠಿಗೆ ಕೆಲಸ ಸಿಕ್ಕಿದೆ. ಕೋಪದ ಜ್ವಾಲೆ ಮಿತಿ ಮೀರಿ ಶಾಸಕರ ಬಟ್ಟೆಯನ್ನೇ ಚಿಂದಿ ಮಾಡಲಾಗಿದೆ.
ಚಿಕ್ಕಮಗಳೂರಿನಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದೆ. ಕಲ್ಲು ತೂರಾಟ, ಲಾಠಿಯ ಆಟ ಜೋರಾಗಿದೆ. ಒಂದು ರೀತಿಯ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದೆ. ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಬಟ್ಟೆ ಪೀಸ್ ಪೀಸ್ ಆಗಿದೆ.
ಅಷ್ಟಕ್ಕೂ ಅಲ್ಲಾಗಿದ್ದೇನು ಅನ್ನೋದನ್ನ ಕೇಳೋದಾದರೇ, ಕಾಡಾನೆ ತುಳಿದು ಮಹಿಳೆ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಹಿಳೆಯ ಶವ ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು. ಈ ಕುರಿತ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಶಾಸಕ ಎಂ.ಪಿ ಕುಮಾರಸ್ವಾಮಿ ಅವರಿಗೆ ಸ್ಥಳೀಯರು ಶಾಸಕರಿಗೆ ತರಾಟೆ ತೆಗೆದುಕೊಂಡು ಮುತ್ತಿಗೆಗೆ ಹಾಕಲು ಯತ್ನಿಸಿದ್ದರು. ಅಲ್ಲದೇ ಇದನ್ನು ತಡೆಯಲು ಪೊಲೀಸರು ಬಂದ ಸಂದರ್ಭದಲ್ಲಿ ಪೊಲೀಸ್ ಜೀಪ್ ಮೇಲೆ ಕಲ್ಲುತೂರಾಟ ಮಾಡಲಾಗಿತ್ತು. ಇದರಿಂದ ಪರಿಸ್ಥಿತಿ ನಿಯಂತ್ರಣ ಮಾಡಲು ಪೊಲೀಸರು, ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಪ್ರತಿಭಟನಾಕಾರರು ಶಾಸಕ ಕುಮಾರಸ್ವಾಮಿ ಬಟ್ಟೆ ಹರಿದು ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಗ್ರಾಮಸ್ಥರು, ಸ್ಥಳೀಯರ ಆಕ್ರೋಶಕ್ಕೆ ಕಾರಣವೇನು..?
ಇಷ್ಟೆಲ್ಲಾ ರಣಾಂಗಣಕ್ಕೆ ದಾರಿ ಮಾಡಿಕೊಟ್ಟಿದ್ದು ಕಾಡಾನೆಗಳ ಹಾವಳಿ. ಚಿಕ್ಕಮಗಳೂರಲ್ಲಿ ಮೂರು ತಿಂಗಳಲ್ಲಿ ಕಾಡಾನೆ ದಾಳಿಗೆ ಮೂರು ಬಲಿಯಾಗಿದೆ. ಹುಲ್ಲೆಮನೆ ಕುಂದೂರಿನಲ್ಲಿ ನಿನ್ನೆ ಬೆಳಗ್ಗೆ 7.30ರ ಸುಮಾರಿಗೆ ಮಹಿಳೆಯೊಬ್ಬರು ಆನೆ ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಮಹಿಳೆ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ್ರು. ಸಂಜೆ ವೇಳೆಗೆ ಗ್ರಾಮಕ್ಕೆ ಶಾಸಕ ಎಂ.ಪಿ ಕುಮಾರಸ್ವಾಮಿ ಆಗಮಿಸಿದ್ದಾರೆ. ಈ ವೇಳೆ ಶಾಸಕರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ್ರು. ಪೊಲೀಸರು ಜೀಪ್ನಲ್ಲಿ ಕೊಂಡೊಯ್ಯಲು ಯತ್ನಿಸಿದಾಗಲು ಬಿಡದ ಜನರು, ಮುತ್ತಿಗೆ ಸಮರವನ್ನ ಮುಂದುವರಿಸಿದರು. ಆ ಸಮಯ ಪೊಲೀಸರಿಗೆ ಸವಾಲಾಗಿತ್ತು.. ಶಾಸಕರನ್ನ ಅಲ್ಲಿಂದ ಕಳಿಸೋದು ಹರಸಾಹಸವಾಗಿತ್ತು.
ಈ ವೇಳೆ ಆಕ್ರೋಶದ ಜ್ವಾಲೆ ಹೆಚ್ಚಾಗಿ ಪೊಲೀಸರ ಜೀಪ್ ಮೇಲೆಯೇ ಕಲ್ಲುತೂರಾಟ ನಡೆದಿದೆ. ಪರಿಸ್ಥಿತಿ ಕೈ ಮೀರಿದ್ದನ್ನ ಅರಿತ ಪೊಲೀಸರು ಲಾಠಿ ಹೊರತೆಗೆದಿದ್ದಾರೆ. ಪ್ರತಿಭಟನಾಕಾರರ ಮೇಲೆ ಬೀಸಿದ್ದಾರೆ.
ಆನೆ ಸಾಕಿದ್ದೀರಾ ಅಂತಾ ಶಾಸಕರ ಮೇಲೆ ಕೋಪಾವೇಷ
ಬಟ್ಟೆ ಹರಿಯುವಂತೆ ಎಂಪಿ.ಕುಮಾರಸ್ವಾಮಿ ಮೇಲೆ ಹಲ್ಲೆ
ಈ ನಡುವೆ ಜನರು ಶಾಸಕರಾದ ಎಂಪಿ.ಕುಮಾರಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಬಟ್ಟೆಯನ್ನೇ ಚಿಂದಿ ಮಾಡಲಾಗಿದೆ. ಶಾಸಕರೇ ಹರಿದ ಅಂಗಿಯಲ್ಲಿ ನಿಂತು ಹಲ್ಲೆ ಮಾಡಿದ ಬಗ್ಗೆ ಮಾತಾಡಿದ್ದಾರೆ. ಸಂಚು ಮಾಡಿ ಹಲ್ಲೆ ಮಾಡಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪೊಲೀಸರ ವೈಫಲ್ಯ, ಮಿಸ್ಗೈಡ್ ಅಂತಲೂ ಕಿಡಿಕಾರಿದ್ದಾರೆ.
ಹೀಗೆ ಮೂಡಿಗೆರೆ ಶಾಸಕರು ಪೊಲೀಸರ ವಿರುದ್ಧವೇ ಮಿಸ್ಗೈಡ್ ಆರೋಪ ಮಾಡಿದ್ದಾರೆ. ತಮ್ಮ ವಿರುದ್ಧ ಜನರನ್ನ ಗುಂಪುಗೂಡಿ ಸಂಚು ಮಾಡಲಾಗಿದೆ ಅಂತಲೂ ಹೇಳೋ ಮೂಲಕ ಅನುಮಾನದ ಕಿಡಿ ಹೊತ್ತಿಸಿದ್ದಾರೆ. ಇದು ಸಂಚೋ? ಹೊಂಚೋ? ಮೂರು ಜೀವಗಳು ಕಾಡಾನೆಗೆ ಬಲಿಯಾಗಿದ್ದನ್ನ ಲಾಠಿ ಬೀಸಿದ ಗಾಳಿಯಲ್ಲಿ ಮರೆಯಬಾರದಷ್ಟೇ. ಆನೆಗಳ ಹಾವಳಿ ತಡೆಯಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳೋದು ಕೂಡ ಈ ಕ್ಷಣಕ್ಕೆ ಮುಖ್ಯ. ಅತಿಮುಖ್ಯ.
ವಿಶೇಷ ವರದಿ: ಮಹಾರುದ್ರ, ನ್ಯೂಸ್ಫಸ್ಟ್, ಚಿಕ್ಕಮಗಳೂರು..
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post